ಕಾಂಗ್ರೆಸ್‌ ಗೂಡಿಗೆ ಹಾರಿದ ವಲಸೆ ಹಕ್ಕಿ: ಹಳೇ ಮೈಸೂರಲ್ಲಿ ನಾವಿಕನಿಲ್ಲದ ಹಡಗಿನಂತಾದ ಬಿಜೆಪಿ!

By Kannadaprabha News  |  First Published Oct 24, 2024, 11:24 AM IST

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ್ ಪ್ರಭಾವಿ ಒಕ್ಕಲಿಗ ನಾಯಕರಾಗಿದ್ದರು. ಹೀಗಾಗಿ ಬಿಜೆಪಿ ಅವರಿಬ್ಬರ ಬಲ ಕುಗ್ಗಿಸಲು ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಿತು. 2021ರಲ್ಲಿ ಕೇವಲ 7 ತಿಂಗಳು ಮಾತ್ರ ಪ್ರವಾಸೋದ್ಯಮ ಸಚಿವರಾಗಿದ್ದರು. ಇದರಿಂದ ಎದೆಗುಂದದ ಯೋಗೇಶ್ವರ್, ರಾಮನಗರ ಮಾತ್ರವಲ್ಲದೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಅವಿರಿತವಾಗಿ ಹೋರಾಡಿ ಸ್ಥಳೀಯ ಸಂಸ್ಥೆಗಳಲ್ಲಿ ಕಮಲ ಅರಳಿಸಿದರು.


ಎಂ.ಅಫ್ರೋಜ್ ಖಾನ್

ರಾಮನಗರ(ಅ.24): ರಾಜ್ಯ ರಾಜಕಾರಣದಲ್ಲಿ ವಲಸೆ ಹಕ್ಕಿ ಎಂದೇ ಕರೆಯಲ್ಪಡುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಗೂಡಿಗೆ ಹಾರಿರುವುದು ರಾಮನಗರ ಮಾತ್ರವಲ್ಲದೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪರಿಸ್ಥಿತಿ ನಾವಿಕನಿಲ್ಲದ ಹಡಗಿನಂತಾಗಿದೆ.

Tap to resize

Latest Videos

undefined

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರು. ಇಲ್ಲಿ ಒಕ್ಕಲಿಗ ಹಾಗೂ ಮಾಸ್ ಲೀಡರ್ ಒಬ್ಬನಿಗಾಗಿ ಹುಡುಕಾಡುತ್ತಿದ್ದ ಬಿಜೆಪಿಗೆ ಯೋಗೇಶ್ವರ್ ಸಿಕ್ಕಿದರು. ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ರಾಜಕೀಯವಾಗಿ ಬದ್ಧ ವೈರಿಯಾಗಿದ್ದ ಯೋಗೇಶ್ವರ್ ಬಿಜೆಪಿಯಲ್ಲಿ ಪ್ರಬಲ ಒಕ್ಕಲಿಗ ನಾಯಕರಾಗಿಯೂ ಬೆಳೆದರು. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ - ಕಾಂಗ್ರೆಸ್‌ಗೆ ಪರ್ಯಾಯವಾಗಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಹಗಲಿರುಳು ಶ್ರಮಿಸಿದವರು.

 

ಯೋಗಿ ಸೇರಿಸಿಕೊಂಡು ದೌರ್ಬಲ್ಯ ಒಪ್ಪಿಕೊಂಡ ಕಾಂಗ್ರೆಸ್: ಸಿ.ಟಿ.ರವಿ

ಮೈತ್ರಿ ಸರ್ಕಾರ ಕೆಡವಿದ ಸೈನಿಕ:

2018ರಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕೆಡವಿ 2019ರಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಯೋಗೇಶ್ವರ್ ಪ್ರಮುಖ ಪಾತ್ರ ವಹಿಸಿದ್ದರು. ಆದರೂ ಕಮಲ ಪಾಳಯದೊಳಗಿನ ಒಳಬೇಗುದಿ ಅವರಿಗೆ ಸಚಿವ ಸ್ಥಾನ ಕೈತಪ್ಪುವಂತೆ ಮಾಡಿತು. 2020ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡರು.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ್ ಪ್ರಭಾವಿ ಒಕ್ಕಲಿಗ ನಾಯಕರಾಗಿದ್ದರು. ಹೀಗಾಗಿ ಬಿಜೆಪಿ ಅವರಿಬ್ಬರ ಬಲ ಕುಗ್ಗಿಸಲು ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಿತು. 2021ರಲ್ಲಿ ಕೇವಲ 7 ತಿಂಗಳು ಮಾತ್ರ ಪ್ರವಾಸೋದ್ಯಮ ಸಚಿವರಾಗಿದ್ದರು. ಇದರಿಂದ ಎದೆಗುಂದದ ಯೋಗೇಶ್ವರ್, ರಾಮನಗರ ಮಾತ್ರವಲ್ಲದೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಅವಿರಿತವಾಗಿ ಹೋರಾಡಿ ಸ್ಥಳೀಯ ಸಂಸ್ಥೆಗಳಲ್ಲಿ ಕಮಲ ಅರಳಿಸಿದರು.

ಬಿಜೆಪಿ - ಜೆಡಿಎಸ್‌ಗೆ ಬೆಸುಗೆ ಹಾಕಿದ ಯೋಗಿ:

2023ರ ವಿಧಾನಸಭಾ ಚುನಾವಣೆ ವೇಳೆಗೆ ಹಳೇ ಮೈಸೂರು ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಲ್ಲಿ ಅಸಮಾಧಾನಗೊಂಡಿದ್ದ ನಾಯಕರು ಹಾಗೂ ಮಂಡ್ಯ ಸಂಸದರಾಗಿದ್ದ ಸುಮಲತಾ ಅಂಬರೀಷ್ ಅವರನ್ನು ಕರೆತಂದು ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬಿದರು. ಇದರಿಂದ ವಿಧಾನಸಭಾ ಚುನಾವಣೆಯಲ್ಲಿ ಮತಗಳಿಕೆ ಪ್ರಮಾಣ ಹೆಚ್ಚಿತು. ಆದರೆ, ಬಿಜೆಪಿ ಮತ್ತು ಜೆಡಿಎಸ್ ಮತಗಳ ಧ್ರುವೀಕರಣ ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟಿತು.
ಇದನ್ನರಿತ ಯೋಗೇಶ್ವರ್ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಪಕ್ಷಗಳು ಮೈತ್ರಿ ಸಾಧಿಸುವಂತೆ ಮಾಡುವಲ್ಲಿಯೂ ಯಶಸ್ವಿಯಾದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಗೆಲುವಿಗೂ ಯೋಗೇಶ್ವರ್ ಬೆನ್ನಾಗಿ ನಿಂತರು. ಒಟ್ಟಾರೆ ಮೈತ್ರಿ ಉಭಯ ಪಕ್ಷಗಳಿಗೆ ಲಾಭ ತಂದುಕೊಟ್ಟಿತು.

ಹಳೇ ಮೈಸೂರು ಭಾಗ ಒಕ್ಕಲಿಗರ ಪ್ರಾಬಲ್ಯವುಳ್ಳ ಪ್ರದೇಶ. ಇಲ್ಲಿ ಪ್ರಬಲ ಒಕ್ಕಲಿಗ ನಾಯಕರಾಗಿದ್ದ ಯೋಗೇಶ್ವರ್, ಬಿಜೆಪಿ ಪಾಲಿನ ರಾಜಕೀಯ ಚಾಣಕ್ಷನಂತಿದ್ದರು. ಇಷ್ಟಾದರೂ ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಯೋಗೇಶ್ವರ್ ಅವರಿಗೆ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹಿನ್ನಡೆಯಾದಂತಾಯಿತು.

ಬಲಹೀನಗೊಂಡ ಬಿಜೆಪಿ:

ಈ ಕಾರಣದಿಂದಲೇ ಬಿಜೆಪಿ ತೊರೆಯುವ ದೃಢ ನಿರ್ಧಾರ ಮಾಡಿದ ಯೋಗೇಶ್ವರ್ ಅಂತಿಮವಾಗಿ ಕಾಂಗ್ರೆಸ್ ಪಾಳಯ ಸೇರಿಕೊಂಡಿದ್ದಾರೆ. ಪ್ರಬಲ ನಾಯಕನನ್ನು ಕಳೆದುಕೊಂಡು ಸೊರಗಿರುವ ಕಮಲಕ್ಕೆ ಬಲ ತುಂಬುವವರು ಯಾರು ಎಂಬ ಪ್ರಶ್ನೆ ಬಿಜೆಪಿಯಲ್ಲಿ ಮೂಡಿದೆ.

ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಯೋಗೇಶ್ವರ್ ಸೇರ್ಪಡೆಯಿಂದಾಗಿ ಚನ್ನಪಟ್ಟಣ ಉಪ ಚುನಾವಣೆ ಮಾತ್ರವಲ್ಲದೆ ಮುಂಬರುವ ಜಿಪಂ, ತಾಪಂ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಗೆಲುವಿನ ವಿಶ್ವಾಸ ಹೊಂದಿದೆ. ಇನ್ನು ಬಿಜೆಪಿ ಪಾಲಿಗೆ ನಾಯಕರಾಗಿರುವ ಸಂಸದ ಡಾ.ಸಿ.ಎನ್ .ಮಂಜುನಾಥ್ ಅವರಿಗೆ ರಾಜಕಾರಣದ ಅನುಭವ ಕಡಿಮೆ. ಜಿಲ್ಲೆಯ ಮಟ್ಟಿಗೆ ಬಿಜೆಪಿ ಕಾರ್ಯಕರ್ತರ ದೂರು, ದುಮ್ಮಾನಗಳನ್ನು ಕೇಳುವ ಪ್ರಬಲವಾದ ನಾಯಕ ಕೂಡ ಗತಿಯಿಲ್ಲದಂತಾಗಿದೆ.

ಇದೆಲ್ಲದರ ನಡುವೆ ಜಿಲ್ಲೆಯಲ್ಲಿ ಬಿಜೆಪಿ ಬಲಹೀನವಾಗುತ್ತಿದೆಯೇನೋ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಮುಂಬರುವ ಚುನಾವಣೆಗಳನ್ನು ಹೇಗೆ ಎದುರಿಸಬೇಕು ಎಂಬ ಆತಂಕ ಕಾರ್ಯಕರ್ತರನ್ನು ಕಾಡಲಾರಂಭಿಸಿದೆ. ರಾಜ್ಯ ನಾಯಕ ಎನಿಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಬೆಂಗಳೂರಿಗೆ ಸೀಮಿತವಾಗಿದ್ದಾರೆ.

ಗೊಂದಲದಲ್ಲಿ ಕಾರ್ಯಕರ್ತರು:

ಯೋಗೇಶ್ವರ್ ಅವರನ್ನು ಹಿಂಬಾಲಿಸಿಕೊಂಡು ಬಂದ ಮುಖಂಡರು ಕಾಂಗ್ರೆಸ್ ಸೇರಬೇಕೋ?, ಬೇಡವೋ ಎಂಬ ಜಿಜ್ಞಾಸೆಯಲ್ಲಿ ಮುಳುಗಿದ್ದಾರೆ. ಇದೆಲ್ಲದರ ಪರಿಣಾಮ ನಾಯಕರೇ ಇಲ್ಲದ ಜಿಲ್ಲೆಯಲ್ಲಿ ನಮ್ಮ ಕಷ್ಟ ಸುಖಕ್ಕೆ ಸ್ಪಂದಿಸುವವರು ಯಾರು ಎನ್ನುವ ಪ್ರಶ್ನೆಯೊಂದಿಗೆ ಸ್ವತಃ ಬಿಜೆಪಿ ಕಾರ್ಯಕರ್ತರೇ ಮುಂದೇನು ಎನ್ನುವ ಗೊಂದಲದಲ್ಲಿದ್ದಾರೆ. ಹಾಗೊಮ್ಮೆ ರಾಮನಗರ ಮಾತ್ರವಲ್ಲದೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನೆಲೆ ಕಲ್ಪಿಸಿಕೊಡಲು ಬಿಜೆಪಿ ವರಿಷ್ಠರು ಒಲವು ತೋರಬೇಕಿದೆ. ಇದಕ್ಕಾಗಿ ಕಾಂಗ್ರೆಸ್ ಅಬ್ಬರವನ್ನು ಎದುರಿಸುವ ಶಕ್ತಿ ಇರುವವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ಕಲ್ಪಿಸುವುದು ಅನಿವಾರ್ಯವಾಗಲಿದೆ.

ರಾಜಕೀಯ ನಿಂತ ನೀರಲ್ಲ

ರಾಜಕೀಯ ನಿಂತ ನೀರಲ್ಲ. ಇಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ ಎನ್ನುವ ಮಾತಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸಾಕ್ಷಿಯಾಗಿದ್ದಾರೆ. ಒಂದು ಕಾಲದಲ್ಲಿ ಡಿ.ಕೆ.ಶಿವಕುಮಾರ್ ಆಪ್ತರಾಗಿದ್ದ ಯೋಗೇಶ್ವರ್ ಬಿಜೆಪಿ ಸೇರಿ ಕಡು ವೈರಿಯಾಗಿದ್ದರು. ಉಭಯ ನಾಯಕರ ನಡುವೆ ವಾಕ್ಸಮರವೇ ನಡೆದು ಹೋಗಿತ್ತು. 2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿದ್ದು ಮಾತ್ರವಲ್ಲದೆ ಬಂಡಾಯ ಶಾಸಕರನ್ನು ಎತ್ತಿ ಕಟ್ಟಿ ಮೈತ್ರಿ ಸರ್ಕಾರ ಕೆಡವಿದ ಕೀರ್ತಿಯೂ ಯೋಗೇಶ್ವರ್ ಅವರಿಗೆ ಸಲ್ಲುತ್ತದೆ.

ಯೋಗೇಶ್ವರ್ ಅವರಲ್ಲಿ ಕಾಂಗ್ರೆಸ್‌ ರಕ್ತ ಹರಿಯುತ್ತಿದೆ: ಡಿ.ಕೆ.ಶಿವಕುಮಾರ್

2018ರ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ವಿರುದ್ಧ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದರು. ಈ ವೇಳೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ತಮ್ಮ ಬದ್ಧ ರಾಜಕೀಯ ವೈರಿ ಯೋಗೇಶ್ವರ್ ಸೋಲಿಸಲು ಹಿಂಬಾಗಿಲ ಮೂಲಕ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದ್ದು ಬಹಿರಂಗ ಸತ್ಯ.

2024ರ ಲೋಕಸಭಾ ಚುನಾವಣೆಯಲ್ಲಿ ಶತ್ರುವಿನ ಶತ್ರು ಮಿತ್ರ ಎಂಬ ಮಾತಿನಂತೆ ಯೋಗೇಶ್ವರ್ ತಮ್ಮ ರಾಜಕೀಯ ವಿರೋಧಿ ಕುಮಾರಸ್ವಾಮಿ ಅವರೊಂದಿಗೆ ಕೈಜೋಡಿಸಿದರು. ಈಗ ಚನ್ನಪಟ್ಟಣ ಉಪಚುನಾವಣೆ ಎದುರಾದ ಮೇಲೆ ಯೋಗೇಶ್ವರ್ ಹಳೆಯ ರಾಜಕೀಯ ವೈಷಮ್ಯ ಮರೆತು ಡಿ.ಕೆ.ಶಿವಕುಮಾರ್ ಅವರೊಂದಿಗೆ ಕೈ ಜೋಡಿಸಿದ್ದಾರೆ.

click me!