ತಿಪಟೂರಿನಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್. ಬಸವರಾಜು ಅವರು ದಿಢೀರ್ ರಾಜಕೀಯ ನಿವೃತ್ತಿ ಘೋಷಿಸಿರುವುದು ಚರ್ಚೆಗೆ ಗ್ರಾಸವಾಗಿದೆ. 4 ವರ್ಷದ ಜಿ.ಎಸ್. ಬಸವರಾಜು ಅವರು ಜಿಲ್ಲೆಯಲ್ಲಿ ರಾಜಕೀಯ ಮೇಲ್ಪಂಕ್ತಿ ಹಾಕಿ ಕೊಟ್ಟವರು. ಐದು ಬಾರಿ ಸಂಸದರಾಗಿರುವ ಜಿ.ಎಸ್. ಬಸವರಾಜು ಅವರ ರಾಜಕೀಯ ನಿವೃತ್ತಿ ಜಿಲ್ಲಾ ರಾಜಕಾರಣದಲ್ಲಿ ಶೂನ್ಯವನ್ನು ಸೃಷ್ಟಿಸಿದೆ.
ಉಗಮ ಶ್ರೀನಿವಾಸ್
ತುಮಕೂರು (ಜ.17) : ತಿಪಟೂರಿನಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್. ಬಸವರಾಜು ಅವರು ದಿಢೀರ್ ರಾಜಕೀಯ ನಿವೃತ್ತಿ ಘೋಷಿಸಿರುವುದು ಚರ್ಚೆಗೆ ಗ್ರಾಸವಾಗಿದೆ. 4 ವರ್ಷದ ಜಿ.ಎಸ್. ಬಸವರಾಜು ಅವರು ಜಿಲ್ಲೆಯಲ್ಲಿ ರಾಜಕೀಯ ಮೇಲ್ಪಂಕ್ತಿ ಹಾಕಿ ಕೊಟ್ಟವರು. ನೀರಾವರಿ ಬಗ್ಗೆ ತಳಸ್ಪರ್ಶಿಯಾಗಿ ಮಾತನಾಡುವ ಬೆರಳೆಣಿಕೆ ರಾಜಕಾರಣಿಗಳಲ್ಲಿ ಇವರು ಕೂಡ ಒಬ್ಬರು. ಐದು ಬಾರಿ ಸಂಸದರಾಗಿರುವ ಜಿ.ಎಸ್. ಬಸವರಾಜು ಅವರ ರಾಜಕೀಯ ನಿವೃತ್ತಿ ಜಿಲ್ಲಾ ರಾಜಕಾರಣದಲ್ಲಿ ಶೂನ್ಯವನ್ನು ಸೃಷ್ಟಿಸಿದೆ.
ಸುಮಾರು ನಾಲ್ಕೂವರೆ ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜಿ.ಎಸ್. ಬಸವರಾಜು ಅವರದ್ದು ವಿಶಿಷ್ಟವ್ಯಕ್ತಿತ್ವ. ರಾಜಕೀಯ, ಧಾರ್ಮಿಕ, ನೀರಾವರಿ, ಅಭಿವೃದ್ಧಿ ಹೀಗೆ ಬಹು ಆಯಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಸವರಾಜು ಜಿಲ್ಲಾ ರಾಜಕಾರಣದಲ್ಲಿ ದೊಡ್ಡ ಹೆಸರು. ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿದ್ದ ಕೆ.ಲಕ್ಕಪ್ಪ ಅವರ ದಾಖಲೆಯನ್ನು ಮುರಿದು ಐದು ಬಾರಿ ಸಂಸದರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಬಸವರಾಜು ಅವರದ್ದು. ದೆಹಲಿ ರಾಜಕಾರಣದಲ್ಲಿ ಸಾಕಷ್ಟುಅನುಭವ ಹೊಂದಿರುವ ಬಸವರಾಜು ಸದನದ ಹೊರಗೂ ಹಾಗೂ ಒಳಗೂ ತಾರ್ಕಿಕವಾಗಿ ಮಾತನಾಡುತ್ತಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ತುಮಕೂರಿಗೆ ಬಂದಾಗ ಜಿ.ಎಸ್. ಬಸವರಾಜು ಅವರು ಸೋತು ಬಿಡುತ್ತಾರೆ ಎಂಬ ಚರ್ಚೆ ಸಾಮಾನ್ಯವಾಗಿತ್ತು. ಆದರೆ ಚುನಾವಣೆ ಮುಗಿದು ಫಲಿತಾಂಶ ಹೊರ ಬಂದಾಗ ಬಸವರಾಜು ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾದರು.
ಸಿದ್ದರಾಮರ ಚಿಂತನೆಯಂತೆ ಬಿಜೆಪಿ ಕೆಲಸ: ಸಿಎಂ ಬೊಮ್ಮಾಯಿ
7ನೇ ಲೋಕಸಭೆ ಅವಧಿ ಪೂರ್ಣಗೊಳ್ಳುವ ಮುನ್ನವೇ 1984ರ ಡಿಸೆಂಬರ್ 24ರಂದು ಮಧ್ಯಂತರ ಚುನಾವಣೆ ನಡೆದು ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜಿ.ಎಸ್. ಬಸವರಾಜು ಅವರು ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ವೈ.ಕೆ. ರಾಮಯ್ಯ ಸೇರಿದಂತೆ 7 ಮಂದಿ ಕಣದಲ್ಲಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಎಸ್.ಬಸವರಾಜು 265249 ಬಹುಮತವನ್ನು ಗಳಿಸಿ 30410 ಮತಗಳ ಅಂತರಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ವೈ.ಕೆ.ರಾಮಯ್ಯ(234839) ಅವರನ್ನು ಪರಾಜಯಗೊಳಿಸಿ ಪ್ರಥಮ ಬಾರಿಗೆ ಲೋಕಸಭೆಗೆ ಆಯ್ಕೆಯಾದರು.
1989ರ ನವೆಂಬರ್ 24ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಸವರಾಜು ಅವರೇ ಕಣಕ್ಕಿಳಿದರು. ಜೆಎನ್‌ಪಿ(ಜೆಪಿ) ಅಭ್ಯರ್ಥಿ ವೈ.ಕೆ.ರಾಮಯ್ಯ, ಜೆಡಿ ಪಕ್ಷದ ಡಿ.ಟಿ.ಮಾಯಣ್ಣ, ಪಕ್ಷೇತರರಾಗಿ ಆರ್.ನಾಗಭೂಷಣ, ಟಿ.ಆರ್.ರೇಣುಕಾ ಪ್ರಸಾದ್, ಟಿ.ಎಸ್.ವಿರೂಪಾಕ್ಷ ಅವರು ಅಖಾಡಕ್ಕಿಳಿದಿದ್ದರು. ಜಿ.ಎಸ್.ಬಸವರಾಜು 376878 ಬಹುಮತವನ್ನು ಗಳಿಸುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ವೈ.ಕೆ.ರಾಮಯ್ಯ(177740) ಅವರನ್ನು 199138 ಮತಗಳ ಅಂತರದಿಂದ ಸೋಲಿಸಿ 2ನೇ ಬಾರಿ ವಿಜಯ ಮಾಲೆ ಧರಿಸಿದ್ದರು.
11 ಅಭ್ಯರ್ಥಿಗಳು ಸ್ಪರ್ಧಿಸಿದ್ದ 1991ರ ಮೇ ಮಾಹೆಯ 26ರಂದು ನಡೆದ ಮಧ್ಯಂತರ ಚುನಾವಣಾ ಹಣಾಹಣಿಯಲ್ಲಿ ಜಿ.ಎಸ್. ಬಸವರಾಜು ಸೋಲುವುದರೊಂದಿಗೆ ಹ್ಯಾಟ್ರಿಕ್ ಅವಕಾಶವನ್ನು ತಪ್ಪಿಸಿಕೊಂಡರು. ಬಿಜೆಪಿ ಅಭ್ಯರ್ಥಿ ಎಸ್.ಮಲ್ಲಿಕಾರ್ಜುನಯ್ಯ ಅವರು 255186 ಮತಗಳನ್ನು ಗಳಿಸುವ ಮೂಲಕ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಜಿ.ಎಸ್.ಬಸವರಾಜ್(236269) ಅವರನ್ನು 18917 ಮತಗಳ ಅಂತರದಿಂದ ಸೋಲಿಸಿದ್ದರು.
1996 ಮತ್ತು 1998 ರ ಚುನಾವಣೆಯಲ್ಲಿ ಜಿ.ಎಸ್. ಬಸವರಾಜು ಸ್ಪರ್ಧಿಸಲಿಲ್ಲ. 1999ರಲ್ಲಿ ನಡೆದ 13ನೇ ಲೋಕಸಭಾ ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಜಿ.ಎಸ್. ಬಸವರಾಜು 318922 ಮತಗಳನ್ನು ಗಳಿಸುವ ಮೂಲಕ 63937 ಮತಗಳ ಅಂತರದಿಂದ ವಿಜಯ ಪತಾಕೆ ಹಾರಿಸಿ ಮೂರನೇ ಬಾರಿ ಸಂಸತ್ ಪ್ರವೇಶಿಸಿದರು. 2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಸವರಾಜು ಪರಾಭವಗೊಂಡರು.
2009 ರಲ್ಲಿ 15ನೇ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಬಸವರಾಜು ಆ ಪಕ್ಷದಿಂದ ಟಿಕೆಟ್ ಪಡೆದು ಕಣಕ್ಕಿಳಿದರು. ಬಿಜೆಪಿಯ ಜಿ.ಎಸ್ ಬಸವರಾಜು ಅವರು 331064 ಮತಗಳನ್ನು ಗಳಿಸುವ ಮೂಲಕ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಎಸ್.ಪಿ ಮುದ್ದಹನುಮೇಗೌಡ(309619) ಅವರನ್ನು 21445 ಮತಗಳ ಅಂತರದಿಂದ ಮಣಿಸಿ ನಾಲ್ಕನೇ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾದರು. 2014 ರಲ್ಲಿ ಪುನಃ ಬಿಜೆಪಿಯಿಂದ ಸ್ಪರ್ಧಿಸಿ ಬಸವರಾಜು ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮುದ್ದಹನುಮೇಗೌಡರಿಂದ ಸೋಲನ್ನು ಅನುಭವಿಸಿದರು.
2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ದೇವೇಗೌಡರನ್ನು ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜು ಸೋಲಿಸುವ ಮೂಲಕ ಐದನೇ ಬಾರಿಗೆ ಲೋಕಸಭೆ ಪ್ರವೇಶಿಸಿದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ: ಸಚಿವ ಕೆ.ಗೋಪಾಲಯ್ಯ
ಮುಖ್ಯಾಂಶಗಳು
1. ಅತಿ ಹೆಚ್ಚು ಬಾರಿ ಸಂಸತ್ ಸದಸ್ಯರಾಗಿದ್ದ ಹೆಗ್ಗಳಿಕೆ ಜಿ.ಎಸ್.ಬಸವರಾಜ್‌ಗೆ ಸಲ್ಲಿಕೆ
2. 1989ರಲ್ಲಿ ಇವರು 199138 ಮತಗಳ ಅಂತರದಲ್ಲಿ ಗೆದ್ದಿದ್ದು ದಾಖಲೆ
3. ಮೂರು ಬಾರಿ ಕಾಂಗ್ರೆಸ್‌ನಿಂದ, ಎರಡು ಬಾರಿ ಬಿಜೆಪಿಯಿಂದ ಆಯ್ಕೆ