ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ: ಭವಿಷ್ಯ ನುಡಿದ ಶಾಸಕ ವಿಜಯೇಂದ್ರ

By Kannadaprabha News  |  First Published Jul 13, 2023, 1:01 PM IST

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಜನರಿಗೆ ಉಚಿತ ಗ್ಯಾರಂಟಿಗಳನ್ನು ನೀಡಬೇಕಾದ ಪರಿಸ್ಥಿತಿ ಇರುವುದಕ್ಕೆ ಬಹುಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ನವರೇ ಕಾರಣ. ಈಗ ಐದು ಗ್ಯಾರಂಟಿಗಳ ಸುಳ್ಳು ಹೇಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. 


ವಿಧಾನಸಭೆ (ಜು.13): ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಜನರಿಗೆ ಉಚಿತ ಗ್ಯಾರಂಟಿಗಳನ್ನು ನೀಡಬೇಕಾದ ಪರಿಸ್ಥಿತಿ ಇರುವುದಕ್ಕೆ ಬಹುಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ನವರೇ ಕಾರಣ. ಈಗ ಐದು ಗ್ಯಾರಂಟಿಗಳ ಸುಳ್ಳು ಹೇಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಕೆಲಸ ಮಾಡಲಿ ಎಂದು ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ ಸದನದಲ್ಲಿ ವಾಗ್ದಾಳಿ ನಡೆಸಿದರು. ಬುಧವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕರ ಟೀಕೆಗಳಿಗೆ ತಮ್ಮ ಮಾತಿನುದ್ದಕ್ಕೂ ತಿರುಗೇಟು ನೀಡಿದರು.

‘ಮಾತೆತ್ತಿದರೆ ಕಾಂಗ್ರೆಸ್‌ನವರು ಬಿಜೆಪಿ ಆಡಳಿತಾವಧಿಯಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಟೀಕಿಸುತ್ತಾರೆ. ಪ್ರಧಾನಿ ಮೋದಿ ವಿರುದ್ಧ ಮಾತನಾಡುತ್ತಾರೆ. ಕೋವಿಡ್‌ ಸಮಯದಲ್ಲಿ ಇಡೀ ದೇಶದ ಜನರಿಗೆ ಉಚಿತವಾಗಿ ಕೋವಿಡ್‌ ಲಸಿಕೆ ನೀಡಿ ಪರಿಸ್ಥಿತಿ ಹತೋಟಿಗೆ ತಂದಿದ್ದು ಸಾಧನೆಯಲ್ಲವಾ? ಕೋವಿಡ್‌ ಸಮಯದಲ್ಲಿ 33 ತಿಂಗಳ ಕಾಲ ಪಡಿತರ ದಾರರಿಗೆ ಮೊದಲು ನೀಡುತ್ತಿದ್ದ ತಲಾ 5 ಕೆ.ಜಿ. ಅಕ್ಕಿ ಜೊತೆಗೆ ಇನ್ನೂ 5 ಕೆ.ಜಿ. ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡಿದ್ದು ಸಾಧನೆಯಲ್ಲವಾ ಎಂದರು. ಮೊದಲ ಡೋಸ್‌ ಲಸಿಕೆಯನ್ನು ಶೇ.100ರಷ್ಟು ಯಶಸ್ವಿಗೊಳಿಸಿದ್ದು ಯಡಿಯೂರಪ್ಪ ಅವರ ಸರ್ಕಾರ, ಹಿಂದೆ ಕೇವಲ 1973ರಷ್ಟಿದ್ದ ಸ್ಟಾರ್ಟ್‌ ಅಪ್‌ಗಳು 15 ಸಾವಿರಕ್ಕೆ ಹೆಚ್ಚಾಗಿದ್ದು ಇದೇ ಅವಧಿಯಲ್ಲಿ. 

Tap to resize

Latest Videos

ಮಳೆ ಕೊರತೆ ಹಿನ್ನೆಲೆ ಕುಡಿವ ನೀರು ಸಮ​ಸ್ಯೆ​ಯಾ​ಗ​ದಿ​ರ​ಲಿ: ಶಾಸಕ ಬಿ.ವೈ.ವಿಜಯೇಂದ್ರ

ಕಾಂಗ್ರೆಸ್‌ ಅವಧಿಯಲ್ಲಿ ಕರ್ನಾಟಕ ಈಸ್‌ ಆಫ್‌ ಡೂಯಿಂಗ್‌ ಬ್ಯುಸಿನೆಸ್‌ನಲ್ಲಿ 16ನೇ ಸ್ಥಾನದಲ್ಲಿತ್ತು. ಬಿಜೆಪಿ ಅವಧಿಯಲ್ಲಿ ನಂ.1 ಆಯಿತು. ಇನೋವೇಷನ್‌ ಇಂಡೆಕ್ಸ್‌ನಲ್ಲಿ ನಂ.1, ಪುನರ್‌ನವೀಕರಣ ಇಂಧನ ಉತ್ಪಾದನೆಯಲ್ಲಿ ನಂ.1. ಇದೆಲ್ಲವೂ ಬಿಜೆಪಿ ಅವಧಿಯಲ್ಲಿ ಸಾಧಿಸಿದ್ದು’ ಎಂದು ಹೇಳಿದರು. ‘ಕೇಂದ್ರ ಸರ್ಕಾರ ರಸಗೊಬ್ಬರಕ್ಕೆ 2019-20ರಿಂದ 2021-22ರವರೆಗೆ 2.55 ಲಕ್ಷ ಕೋಟಿ ರು. ಸಬ್ಸಿಡಿ ನೀಡಲಾಗಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಪ್ರತಿ ರೈತನಿಗೆ 6000 ರು. ಕೇಂದ್ರದ ನೀಡಿದರೆ ಇದಕ್ಕೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಿ ಇನ್ನೂ 4000 ರು. ನೀಡಿದ್ದಾರೆ. ಇದ್ಯಾವುದೂ ಕಾಣುವುದಿಲ್ಲವೇ. 

ಕಾಂಗ್ರೆಸ್‌ ಸರ್ಕಾರ 15 ಕೆಜಿ ಅಕ್ಕಿ ಕೊಡಲಿ: ಶಾಸಕ ಬಿ.ವೈ.ವಿಜಯೇಂದ್ರ

ವಿಶ್ವ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತ ಆರ್ಥಿಕ ಸಂಕಷ್ಟಎದುರಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಇಲ್ಲ. ಪ್ರಧಾನಿ ಮೋದಿ ಅವರು ಉತ್ತಮ ಆಡಳಿತ ನೀಡಿದ್ದಾರೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಮೋದಿ ಅವರು ಇಡೀ ದೇಶಕ್ಕೆ ಪ್ರಧಾನಿ. ಇಡೀ ವಿಶ್ವವೇ ಅವನ್ನು ಕೊಂಡಾಡುತ್ತಿದೆ. ಮೊದಲು ಅವರಿಗೆ ಗೌರವ ಕೊಡುವುದನ್ನು ಎಲ್ಲ ಪಕ್ಷದವರೂ ಕಲಿಯಬೇಕು’ ಎಂದರು. ಹಿಮಾಚಲ ಪ್ರದೇಶ, ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆದ್ದಿರಬಹುದು. ದೇಶವನ್ನೇನೂ ಗೆದ್ದಿಲ್ಲ. 2024ರ ಚುನಾವಣೆಯಲ್ಲಿ ದೇಶ ಗೆಲ್ಲುವುದು ಬಿಜೆಪಿಯೇ. ಮೋದಿ ಅವರು ಮತ್ತೆ ಪ್ರಧಾನಿ ಆಗುತ್ತಾರೆ ಎಂದು ಭವಿಷ್ಯ ನುಡಿದರು.

click me!