Ticket Fight: ದಕ್ಷಿಣ ಕನ್ನಡ ಬಿಜೆಪಿ ಕೋಟೆಯಲ್ಲಿ ಕಾಂಗ್ರೆಸ್‌ ಪೈಪೋಟಿ

By Govindaraj S  |  First Published Dec 4, 2022, 12:32 AM IST

ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಮತ್ತು ಸಂಘ ಪರಿವಾರ ಪ್ರಾಬಲ್ಯದ ಕ್ಷೇತ್ರ. ಇಲ್ಲಿನ ಎಂಟು ಅಸೆಂಬ್ಲಿ ಕ್ಷೇತ್ರಗಳ ಪೈಕಿ ಕಳೆದ ಬಾರಿ ಏಳರಲ್ಲಿ ಬಿಜೆಪಿ ಶಾಸಕರು, ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಗೆದ್ದಿದೆ. 


ಆತ್ಮಭೂಷಣ್‌

ಮಂಗಳೂರು (ಡಿ.04): ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಮತ್ತು ಸಂಘ ಪರಿವಾರ ಪ್ರಾಬಲ್ಯದ ಕ್ಷೇತ್ರ. ಇಲ್ಲಿನ ಎಂಟು ಅಸೆಂಬ್ಲಿ ಕ್ಷೇತ್ರಗಳ ಪೈಕಿ ಕಳೆದ ಬಾರಿ ಏಳರಲ್ಲಿ ಬಿಜೆಪಿ ಶಾಸಕರು, ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಗೆದ್ದಿದೆ. ಪ್ರಾಬಲ್ಯಕ್ಕಾಗಿ ಈ ಬಾರಿ ಶತಾಯಗತಾಯ ಪ್ರಯತ್ನ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಪ್ರಬಲ ಸ್ಪರ್ಧೆಗೆ ತಯಾರಿ ನಡೆಸುತ್ತಿವೆ. ಇನ್ನು ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನಲ್ಲಿ ಪ್ರಭಾವಿ ನಾಯಕರ ಕೊರತೆ ಇದೆ. ಸಿಪಿಎಂ, ಎಸ್‌ಡಿಪಿಐ ಸಂಘಟನಾತ್ಮಕವಾಗಿ ತೀರಾ ಹಿಂದಿವೆ.

Tap to resize

Latest Videos

ಈ ಬಾರಿಯ ಚುನಾವಣೆಯಲ್ಲಿ ಮಂಗಳೂರು ಹೊರತುಪಡಿಸಿ ಬೇರೆಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲೂ ಬಿಜೆಪಿಯಲ್ಲಿ ಹಾಲಿ ಶಾಸಕರನ್ನೇ ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್‌ನಲ್ಲಿ ಮಂಗಳೂರು(ಉಳ್ಳಾಲ) ಕ್ಷೇತ್ರದಲ್ಲಿ ಹಾಲಿ ಶಾಸಕರೇ ಕಣಕ್ಕಿಳಿಯಲಿದ್ದಾರೆ. ಇನ್ನುಳಿದ ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳು ಅದೃಷ್ಟಪರೀಕ್ಷೆ ನಡೆಸಲಿದ್ದಾರೆ. ಇಲ್ಲಿ ಬಿಲ್ಲವ, ಬಂಟ, ಒಕ್ಕಲಿಗ ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲ ಕಡೆಗಳಲ್ಲಿ ಜಾತಿವಾರು ಲೆಕ್ಕಾಚಾರದಲ್ಲಿ ಟಿಕೆಟ್‌ ಹಂಚಿಕೆ ನಡೆದರೂ ಗೆಲುವಿಗೆ ಹಿಂದುತ್ವವೇ ಮಾನದಂಡ.

Ticket Fight: ತುಮಕೂರಲ್ಲಿ ಪ್ರಾಬಲ್ಯ ಮೆರೆಯಲು ಬಿಜೆಪಿ ರಣತಂತ್ರ

1. ಸುಳ್ಯ: ಅಂಗಾರಗೆ ಸ್ಪರ್ಧೆ ಕುತೂಹಲ
ಪುತ್ತೂರು ತಾಲೂಕಿನ ಕಡಬವನ್ನು ಒಳಗೊಂಡ ಸುಳ್ಯ ಮೀಸಲು ಕ್ಷೇತ್ರದಲ್ಲಿ ಹಾಲಿ ಶಾಸಕ ಅಂಗಾರ ಸತತ 6 ಬಾರಿ ಗೆದ್ದಿದ್ದಾರೆ. ಅವರ ಸಾಧನೆ ಬಗ್ಗೆ ಪಕ್ಷದೊಳಗೇ ಅಸಮಾಧಾನ ಇದೆ. ಬಿಜೆಪಿ ಪಾಳೆಯ ಕೂಡ ಈ ಬಾರಿ ಅಭ್ಯರ್ಥಿ ಬದಲಾವಣೆಗೆ ಹೊರಟಿದೆ. ಆದರೂ ಕೊನೇ ಕ್ಷಣದಲ್ಲಿ ಅಂಗಾರ ಅವರಿಗೇ ಪಕ್ಷ ಮತ್ತೆ ಮಣೆ ಹಾಕಿದರೂ ಅಚ್ಚರಿ ಇಲ್ಲ. ಕಾಂಗ್ರೆಸ್‌ನಿಂದ ಈ ಹಿಂದೆ ಮೂರು ಬಾರಿ ಸ್ಪರ್ಧಿಸಿ ಸೋತ ಡಾ.ರಘು ಈ ಬಾರಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿಲ್ಲ. ಅವರ ಪುತ್ರ ಪ್ರಹ್ಲಾದ್‌ ಮತ್ತು ಅಭಿಷೇಕ್‌ ಬೆಳ್ಳಿಪ್ಪಾಡಿ ಅರ್ಜಿ ಸಲ್ಲಿಸಿದ ಪ್ರಮುಖರು.

2. ಪುತ್ತೂರು: ಬಿಜೆಪಿ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಬದಲು?
ಪುತ್ತೂರು ಕ್ಷೇತ್ರದಲ್ಲಿ 1994ರಿಂದ ಬಿಜೆಪಿಯದ್ದೇ ಅಧಿಪತ್ಯ. ಯಾರೇ ಅಭ್ಯರ್ಥಿಯಾಗಲಿ ಹಿಂದುತ್ವವೇ ಮುಖ್ಯ ಅಸ್ತ್ರ. ಸಂಜೀವ ಮಠಂದೂರು ಕ್ಷೇತ್ರದ ಹಾಲಿ ಶಾಸಕ. ಹಿಂದುತ್ವ ವಿಚಾರದಲ್ಲಿ ಮೃದು ಧೋರಣೆ ಇದೆ ಎಂಬ ಕಾರಣಕ್ಕೆ ಮಠಂದೂರು ಬದಲಾವಣೆಗೂ ಪಕ್ಷದಲ್ಲಿ ಚಿಂತನೆ ನಡೆಯುತ್ತಿದೆ. ಹೊಸ ಮುಖ ಯಾರು ಎಂಬ ತೀರ್ಮಾನ ಇನ್ನೂ ಆಗಿಲ್ಲ. ಕೊನೇ ಗಳಿಗೆಯಲ್ಲಿ ಒಕ್ಕಲಿಗ ಎಂಬ ಕಾರಣಕ್ಕೆ ಅವರಿಗೆ ಮತ್ತೆ ಟಿಕೆಟ್‌ ನೀಡುವ ಸಾಧ್ಯತೆ ಅಧಿಕ. ಕಾಂಗ್ರೆಸ್‌ನಲ್ಲಿ ಮತ್ತೆ ಶಕುಂತಳಾ ಶೆಟ್ಟಿಸ್ಪರ್ಧಿಸಲು ಕ್ಷೇತ್ರದಾದ್ಯಂತ ಓಡಾಟ ನಡೆಸುತ್ತಿದ್ದಾರೆ. ಅವರ ವಿರುದ್ಧ ಯಾವುದೇ ಗುರುತರ ಆರೋಪಗಳಿಲ್ಲದಿದ್ದರೂ ಅವರಿನ್ನೂ ಬಿಜೆಪಿಯಿಂದ ಸಿಡಿದ ಸ್ವಾಭಿಮಾನಿ ಬಳಗದಲ್ಲೇ ಇದ್ದಾರೆ ಎನ್ನುವುದು ಮೂಲ ಕಾಂಗ್ರೆಸ್ಸಿಗರ ಆರೋಪ. ಹಾಗಾಗಿ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸಂಸದ ಡಿ.ವಿ.ಸದಾನಂದ ಗೌಡರ ಆಪ್ತ ಅಶೋಕ್‌ ಕುಮಾರ್‌ ರೈ ಮಠಂತಬೆಟ್ಟು ಕೂಡ ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿ. ಕ್ಷೇತ್ರದಲ್ಲಿ ಗೌಡ ಹಾಗೂ ಬಿಲ್ಲವರು ನಿರ್ಣಾಯಕರು. ಬ್ರಾಹ್ಮಣರೂ ಸಾಕಷ್ಟುಸಂಖ್ಯೆಯಲ್ಲಿದ್ದಾರೆ.

3. ಬೆಳ್ತಂಗಡಿ: ಹರಿಪ್ರಸಾದ್‌ ಬಂಧು ಹೆಸರು ರೇಸಲ್ಲಿ
ಬೆಳ್ತಂಗಡಿಯು ಗೌಡ ಹಾಗೂ ಬಿಲ್ಲವರು ಅಧಿಕ ಸಂಖ್ಯೆಯಲ್ಲಿರುವ ಕ್ಷೇತ್ರ. ಬಿಜೆಪಿಯಿಂದ ಬಂಟ ಸಮುದಾಯದ ಹರೀಶ್‌ ಪೂಂಜಾ ಮೊದಲ ಬಾರಿಗೆ ಗೆದ್ದು ಕಳೆದ ಬಾರಿ ಶಾಸಕರಾಗಿದ್ದಾರೆ. ಮುಂದಿನ ಚುನಾವಣೆಗೂ ಇವರೇ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಲ್ಲಿ ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರ ಸಂಬಂಧಿ ರಕ್ಷಿತ್‌ ಶಿವರಾಮ್‌ ಹೆಸರು ಹೆಚ್ಚು ಕೇಳಿಬರುತ್ತಿದೆ. ಹೊರಗಿನವರಿಗೆ ಬೇಡ ಎಂದು ಟಿಕೆಟ್‌ ಆಕಾಂಕ್ಷಿಗಳಾದ ಮಾಜಿ ಸಚಿವ ಗಂಗಾಧರ ಗೌಡ ಅಪಸ್ವರ ಎತ್ತಿದ್ದಾರೆ. ವಸಂತ ಬಂಗೇರ ಕೂಡ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ಗೆ ಕ್ಷೇತ್ರದಲ್ಲಿ ನೆಲೆ ಇಲ್ಲ.

4. ಬಂಟ್ವಾಳ: ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷೆ
ಬಂಟ್ವಾಳದಲ್ಲಿ ಬಂಟರು ಮತ್ತು ಬಿಲ್ಲವರು ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಅವರೇ ನಿರ್ಣಾಯಕರು. ಕಳೆದ ಚುನಾವಣೆಯಲ್ಲಿ ಹೊಸ ಮುಖ, ಕೃಷಿಕ, ಉದ್ಯಮಿ ರಾಜೇಶ್‌ ನಾಯ್‌್ಕ ಉಳಿಪಾಡಿಗುತ್ತು ಗೆದ್ದು ಬಿಜೆಪಿ ಶಾಸಕರಾದರು. ಈ ಬಾರಿ ಮತ್ತೆ ಸ್ಪರ್ಧೆಗೆ ಅವರು ಉತ್ಸುಕತೆ ತೋರುತ್ತಿಲ್ಲ ಎಂದು ಹೇಳಲಾಗುತ್ತಿದ್ದರೂ ಅವರಿಗೇ ಪಕ್ಷ ಟಿಕೆಟ್‌ ನೀಡುವ ಸಾಧ್ಯತೆ ಹೆಚ್ಚು. ಅವರು ಕಾರ್ಯಕರ್ತರೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಮತ್ತೆ ರಮಾನಾಥ ರೈ ಕಣಕ್ಕಿಳಿಯುವ ಉತ್ಸಾಹದಲ್ಲಿದ್ದಾರೆ. ಅಶ್ವಿನ್‌ ರೈ ಮತ್ತು ರಾಕೇಶ್‌ ಮಲ್ಲಿ ಕೂಡ ಆಕಾಂಕ್ಷಿ. ರಮಾನಾಥ್‌ ರೈ ಕಣಕ್ಕಿಳಿದರೆ ಹಾಲಿ-ಮಾಜಿ ಶಾಸಕರ ಮಧ್ಯೆ ಜಿದ್ದಾಜಿದ್ದಿ ಏರ್ಪಡಲಿದೆ.

5. ಮಂಗಳೂರು(ಉಳ್ಳಾಲ): 28 ವರ್ಷದಿಂದ ಬಿಜೆಪಿ ಗೆದ್ದಿಲ್ಲ
ಮಂಗಳೂರು ಕ್ಷೇತ್ರದಲ್ಲಿ ಮುಸ್ಲಿಮರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಮುಸ್ಲಿಮರೇ ನಿರ್ಣಾಯಕರು, ಹಿಂದುತ್ವ ಕೆಲಸ ಮಾಡುವುದಿಲ್ಲ. ಏನಿದ್ದರೂ ಮುಸ್ಲಿಂ ಮತಗಳೇ ಗೆಲುವು ನಿರ್ಧರಿಸುತ್ತವೆ. ಹಾಲಿ ಶಾಸಕ ಯು.ಟಿ.ಖಾದರ್‌ ನಿರಂತರ ನಾಲ್ಕು ಬಾರಿ ಗೆದ್ದಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ಗೆ ಇಲ್ಲಿ ಶಾಸಕ ಯು.ಟಿ.ಖಾದರ್‌ ಹೊರತುಪಡಿಸಿದರೆ ಬೇರೆ ಯಾರೂ ಅರ್ಜಿ ಸಲ್ಲಿಸಿಲ್ಲ. ಕ್ಷೇತ್ರದಲ್ಲಿ ಬಿಜೆಪಿಯ ಕೆ.ಜಯರಾಮ ಶೆಟ್ಟಿ1994ರಲ್ಲಿ ಗೆಲುವು ಪಡೆದದ್ದು ಬಿಟ್ಟರೆ ಬಳಿಕ ಬಿಜೆಪಿಗೆ ಈವರೆಗೆ ಗೆಲುವು ಸಾಧ್ಯವಾಗಿಲ್ಲ. ಈ ಬಾರಿ ಬಿಜೆಪಿಯಿಂದ ಜಿ.ಪಂ.ಮಾಜಿ ಉಪಾಧ್ಯಕ್ಷ ಸತೀಶ್‌ ಕುಂಪಲ ರೇಸಿನಲ್ಲಿದ್ದಾರೆ. ಅದೇ ರೀತಿ ಸಂತೋಷ್‌ ಕುಮಾರ್‌ ಬೋಳಿಯಾರು, ಚಂದ್ರಶೇಖರ ಉಚ್ಚಿಲ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿ.

6. ಮಂಗಳೂರು ದಕ್ಷಿಣ: ಕಾಂಗ್ರೆಸ್ಸಿನಲ್ಲಿ ಟಿಕೆಟ್‌ ಫೈಟ್‌
ಮಂಗಳೂರು ದಕ್ಷಿಣದಲ್ಲಿ ಜಿಎಸ್‌ಬಿ, ಕ್ರೈಸ್ತ ಸಮುದಾಯದ ಕೊಂಕಣಿ ಭಾಷಿಗರದ್ದೇ ಪ್ರಾಬಲ್ಯ. ಇವರೇ ಇಲ್ಲಿ ನಿರ್ಣಾಯಕರು. ಅಭಿವೃದ್ಧಿ ಜತೆಗೆ ಇಲ್ಲಿ ಹಿಂದುತ್ವ ಅಜೆಂಡಾ ತುಸು ಕೆಲಸ ಮಾಡುತ್ತದೆ. ಎರಡೂ ಪಕ್ಷಗಳಲ್ಲೂ ಕೊಂಕಣಿ ಭಾಷಿಕರೇ ಅಭ್ಯರ್ಥಿಗಳಾಗುತ್ತಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹೊಸ ಮುಖ ವೇದವ್ಯಾಸ ಕಾಮತ್‌ ಅವರು ಕ್ಷೇತ್ರದಿಂದ ಗೆದ್ದಿದ್ದಾರೆ. ಈ ಬಾರಿಯೂ ಅವರು ಆಕಾಂಕ್ಷಿ. ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಜೆ.ಆರ್‌.ಲೋಬೋ ವರ್ಸಸ್‌ ಎಂಎಲ್ಸಿ ಐವನ್‌ ಡಿಸೋಜಾ ನಡುವೆ ಟಿಕೆಟ್‌ಗೆ ಪೈಪೋಟಿ ನಡೆಯಲಿದೆ.

7. ಮಂಗಳೂರು ಉತ್ತರ: ಬಿಜೆಪಿ, ಕಾಂಗ್ರೆಸ್‌ ಟಿಕೆಟ್‌ ಯಾರಿಗೆ?
ಮಂಗಳೂರು ಉತ್ತರದಲ್ಲಿ ಬಿಲ್ಲವ ಮತ್ತು ಮುಸ್ಲಿಂ ಮತದಾರರೇ ಜಾಸ್ತಿ. ಬಿಜೆಪಿಯ ಹಾಲಿ ಶಾಸಕ ಡಾ.ಭರತ್‌ ಶೆಟ್ಟಿಮೊದಲ ಬಾರಿಗೆ ಗೆದ್ದಿದ್ದಾರೆ. ಪಕ್ಷದಲ್ಲಿ ಒಂದಷ್ಟುಅಪಸ್ವರ ಇದ್ದರೂ ಮತ್ತೆ ಡಾ.ಭರತ್‌ ಶೆಟ್ಟಿಅವರನ್ನೇ ಕಣಕ್ಕಿಳಿಸಲು ಬಿಜೆಪಿ ಚಿಂತಿಸಿದೆ. ಆದರೆ ಮುಂದಿನ ಸಂಸದ ಸ್ಥಾನಕ್ಕೆ ಕಣ್ಣಿಟ್ಟಿರುವ ಅವರು ಬೇರೆ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ. ಕೊನೇ ಗಳಿಗೆಯಲ್ಲಿ ಡಾ.ಭರತ್‌ ಶೆಟ್ಟಿಅವರೇ ಸ್ಪರ್ಧಿಸುವ ಸಂಭವವೇ ಜಾಸ್ತಿ. ಬಿಲ್ಲವ ಸಂಘಟಕ ಸತ್ಯಜಿತ್‌ ಸುರತ್ಕಲ್‌ ಕಳೆದ ಬಾರಿ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಕೊನೇ ಕ್ಷಣದಲ್ಲಿ ಟಿಕೆಟ್‌ ಕೈತಪ್ಪಿತ್ತು. ಈ ಬಾರಿ ಹಿಂದೂ ಸಂಘಟನೆಗಳ ಯಾವುದಾದರೂ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆ ಕೇಳಿ ಬರುತ್ತಿದೆ. ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಮೊಯ್ದಿನ್‌ ಬಾವಾ ಮತ್ತೆ ಸ್ಪರ್ಧಿಸುವ ಉಮೇದಿನಲ್ಲಿದ್ದಾರೆ. ಆದರೆ ಉದ್ಯಮಿ, ಇನಾಯತ್‌ ಆಲಿ ಇವರಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ. ಈಗಾಗಲೇ ಕ್ಷೇತ್ರದಾದ್ಯಂತ ಅಲ್ಲಲ್ಲಿ ಬ್ಯಾನರ್‌ ಹಾಕಿಸಿ ಸಮಾಜ ಸೇವೆ ಚಟುವಟಿಕೆ ಹೆಸರಿನಲ್ಲಿ ಮುಂದಿನ ಅಭ್ಯರ್ಥಿ ತಾನೇ ಎಂಬಂತೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.

8. ಮೂಡುಬಿದಿರೆ: ಬಿಜೆಪಿ ಅಭ್ಯರ್ಥಿ ಬದಲಾಗ್ತಾರಾ?
ಮೂಡುಬಿದಿರೆಯಲ್ಲಿ ಬಿಲ್ಲವ ಹಾಗೂ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿದ್ದಾರೆ. ಹಾಲಿ ಶಾಸಕ ಉಮಾನಾಥ ಕೋಟ್ಯಾನ್‌ ಬಿಜೆಪಿಯಿಂದ ಮತ್ತೆ ಸ್ಪರ್ಧಿಸುವ ಉಮೇದಿನಲ್ಲಿದ್ದಾರೆ. ಆದರೂ ಮುಖಂಡರ ಜತೆಗಿನ ಹೊಂದಾಣಿಕೆಯಲ್ಲಿ ವ್ಯತ್ಯಾಸವಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಬದಲಾಯಿಸುವ ಚಿಂತನೆಯೂ ಪಕ್ಷದಲ್ಲಿದೆ. ಮೂಲಗಳ ಪ್ರಕಾರ, ಹಾಲಿ ಜಿಲ್ಲಾಧ್ಯಕ್ಷ ಸುದರ್ಶನ್‌ ಅವರ ಹೆಸರು ಟಿಕೆಟ್‌ಗಾಗಿ ಮುಂಚೂಣಿಯಲ್ಲಿದೆ. ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್‌ ಮತ್ತೆ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದಾರೆ. ಹೀಗಾಗಿ ಯುವ ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ ಟಿಕೆಟ್‌ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದು, ಅರ್ಜಿ ಸಲ್ಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಆಪ್ತರಾಗಿರುವ ಮಿಥುನ್‌ ರೈಗೆ ಟಿಕೆಟ್‌ ಪೈಪೋಟಿಯಲ್ಲಿ ಮುಂದಿದ್ದಾರೆ.

Ticket Fight: ಬಿಜೆಪಿ ಪಾರುಪಾತ್ಯಕ್ಕೆ ಬ್ರೇಕ್‌ ಹಾಕುತ್ತಾ ಕಾಂಗ್ರೆಸ್‌?

ಹಾಲಿ ಬಲಾಬಲ
ಕ್ಷೇತ್ರ-08
ಬಿಜೆಪಿ-07
ಕಾಂಗ್ರೆಸ್‌-01
ಜೆಡಿಎಸ್‌-00

click me!