SC, ST ಮೀಸಲಾತಿ ಹೆಚ್ಚಳ ಅಸ್ತ್ರ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಇದುವೇ ಶಸ್ತ್ರ.?!

Published : Oct 12, 2022, 05:19 PM ISTUpdated : Oct 20, 2022, 04:44 PM IST
SC, ST ಮೀಸಲಾತಿ ಹೆಚ್ಚಳ ಅಸ್ತ್ರ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಇದುವೇ ಶಸ್ತ್ರ.?!

ಸಾರಾಂಶ

 ಪರಿಶಿಷ್ಟ ಜಾತಿ ಪಂಗಡಗಳ ಮೀಸಲಾತಿಯನ್ನು ಸಿಎಂ ಬೊಮ್ಮಾಯಿ ಸಾಹೇಬರು  ಹೆಚ್ಚಿಸಲು ನಿರ್ಧರಿಸಿದರು ಸರಿ. ಆದರೆ ಈಗಾಗಲೇ ಹೋರಾಟ ಆರಂಭಿಸಿರುವ ಪಂಚಮಸಾಲಿ ಸಮುದಾಯ, ಕರುಬ ಸಮುದಾಯ, ಒಕ್ಕಲಿಗ ಸಮುದಾಯ ಮೀಸಲಾತಿಗಾಗಿ ದನಿ ಏರಿಸತೊಡಗಿದ್ದಾರೆ.   

- ರವಿ ಶಿವರಾಮ್, ರಾಜಕೀಯ ವರದಿಗಾರರು, ಏಷ್ಯಾನೆಟ್ ಸುವರ್ಣನ್ಯೂಸ್

ಸಾಮಾಜಿಕ ನ್ಯಾಯದಡಿ ಮೀಸಲಾತಿ ಅಗತ್ಯ ಎನ್ನುವ ವಾದ ಒಂದು ಕಡೆಯಾದರೆ, ಅರ್ಹತೆ, ಸಾಮರ್ಥ್ಯವನ್ನು ಜಾತಿ ಸಮುದಾಯದಡಿ ಅಳೆಯುತ್ತಾ ಸಾಗಿದರೆ, ಶಿಕ್ಷಣದ ಗುಣಮಟ್ಟ ಕಡಿಮೆ ಆಗುತ್ತದೆ ಎನ್ನುವ ಮಾತುಗಳನ್ನು ಮುಂದಿಡುವ ವರ್ಗವೂ ಇದೆ. ಈ ಎಲ್ಲ ವಾದಗಳ ಮಧ್ಯೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಸ್‌ಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವ ನಿರ್ಧಾರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಯಾವುದೇ ರಾಜಕೀಯ ಪಕ್ಷ  ತೆಗೆದುಕೊಳ್ಳುವ, ಯಾವುದೇ ತೀರ್ಮಾನದ ಹಿಂದೆ ರಾಜಕೀಯ ಲೆಕ್ಕಾಚಾರಗಳು ನಿಶ್ಚಿತವಾಗಿ ಇದ್ದೆ ಇರುತ್ತದೆ. ಯಾವ ಸಮಯದಲ್ಲಿ ಯಾವ ಅಸ್ತ್ರ ಪ್ರಯೋಗಿಸಿದರೆ, ವೋಟ್ ಕೇಳಬಹುದು ಅಥವಾ ಕೀಳಬಹುದು ಎನ್ನುವ ಪಕ್ಕಾ ಲೆಕ್ಕಾಚಾರ ಗೊತ್ತಿರೋದು  ರಾಜಕೀಯ ನಾಯಕರಿಗೆ ಮಾತ್ರ. ಸಿಎಂ ಬೊಮ್ಮಾಯಿ ನೋಡೊಕೆ ಗಡಸಲ್ಲ, ಮಾತಿನಲ್ಲಿ ಕಿಕ್ ಇಲ್ಲ, ನಡೆಯಲ್ಲಿ ದಾಡಸಿತನ ಕಾಣೋದಿಲ್ಲ ಎನ್ನುವ ಆರೋಪಗಳ ಮಧ್ಯೆಯೆ, ಎಸ್ ಸಿ, ಎಸ್ ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಮಹತ್ವದ ನಿರ್ಣಯ ಕೈಗೊಂಡು, ತನ್ನ ರಾಜಕೀಯ ವಿರೋಧಿಗಳು, ಹಿತಶತ್ರುಗಳು ಸೇರಿದಂತೆ ಎಲ್ಲರು ಒಮ್ಮೆ ತನ್ನತ್ತ ನೋಡವಂತ ತೀರ್ಮಾನ ಪ್ರಕಟಸಿ ಜೂನಿಯರ್ ಬೊಮ್ಮಾಯಿ‌ ಚಾಣಾಕ್ಷ ರಾಜಕೀಯ ನಡೆ ಪ್ರದರ್ಶನ ಮಾಡಿದ್ದಾರೆ. ಬೊಮ್ಮಾಯಿ ತೀರ್ಮಾನದ ಹಿಂದೆ ಕೇಂದ್ರ ಬಿಜೆಪಿ ನಾಯಕರ ನೆರಳು ಇದ್ದೆ ಇದೆ ಎನ್ನೋದು ಬಹುತೇಕರಿಗೆ ಗೊತ್ತಿಲ್ಲದ ವಿಚಾರವೇನು ಅಲ್ಲ ಬಿಡಿ. ಅದು ಬೇರೆ ಮಾತು. ಆದರೆ ರಾಜ್ಯದ ಮುಖ್ಯಮಂತ್ರಿ ಆಗಿ ಬೊಮ್ಮಾಯಿ ಕೈಗೊಂಡ ಈ ನಿರ್ಣಯ, ರಾಜಕೀಯವಾಗಿ ರಾಜ್ಯ ಬಿಜೆಪಿ ಸರ್ಕಾರದ ಇಮ್ಯುನಿಟಿ ಹೆಚ್ಚಿಸಬಲ್ಲ ಬೂಸ್ಟರ್ ಡೋಸ್ ಕೂಡ ಹೌದು. 

ರಾಜ್ಯದಲ್ಲಿ ಎಸ್ ಸಿ ಎಸ್ ಟಿ ಸಮುದಾಯ ಎಷ್ಟಿದೆ?: ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು ಎನ್ನುವ ಕಾರಣಕ್ಕೆ ಮೀಸಲಾತಿ ಪ್ರಮಾಣವನ್ನು ರಾಜ್ಯ ಸರ್ಕಾರ ಹಚ್ಚಿಸಿದೆ. 2011ರ ಗಣತಿ ಪ್ರಕಾರ 40 ಲಕ್ಷ ಇದ್ದ ಪರಿಶಿಷ್ಟ ಜಾತಿ, ಪಂಗಡಗಳ ಜನಸಂಖ್ಯೆ ಬಳಿಕ ತಳವಾರ ಇನ್ನು ಕೆಲ ಸಣ್ಣ ಸಣ್ಣ ಜಾತಿಗಳನ್ನು ಎಸ್ ಸಿ ಎಸ್ ಟಿ ಗೆ ಸೇರಿಸಿದ ಮೇಲೆ ಸದ್ಯ ರಾಜ್ಯದಲ್ಲಿ ಸುಮಾರು 50 ಲಕ್ಷ ಜನಸಂಖ್ಯೆ ತಲುಪಿದೆ ಎನ್ನುವ ಮಾಹಿತಿ ಇದೆ. 

ಎಷ್ಟು ವಿಧಾನಸಭೆ ಕ್ಷೇತ್ರದಲ್ಲಿ ಎಸ್ ಸಿ ಎಸ್ ಟಿ ಸಮುದಾಯ ಪ್ರಭಲವಾಗಿದೆ?: ಚಾಮರಾಜನಗರ,ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ, ಮೈಸೂರು, ರಾಯಚೂರು, ದಾವಣಗೆರೆ, ಕೊಪ್ಪಳ, ಬಾಗಲಕೋಟೆ, ಶಿವಮೊಗ್ಗ, ಬೆಳಗಾವಿ,ಹಾವೇರಿ, ಬೀದರ್ ಹೀಗೆ ಸುಮಾರು ಹತ್ತು ಜಿಲ್ಲೆಗಳಲ್ಲಿ ಈ ಸಮುದಾಯ ಹೇರಳವಾಗಿದೆ. ಜನಸಂಖ್ಯಾವಾರು ಪ್ರಾಭಲ್ಯವನ್ನು ಹೊಂದಿರುವ ಎಸ್ ಸಿ ಎಸ್ ಟಿ ಸಮುದಾಯ ರಾಜಕೀಯವಾಗಿ ವಿಧಾನಸಭಾ ಕ್ಷೇತ್ರವ್ಯಾಪಿ ಲೆಕ್ಕಹಾಕಿದರೆ 50 ಸಾವಿರ ವೋಟರ್ಸ್ ಇರುವ  ಸುಮಾರು 25 ಕ್ಷೇತ್ರಗಳನ್ನು ಹೊಂದಿದೆ. 40ರಿಂದ ಮೂವತ್ತು ಸಾವಿರ ಮತದಾದರರು ಇರುವ ಕ್ಷೇತ್ರ ಸುಮಾರು 40. 15 ಸಾವಿರ ಇರುವ ಕ್ಷೇತ್ರ 25, 10ಸಾವಿರ ವೋಟರ್ಸ್ ಇರುವ ಕ್ಷೇತ್ರ 20 ಒಟ್ಟು ರಾಜ್ಯದಲ್ಲಿ ಸಮಾರು 119 ಕ್ಷೇತ್ರಗಳಲ್ಲಿ ಎಸ್ ಸಿ ಎಸ್ ಟಿ ಮತದಾರರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಹೀಗಾಗಿ ಯಾವ ರಾಜಕೀಯ ಪಕ್ಷಗಳು ಕೂಡ ಈ ಸಮುದಾಯ ಹೋರಾಟವನ್ನು ಹತ್ತಿಕ್ಕುವ ಅಥವಾ ಕಡೆಗಣಿಸುವ ಮಟ್ಟಕ್ಕೆ ಹುಂಬುತನ ಪ್ರದರ್ಶನ ಮಾಡೋದಿಲ್ಲ. ಈಗ ಅದೇ ಜಾಣ್ಮೆಯ ನಡೆಯನ್ನು ಸ್ವತಃ ಬೊಮ್ಮಾಯಿ ಇಟ್ಟಿದ್ದಾರೆ.

ಸಿಎಂಗೆ ರಾಜುಗೌಡ ಮೇಲೆ ಫಿಟ್ಟಿಂಗ್ ಇಟ್ಟಿದ್ದರಂತೆ ಹಿರಿಯ ಸಚಿವರೊಬ್ಬರು?!: ಆರಂಭದಲ್ಲಿ ವಾಲ್ಮೀಕಿ ಸಮುದಾಯ ಶ್ರೀಗಳಾದ ಪ್ರಸನ್ನಾನಂದರು ಮೀಸಲಾತಿ ಹೆಚ್ಚಿಸಲು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟಕ್ಕೆ ಕುಳಿತಾಗ ಇದನ್ನು ಸರ್ಕಾರ ಅಷ್ಟೇನು ಸೀರಿಯಸ್ ಆಗಿ ತೆಗೆದುಕೊಂಡಂತೆ ಕಂಡಿರಲಿಲ್ಲ. ಸ್ವಾಮೀಜಿಗಳು ಹೋರಾಡುತ್ತಿದ್ದ ಫ್ರೀಡಂ ಪಾರ್ಕಿಗೆ ಸಿಎಂ ಬೊಮ್ಮಾಯಿಯವರು ಒಮ್ಮೆ ಭೇಟಿ ನೀಡಿ, ವಾಪಸ್ ಹೋಗುವ ವೇಳೆ ವಾಲ್ಮೀಕಿ ಸ್ವಾಮೀಜಿಗಳ ಜೊತೆ ಮಾತನ್ನಾಡಿ ಬಂದಿದ್ದು ಬಿಟ್ಟರೆ, ಬೇರೆನೂ ಆಗಿರಲಿಲ್ಲ. ಅದೂ ಅಲ್ಲದೇ ಪ್ರಸನ್ನಾನಂದ ಶ್ರೀಗಳನ್ನು ಬಿಜೆಪಿ ಶಾಸಕ ರಾಜುಗೌಡ ನಾಯಕ್ ಒತ್ತಾಯಿಸಿ ಪ್ರತಿಭಟನೆ ಮಾಡಿಸುತ್ತಿದ್ದಾರೆ ಎಂದು ಹಿರಿಯ ಸಚಿವರೊಬ್ಬರು ಮುಖ್ಯಮಂತ್ರಿ ಬೊಮ್ಮಾಯಿಗೆ ಕಂಪ್ಲೆಂಟ್ ನೀಡಿದ್ದರಂತೆ. ಆಗ ಇದೇ ಕಾರಣಕ್ಕೆ ಬೊಮ್ಮಾಯಿ ಸಾಹೇಬರೂ ರಾಜುಗೌಡರ ಮೇಲೆ ಒಮ್ಮೆ ಸಿಟ್ಟಾಗಿದ್ದರು ಎನ್ನುವ ಮಾಹಿತಿ  ಈಗೀಗ ಹೊರ ಬೀಳುತ್ತಿದೆ. ಆದರೆ ಯಾವಾಗ ಸ್ವಾಮೀಮಿಜಿಗಳು ಹೋರಾಟ ಬಿಡದೇ, ಮುಂದುವರಿಸಿದರೋ, ಸಮುದಾಯದ ಶಾಸಕರು, ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕೋಕೆ ಶುರು ಮಾಡಿದ್ರು. ಮೀಸಲಾತಿ ನೀಡಿಲ್ಲ ಅಂದ್ರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದಿದ್ದ ರಾಮಲು, ಯಡಿಯೂರಪ್ಪ ಬಳಿ ಬೈಯಿಸಿಕೊಂಡಿದ್ದು ಕೂಡ ಆಗಿತ್ತು. ನೀ ನೀಡುವ ಹೇಳಿಕೆ ಪಕ್ಷದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ನಿನಗೆ ಗೊತ್ತಾ ಎಂದು ಯಡಿಯೂರಪ್ಪ ತೀರಾ ಇತ್ತೀಚೆಗೊಂದು ಬಿಜೆಪಿ ಆಂತರಿಕ ಸಭೆಯಲ್ಲಿ ಗದರಿದ್ರಂತೆ.  ಪ್ರತಿಪಕ್ಷ ಕಾಂಗ್ರೆಸ್ ನಾಯಕರೂ ನಾಗಮೋಹನ್ ದಾಸ್ ವರದಿ ಜಾರಿಗೆ ಒತ್ತಡ ಹಾಕಿ ಚುನಾವಣೆ ಸಮಯದಲ್ಲಿ ಒಂದಿಷ್ಟು ರಾಜಕೀಯ ಮೈಲೇಜ್ ಪಡೆಯಲು ಮುಂದಾಗುತ್ತಿರುವ ವಿಷಯ ರಾಜ್ಯ ಸರ್ಕಾರದ ಗಮನಕ್ಕೆ ಬಂದಿತ್ತು. 

ಕಾಂಗ್ರೆಸ್ ಕೈ ತಪ್ಪಿದ ರಾಜಕೀಯ ಲಾಭ: ಯಾವಾಗ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸುರ್ಜೆವಾಲಾ ಶ್ರೀರಂಗಪಟ್ಟಣದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಮುಗಿಸುವ ಒಳಗೆ ಸಿದ್ದರಾಮಯ್ಯ ಕೈಗೆ ಡಿಕೆ ಶಿವಕುಮಾರ್ ಒಂದು ಚೀಟಿ ಕೈಗಟ್ಟಿದ್ದರು. ಚೀಟಿ ನೋಡಿದ ಸಿದ್ದರಾಮಯ್ಯ ಒಂದು ಕ್ಷಣ ಶಾಕ್ ಆಗಿದ್ರು. ಹೋ.. ನಾಳೆ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರಂತೆ, ನಮ್ಮ ಒತ್ತಾಯಕ್ಕೆ ಕರೆದಿದ್ದು ಎಂದು ಸಿದ್ದರಾಮಯ್ಯ ಅದೇ ಪತ್ರಿಕಾಗೋಷ್ಠಿಯಲ್ಲೇ  ಕ್ರೆಡಿಟ್ ವಾರ್ ಪಡೆದುಕೊಳ್ಳಲು ಯತ್ನಿಸಿದರು. ಸಹಜ, ರಾಜಕೀಯ ಪಕ್ಷವಾಗಿ ಸಿಗಬಹುದಾದ ಚಿಕ್ಕ ಚಿಕ್ಕ ಲಾಭವೇ ಚುನಾವಣೆಗೆ ಮತವಾಗಿ ಪರಿಗಣನೆ ಆಗುತ್ತದೆ. ಅಂತಹುದರಲ್ಲಿ ಮೀಸಲಾತಿಯಂಥ ಬಹು ಚರ್ಚಿತ ಮತ್ತು ರಾಜಕೀಯ ಪಕ್ಷಗಳಿಗೆ ಆಕರ್ಷಿತ ವಿಷಯ ಕೈ ತಪ್ಪಿದಾಗ ನಿರಾಸೆಯಾಗದೆಯೇ ಇರುತ್ತದೆಯೇ? ರಾಜ್ಯ ಸರ್ಕಾರದ ಮೇಲೆ ದಿನ ಒಂದೊಂದು ವಿಚಾರ ಇಟ್ಟು ವ್ಯೂಹ ರಚಿಸುತ್ತಾ ಹೋರಾಟ ಮಾಡುತ್ತಿರುವ ಕಾಂಗ್ರೆಸ್‌ಗೆ ಮೀಸಲಾತಿ ಒಂದು ಹಾಟ್ ಟಾಪಿಕ್ ಆಗಿತ್ತು. ಹಾಗೆ ಬಹುದೊಡ್ಡ ರಾಜಕೀಯ ಅಸ್ತ್ರನೀ  ಆಗಿತ್ತು. ಆದರೆ ಕಾಂಗ್ರೆಸ್ ಅಸ್ತ್ರ ಪ್ರಯೋಗಿಸಿ ಎದುರಾಳಿಯ ಮೇಲೆ ದಾಳಿ ಮಾಡಬಹುದು ಎನ್ನುವ ಸಣ್ಣ ಸುಳಿವು ಸಿಕ್ಕ ಕೂಡಲೇ ಕೇಂದ್ರ ಬಿಜೆಪಿ ನಾಯಕರು ಮತ್ತು ರಾಜ್ಯ ನಾಯಕರು ದೃಢ ನಿರ್ಧಾರ ಕೈಗೊಂಡು ಮೀಸಲಾತಿ ಹೆಚ್ಚಳ ತೀರ್ಮಾನ ಮಾಡಿಯೆ ಬಿಟ್ಟರು. ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಸಮುದಾಯದ ಭಾವನಾತ್ಮಕ ಗಳಿಗೆಗೆ ಕಾರಣಿಕರ್ತರಾದ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಇದು ರಾಜಕೀಯವಾಗಿ ನಿಶ್ಚಿತವಾಗಿಯೂ ಬೂಸ್ಟರ್ ಡೋಸ್. ನಿರ್ಧಾರ ಪ್ರಕಟವಾದ ಮರು ಕ್ಷಣವೇ ಬಿಜೆಪಿ ಶಾಸಕರು ಸಚಿವರು ಮೀಸಲಾತಿ ಮೇಲೆ ಮತ ಕೇಳೊಕೆ ಶುರು ಮಾಡಿದ್ದಾರೆ. ಮೀಸಲಾತಿ ನೀಡಿದ್ದಾರೆ. ಮತ ನೀಡುವಾಗ ನೆನಪಿರಲಿ ಎಂದು ಸಚಿವ ರಾಮಲು ಮೊನ್ನೆ ವಾಲ್ಮೀಕಿ ಜಯಂತಿ ದಿನ ಅಬ್ಬರಿಸಿ ಮುಗಿಲೆತ್ತರಕ್ಕೆ ಕೇಳುವ ಹಾಗೆ ಭಾಷಣೆ ಮಾಡಿದ್ದಾರೆ. 

ರಾಜ್ಯಾಧ್ಯಕ್ಷರನ್ನು ಬದಲಾಯಿಸುವುದೇ ಆಗಿದ್ದರೆ ಕಟೀಲರನ್ನು ಜೊತೆಯಲ್ಲೇ ಕರೆದುಕೊಂಡು ಬರ್ತಿದ್ರಾ ಶಾ?

ಬೊಮ್ಮಾಯಿಗಿದು ಅಗ್ನಿ ಪರೀಕ್ಷೆಯ ಕಾಲ: ಪರಿಶಿಷ್ಟ ಜಾತಿ ಪಂಗಡಗಳ ಮೀಸಲಾತಿಯನ್ನು(SC ST reservation)  ಸಿಎಂ ಬೊಮ್ಮಾಯಿ (Basavaraj Bommai)ಸಾಹೇಬರು  ಹೆಚ್ಚಿಸಲು ನಿರ್ಧರಿಸಿದರು ಸರಿ. ಆದರೆ ಈಗಾಗಲೇ ಹೋರಾಟ ಆರಂಭಿಸಿರುವ ಪಂಚಮಸಾಲಿ ಸಮುದಾಯ, ಕರುಬ ಸಮುದಾಯ, ಒಕ್ಕಲಿಗ ಸಮುದಾಯ ಮೀಸಲಾತಿಗಾಗಿ ದನಿ ಏರಿಸತೊಡಗಿದ್ದಾರೆ. ಈ ಮೂರು ಕಮ್ಯುನಿಟಿಗಳು ಕೂಡ ರಾಜಕೀಯವಾಗಿ ಒಂದು ಪಕ್ಷವನ್ನು ಅಧಿಕಾರಕ್ಕೆ ಕೂರಿಸಬಲ್ಲ, ಅಧಿಕಾರದಿಂದ ಇಳಿಸಬಲ್ಲ ಸಾಮರ್ಥ್ಯ ಉಳ್ಳ ಜನಸಂಖ್ಯೆ ಹೊಂದಿರುವ ಸಮುದಾಯ. SCSTಗೆ ಮೀಸಲಾತಿ ಹೆಚ್ಚಿಸಿರುವ ಹಾಗೆ ಪಂಚಮಸಾಲಿಯನ್ನು 2Aಗೆ ಸೇರಿಸಿ ಎಂದು, ಕುರುಬರನ್ನು  STಗೆ ಸೇರಿಸಿ ಎಂದು, ಒಕ್ಕಲಿಗರು ಮೀಸಲಾತಿಯನ್ನು 10%ಗೆ ಹೆಚ್ಚಳ ಮಾಡಬೇಕು ಎನ್ನುವ ಹೋರಾಟ ಆರಂಭವಾಗಿದೆ. ಪಂಚಮಸಾಲಿ ಬಿಜೆಪಿಗೆ ಬಹುದೊಡ್ಡ ವೋಟ್ ಬ್ಯಾಂಕ್. ಕುರುಬ ಸಮುದಾಯದ ಒಲವು ಹೆಚ್ಚಾಗಿ ಸಿದ್ದರಾಮಯ್ಯ ನಾಯಕತ್ವದ ಕಡೆಗಿದೆ. ಒಕ್ಕಲಿಗರು, ಬಿಜೆಪಿ (BJP), ಕಾಂಗ್ರೆಸ್ (Congress), ಜೆಡಿಎಸ್ (JDS) ಮೂರು ಪಕ್ಷಗಳ ಜೊತೆಯೂ ಇದ್ದಾರೆ. ಬೊಮ್ಮಾಯಿಗ ಚುನಾವಣೆ ಸಮಯದಲ್ಲಿದು ಅಗ್ನಿ ಪರೀಕ್ಷೆಯ ಕಾಲ (Karnataka Politics) ಎನ್ನೋದು ಮಾತ್ರ ಸತ್ಯ.

India Gate: ಡಿಕೆಶಿಗೇಕೆ ಈಗ ಒಕ್ಕಲಿಗರ ಮೇಲೆ ಕಣ್ಣು? ಏನೀ ಲೆಕ್ಕಾಚಾರ..?

ಮೀಸಲಾತಿ ಚರ್ಚೆ ಇಂದು, ನಿನ್ನೆಯದಲ್ಲ:  ಮೀಸಲಾತಿ ಬಗ್ಗೆ ದೇಶದಲ್ಲಿ ಪರ ವಿರೋಧ ಚರ್ಚೆ ಇಂದು ನಿನ್ನೆಯದಲ್ಲ. ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಮೀಸಲಾತಿ ಸೌಲಭ್ಯ ಇತ್ತು.! ವಿಂಧ್ಯ ಪ್ರದೇಶದಲ್ಲಿರುವ ರಾಜರ ಆಳ್ವಿಕೆ ಸಮಯದಲ್ಲೇ ಛತ್ರಪತಿ ಶಾಹುಜಿ ಮಹರಾಜ ಮತ್ತು ಮಹಾರಾಜ ಆಫ್ ಕೊಲ್ಲಾಪುರ್ 1902ರ ಮೊದಲೇ ಹಿಂದುಳಿದವರ ಪಾಲನ್ನು ರಾಜ್ಯಾಡಳಿತದಲ್ಲಿ ನೀಡಲು ಮೀಸಲಾತಿ ನೀಡಿದ್ದರು. 1902 ರಲ್ಲಿ ಹಿಂದುಳಿದ ಸಮುದಾಯ ಮತ್ತು ವರ್ಗದವರಿಗೆ 50% ಮೀಸಲಾತಿಯನ್ನು ಕೊಲ್ಲಾಪುರ್ ಆಡಳಿತದಲ್ಲಿ ನೀಡಲಾಯಿತು. ಈ ನೋಟಿಫಿಕೇಶನ್ ಸ್ವಾತಂತ್ರ್ಯ ಪೂರ್ವ ಭಾರತದ ಮೊದಲ ಶೋಷಿತ ವರ್ಗದ ಕಲ್ಯಾಣಕ್ಕೆ ಮಾಡಿದ  ನೋಟಿಫಿಕೇಶನ್ ಆಗಿದೆ. ಹೀಗೆ ಸ್ವಾತಂತ್ರ್ಯ ಪೂರ್ವದಲ್ಲೇ ಜನ್ಮ ತಾಳಿದ ಮೀಸಲಾತಿ ಸೌಲಭ್ಯ ಇಂದೂ ಮುಂದುವರಿದಿದೆ. ಆದರೆ ಮೀಸಲಾತಿ ಪ್ರಮಾಣ ಶೇ.50 ನ್ನು ದಾಟಕೂಡದು ಎನ್ನುವ ಆದೇಶವನ್ನು ಸುಪ್ರೀಂ ನ್ಯಾಯಾಲಯ 1994 ರಲ್ಲಿ ನೀಡಿದೆ. ಆದರೆ ಹಿಂದುಳಿದ ಚಳುವಳಿಗೆ ಮುನ್ನುಡಿ ಬರೆದಿದ್ದ ತಮಿಳುನಾಡು (2023 Assembly elections) ಮಾತ್ರ ಸಂವಿಧಾನದ 9ನೇ ಪರಿಚ್ಛೇದದಡಿ ಮೀಸಲಾತಿ ಪ್ರಮಾಣ ಹೆಚ್ಚಸಿಕೊಂಡಿದೆ. ತಮಿಳುನಾಡಿನಲ್ಲಿ 69% ಮತ್ತು ಮಹಾರಾಷ್ಟ್ರದಲ್ಲಿ 62% ಮೀಸಲಾತಿ ಸೌಲಭ್ಯ ಇದೆ. ಇದು ಸುಪ್ರೀಂ ತೀರ್ಪಿನ ವಿರುದ್ಧವಾಗಿದೆ. ಆದರೂ ಕೆಲವು ರಾಜ್ಯಗಲ್ಲಿ ಶೇ.50 ಮೀಸಲಾತಿ ಮೀರಿದರೂ ಅಪರೂಪದ ಜಾತಿ ಹಾಗೂ ಪರಿಸ್ಥಿತಿಗಳ ಕಾರಣಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಈಶಾನ್ಯ ರಾಜ್ಯಗಳಲ್ಲಿ ಶೇ.80ಕ್ಕಿಂತಲೂ ಹೆಚ್ಚು ಮೀಸಲಾತಿ ಇದೆ. ಇದೇ ಧೈರ್ಯದ ಮೇಲೆ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕೂಡ ಮೀಸಲಾತಿ ಸೌಲಭ್ಯ ಹೆಚ್ಚಿಸಿ 9ನೇ ಶೆಡ್ಯುಲ್ ಅಡಿ ತರಲು ನಿರ್ಧಾರ ಮಾಡಿದೆ. ಆದರೆ 9ನೇ ಶೆಡ್ಯೂಲ್ ಅಡಿ ಕಾಯ್ದೆ ತಂದರೂ, ಅದನ್ನು ಪ್ರಶ್ನಿಸಬಹುದು ಎನ್ನುವ ಆದೇಶವನ್ನು IR ಸೀಲೊ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್2009 ರಲ್ಲಿ ನೀಡಿದೆ ಎನ್ನೋದು ಗಮನಿಸಬೇಕಾದ ಅಂಶ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ