ಸರ್ಕಾರ ಮೈತ್ರಿ ಕಪ್ ಯೋಜನೆಯ ರಾಯಭಾರಿಯಾಗಿ ನನ್ನನ್ನು ಪರಿಗಣಿಸಿರುವುದು ದೊಡ್ಡ ವಿಚಾರ ಎಂದು ಸರ್ಕಾರದ ಮೈತ್ರಿ ಕಪ್ ಯೋಜನೆಯ ರಾಯಭಾರಿ, ಚಿತ್ರನಟಿ ಸಪ್ತಮಿ ಗೌಡ ಹೇಳಿದರು.
ಮಂಗಳೂರು (ಸೆ.12): ಸರ್ಕಾರ ಮೈತ್ರಿ ಕಪ್ ಯೋಜನೆಯ ರಾಯಭಾರಿಯಾಗಿ ನನ್ನನ್ನು ಪರಿಗಣಿಸಿರುವುದು ದೊಡ್ಡ ವಿಚಾರ ಎಂದು ಸರ್ಕಾರದ ಮೈತ್ರಿ ಕಪ್ ಯೋಜನೆಯ ರಾಯಭಾರಿ, ಚಿತ್ರನಟಿ ಸಪ್ತಮಿ ಗೌಡ ಹೇಳಿದರು. ಸ್ಯಾನಿಟರಿ ಪ್ಯಾಡ್‌ನ ವಿಲೇ ಸಮಸ್ಯೆ ಜತೆಗೆ ಮುಜಗರ ಹುಟ್ಟಿಸುವಂತದ್ದು. ಹೆಣ್ಣು ಮಗಳೊಬ್ಬಳು ತನ್ನ ಮುಟ್ಟಿನ ಜೀವನದಲ್ಲಿ ಸುಮಾರು 200 ಕೆಜಿಯಷ್ಟು ಸ್ಯಾನಿಟರಿ ಪ್ಯಾಡ್ ತ್ಯಾಜ್ಯವನ್ನು ಸೃಷ್ಟಿಸುತ್ತಾಳೆ. ಅದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿ ಈ ಮೈತ್ರಿ ಕಪ್ ಬಳಕೆ ಅನುಕೂಲಕರ. ನನಗೂ ಇದರ ಬಗ್ಗೆ ಆರಂಭದಲ್ಲಿ ಮಾಹಿತಿ ನೀಡಿದ್ದು ನನ್ನ ಅಮ್ಮ. ಹಾಗಾಗಿ ಮಕ್ಕಳ ತಾಯಂದಿರಿಗೆ ಈ ಬಗ್ಗೆ ಸಮಾಲೋಚನೆ ಮೂಲಕ ಮಾಹಿತಿ ಜಾಗೃತಿ ಮೂಡಿಸುವುದು ಉತ್ತಮ ವಿಚಾರ. ವಿಶ್ವದಲ್ಲಿಯೇ ಮಹಿಳೆಯರು ಈ ಕಪ್‌ನ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದರು.
ಅಕ್ಟೋಬರ್‌ನಲ್ಲಿ 40 ಲಕ್ಷ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್: ರಾಜ್ಯದ ಸುಮಾರು 40 ಲಕ್ಷ ವಿದ್ಯಾರ್ಥಿನಿಯರಿಗೆ ಅಕ್ಟೋಬರ್‌ನಲ್ಲಿ ಸ್ಯಾನಿಟರಿ ಪ್ಯಾಡ್ ವಿತರಣೆ ನಡೆಸಲಾಗುವುದು. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಈ ಕಾರ್ಯಕ್ರಮ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿತ್ತು. ಈಗ ಅದನ್ನು ಮುಂದುವರಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಆರೋಗ್ಯ ಮತ್ತು ಕಟುಂಬ ಕಲ್ಯಾಣ ಯೋಜನೆಯಡಿ ದ.ಕ. ಹಾಗೂ ಚಾಮರಾಜನಗರ ಜಿಲ್ಲೆಗಳ ಸರ್ಕಾರಿ ಪದವಿ ಹಾಗೂ ಅನುದಾನಿತ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮೈತ್ರಿ ಕಪ್ (ಮುಟ್ಟಿನ ಕಪ್) ವಿತರಣಾ ಕಾರ್ಯಕ್ರಮಕ್ಕೆ ಸೋಮವಾರ ಮಂಗಳೂರು ನೆಹರೂ ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನೋಡೋದು ತಪ್ಪು: ಯದುವೀರ್ ಒಡೆಯರ್
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ 10ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಗುವುದು. ಪದವಿ ತರಗತಿಗಳ ವಿದ್ಯಾರ್ಥಿನಿಯರಿಗೆ ಮೈತ್ರಿ ಕಪ್ ಆರಂಭಿಕವಾಗಿ ದ.ಕ. ಹಾಗೂ ಚಾಮರಾಜನಗರ ಜಿಲ್ಲೆಯ ಒಟ್ಟು 15,000 (ದ.ಕ. ಜಿಲ್ಲೆಯಲ್ಲಿ 11,೦೦೦ ಹಾಗೂ ಚಾಮರಾಜನಗರದ 4 ಸಾವಿರ) ವಿದ್ಯಾರ್ಥಿನಿಯರಿಗೆ ವಿತರಿಸಲಾಗುತ್ತಿದೆ. ಈ ಪ್ರಾಯೋಗಿಕ ವಿತರಣೆಯ ಬಳಿಕ ಇದನ್ನು ರಾಜ್ಯದೆಲ್ಲೆಡೆ ಉಚಿತವಾಗಿ ವಿತರಿಸಲಾಗುವುದು ಎಂದರು. ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವ ಸಲುವಾಗಿ 2013-14ನೇ ಸಾಲಿನಲ್ಲಿ ಸಿದ್ದರಾಮಯ್ಯ ಸರ್ಕಾರ ಸ್ಯಾನಿಟರಿ ಪ್ಯಾಡ್ ವಿತರಣೆ ಕಾರ್ಯಕ್ರಮ ಆರಂಭಿಸಿತ್ತು. ಮುಟ್ಟಿನ ಸಂದರ್ಭದಲ್ಲಿ ಅನಾನುಕೂಲತೆಯಿಂದಾಗಿ ಸಾಕಷ್ಟು ವಿದ್ಯಾರ್ಥಿನಿಯರು ಶಾಲಾ ಕಾಲೇಜುಗಳ ತರಗತಿಗೆ ಹಾಜರಾಗಲು ತೊಂದರೆ ಅನುಭವಿಸುವುದನ್ನು ತಪ್ಪಿಸಲು ಈ ಯೋಜನೆ ಆರಂಭಿಸಲಾಗಿದೆ ಎಂದರು.
ಮುಟ್ಟು ಕಪ್ ರಾಯಭಾರಿಗಳಾಗಿ: ಮೈತ್ರಿ ಕಪ್‌ಗಳ ಬಳಕೆಯಿಂದ ವಿದ್ಯಾರ್ಥಿನಿಯರಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಲಿದೆ. ಜತೆಗೆ ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯಿಂದಾಗುವ ಪರಿಸರದ ಮೇಲಿನ ಹಾನಿಯನ್ನೂ ತಡೆಯಬಹುದು. ಇದನ್ನು ಉಪಯೋಗಿಸುವ ವಿದ್ಯಾರ್ಥಿನಿಯರು ಇತರ ವಿದ್ಯಾರ್ಥಿಗಳ ಪಾಲಿನ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಬೇಕು, ಅದರ ಬಗ್ಗೆ ಅರಿವು ಮೂಡಿಸಬೇಕು. ಮುಟ್ಟಿನ ಸಂದರ್ಭದಲ್ಲಿ ಹೆಣ್ಣು ಅಪವಿತ್ರವಾಗಿರುತ್ತಾಳೆ ಎಂಬ ಮನಸ್ಥಿತಿಯಿಂದ ಸಮಾಜವನ್ನು ಹೊರ ತರಬೇಕಾಗಿದೆ ಎಂದವರು ಹೇಳಿದರು.
ಆತ್ಮವಿಶ್ವಾಸ ಮೂಡಿಸಿ: ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಆಧುನಿಕ ವ್ಯವಸ್ಥೆಯಲ್ಲಿ ಅಗತ್ಯ ಸೌಲಭ್ಯಗಳು ಎಲ್ಲರಿಗೂ ದೊರಕಬೇಕೆಂಬ ನಿಟ್ಟಿನಲ್ಲಿ ಜಾರಿಗೆ ತರಲಾದ ಈ ಮೈತ್ರಿ ಕಪ್ ವಿತರಣೆ ಯೋಜನೆ ಆರೋಗ್ಯ ಮತ್ತು ಪರಿಸರದ ದೃಷ್ಟಿಯಿಂದ ಅನುಕೂಲಕರ. ಶಿಕ್ಷಕ ವರ್ಗ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಯೋಜನೆಯ ರಾಯಭಾರಿಗಳಾಗಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಮಾಡಬೇಕು ಎಂದರು. ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಲೇಡೀಸ್ ಹಾಸ್ಟೆಲ್‌ಗಳಿಂದ ಒಳಚರಂಡಿಗೆ ಸ್ಯಾನಿಟರಿ ಪ್ಯಾಡ್‌ಗಳು ಸೇರುತ್ತಿರುವುದರಿಂದ ಹಲವೆಡೆ ಬ್ಲಾಕ್ ಆಗುವ ಸಂದರ್ಭಗಳು ತಲೆದೋರುತ್ತಿದೆ. ಇದನ್ನು ಬಳಸುವ ವಿದ್ಯಾರ್ಥಿನಿಯರು ರಾಯಭಾರಿಗಳಾಗಿ ಈ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕಿ ಡಾ.ಎಂ. ಇಂದುಮತಿ, ಯೋಜನಾ ನಿರ್ದೇಶಕ ಡಾ. ಶ್ರೀನಿವಾಸ್, ವಿಭಾಗೀಯ ಸಹಾ ನಿರ್ದೇಶಕಿ ಡಾ.ರಾಜೇಶ್ವರಿ ದೇವಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಮತ್ತಿತರರಿದ್ದರು. ಈ ಸಂದರ್ಭ ಮುಟ್ಟಿನ ಕಪ್ ಪ್ರಾಯೋಗಿಕ ಅಧ್ಯಯನ ವರದಿ, ಯೋಜನೆಯ ಪೋಸ್ಟರ್, ಲೋಗೋ ಹಾಗೂ ಐಇಸಿ ಮತ್ತು ಮುಟ್ಟಿನ ನೈರ್ಮಲ್ಯದ ಮಾಹಿತಿ ಕಿರುಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ನನಗೆ ಗುಂಡಿಕ್ಕಿದರೂ ರೈತರ ಪರ ಹೋರಾಡುವೆ: ಸಂಸದ ಮುನಿಸ್ವಾಮಿ
ಮುಟ್ಟು ಕಪ್ ಏನಿದು ಪ್ರಯೋಜನ?: ಯೋಜನೆಯ ಇಲಾಖಾ ಉಪ ನಿರ್ದೇಶಕಿ ಡಾ.ವೀಣಾ ಪ್ರಸ್ತಾವಿಕದಲ್ಲಿ, 17ರಿಂದ 18 ವರ್ಷದೊಳಗಿನ ಹೆಣ್ಮಕ್ಕಳು ಸ್ಯಾನಿಟರಿ ನ್ಯಾಪ್‌ಕಿನ್ ಬದಲು ಮುಟ್ಟು ಕಪ್ ಉಪಯೋಗಿಸಲು ಉತ್ತೇಜನ ನೀಡಲಾಗುತ್ತಿದೆ. ಇದನ್ನು ಸುಮಾರು 8 ಗಂಟೆ ಅವಧಿಗೆ ಬಳಸಬಹುದು. ಸೂಕ್ತ ನಿರ್ವಹಣೆ ಮಾಡಿದಲ್ಲಿ 8ರಿಂದ 10 ವರ್ಷಕಾಲ ನಿಯಮಿತವಾಗಿ ಮರು ಬಳಕೆ ಮಾಡಬಹುದಾಗಿದೆ. ಮುಟ್ಟಿನ ಕಪ್ ಪರಿಸರ ಸ್ನೇಹಿಯಾಗಿದ್ದು, ಮರು ಬಳಕೆ ಮಾಡುವುದರಿಂದ ವಿಲೇವಾರ ಸಮಸ್ಯೆ ಇರುವುದಿಲ್ಲ. ಪರಿಸರ ಹಾಗೂ ಆರೋಗ್ಯಕ್ಕೆ ಈ ಕಪ್ ಬಳಕೆ ಬಹಳ ಪೂರಕ ಎಂದರು.