ಪ್ರಧಾನಿ ನರೇಂದ್ರ ಮೋದಿ ಅಲೆ, ಹಿಂದುತ್ವ ಹಾಗೂ ರಾಷ್ಟ್ರೀಯವಾದ ಪ್ರಬಲವಾಗಿರುವ ಕ್ಷೇತ್ರ ಉತ್ತರ ಕನ್ನಡ. ಬಿಜೆಪಿಯಿಂದ ಅನಂತಕುಮಾರ್ ಹೆಗಡೆ ಅವರು ಇಲ್ಲಿಂದ ಪುನರಾಯ್ಕೆಯಾಗುತ್ತಲೇ ಇದ್ದಾರೆ. ಅವರನ್ನು ಮಣಿಸಲು ಕಾಂಗ್ರೆಸ್ ಶತಪ್ರಯತ್ನ ನಡೆಸುತ್ತಿದೆಯಾದರೂ ಯಶಸ್ಸು ಸಿಕ್ಕಿಲ್ಲ. ಈ ಬಾರಿಯಾದರೂ ಕಾಂಗ್ರೆಸ್ಸಿನ ಕನಸು ನನಸಾಗುವುದೇ ಕಾದುನೋಡಬೇಕು. ಕಳೆದ ಬಾರಿ ಅನಂತ್ ಸಂಸದರಾಗಷ್ಟೇ ಇದ್ದರು. ಈಗ ಅವರು ಕೇಂದ್ರ ಸಚಿವರು. ಅಲ್ಲದೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ ಹೇಳಿಕೆಗಳ ಮೂಲಕವೇ ಸುದ್ದಿಯಾಗಿದ್ದಾರೆ. ಸಚಿವರ ಕ್ಷೇತ್ರದಲ್ಲಿನ ರಾಜಕೀಯ ಚಿತ್ರಣ ಇಲ್ಲಿದೆ.
ಮಹಾಭಾರತ ಸಂಗ್ರಾಮ: ಉತ್ತರ ಕನ್ನಡ ಕ್ಷೇತ್ರ
ಕಾರವಾರ[ಜ.31]: ಐದು ಬಾರಿ ಗೆದ್ದಿರುವ ಹಾಲಿ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರನ್ನು ಆರನೇ ಬಾರಿಯಾದರೂ ಕಟ್ಟಿಹಾಕುವಂಥ ಸಮರ್ಥ ಅಭ್ಯರ್ಥಿ ಕಾಂಗ್ರೆಸ್ ಅಥವಾ ಜೆಡಿಎಸ್‌ನಿಂದ ಕಣಕ್ಕಿಳಿಯುತ್ತಾರಾ ಎಂಬುದೇ ಸಾಕಷ್ಟುಕುತೂಹಲವಾಗಿರುವ ಅಂಶ.
undefined
ನಾಲ್ಕು ಬಾರಿ ಸಂಸದರಾಗಿದ್ದಾಗಲೂ ಅನಂತಕುಮಾರ್ ಹೆಗಡೆ ಅವರು ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದರು. ಆದರೆ, ಐದನೇ ಬಾರಿ ಸಂಸದರಾದ ನಂತರ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಪಡೆದುಕೊಳ್ಳುವ ಮೂಲಕ ಖ್ಯಾತಿ ಗಳಿಸಿದರೆ, ಮತ್ತೊಂದೆಡೆ ಸಂವಿಧಾನ, ಮೀಸಲಾತಿ ಮತ್ತು ಜಾತಿ-ಧರ್ಮದ ಬಗ್ಗೆ ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕುಖ್ಯಾತಿಯನ್ನೂ ಗಳಿಸಿದ್ದಾರೆ. ಹೀಗಾಗಿ, ಸಹಜವಾಗಿಯೇ ಅವರ ಕ್ಷೇತ್ರ ಗಮನ ಸೆಳೆದಿದೆ.
ಟಿಕೆಟ್ ಫೈಟ್: ಬೆಳಗಾವಿಯಲ್ಲಿ ಅಂಗಡಿ ವರ್ಸಸ್ ವಿವೇಕರಾವ್?
ಹಿಂದುತ್ವ+ಮೋದಿ ಅಲೆ
ಉತ್ತರ ಕನ್ನಡದ ಆರು ಹಾಗೂ ಬೆಳಗಾವಿಯ ಎರಡು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಕನ್ನಡ ಲೋಕಸಭೆ ಕ್ಷೇತ್ರ ಅಚ್ಚರಿಯ ಫಲಿತಾಂಶವನ್ನೇ ನೀಡುತ್ತಾ ಬಂದಿದೆ. ಘಟಾನುಘಟಿಗಳು ಮುಗ್ಗರಿಸಿದ್ದಾರೆ. ಇಲ್ಲಿನ ಮತದಾರರು ಹಲವು ಬಾರಿ ಪಕ್ಷ ನೋಡಿ ಮತ ಹಾಕಿದ್ದಾರೆ. ಕೆಲವು ಬಾರಿ ವ್ಯಕ್ತಿಗೆ ಮಣೆ ಹಾಕಿದ್ದಾರೆ. ರಾಷ್ಟ್ರೀಯವಾದ, ಹಿಂದುತ್ವ, ಮೋದಿ ಅಲೆ ವಿಜೃಂಭಿಸಿದೆ.
ಆರಂಭದಲ್ಲಿ ಕೆನರಾ ಲೋಕಸಭೆ ಕ್ಷೇತ್ರ ಎಂದು ಗುರುತಿಸಲ್ಪಟ್ಟಈ ಕ್ಷೇತ್ರ ಪುನರ್ವಿಂಗಡಣೆ ತರುವಾಯ ಅಂದರೆ 2008ರಿಂದ ಉತ್ತರ ಕನ್ನಡ ಲೋಕಸಭೆ ಕ್ಷೇತ್ರವಾಯಿತು. ಈ ಕ್ಷೇತ್ರದಲ್ಲಿ ಹಿಂದೆ ಘಟಾನುಘಟಿಗಳು ಸೋಲನ್ನು ಅನುಭವಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ದಿನಕರ ದೇಸಾಯಿ, ಆರ್.ವಿ.ದೇಶಪಾಂಡೆ, ಶಿವರಾಮ ಕಾರಂತ, ಅನಂತನಾಗ್, ಮಾರ್ಗರೆಟ್ ಆಳ್ವ (ಒಮ್ಮೆ ಗೆದ್ದರೂ ಎರಡು ಸಲ ಸೋತಿದ್ದಾರೆ) ಇವರೆಲ್ಲ ಪರಾಭವಗೊಂಡ ಕಹಿನೆನಪು ಹೊಂದಿದ್ದಾರೆ. ಕಾಂಗ್ರೆಸ್‌ನ ಜೋಕಿಮ್ ಆಳ್ವ ಮೂರು ಬಾರಿ, ದೇವರಾಯ ನಾಯ್ಕ ನಾಲ್ಕು ಬಾರಿ, ಅನಂತಕುಮಾರ್ ಹೆಗಡೆ ಐದು ಬಾರಿ ಗೆದ್ದಿದ್ದಾರೆ.
ಹಾಲಿ ಬಿಜೆಪಿ ಸದಸ್ಯರಾಗಿರುವ ಅನಂತಕುಮಾರ್ ಹೆಗಡೆ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿಯೂ ಕಣಕ್ಕಿಳಿಯುವುದು ನಿಶ್ಚಿತವಾಗಿದೆ. ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯಲ್ಲಿ ಅನಂತಕುಮಾರ್ ಹೆಗಡೆಗೆ ಪರ್ಯಾಯ ಇಲ್ಲ ಎಂಬಂತಾಗಿದೆ.
ನಾಮಧಾರಿಗಳ ಬೆಂಬಲ ಯಾರಿಗೆ?
ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರು ಇರುವುದು, ಪ್ರಖರ ರಾಷ್ಟ್ರೀಯತೆವಾದದ ಜತೆಗೆ ಮೋದಿ ಅಲೆಯ ಮೇಲೆ ಹಾಲಿ ಸಂಸದ ಅನಂತಕುಮಾರ್ ಹೆಗಡೆ ತೇಲುತ್ತಿದ್ದಾರೆ. ಈ ಹಿಂದೆಲ್ಲ ಕ್ಷೇತ್ರಕ್ಕೆ ಅಪರೂಪವಾಗಿದ್ದ ಹೆಗಡೆ ಈ ಬಾರಿ ಮಾತ್ರ ಕ್ಷೇತ್ರದುದ್ದಕ್ಕೂ ಸಕ್ರಿಯವಾಗಿ ಸಂಚರಿಸುತ್ತಿದ್ದಾರೆ. ಅದೂ ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಮೇಲೆ ಇನ್ನಷ್ಟುಚುರುಕುಗೊಂಡಿದ್ದಾರೆ. ಇದರಿಂದ ಅನಂತಕುಮಾರ್ ಹೆಗಡೆ ಅವರನ್ನು ಎದುರಿಸುವುದು ಸುಲಭವಂತೂ ಅಲ್ಲ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಟಾದ ಸೂರಜ್ ನಾಯ್ಕ ಸೋನಿ ಅವರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅವರು ಬಂಡಾಯವಾಗಿ ಕಣಕ್ಕಿಳಿದಿದ್ದರು. ಜತೆಗೆ ಅನಂತಕುಮಾರ್ ಹೆಗಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಲೋಕಸಭೆ ಚುನಾವಣೆಯಲ್ಲಿ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದರು. ಹೀಗಾಗಿ ಕ್ಷೇತ್ರದ ಬಹುಸಂಖ್ಯಾತ ನಾಮಧಾರಿ ಸಮಾಜದ ಮತಗಳು ಕೆಲಮಟ್ಟಿಗೆ ಹೆಗಡೆ ಅವರಿಗೆ ಕೈಕೊಡುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ಕೆಲವರು ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ತಪ್ಪಿಸಲು ನಡೆಸಿದ ಯತ್ನ ಆರಂಭಿಕ ಹಂತದಲ್ಲೇ ವಿಫಲವಾಗಿದೆ. ಅಷ್ಟರಮಟ್ಟಿಗೆ ಹೆಗಡೆ ಪಕ್ಷದಲ್ಲಿ ಪ್ರಬಲವಾಗಿದ್ದಾರೆ.
ಟಿಕೆಟ್ ಫೈಟ್: ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ನಿಲ್ತಾರಾ? ನಿಖಿಲ್‌ಗೆ ಬಿಡ್ತಾರಾ?
ಆರ್ವಿ/ಮ್ಯಾಗಿ ಪುತ್ರನಿಗೆ ಟಿಕೆಟ್?
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆಗೆ ಭಾರಿ ಪೈಪೋಟಿಯೇನೂ ಕಾಣಿಸುತ್ತಿಲ್ಲ. ಪಕ್ಷದ ರಾಜ್ಯ ನಾಯಕರು ಅನಂತಕುಮಾರ್ ಹೆಗಡೆ ಅವರನ್ನು ಮಣಿಸಬೇಕಿದ್ದಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅವರೇ ಪ್ರಬಲ ಸ್ಪರ್ಧಿ ಎಂದು ಅಭಿಪ್ರಾಯಪಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ದೇಶಪಾಂಡೆ ಅವರನ್ನು ರಾಜ್ಯ ರಾಜಕೀಯದಿಂದ ದೂರ ಸರಿಸಲು ಪಕ್ಷದ ಒಂದು ವರ್ಗ ಅಡಿಪಾಯ ಹಾಕುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ದೇಶಪಾಂಡೆ ಗೆದ್ದರೆ ದೆಹಲಿ ರಾಜಕೀಯಕ್ಕೆ ಹೋಗುತ್ತಾರೆ. ಸೋತರೆ ಅವರ ಭವಿಷ್ಯವೇ ಮುಗಿಯಲಿದೆ ಎಂಬ ಚಿಂತನೆ ಕೆಲ ನಾಯಕರದ್ದಾಗಿದೆ. ಚಾಣಾಕ್ಷರಾಗಿರುವ ಆರ್.ವಿ.ದೇಶಪಾಂಡೆ ಸದ್ಯಕ್ಕಂತೂ ಸ್ಪರ್ಧಿಸಲು ಮನಸ್ಸು ಮಾಡುತ್ತಿಲ್ಲ.
ಪಕ್ಷದ ಕೆಲವರು ಬಹುಸಂಖ್ಯಾತರಾದ ನಾಮಧಾರಿ ಸಮಾಜದ ಅಭ್ಯರ್ಥಿಗೆ ಮಣೆ ಹಾಕುವ ಯೋಚನೆಯಲ್ಲಿದ್ದಾರೆ. ಆದರೆ ಸಮರ್ಥ ಅಭ್ಯರ್ಥಿ ಸಿಗುತ್ತಿಲ್ಲ. ಹಾಗಂತ ಬಿ.ಕೆ. ಹರಿಪ್ರಸಾದ್ ಸ್ಪರ್ಧಿಸಲು ಒಲವು ಹೊಂದಿದ್ದರೂ ಅದಕ್ಕೆ ದೇಶಪಾಂಡೆ ಅವರ ಬಳಗ ತಡೆಗೋಡೆಯಾಗುವ ಸಾಧ್ಯತೆ ಇದೆ. ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿರುವ ಪ್ರಶಾಂತ ದೇಶಪಾಂಡೆ ಈ ಬಾರಿ ಕಣಕ್ಕಿಳಿಯಲು ಅಂತಹ ಉತ್ಸುಕತೆಯನ್ನು ತೋರಿಸುತ್ತಿಲ್ಲ. ರಾಜಕೀಯದಿಂದ ಸ್ವಲ್ಪ ಮಟ್ಟಿಗೆ ಅಂತರವನ್ನು ಕಾದುಕೊಂಡಿದ್ದಾರೆ. ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಸಚಿವೆ, ರಾಜ್ಯಪಾಲೆ ಮಾರ್ಗರೆಟ್ ಪುತ್ರ ನಿವೇದಿತ್ ಆಳ್ವ ಸ್ಪರ್ಧೆಗಿಳಿಯುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ನಿವೇದಿತ್ ಕಣಕ್ಕಿಳಿದರೆ ಅನಂತಕುಮಾರ್ ಹಿಂದುತ್ವದ ಟ್ರಂಪ್ ಕಾರ್ಡ್ ಇನ್ನಷ್ಟುವಿಜೃಂಭಿಸುವ ಸಾಧ್ಯತೆ ಇದೆ ಎಂದು ಪಕ್ಷದ ಒಂದು ವಲಯದ ಅಭಿಪ್ರಾಯ. ಜತೆಗೆ ದೇಶಪಾಂಡೆ ಬಣ ಅಡ್ಡಗಾಲಾಗುವ ಸಾಧ್ಯತೆ ಇದೆ. ಕೆಲವರು ಸತೀಶ್ ಸೈಲ್ ಹೆಸರನ್ನೂ ತೇಲಿ ಬಿಟ್ಟಿದ್ದಾರೆ.
ಲೋಕಸಭೆ ಅಭ್ಯರ್ಥಿ ತಮ್ಮ ಬಣದವರೇ ಆಗಿರಬೇಕು ಎಂದು ಮಾರ್ಗರೆಟ್ ಹಾಗೂ ದೇಶಪಾಂಡೆ ಬಣಗಳ ನಡುವೆ ತಿಕ್ಕಾಟ ನಡೆಯುವುದು ಸಾಮಾನ್ಯ. ಈ ಬಣಗಳ ನಡುವೆ ಚುನಾವಣೆಯಲ್ಲೂ ಕಾಲೆಳೆತ ಮುಂದುವರಿದರೆ ಪಕ್ಷಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಬಿಜೆಪಿಯ ಅನಂತಕುಮಾರ್ ಹೆಗಡೆ ಭಾರಿ ಉತ್ಸಾಹದಲ್ಲಿದ್ದು, ಅವರನ್ನು ಕಟ್ಟಿಹಾಕುವ ಸಮರ್ಥ ಎದುರಾಳಿ ಯಾರಾಗಬಹುದು ಎಂಬ ಕುತೂಹಲ ಕ್ಷೇತ್ರಾದ್ಯಂತ ಉಂಟಾಗಿದೆ.
ಕಣಕ್ಕಿಳಿಯಲು ಅಸ್ನೋಟಿಕರ್ ರೆಡಿ
ಇತಿಹಾಸ ನೋಡಿದಾಗ ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಏರ್ಪಟ್ಟು ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಲ್ಲಿ ಸ್ಪರ್ಧೆಗಿಳಿಯಲು ಆನಂದ ಅಸ್ನೋಟಿಕರ್ ಉತ್ಸಾಹಿಯಾಗಿದ್ದಾರೆ. ಪಕ್ಷದ ಮುಖಂಡರ ಮೇಲೆ ಒತ್ತಡವನ್ನೂ ಹೇರುತ್ತಿದ್ದಾರೆ. ಆದರೆ ಕಾಂಗ್ರೆಸ್ ಈ ಕ್ಷೇತ್ರವನ್ನು ಸುಲಭವಾಗಿ ಬಿಟ್ಟುಕೊಡುವ ಸಾಧ್ಯತೆ ಇಲ್ಲ. ಜೆಡಿಎಸ್ ಕ್ಷೇತ್ರದಲ್ಲಿ ದುರ್ಬಲವಾಗಿದ್ದರೂ ಆನಂದ್ ಪಕ್ಷವನ್ನು ಸಂಘಟಿಸುವ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.
ಈಡಿಗ, ಮರಾಠ, ಬ್ರಾಹ್ಮಣ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗ ಯಾವುದೇ ಜಾತಿ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲ ಪಕ್ಷಗಳಿಗೂ ಎಲ್ಲ ಜಾತಿಯ ಮತದಾರರೂ ಇದ್ದಾರೆ. ಸ್ವಲ್ಪ ಹೆಚ್ಚು ಕಡಿಮೆ ಆಗಬಹುದಷ್ಟೆ. ಆದರೂ ಚುನಾವಣೆಯಲ್ಲಿ ಜಾತಿಯ ಲೆಕ್ಕಾಚಾರ ಹಾಕಲಾಗುತ್ತದೆ.
8ರಲ್ಲಿ 5 ಬಿಜೆಪಿ, 3 ಕಾಂಗ್ರೆಸ್ ಶಾಸಕರು
ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 5 ಬಿಜೆಪಿ (ಕಾರವಾರ, ಕುಮಟಾ, ಭಟ್ಕಳ, ಶಿರಸಿ ಹಾಗೂ ಕಿತ್ತೂರು) ಹಾಗೂ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ (ಹಳಿಯಾಳ, ಯಲ್ಲಾಪುರ ಹಾಗೂ ಖಾನಾಪುರ) ಶಾಸಕರಿದ್ದಾರೆ.
ರೇಸ್‌ನಲ್ಲಿ ಯಾರು?
ಬಿಜೆಪಿ- ಅನಂತಕುಮಾರ್ ಹೆಗಡೆ
ಕಾಂಗ್ರೆಸ್- ಆರ್.ವಿ.ದೇಶಪಾಂಡೆ, ನಿವೇದಿತ್ ಆಳ್ವ, ಬಿ.ಕೆ. ಹರಿಪ್ರಸಾದ್, ಸತೀಶ ಸೈಲ್, ಪ್ರಶಾಂತ ದೇಶಪಾಂಡೆ
ಜೆಡಿಎಸ್- ಆನಂದ ಅಸ್ನೋಟಿಕರ್
ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?
‘ಚುಟುಕು ಬ್ರಹ್ಮ’ ದಿನಕರ ದೇಸಾಯಿ ಗೆದ್ದಿದ್ದ ಕ್ಷೇತ್ರ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಅನಂತ ಕುಮಾರ್ ಹೆಗಡೆ ಐದು ಬಾರಿ ಜಯಶಾಲಿಯಾಗಿದ್ದಾರೆ. 1999ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮಾರ್ಗರೆಟ್ ಆಳ್ವ ಎದುರು ಅವರು ಒಮ್ಮೆ ಪರಾಜಿತರಾಗಿದ್ದರು. ಮಿಕ್ಕಂತೆ ಈ ಕ್ಷೇತ್ರವನ್ನು 1951, 1957, 1962ರಲ್ಲಿ ಜೋಕಿಮ್ ಆಳ್ವ ಪ್ರತಿನಿಧಿಸಿದ್ದರು. 1980, 1984, 1989 ಹಾಗೂ 1991ರಲ್ಲಿ ಕಾಂಗ್ರೆಸ್ಸಿನ ದೇವರಾಯ ನಾಯ್ಕ ಅವರು ಸತತವಾಗಿ ಗೆದ್ದಿದ್ದರು. 1967ರ ಲೋಕಸಭೆ ಚುನಾವಣೆಯಲ್ಲಿ ‘ಚುಟುಕು ಬ್ರಹ್ಮ’ ದಿನಕರ ದೇಸಾಯಿ ಅವರು ಈ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಸೋಲುಗಳನ್ನು ಕೂಡ ಕಂಡಿದ್ದರು. ಶಿವರಾಮ ಕಾರಂತ, ರಾಮಕೃಷ್ಣ ಹೆಗಡೆ, ಆರ್.ವಿ.ದೇಶಪಾಂಡೆ, ಅನಂತನಾಗ್ ಅವರು ಕೂಡ ಇಲ್ಲಿದ ಅದೃಷ್ಟಪರೀಕ್ಷೆಗೆ ಇಳಿದಿದ್ದರಾದರೂ ಗೆಲುವು ಮಾತ್ರ ಒಲಿಯಲಿಲ್ಲ.
-ವಸಂತಕುಮಾರ್ ಕತಗಾಲ