ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?

By Web Desk  |  First Published Feb 6, 2019, 4:01 PM IST

‘ಮಲೆನಾಡ ಹೆಬ್ಬಾಗಿಲು’ ಶಿವಮೊಗ್ಗ ಜಿಲ್ಲೆ ರಾಜ್ಯ ರಾಜಕಾರಣದಲ್ಲಿ ಮೊದಲಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. 3 ತಿಂಗಳ ಹಿಂದಷ್ಟೇ ಸಂಸದರನ್ನು ಆರಿಸಿದ್ದ ಇಲ್ಲಿನ ಮತದಾರರು ನೂತನ
ಸಂಸದನನ್ನು ಇನ್ನೆರಡು ತಿಂಗಳಲ್ಲಿ ಆಯ್ಕೆ ಮಾಡಬೇಕಾಗಿದೆ. ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಜೆಡಿಎಸ್- 
ಕಾಂಗ್ರೆಸ್ ಮೈತ್ರಿ ಏರ್ಪಟ್ಟರೆ ರಾಘವೇಂದ್ರ ವಿರುದ್ಧ ಉಪಚುನಾವಣೆಯಲ್ಲಿ ಪರಾಜಿತರಾಗಿದ್ದ ಮಧು ಬಂಗಾರಪ್ಪ ಹುರಿಯಾಳಾಗುತ್ತಾರೆ. ಈ ನಡುವೆ ಗೀತಾ ಶಿವರಾಜಕುಮಾರ್ ಹೆಸರೂ ಚಾಲ್ತಿಯಲ್ಲಿದೆ.


ಮಹಾಭಾರತ ಸಂಗ್ರಾಮ : ಶಿವಮೊಗ್ಗ ಕ್ಷೇತ್ರ

ಶಿವಮೊಗ್ಗ :  ಮೂರು ತಿಂಗಳ ಹಿಂದಷ್ಟೇ ಉಪಚುನಾವಣೆ ಎದುರಿಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಇದೀಗ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿದೆ. ಸಮಾಜವಾದಿಗಳ ನೆಲೆ, ಹೋರಾಟಗಳ ಬೀಡು, ವೈಚಾರಿಕ ಚಿಂತಕರ ನಾಡು ಎಂದೆಲ್ಲ ಹಣೆಪಟ್ಟಿ ಹಚ್ಚಿಕೊಂಡ ಈ ‘ಘಟ್ಟ ನಗರಿ’, ಸದ್ಯಕ್ಕಂತೂ ಬಿಜೆಪಿಯ ಭದ್ರಕೋಟೆ ಎನಿಸಿದೆ. ರಾಜ್ಯ ರಾಜಕಾರಣದಲ್ಲಿ ತನ್ನದೇ ಛಾಪು ಒತ್ತಿರುವ ಈ ಜಿಲ್ಲೆ ಅನೇಕ ಪ್ರಮುಖ ರಾಜಕಾರಣಿಗಳನ್ನು ನೀಡಿದೆ. 

Tap to resize

Latest Videos

ಟಿಕೆಟ್ ಫೈಟ್: ಬಿಜೆಪಿ ಭದ್ರಕೋಟೆ ಕಸಿಯಲು ಕಾಂಗ್ರೆಸ್‌ ಕಸರತ್ತು!

ತವರು ಜಿಲ್ಲೆ ಇದಾಗಿರುವ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಅವರಿಗೆ ಶಿವಮೊಗ್ಗ ಲೋಕ ಸಭಾ ಕ್ಷೇತ್ರ ಅತ್ಯಂ ತ ಮಹತ್ವದ್ದು. ಕ್ಷೇತ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯ ಭೇರಿ ಬಾರಿಸಿದ್ದು, ಅದೇ ಓಟವನ್ನು ಮುಂದುವರಿಸಿಕೊಂಡು ಹೋಗುವುದು ಆ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆ. ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟದಿಂದ ಮಧು ಬಂಗಾರಪ್ಪ ಸ್ಪರ್ಧಿಸಿ ಪರಾಭವಗೊಂಡಿದ್ದರು. 

ಟಿಕೆಟ್ ಫೈಟ್ : ಚಿಕ್ಕಬಳ್ಳಾಪುರದಲ್ಲಿ 2 ಬಾರಿ ಗೆದ್ದಿದ್ದರೂ ಮೊಯ್ಲಿಗೆ ಟಿಕೆಟ್ ಕಗ್ಗಂಟು!

ಈ ಬಾರಿ ಅವರನ್ನು ಗೆಲ್ಲಿಸಲೇಬೇಕು, ಯಡಿಯೂರಪ್ಪ ಅವರಿಗೆ ತವರು ಜಿಲ್ಲೆಯಲ್ಲೇ ಮುಖಭಂಗ ಉಂಟು ಮಾಡಬೇಕು ಎಂಬ ಹಟಕ್ಕೆ ಉಭಯ ಪಕ್ಷಗಳೂ ಬಿದ್ದಿವೆ. ಜೆಡಿಎಸ್- ಕಾಂಗ್ರೆಸ್ ನಡುವೆ ಹೊಂದಾಣಿಕೆ ಏರ್ಪಟ್ಟಲ್ಲಿ ಮತ್ತೆ ಮಧು ಬಂಗಾರಪ್ಪ ಅವರೇ ಅಭ್ಯರ್ಥಿಯಾಗಲಿದ್ದಾರೆ. ಬಿಜೆಪಿಯಿಂದ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಮತ್ತೊಮ್ಮೆ ಸ್ಪರ್ಧಿಯಾಗಲಿದ್ದಾರೆ. ಹೀಗಾಗಿ ಉಪಚುನಾವಣೆ ರೀತಿ ಸಾರ್ವತ್ರಿಕ ಕದನದಲ್ಲೂ ಈ ಇಬ್ಬರೂ ನಾಯಕರು ಮುಖಾಮುಖಿಯಾಗಲಿದ್ದು, ರೋಚಕ ಹೋರಾಟ ನಿರೀಕ್ಷಿಸಬಹುದಾಗಿದೆ. 

ಟಿಕೆಟ್ ಫೈಟ್ : ಹಾಸನದಲ್ಲಿ ಪ್ರಜ್ವಲ್‌ ಎದುರು ಬಿಜೆಪಿ ಸ್ಪರ್ಧಿ ಯಾರು..?

ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭೆ ಕ್ಷೇತ್ರವನ್ನೂ ಒಳಗೊಂಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳ ಪ್ರಾಬಲ್ಯವಿದೆ. ಆದರೆ ಸದ್ಯಕ್ಕೆ ಬಿಜೆಪಿ ಮೊದಲ ಸ್ಥಾನದಲ್ಲಿದೆ ಎಂದು ಅಂಕಿ- ಅಂಶ ಹೇಳುತ್ತಿವೆ. ಕ್ಷೇತ್ರ ವ್ಯಾಪ್ತಿಯ 8  ವಿಧಾನಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಆದರೆ ಹೆಚ್ಚು ವಿಧಾನಸಭಾ ಸದಸ್ಯರನ್ನು ಹೊಂದಿದ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೇಳಲು ಆಗುವುದಿಲ್ಲ. 2013 ರಲ್ಲಿ ಬಿಜೆಪಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೂ ಸ್ಥಾನ ಗೆದ್ದಿರಲಿಲ್ಲ. ಆದರೆ 2014 ರ ಲೋಕಸಭೆ ಚುನಾವಣೆ ಯಲ್ಲಿ ದಾಖಲೆ ಅಂತರದಿಂದ ಜಯ ಗಳಿಸಿತ್ತು. 1983  ಹಾಗೂ 1985 ರಲ್ಲಿ ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯಲ್ಲಿ ಜನತಾ ಪಕ್ಷ ಪ್ರಾಬಲ್ಯ ಹೊಂದಿತ್ತು. ಆದರೆ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಹೀಗಾಗಿ ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯಲ್ಲಿ ವಿಧಾನ ಸಭಾ ಚುನಾವಣಾ ಫಲಿತಾಂಶಕ್ಕೂ, ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ನೇರ ಸಂಬಂಧ ಇದೆ ಎನ್ನಲು ಸಾಧ್ಯವಿಲ್ಲ.

ಟಿಕೆಟ್ ಫೈಟ್: ಉತ್ತರ ಕನ್ನಡದಲ್ಲಿ ಹೆಗಡೆ ಓಟಕ್ಕೆ ದೇಶಪಾಂಡೆ ಹಾಕ್ತಾರಾ ತಡೆ?

2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಮತ್ತು ಜೆಡಿಎಸ್‌ನಿಂದ ಗೀತಾ ಶಿವರಾಜ್‌ಕುಮಾರ್ ಸ್ಪರ್ಧಿಸಿದ್ದರು. ಮೂರೂ ಪಕ್ಷಗಳು ಭಾರೀ ಹೋರಾಟ ನಡೆಸಿದ್ದವು. ಆದರೆ ಆಗ ಮೋದಿ ಮೇನಿಯಾ ನಿರೀಕ್ಷೆ ಮೀರಿ ಕೆಲಸ ಮಾಡಿ ಯಡಿಯೂರಪ್ಪ ಭಾರೀ ಅಂತರದ ಗೆಲುವು ಸಾಧಿಸಿದ್ದರು. 2018 ರ ಲೋಕಸಭಾ ಉಪ ಚುನಾವಣೆ ಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಒಂದಾಗಿ ಸ್ಪರ್ಧಿಸಿ ಬಿಜೆಪಿಯನ್ನು ಹಣಿಯಬೇಕೆಂಬ ಉಮೇದು ತೋರಿದ್ದವು. ಇದಕ್ಕಾಗಿ ಇಡೀ ಸರ್ಕಾರವೇ ಇಲ್ಲಿ ಬಂದು ಕುಳಿತಂತೆ ಭಾಸವಾಗುತ್ತಿತ್ತು. ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಈಡಿಗ ಸಮುದಾಯದ ಮಧು ಬಂಗಾರಪ್ಪ ಅವರಿಗೆ ಟಿಕೆಟ್ ನೀಡಲಾಗಿತ್ತು. ಜೊತೆಗೆ ಬಂಗಾರಪ್ಪ ವರ್ಚಸ್ಸು ಕೂಡ ಕೆಲಸ ಮಾಡಲಿದೆ ಎಂದು ಭಾವಿಸಲಾಗಿತ್ತು. ಯಡಿ ಯೂರಪ್ಪನ ವರಿಗೆ ಸೋಲುಣಿಸಿ ರಾಜ್ಯದಲ್ಲಿ ಅವರ ಪ್ರಾಬಲ್ಯ ಕಡಿಮೆ ಮಾಡಬೇಕೆಂಬ ದೂರಾಲೋಚನೆ ಮೈತ್ರಿ ಪಕ್ಷದಲ್ಲಿತ್ತು. ಆದರೆ ಇವರ ತಂತ್ರಕ್ಕೆ ಯಡಿಯೂರಪ್ಪ ಪ್ರತಿತಂತ್ರ ಹೂಡಿದರು. ಭಾರೀ ಅಂತರದ ಗೆಲುವು ಸಾಧ್ಯವಾಗದಿದ್ದರೂ ಮೈತ್ರಿಕೂಟದ ಎದುರು ನಿಚ್ಚಳ ಬಹುಮತ ಪಡೆದು ಜಿಲ್ಲೆಯಲ್ಲಿ ಸದ್ಯಕ್ಕೇನಿದ್ದರೂ ತಮ್ಮದೇ ಪ್ರಭಾವ ಎಂದು ನಿರೂಪಿಸಿದ್ದರು.

ಮೈತ್ರಿ ಏರ್ಪಡದಿದ್ದರೆ ಬಿಜೆಪಿಗೆ ಸಲೀಸು : ಈ ಬಾರಿ ಬಿಜೆಪಿ ಈಗಲೇ ತಂತ್ರಗಾರಿಕೆ ಶುರು ಮಾಡಿದೆ. ಜಾತಿ ಲೆಕ್ಕಾಚಾರ ಜೊತೆಗಿಟ್ಟುಕೊಂಡು ಎಲ್ಲ ಜಾತಿ ಜನಾಂಗದವರನ್ನೂ ವಿಶ್ವಾಸಕ್ಕೆ ಪಡೆಯಲು ಯತ್ನಿಸುತ್ತಿದೆ. ಲಿಂಗಾಯಿತರು, ಬ್ರಾಹ್ಮಣರ ಜೊತೆಗೆ ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದ ವರ್ಗಗಳ ಮತ ಒಗ್ಗೂಡಿಸುವ ಪ್ರಯತ್ನ ನಡೆಸಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಬಿಜೆಪಿಗೆ ಗೆಲುವಿನ ಹಾದಿ ಕಷ್ಟವೇ ಆಗದು. ಆದರೆ ಈಗಾಗಲೇ ಮೈತ್ರಿ ಘೋಷಣೆ ಮಾಡಿರುವುದರಿಂದ ಅದನ್ನು ಎದುರಿಟ್ಟುಕೊಂಡೇ ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ. ಪಕ್ಷದಲ್ಲಿ ಅಭ್ಯರ್ಥಿಯ ಕುರಿತು ಯಾವುದೇ ಗೊಂದಲವಿಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಬೇರೆ ಒಂದೆರಡು ಹೆಸರುಗಳು ಕೇಳಿ ಬಂದಿದ್ದವು. ಆದರೆ ಈಗಿನ ಸಂದರ್ಭದಲ್ಲಿ ರಾಘವೇಂದ್ರ ಹಾಲಿ ಸಂಸದರಾಗಿರುವುದರಿಂದ ಬೇರೆ ಹೆಸರಿನ ಪ್ರಶ್ನೆ ಉದ್ಭವಿಸುವುದೇ ಇಲ್ಲ. 

 ಮತ್ತೆ ಗೀತಾ ಶಿವರಾಜ್‌ಕುಮಾರ್ ಬರ್ತಾರ : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯನ್ನು ಇಳಿಸುವುದೇ ಆದಲ್ಲಿ ಈ ಕ್ಷೇತ್ರವನ್ನು ಜೆಡಿಎಸ್ ಪಡೆಯುವುದು ಕೂಡ ಬಹುತೇಕ ಖಚಿತ. ಇದಕ್ಕೆ ಕಾಂಗ್ರೆಸ್ ನಲ್ಲಿ ಭಾರೀ ವಿರೋಧವೇನೋ ಇದೆ. ಆದರೆ ಸ್ವತಃ ಕಾಗೋಡು ತಿಮ್ಮಪ್ಪನವರೇ ಇದಕ್ಕೆ ಒಪ್ಪಿಗೆ ನೀಡಿರುವುದರಿಂದ ಯಾರೂ ಎದುರಿಗೆ ಮಾತನಾಡುತ್ತಿಲ್ಲ. ಉಪ ಚುನಾವಣೆಯಲ್ಲಿ ಕೊನೆ ಗಳಿಗೆಯಲ್ಲಿ ಮಧು ಬಂಗಾರಪ್ಪ ಹೆಸರು ಅಂತಿಮಗೊಂಡಿತ್ತು. ಆದರೆ ಈ ಬಾರಿ ಮೊದಲೇ ಅಂತಿಮಗೊಳ್ಳಲಿದೆ. 

ಕಳೆದ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಹೆಚ್ಚು ಸಮಯ ಸಿಕ್ಕಿರಲಿಲ್ಲ. ಇರುವ ಸಮಯದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಒಂದಾಗಿಸಿ ಪ್ರಚಾರದ ಕಣಕ್ಕೆ ಕಳುಹಿಸುವಷ್ಟರಲ್ಲಿಯೇ ಚುನಾವಣೆ ಎದುರಾಗಿತ್ತು. ಜೊತೆಗೆ ಎರಡೂ ಪಕ್ಷಗಳ ನಡುವೆ ಸಮನ್ವಯತೆ ಸಾಧ್ಯವಾಗಲೇ ಇಲ್ಲ.  ಬಹುತೇಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮನಃಪೂರ್ವಕವಾಗಿ ಕೆಲಸ ಮಾಡಿದಂತೆ ಕಾಣಲಿಲ್ಲ. ಆದರೆ ಈಗಲೂ ಎರಡೂ ಪಕ್ಷಗಳಲ್ಲಿ ಚುನಾವಣೆಯ ಯಾವುದೇ ಸಿದ್ಧತೆ ಕಾಣಿಸುತ್ತಿಲ್ಲ. ಜೆಡಿಎಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಮಧು ಕೂಡ ಕ್ಷೇತ್ರದಲ್ಲಿ ಓಡಾಡಲು ಆರಂಭಿಸಿಲ್ಲ. ಕೊನೆ  ಗಳಿಗೆಯಲ್ಲಿ ಗೀತಾ ಶಿವರಾಜ್‌ಕುಮಾರ್ ಅಭ್ಯರ್ಥಿಯಾದರೂ ಆಶ್ಚರ್ಯವಿಲ್ಲ. ಒಂದು ವೇಳೆ ಹೊಂದಾಣಿಕೆಯಾಗದಿದ್ದರೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ.

ಜಿಲ್ಲೆಯಲ್ಲಿ ಜೆಡಿಎಸ್‌ಗಿಂತಲೂ ಸದ್ಯಕ್ಕೆ ಕಾಂಗ್ರೆಸ್ ಬಲಿಷ್ಠ ವಾಗಿದೆ. ಆದರೆ ಹೊಂದಾಣಿಕೆ ಕುರಿತು ಸ್ಪಷ್ಟ ಚಿತ್ರಣ ಮೊದಲೇ ಆಗದಿದ್ದರೆ ಪಕ್ಷದೊಳಗೆ ಸಿದ್ಧತೆ ಮಾಡಲು ಸಾಧ್ಯ ವಾಗುವುದಿಲ್ಲ ಎಂಬುದು ಆ ಪಕ್ಷದ ನಾಯಕರ ಮಾತು

ಒಟ್ಟು 8 ಅಸೆಂಬ್ಲಿ  ಕ್ಷೇತ್ರ: 7 ಬಿಜೆಪಿ ಶಾಸಕರು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಶಿವಮೊಗ್ಗ, ಶಿವಮೊಗ್ಗ ಗ್ರಾಮೀಣ, ಸಾಗರ, ಸೊರಬ, ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ ಹಾಗೂ ಉಡುಪಿ ಜಿಲ್ಲೆಯ ಬೈಂದೂರು ಬರುತ್ತವೆ. ಭದ್ರಾವತಿ ಹೊರತುಪಡಿಸಿ ಉಳಿದ ಕಡೆಯಲ್ಲಾ ಬಿಜೆಪಿ ಶಾಸಕರು ಇದ್ದಾರೆ. ಒಟ್ಟು 8 ಕ್ಷೇತ್ರಗಳಲ್ಲಿ 7 ರಲ್ಲಿ ಬಿಜೆಪಿ ಶಾಸಕರೇ ಇದ್ದಾರೆ.

ಪಟೇಲ್, ಬಂಗಾರಪ್ಪ ಪ್ರತಿನಿಧಿಸಿದ ಕ್ಷೇತ್ರ :  1951 ರಿಂದ 2018 ರ ವರೆಗೆ ಒಂದು ಉಪ ಚುನಾವಣೆ ಸೇರಿದಂತೆ ಒಟ್ಟು 18 ಲೋಕಸಭಾ  ಚುನಾವಣೆಯನ್ನು ಕಂಡಿದ್ದು, ಕಾಂಗ್ರೆಸ್ 11,  ಬಿಜೆಪಿ 5, ಎಸ್‌ಪಿ ಮತ್ತು ಸಂಯುಕ್ತ ಸೋಷಲಿಸ್ಟ್ ಪಕ್ಷ ತಲಾ ಒಂದು ಬಾರಿ ಗೆಲುವನ್ನು ಸಾಧಿಸಿದೆ.

1967ರಲ್ಲಿ ಜೆ. ಎಚ್. ಪಟೇಲ್ ಸಂಯುಕ್ತ ಸೋಷಲಿಸ್ಟ್ ಪಾರ್ಟಿಯಿಂದ ಗೆಲುವು ಸಾಧಿಸಿ, ಮೊದಲ ಬಾರಿಗೆ ಲೋಕಸಭೆಯಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದರು. ಎಸ್. ಬಂಗಾರಪ್ಪ ಸಮಾಜವಾದಿ, ಬಿಜೆಪಿ ಮತ್ತು ಕಾಂಗ್ರೆಸ್ ಸೇರಿ ಮೂರೂ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಬಂಗಾರಪ್ಪ ಒಟ್ಟು 4 , ಟಿ. ವಿ. ಚಂದ್ರ ಶೇಖರಪ್ಪ 3, ಬಿ. ವೈ. ರಾಘವೇಂದ್ರ ಮತ್ತು ಒಡೆಯರ್ ಎರಡು ಬಾರಿ ಆಯ್ಕೆಯಾಗಿದ್ದಾರೆ.


ಯಾರ್ಯಾರು ಪೈಪೋಟಿ?
ಬಿಜೆಪಿ
ಹಾಲಿ ಸಂಸದ
ಬಿ.ವೈ. ರಾಘವೇಂದ್ರ

ಜೆಡಿಎಸ್
ಮಾಜಿ ಶಾಸಕ ಮಧು ಬಂಗಾರಪ್ಪ,
ಶಿವರಾಜ್ ಕುಮಾರ್ ಪತ್ನಿ ಗೀತಾ

ಕಾಂಗ್ರೆಸ್
ಕಲಗೋಡು ರತ್ನಾಕರ್, ಎಚ್. ಎಸ್.
ಸುಂದರೇಶ್, ಎಚ್. ಸಿ. ಯೋಗೀಶ್

 ವರದಿ :  ಗೋಪಾಲ್ ಯಡಗೆರೆ 

click me!