ಬಿಜೆಪಿ-ಕಾಂಗ್ರೆಸ್‌ಗೆ ಸದಾ ಕಬ್ಬಿಣದ ಕಾವಲಿಯಂತೆ ಕಾಡುವ ಕ್ಷೇತ್ರವಿದು, ಪಕ್ಷ ವೈಷಮ್ಯದ ಜೊತೆ ವೈಯಕ್ತಿಕ ದ್ವೇಷದ ಜಿದ್ದಾಜಿದ್ದಿಯ ಅಖಾಡವಿದು.
ನಾಗರಾಜ ಎಸ್.ಬಡದಾಳ್
ದಾವಣಗೆರೆ(ಮಾ.17): ರಾಜ್ಯದ ಪ್ರತಿಷ್ಟಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಕಾಂಗ್ರೆಸ್-ಬಿಜೆಪಿ ಮಧ್ಯೆ ವೈರತ್ವ ಇದ್ದರೂ, ಸಂಬಂಧಿಗಳ ರಾಜಕೀಯ ಕದನಕ್ಕೂ ಇದು ಸಾಕ್ಷಿಯಾಗಿದೆ. 2008ರಲ್ಲಿ ಉತ್ತರ ಕ್ಷೇತ್ರ ರಚನೆಯಾದಾಗಿನಿಂದ ನಡೆದ ಮೂರು ಚುನಾವಣೆಗಳಲ್ಲಿ ಸರದಿಯಲ್ಲಿ ಒಮ್ಮೆ ಬಿಜೆಪಿ, ಮತ್ತೊಮ್ಮೆ ಕಾಂಗ್ರೆಸ್, ಮಗದೊಮ್ಮೆ ಬಿಜೆಪಿಗೆ ಕ್ಷೇತ್ರ ಒಲಿದಿದೆ. 2008ರಲ್ಲಿ ಬಿಜೆಪಿಯ ಎಸ್.ಎ.ರವೀಂದ್ರನಾಥ ಅವರು ಶೇ.78ರಷ್ಟು ಮತ ಗಳಿಸಿ, ದಾಖಲೆ ಜಯ ದಾಖಲಿಸಿದ್ದರು. 2013ರಲ್ಲಿ ಎಸ್ಸೆಸ್ ಮಲ್ಲಿಕಾರ್ಜುನ ಅವರು ಶೇ.74ರಷ್ಟು ಮತ ಗಿಟ್ಟಿಸಿಕೊಂಡು, ಗೆದ್ದು ಸಚಿವರಾಗಿದ್ದರು. ಆದರೆ, 2018ರ ಚುನಾವಣೆಯಲ್ಲಿ ರವೀಂದ್ರನಾಥ ಅವರು ಕಾಂಗ್ರೆಸ್‌ನ ಎಸ್ಸೆಸ್ ಮಲ್ಲಿಕಾರ್ಜುನ ವಿರುದ್ಧ ಕೆಲವೇ ಸಾವಿರ ಮತಗಳ ಅಂತರದ ಜಯ ಸಾಧಿಸಿದರು.
75 ವರ್ಷವಾದವರಿಗೆ ಬಿಜೆಪಿಯಲ್ಲಿ ಟಿಕೆಟ್ ಇಲ್ಲ ಎಂಬ ವಯೋಮಿತಿಯ ಕಟ್ಟುಪಾಡು ಕೆಲವರಿಗೆ ಅನ್ವಯಿಸುವುದಿಲ್ಲ. ಹೀಗಾಗಿ, ಈ ಬಾರಿಯೂ ಉತ್ತರದಲ್ಲಿ ತಾವು ಸ್ಪರ್ಧಿಸುವುದಾಗಿ ರವೀಂದ್ರನಾಥ ಹೇಳಿದ್ದಾರೆ. ಆದಾಗ್ಯೂ, ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕುವುದಾದರೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಮೇಯರ್‌ಗಳಾದ ಎಸ್.ಟಿ.ವೀರೇಶ, ಸುಧಾ ಜಯರುದ್ರೇಶ, ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಕೊಂಡಜ್ಜಿ ಜಯಪ್ರಕಾಶ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ.ಸುರೇಶ್ ಟಿಕೆಟ್‌ಗಾಗಿ ಮುಂಚೂಣಿಯಲ್ಲಿದ್ದಾರೆ.
ದಾವಣಗೆರೆ: ಬಿಜೆಪಿ ಮಹಾಸಂಗಮ ಐತಿಹಾಸಿಕ ಸಮಾವೇಶಕ್ಕೆ ಚಾಲನೆ
ಈ ಮಧ್ಯೆ, ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ಸಿನ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಈಗಾಗಲೇ ತೊಡೆ ತಟ್ಟಿನಿಂತಿದ್ದಾರೆ. ಬಿಜೆಪಿ ಮುಂದೆ ಅದರಲ್ಲೂ ಸಂಸದ ಡಾ.ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್ ಅವರಂತಹ ನಾಯಕರಿಗೆ ಸೆಡ್ಡು ಹೊಡೆದು, ಕಾಂಗ್ರೆಸ್ಸಿಗೆ ಜಯ ತರಬಲ್ಲ ಸಾಮರ್ಥ್ಯವಿದ್ದರೆ ಅದು ಡಾ. ಶಾಮನೂರು ಶಿವಶಂಕರಪ್ಪ, ಎಸ್ಸೆಸ್ ಮಲ್ಲಿಕಾರ್ಜುನಗೆ ಮಾತ್ರ. ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಗೆಲ್ಲುವ ಸಾಮರ್ಥ್ಯವಿರುವುದು ಎಸ್ಸೆಸ್ ಮಲ್ಲಿಕಾರ್ಜುನಗೆ ಮಾತ್ರ ಎಂಬುದು ಕೆಪಿಸಿಸಿಗೂ ಗೊತ್ತಿಲ್ಲದ ವಿಚಾರವೇನಲ್ಲ. ಹೀಗಾಗಿ, ದಕ್ಷಿಣದಂತೆ ಉತ್ತರದಲ್ಲೂ ಕಾಂಗ್ರೆಸ್ಸಿನಲ್ಲಿ ಟಿಕೆಟ್ ಬಗ್ಗೆ ಅಷ್ಟೇನೂ ಗೊಂದಲವಿಲ್ಲ. ಇನ್ನು, ಜೆಡಿಎಸ್ ಸ್ಪರ್ಧೆ ನೀಡುವ ಸ್ಥಿತಿಯಲ್ಲಿಲ್ಲ.
ಕ್ಷೇತ್ರದ ಹಿನ್ನೆಲೆ:
ದಾವಣಗೆರೆ ನಗರದ ಹೊಸ ಭಾಗ, ಗ್ರಾಮೀಣ ಭಾಗಗಳನ್ನು ಒಳಗೊಂಡ ಉತ್ತರ ಕ್ಷೇತ್ರ, 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂತು. ಬಳಿಕ ನಡೆದ ಮೂರು ಚುನಾವಣೆಗಳಲ್ಲಿ ಸರದಿಯಂತೆ ಬಿಜೆಪಿ, ಕಾಂಗ್ರೆಸ್ ಮತ್ತೆ ಬಿಜೆಪಿಗೆ ಕ್ಷೇತ್ರ ಒಲಿದಿದೆ. 2008ರಲ್ಲಿ ಬಿಜೆಪಿ, 2013ರಲ್ಲಿ ಕಾಂಗ್ರೆಸ್, 2018ರಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಒಮ್ಮೆ ಗೆದ್ದ ಪಕ್ಷ ಮತ್ತೆ ಇಲ್ಲಿ ಸತತವಾಗಿ 2ನೇ ಗೆಲುವು ಕಂಡಿಲ್ಲ.
ಜಾತಿ ಲೆಕ್ಕಾಚಾರ:
ಸುಮಾರು 2.50 ಲಕ್ಷ ಮತದಾರರನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತವೇ ಪ್ರಬಲ ಸಮುದಾಯ. 75 ಸಾವಿರಕ್ಕೂ ಅಧಿಕ ಮತದಾರರು ಈ ಸಮುದಾಯಕ್ಕೆ ಸೇರಿದವರು. ಉಳಿದಂತೆ, 27 ಸಾವಿರ ಮುಸ್ಲಿಮರು, 20 ಸಾವಿರ ಕುರುಬರು, 24 ಸಾವಿರ ಪರಿಶಿಷ್ಟಜಾತಿ, 17 ಸಾವಿರ ಪರಿಶಿಷ್ಟಪಂಗಡ, 12 ಸಾವಿರ ನೇಕಾರರು, 10 ಸಾವಿರ ಉಪ್ಪಾರ, 9 ಸಾವಿರ ಬ್ರಾಹ್ಮಣರು, 9 ಸಾವಿರ ವಿಶ್ವಕರ್ಮ, 9 ಸಾವಿರ ರೆಡ್ಡಿ-ಕಮ್ಮವಾರ, 8 ಸಾವಿರ ಮರಾಠರು, 6-7 ಸಾವಿರ ಜೈನರು, 4 ಸಾವಿರ ಈಡಿಗ, 5 ಸಾವಿರ ಯಾದವರು, 5 ಸಾವಿರ ಮಡಿವಾಳ, 5 ಸಾವಿರ ವೈಶ್ಯರು ಇದ್ದಾರೆ. ವೀರಶೈವ ಲಿಂಗಾಯತರು, ಹಿಂದುಳಿದ ವರ್ಗ, ಪರಿಶಿಷ್ಟರ ಮತಗಳೇ ಇಲ್ಲಿ ನಿರ್ಣಾಯಕ.