ಸವದಿ, ಶಂಕರ್‌ಗೆ ಎಂಎಲ್‌ಸಿ ಆತಂಕ! ಒಂದೇ ಸ್ಥಾನಕ್ಕೆ ಇಬ್ಬರ ಕಣ್ಣು

Published : Jan 13, 2020, 07:17 AM ISTUpdated : Jan 13, 2020, 11:45 AM IST
ಸವದಿ, ಶಂಕರ್‌ಗೆ ಎಂಎಲ್‌ಸಿ ಆತಂಕ! ಒಂದೇ ಸ್ಥಾನಕ್ಕೆ ಇಬ್ಬರ ಕಣ್ಣು

ಸಾರಾಂಶ

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್‌. ಶಂಕರ್‌ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಸಚಿವ ಸ್ಥಾನ ಕೊಡಬೇಕೇ ಅಥವಾ ಯಾವುದೇ ಸದನದ ಸದಸ್ಯರಾಗದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಆಯ್ಕೆ ಮಾಡಬೇಕೇ ಎಂಬ ಇಕ್ಕಟ್ಟಿನ ಪರಿಸ್ಥಿತಿಯನ್ನು BJP  ಎದುರಿಸುತ್ತಿದೆ. 

ಬೆಂಗಳೂರು [ಜ.13]:  ವಿಧಾನ ಪರಿಷತ್‌ ಸದಸ್ಯರಾಗಿದ್ದ ಕಾಂಗ್ರೆಸ್‌ ಪಕ್ಷದ ರಿಜ್ವಾನ್‌ ಅರ್ಷದ್‌ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಂತೆ ತೆರವಾಗಿರುವ ಮೇಲ್ಮನೆಯ ಒಂದು ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬುದು ಆಡಳಿತಾರೂಢ ಬಿಜೆಪಿಗೆ ಕಗ್ಗಂಟಾಗುತ್ತಿದೆ.

"

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್‌. ಶಂಕರ್‌ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಸಚಿವ ಸ್ಥಾನ ಕೊಡಬೇಕೇ ಅಥವಾ ಯಾವುದೇ ಸದನದ ಸದಸ್ಯರಾಗದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಆಯ್ಕೆ ಮಾಡಬೇಕೇ ಎಂಬ ಇಕ್ಕಟ್ಟಿನ ಪರಿಸ್ಥಿತಿಯನ್ನು ಪಕ್ಷ ಎದುರಿಸುತ್ತಿದೆ. ಒಟ್ಟಿನಲ್ಲಿ ಹೈಕಮಾಂಡ್‌ ದಾರಿ ತೋರದಿದ್ದರೆ ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಒಂದು ಕಡೆ ಕೊಟ್ಟಮಾತಿನಂತೆ ತಮ್ಮನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಸಚಿವರನ್ನಾಗಿ ಮಾಡಬೇಕು ಎಂದು ಶಂಕರ್‌ ಅವರು ಪಟ್ಟು ಹಿಡಿದು ಕುಳಿತಿದ್ದಾರೆ. ಮತ್ತೊಂದೆಡೆ ಹೈಕಮಾಂಡ್‌ ಮೂಲಕ ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ ಅವರು ಆರು ತಿಂಗಳೊಳಗೆ ಅಂದರೆ ಫೆ.19ರೊಳಗೆ ಉಭಯ ಸದನಗಳ ಪೈಕಿ ಒಂದು ಸದನದ ಸದಸ್ಯತ್ವ ಹೊಂದದೇ ಇದ್ದಲ್ಲಿ ಸಚಿವ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇಂತಹ ಇಕ್ಕಟ್ಟಿನಿಂದ ಪಾರಾಗಲು ಬಿಜೆಪಿ ನಾಯಕರು ಪರ್ಯಾಯ ಮಾರ್ಗೋಪಾಯಗಳನ್ನು ಹುಡುಕಲು ಆರಂಭಿಸಿದ್ದಾರೆ.

ಆಯೋಗಕ್ಕೆ ಪತ್ರ

ರಿಜ್ವಾನ್‌ ಅರ್ಷದ್‌ ಅವರು ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾಗಿದ್ದರು. ಉಪಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾಗುತ್ತಿದ್ದಂತೆ ಕಾನೂನು ಪ್ರಕಾರವಾಗಿ ವಿಧಾನ ಪರಿಷತ್‌ನಲ್ಲಿ ಅವರ ಸದಸ್ಯತ್ವ ಖಾಲಿಯಾಗುತ್ತದೆ. ಆದರೆ ಅರ್ಷದ್‌ ಅವರು ರಾಜೀನಾಮೆ ಪತ್ರವನ್ನು ಸಹ ಸಲ್ಲಿಸಿದ್ದಾರೆ. ರಿಜ್ವಾನ್‌ ರಾಜೀನಾಮೆಯ ನಂತರ ವಿಧಾನ ಪರಿಷತ್‌ ಕಾರ್ಯದರ್ಶಿ ಅವರು ಸಂಪ್ರದಾಯದಂತೆ ಖಾಲಿ ಇರುವ ಸ್ಥಾನದ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಈಗಾಗಲೇ ಮಾಹಿತಿಯನ್ನು ಸಲ್ಲಿಸಿದ್ದಾರೆ.

ಬಿಗ್ ಶಾಕ್ ಕೊಟ್ಟ ಹೈಕಮಾಂಡ್: ಸಚಿವರಾಗ್ಬೇಕೆಂದು ಬಿಜೆಪಿಗೆ ಹೋದವರಿಗೆಲ್ಲ ಇಲ್ಲ ಮಂತ್ರಿಗಿರಿ?...

ಖಾಲಿ ಇರುವ ಪರಿಷತ್‌ ಒಂದು ಸ್ಥಾನಕ್ಕೆ ಗರಿಷ್ಠ ಆರು ತಿಂಗಳೊಳಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ನಡೆಸಬೇಕಾಗುತ್ತದೆ. ಆಯೋಗ ಬರುವ ಫೆ.19ರೊಳಗೆ ಖಾಲಿ ಇರುವ ಪರಿಷತ್‌ ಸ್ಥಾನಕ್ಕೆ ಚುನಾವಣೆ ನಡೆಸಿದರೆ ಶಂಕರ್‌ ಅಥವಾ ಲಕ್ಷ್ಮಣ ಸವದಿ ಆಯ್ಕೆ ಹಾದಿ ಸುಗಮವಾಗಲಿದೆ.

ನಾಮಕರಣ ಸದಸ್ಯರ ರಾಜೀನಾಮೆ ಪಡೆವರೇ?

ಪ್ರಸ್ತುತ ಎದುರಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಇರುವ ಏಕೈಕ ಮಾರ್ಗವೆಂದರೆ ಬಿಜೆಪಿಯಿಂದ ನಾಮಕರಣಗೊಂಡಿರುವ ಸದಸ್ಯರ ರಾಜೀನಾಮೆ ಪಡೆದು ಒಬ್ಬರನ್ನು ನಾಮಕರಣ ಮಾಡಬೇಕು. ಆದರೆ ನಾಮಕರಣಗೊಂಡ ಸದಸ್ಯರ ರಾಜೀನಾಮೆ ಪಡೆದರೆ ಮತ್ತೊಂದು ರೀತಿಯ ಅಸಮಾಧಾನ ಕಾಣಿಸಿಕೊಳ್ಳಬಹುದು, ಟೀಕೆ-ಟಿಪ್ಪಣಿ ಎದುರಿಸಬೇಕಾಗಬಹುದು ಎಂಬ ಅಳುಕು ಮುಖಂಡರಲ್ಲಿ ಇದೆ. ಬಹುಶಃ ಪಕ್ಷದ ಹೈಕಮಾಂಡ್‌ ಜತೆ ಚರ್ಚಿಸಿದ ನಂತರವೇ ಇದಕ್ಕೊಂದು ಸ್ಪಷ್ಟಪರಿಹಾರ ಸಿಗಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ