ಹಾಸನ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಜೆಡಿಎಸ್ 4 ಕ್ಷೇತ್ರವನ್ನು ಗೆದ್ದುಕೊಂಡಿದೆ. ಬಿಜೆಪಿ 2 ಕ್ಷೇತ್ರದಲ್ಲಿ ಗೆದ್ದರೆ, ಕಾಂಗ್ರೆಸ್ 1 ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಂಡಿದೆ.
ಹಾಸನ (ಮೇ.13): 2023ರ ಕರ್ನಾಟಕ ವಿಧಾನಸಭೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಪೂರ್ಣಮತದ ಗೆಲುವು ಸಾಧಿಸಿದೆ. ಈ ಬಾರಿ ಹಾಸನ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಜೆಡಿಎಸ್ 4 ಕ್ಷೇತ್ರವನ್ನು ಗೆದ್ದುಕೊಂಡಿದೆ. ಬಿಜೆಪಿ 2 ಕ್ಷೇತ್ರದಲ್ಲಿ ಗೆದ್ದರೆ, ಕಾಂಗ್ರೆಸ್ 1 ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಂಡಿದೆ. 2018ರ ಚುನಾವಣೆಯಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಸನ ಹೊರತುಪಡಿಸಿ ಉಳಿದೆಲ್ಲವನ್ನೂ ಜೆಡಿಎಸ್ ತನ್ನದಾಗಿಸಿಕೊಂಡಿತ್ತು. ಈ ಬಾರಿ ಜೆಡಿಎಸ್ ತನ್ನ ಅಧಿಪತ್ಯ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಬಿಜೆಪಿ ಸ್ಥಾನ ಹೆಚ್ಚಿಸಿಕೊಂಡಿದ್ದರೆ. ಕಾಂಗ್ರೆಸ್ ಮತ್ತೆ ತನ್ನ ಖಾತೆ ತೆರೆದಿದೆ. ಈ ಮೂಲಕ ಜೆಡಿಎಸ್ ಕುಸಿತ ಕಂಡಿದೆ.
ಜಿಲ್ಲೆಯಲ್ಲಿ ಒಟ್ಟು ಮತದಾರರು: 1499917 ಮಂದಿ
ಪುರುಷ ಮತದಾರರು: 749720 ಮಂದಿ
ಮಹಿಳಾ ಮತದಾರರು: 750153 ಮಂದಿ
ಇತರೆ: 44 ಮಂದಿ
ಶೇಕಡವಾರು ಮತದಾನ: 81.73%
ಸ್ವರೂಪ್‌ಗೆ ಹಾಸನ ಕಿರೀಟ: ಕಳೆದ 5 ವರ್ಷಗಳಿಂದ ಹಾಸನದಲ್ಲಿ ಬಿಜೆಪಿಯ ಪ್ರೀತಂ ಗೌಡ ಅಧಿಪತ್ಯಕ್ಕೆ ಈ ಬಾರಿ ಜೆಡಿಎಸ್ ಬ್ರೇಕ್ ಹಾಕಿದೆ. ಜೆಡಿಎಸ್ ತನ್ನ ಕಾರ್ಯಕರ್ತ ಸ್ವರೂಪ್ ನನ್ನು ನಿಲ್ಲಿಸಿ ಈ ಬಾರಿ ಈ ಕ್ಷೇತ್ರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆನ್ನುವ ಹಠಕ್ಕೆ ಬಿದ್ದಿತ್ತು. ಈ ಕ್ಷೇತ್ರ ದೇವೇಗೌಡರ ಕುಟುಂಬದ ಆಂತರಿಕ ಕಲಹಕ್ಕೂ ಕಾರಣವಾಗಿತ್ತು. ಭವಾನಿ ರೇವಣ್ಣನವರು ಇಲ್ಲಿಂದ ಸ್ಪರ್ಧಿಸುವುದಾಗಿ ಬಹಿರಂಗವಾಗಿ ಘೋಷಿಸಿದ್ದರು. ಆದರೆ, ಮಾಜಿ ಸಿಎಂ ಕುಮಾರಸ್ವಾಮಿಯವರು ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸುವ ಹಠಕ್ಕೆ ಬಿದ್ದು, ತೀವ್ರ ಹಣಾಹಣಿ ನಂತರ ಸ್ವರೂಪ್‌ಗೆ ಜೆಡಿಎಸ್ ಟಿಕೆಟ್ ನೀಡಿತ್ತು. ಬಳಿಕ, ಎಲ್ಲಾ ಅಸಮಾಧಾನ ಬದಿಗಿಟ್ಟು, ಸ್ವರೂಪ್ ಅವರನ್ನು ಗೆಲ್ಲಿಸಿಕೊಳ್ಳಲೇಬೇಕೆಂದು ಎಚ್.ಡಿ.ರೇವಣ್ಣ ಕುಟುಂಬದವರು ಶತಾಯಗತಾಯ ಪ್ರಯತ್ನ ಮಾಡಿದ್ದರು. ಪ್ರೀತಂ ಗೌಡರು ಕ್ಷೇತ್ರದ ಅಭಿವೃದ್ಧಿ ಮುಂದಿಟ್ಟುಕೊಂಡು ಮತಯಾಚಿಸಿದ್ದರು. ಜೆಡಿಎಸ್ ಸ್ವರೂಪ್ ಅವರು 7854 ಮತಗಳಿಂದ ಪ್ರೀತಂ ಗೌಡ ಅವರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಪಕ್ಷ | ಅಭ್ಯರ್ಥಿಗಳು | ಪಡೆದ ಮತ | ಗೆಲುವಿನ ಅಂತರ |
ಜೆಡಿಎಸ್ | ಸ್ವರೂಪ್ | 85176 | 7854 |
ಬಿಜೆಪಿ | ಪ್ರೀತಂ ಗೌಡ | 77322 | ಸೋಲು |
ಕಾಂಗ್ರೆಸ್ | ರಂಗಸ್ವಾಮಿ | 4305 | ಸೋಲು |
ರೇವಣ್ಣಗೆ ಟಫ್ ಫೈಟ್ ಕೊಟ್ಟ ಶ್ರೇಯಸ್ : ತವರು ಕ್ಷೇತ್ರ ಹೊಳೆನರಸೀಪುರದಲ್ಲಿ ಈ ಬಾರಿ ಕೂಡ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಗೆದ್ದು ಬೀಗಿದ್ದಾರೆ. ಎದುರಾಳಿ ಕಾಂಗ್ರೆಸ್ ಮಾಜಿ ಸಚಿವ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಸೋಲು ಕಂಡಿದ್ದಾರೆ. ಆದರೆ ಕೇಲ 2654 ಮತಗಳ ಅಂತದಿಂದಷ್ಟೇ ಎಚ್.ಡಿ.ರೇವಣ್ಣ ಗೆಲುವು ಕಂಡಿದ್ದು, ಶ್ರೇಯಸ್ ಪಟೇಲ್ ಭಾರೀ ಪೈಪೋಟಿ ನೀಡಿದ್ದಾರೆ. ಕ್ಷೇತ್ರದ ಕೆಲ ಭಾಗಗಳಲ್ಲಿ ರೇವಣ್ಣ ಅವರ ಸರ್ವಾಧಿಕಾರಿ ಧೋರಣೆ ಬಗ್ಗೆ ಅಸಮಾಧಾನ ಇತ್ತು. ಹಾಗೆಯೇ, ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಎನ್ನುವ ಅನುಕಂಪವೂ ಇತ್ತು. ಇದು ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಕೂಡ ಆಗಿತ್ತು.
ಪಕ್ಷ | ಅಭ್ಯರ್ಥಿಗಳು | ಪಡೆದ ಮತ | ಗೆಲುವಿನ ಅಂತರ |
ಜೆಡಿಎಸ್ | ಎಚ್.ಡಿ.ರೇವಣ್ಣ | 86401 | 2654 |
ಕಾಂಗ್ರೆಸ್ | ಶ್ರೇಯಸ್ ಪಟೇಲ್ | 83747 | ಸೋಲು |
ಬಿಜೆಪಿ | ದೇವರಾಜೇಗೌಡ | 4666 | ಸೋಲು |
ಬೇಲೂರು ವಿಧಾನಸಭಾ ಕ್ಷೇತ್ರ: ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಈ ಬಾರಿ ಬಿಜೆಪಿ ಗೆದ್ದು ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಬಿಜೆಪಿಯ ಹೆಚ್.ಕೆ.ಸುರೇಶ್ ಅವರು 7736 ಮತಗಳಿಂದ ಕಾಂಗ್ರೆಸ್ ನ ಬಿ.ಶಿವರಾಂ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್‌ನಿಂದ ಇಲ್ಲಿ ಸ್ಥಳೀಯರಾದ ಕೃಷ್ಣೇಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರನ್ನು ಬಿಟ್ಟು ವರಿಷ್ಠರು ಶಿವರಾಂಗೆ ಟಿಕೆಟ್ ನೀಡಿದ್ದರು. ಆದರೆ ನಿರೀಕ್ಷೆಯಂತೆಯೇ ಇಲ್ಲಿ ಸ್ಥಳೀಯರ ಬೆಂಬಲ ಬಿ.ಶಿವರಾಂಗೆ ಸಿಕ್ಕಿಲ್ಲ. ಹೀಗಾಗಿ ಸೋಲು ಕಂಡಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಲಿಂಗೇಶ್ 2018ರಲ್ಲಿ ಇಲ್ಲಿ ಗೆದ್ದು ಶಾಸಕರಾಗಿದ್ದರು. ಆದರೆ ಈ ಬಾರಿ ಜೆಡಿಎಸ್ ಹೀನಾಯ ಸೋಲು ಕಂಡಿದೆ. ಲಿಂಗೇಶ್ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ, ರೇವಣ್ಣ ಕುಟುಂಬದ ಹಿಡಿತದಲ್ಲೇ ಕೆಲಸ ಮಾಡುತ್ತಾರೆ ಎನ್ನುವ ಅಸಮಾಧಾನ ಕ್ಷೇತ್ರದ ಜನರಲ್ಲಿತ್ತು.
ಪಕ್ಷ | ಅಭ್ಯರ್ಥಿಗಳು | ಪಡೆದ ಮತ | ಗೆಲುವಿನ ಅಂತರ |
ಬಿಜೆಪಿ | ಹೆಚ್.ಕೆ.ಸುರೇಶ್ | 63571 | 7736 |
ಕಾಂಗ್ರೆಸ್ | ಬಿ.ಶಿವರಾಮ್ | 55835 | ಸೋಲು |
ಜೆಡಿಎಸ್ | ಕೆ.ಎಸ್.ಲಿಂಗೇಶ್ | 38,893 | ಸೋಲು |
ಅರಕಲಗೂಡು ವಿಧಾನಸಭಾ ಕ್ಷೇತ್ರ: ಎಲ್ಲಾ ಪಕ್ಷಗಳನ್ನು ಸುತ್ತಿಕೊಂಡು ಬಂದು ಕಡು ವಿರೋಧಿಯಾಗಿದ್ದ ಜೆಡಿಎಸ್ ಸೇರಿ ಟಿಕೆಟ್ ಪಡೆದಿದ್ದ ಎ.ಮಂಜು ಅರಕಲಗೂಡು ಶಾಸಕರಾಗಿ ಆಯ್ಕೆಯಾಗಿದ್ದಾರೆ. 18,879 ಸಾವಿರ ಅಂತರದಿಂದ ಪಕ್ಷೇತರ ಅಭ್ಯರ್ಥಿ ಕೃಷ್ಣೇಗೌಡರನ್ನು ಸೋಲಿಸಿದ್ದಾರೆ. ಇಲ್ಲಿ ಕೃಷ್ಣೇಗೌಡರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ, ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದು ಹೊಸಮುಖ ಶ್ರೀಧರ್ ಗೌಡಗೆ. ಹೀಗಾಗಿ, ಕೃಷ್ಣೇಗೌಡರು ಇಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಹಿಂದೆ ಕಾಂಗ್ರೆಸ್‌ನಲ್ಲಿ ಸಚಿವರಾಗಿದ್ದ ಎ.ಮಂಜು ಅವರು ನಂತರ ಬಿಜೆಪಿಗೆ ಹೋಗಿ ಅಲ್ಲಿಂದ ಜೆಡಿಎಸ್ ಸೇರಿದ್ದರು. ಬಿಜೆಪಿಯಿಂದ ಯೋಗಾ ರಮೇಶ್ ಸ್ಪರ್ಧಿಸಿದ್ದರು. ಇಲ್ಲಿ ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ಕೃಷ್ಣೇಗೌಡರ ನಡುವೆ ನೇರ ಹಣಾಹಣಿ ಇತ್ತು.
ಪಕ್ಷ | ಅಭ್ಯರ್ಥಿಗಳು | ಪಡೆದ ಮತ | ಗೆಲುವಿನ ಅಂತರ |
ಜೆಡಿಎಸ್ | ಎ.ಮಂಜು | 67499 | 18,879 |
ಪಕ್ಷೇತರ | ಕೃಷ್ಣೇಗೌಡ | 48620 | ಸೋಲು |
ಕಾಂಗ್ರೆಸ್ | ಶ್ರೀಧರ್ ಗೌಡ | 33084 | ಸೋಲು |
ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರ: ಈ ಬಾರಿ ಇಲ್ಲಿ ಜೆಡಿಎಸ್ ಸ್ಥಾನ ಕಳೆದುಕೊಂಡಿದ್ದು, ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿಯ ಅಭ್ಯರ್ಥಿ ಸಿಮೆಂಟ್ ಮಂಜು ಅವರು ಜೆಡಿಎಸ್ ನ ಎಚ್.ಕೆ.ಕುಮಾರಸ್ವಾಮಿ ಅವರನ್ನು 2056 ಮತಗಳ ಅಂತರದಿಂದ ಸೋಲಿಸಿದ್ದಾರೆ. ಎಚ್.ಕೆ.ಕುಮಾರಸ್ವಾಮಿ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎನ್ನುವ ಆರೋಪ ಹಾಗೂ ಅಸಮಾಧಾನ ಇತ್ತು. ಇನ್ನು ಕಾಂಗ್ರೆಸ್‌ನಿಂದ ನಿಂತಿದ್ದ ಮುರುಳು ಮೋಹನ್ ಸ್ಥಳೀಯರಲ್ಲ, ತಮಿಳುನಾಡು ಮೂಲದವರು ಎನ್ನುವ ಅಸಮಾಧಾನ ಕಾಂಗ್ರೆಸ್‌ನ ಸ್ಥಳೀಯ ನಾಯಕರಿಂದಲೇ ವ್ಯಕ್ತವಾಗಿತ್ತು. ಬಿಜೆಪಿಯ ಸಿಮೆಂಟ್ ಮಂಜು ರಾಜಕೀಯಕ್ಕೆ ಹೊಸಮುಖ. ಹಾಸನದ ಪ್ರೀತಂ ಗೌಡರ ಬೆಂಬಲ ಇವರಿಗೆ ಇತ್ತು ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕ್ಷೇತ್ರದ ಜನತೆ ಹೊಸ ಮುಖಕ್ಕೆ ಅವಕಾಶ ಕೊಟ್ಟಿದ್ದಾರೆ.
ಪಕ್ಷ | ಅಭ್ಯರ್ಥಿಗಳು | ಪಡೆದ ಮತ | ಗೆಲುವಿನ ಅಂತರ |
ಬಿಜೆಪಿ | ಸಿಮೆಂಟ್ ಮಂಜು | 58604 | 2056 |
ಜೆಡಿಎಸ್ | ಹೆಚ್.ಕೆ.ಕುಮಾರಸ್ವಾಮಿ | 56548 | ಸೋಲು |
ಕಾಂಗ್ರೆಸ್ | ಮುರುಳುಮೋಹನ್ | 42811 | ಸೋಲು |
KODAGU ELECTION RESULT 2023: ಕೊಡಗಿನಲ್ಲಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ ಕಾಂಗ್ರೆಸ್
ಅರಸೀಕೆರೆ ವಿಧಾನಸಭಾ ಕ್ಷೇತ್ರ: ಹಾಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಒಂದರ್ಥದಲ್ಲಿ ಇಲ್ಲಿನ ಅನಭಿಷಿಕ್ತ ದೊರೆ. ಅವರು ಈವರೆಗೆ ಜೆಡಿಎಸ್‌ನಿಂದ ನಿಂತು ಗೆದ್ದಿದ್ದರು. ಆದರೆ, ಜೆಡಿಎಸ್‌ನ ಕುಟುಂಬ ರಾಜಕಾರಣದಿಂದ ಬೇಸತ್ತು, ಈ ಬಾರಿ ಕಾಂಗ್ರೆಸ್ ಸೇರಿ ಸ್ಪರ್ಧಿಸಿ ಮತ್ತೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಶಿವಲಿಂಗೇಗೌಡರನ್ನು ಸೋಲಿಸಲು ಜೆಡಿಎಸ್ ಪಣ ತೊಟ್ಟಿತ್ತು. ಹೀಗಾಗಿ, ಈ ಕ್ಷೇತ್ರದ ಗೆಲುವು ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿತ್ತು. ಜೆಡಿಎಸ್ ಸೋಲು ಕಂಡಿದ್ದು 20093 ಅಂತರದಿಂದ ಎನ್.ಆರ್.ಸಂತೋಷ್ ಅವರನ್ನು ಸೋಲಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್.ಆರ್.ಸಂತೋಷ್, ಟಿಕೆಟ್ ಸಿಗದ ಕಾರಣ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರಿ ಟಿಕೆಟ್ ಪಡೆದುಕೊಂಡಿದ್ದರು. ಬಿಜೆಪಿಯ ಜಿವಿಟಿ ಬಸವರಾಜು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಪಕ್ಷ | ಅಭ್ಯರ್ಥಿಗಳು | ಪಡೆದ ಮತ | ಗೆಲುವಿನ ಅಂತರ |
ಕಾಂಗ್ರೆಸ್ | ಕೆ.ಎಂ.ಶಿವಲಿಂಗೌಡ | 97099 | 20093 |
ಜೆಡಿಎಸ್ | ಎನ್.ಆರ್.ಸಂತೋಷ್ | 77006 | ಸೋಲು |
ಬಿಜೆಪಿ | ಜಿವಿಟಿ ಬಸವರಾಜ್ | 6456 | ಸೋಲು |
Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು: ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಮತ್ತೊಮ್ಮೆ ಗೆಲುವು ಕಂಡಿದ್ದಾರೆ. 6645 ಮತಗಳಿಂದ ಕಾಂಗ್ರೆಸ್ ನ ಎಂ.ಎ.ಗೋಪಾಲಸ್ವಾಮಿ ಅವರನ್ನು ಸೋಲಿಸಿದ್ದಾರೆ. ಬಿಜೆಪಿಯಿಂದ ಚಿದಾನಂದ ಕಣದಲ್ಲಿದ್ದರು. 2013ರಿಂದ ಬಾಲಕೃಷ್ಣ ಅವರು ಇಲ್ಲಿ ಶಾಸಕರಾಗಿದ್ದು ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ.
ಪಕ್ಷ | ಅಭ್ಯರ್ಥಿಗಳು | ಪಡೆದ ಮತ | ಗೆಲುವಿನ ಅಂತರ |
ಜೆಡಿಎಸ್ | ಸಿ.ಎನ್.ಬಾಲಕೃಷ್ಣ | 85668 | 6645 |
ಕಾಂಗ್ರೆಸ್ | ಎಂ.ಎ.ಗೋಪಾಲಸ್ವಾಮಿ | 79023 | |
ಬಿಜೆಪಿ | ಚಿದಾನಂದ್ | 5648 |