ಕರ್ನಾಟಕ ವಿಧಾನಸಭೆ ಚುನಾವಣಾ ಕಣ ನಿರ್ಣಾಯಕ ಹಂತ ತಲುಪಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ಉಳಿಸಿಕೊಳ್ಳುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕರ್ನಾಟಕದಲ್ಲೇ ಬೀಡುಬಿಟ್ಟಿದ್ದಾರೆ.
ಸಂದರ್ಶನ: ಭಾವನಾ ನಾಗಯ್ಯ
ಬೆಂಗಳೂರು (ಮೇ.08): ಕರ್ನಾಟಕ ವಿಧಾನಸಭೆ ಚುನಾವಣಾ ಕಣ ನಿರ್ಣಾಯಕ ಹಂತ ತಲುಪಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ಉಳಿಸಿಕೊಳ್ಳುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕರ್ನಾಟಕದಲ್ಲೇ ಬೀಡುಬಿಟ್ಟಿದ್ದಾರೆ. ಈ ನಡುವೆ ಇಲ್ಲಿನ ರಾಜಕೀಯ ಸ್ಥಿತಿಗತಿ, ವಿರೋಧ ಪಕ್ಷಗಳ ತಂತ್ರ, ಬಿಜೆಪಿಯ ಮುಂದಿನ ಸಿಎಂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
* ಚುನಾವಣೆ ಬಂದಾಗ ನಿಮಗೆ ಇಷ್ಟೊಂದು ಎನರ್ಜಿ ಎಲ್ಲಿಂದ ಬರುತ್ತದೆ?
ಚುನಾವಣೆ ಇದ್ದರೂ ಇಲ್ಲದೇ ಇದ್ದರೂ ನಾನು ಇದೇ ರೀತಿ ಕೆಲಸ ಮಾಡುತ್ತೇನೆ.
ಪ್ರಚಾರಕ್ಕೆ ಮೋದಿ ಬಂದಿದ್ದರಿಂದ 100ರ ಗಡಿ ದಾಟ್ತೇವೆ: ಸಚಿವ ಬಿ.ಶ್ರೀರಾಮುಲು
* ಮೈಸೂರು ಸೇರಿ ಪ್ರತಿ ಪ್ರಾಂತ್ಯದಲ್ಲೂ ಪ್ರಚಾರ ಮಾಡಿದ್ದೀರಿ. ಫಲಿತಾಂಶ ಏನಾಗಬಹುದು?
ಈ ಚುನಾವಣೆ ಬಳಿಕ ರಾಜಕೀಯ ವಿಶ್ಲೇಷಕರು ತಮ್ಮ ಮಾನದಂಡಗಳನ್ನು ಬದಲಿಸಿಕೊಳ್ಳಬೇಕು. ಈವರೆಗೆ ಜಾತಿ, ಪ್ರಭಾವಿ ವ್ಯಕ್ತಿಗಳು, ಕ್ಷೇತ್ರಗಳ ಮೇಲೆ ವಿಶ್ಲೇಷಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಪರಿವರ್ತನೆ ಆಗುತ್ತಿದೆ. ಯಡಿಯೂರಪ್ಪ ಸಿಎಂ ಆದಾಗ ಮೊದಲ ಬಾರಿ ಮೋದಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರದ ಅನುಭವ ಜನರಿಗೆ ಸಿಕ್ಕಿದೆ. ಈ ಮೊದಲು ಯಾರು ಸಿಎಂ ಆಗುತ್ತಾರೋ ಅವರ ಭಾಗದಲ್ಲಿ ಮಾತ್ರ ಅಭಿವೃದ್ಧಿಯಾಗುತ್ತಿತ್ತು. ಆದರೆ ಈಗ ಕ್ಷೇತ್ರ, ಪ್ರಾಂತ್ಯಗಳ ಗಡಿ ಇಲ್ಲ. ಮೋದಿ ನೇತೃತ್ವದಲ್ಲಿ ಸಮಗ್ರ ಕರ್ನಾಟಕ ಅಭಿವೃದ್ಧಿಯಾಗುತ್ತಿದೆ. ಗರೀಬ್ ಕಲ್ಯಾಣ್ ಯೋಜನೆ ಜಾತಿ ವ್ಯವಸ್ಥೆಯನ್ನು ಕಡಿಮೆ ಮಾಡಿದೆ. ಪಿಎಂ ಆವಾಸ್ ಯೋಜನೆಯಡಿ 4 ಲಕ್ಷ ಕುಟುಂಬಗಳಿಗೆ ಮನೆ ನಿರ್ಮಿಸಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ 43 ಲಕ್ಷ ಕುಟುಂಬಕ್ಕೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 48 ಲಕ್ಷ ಕುಟುಂಬಕ್ಕೆ ಶೌಚಾಲಯ, ಗ್ಯಾಸ್ ಸೌಲಭ್ಯ ಲಭಿಸಿದೆ. 4 ಕೋಟಿ ಜನರಿಗೆ ಉಚಿತ ಪಡಿತರ ಸಿಗುತ್ತಿದೆ. 1.38 ಕೋಟಿ ಜನರಿಗೆ ಸ್ವಾಸ್ಥ್ಯ ವಿಮಾ ಯೋಜನೆ ಸಿಕ್ಕಿದೆ. ಈ ಹಿಂದೆ ಇವೆಲ್ಲಾ ಜಾತಿ ಮೇಲೆ ನೀಡಲಾಗುತ್ತಿತ್ತು. ಈಗ ಪ್ರಾಂತ್ಯ, ಜಾತಿಗೆ ಸೀಮಿತವಾಗಿರದೆ ಸಂಪೂರ್ಣ ಕರ್ನಾಟಕಕ್ಕೆ ಸೌಲಭ್ಯ ಸಿಗುತ್ತಿದೆ.
* ಗ್ಯಾಸ್ ಸಿಲಿಂಡರ್ ಬೆಲೆ ವಿಪರೀತ ಜಾಸ್ತಿಯಾಗಿದೆ. ಹಿಂದೆ 400 ರು.ಗೆ ಸಿಗುತ್ತಿದ್ದ ಸಿಲಿಂಡರ್ ಬೆಲೆ ಈಗ 1200 ರು. ದಾಟಿದೆಯಲ್ಲವೇ?
ಪ್ರಣಾಳಿಕೆಯಲ್ಲಿ 3 ಸಿಲಿಂಡರ್ ಉಚಿತವಾಗಿ ಕೊಡುವುದಾಗಿ ಹೇಳಿದ್ದನ್ನು ಈಡೇರಿಸುತ್ತೇವೆ. ಇದರಿಂದ ಶೇ.30ರಷ್ಟುಖರ್ಚು ಕಡಿಮೆ ಮಾಡಲಿದೆ. ಆದರೆ ಗ್ಯಾಸ್‌ಗೆ ಪೂರಕವಾಗಿ ಬಳಸುವ ಕಟ್ಟಿಗೆ, ಸೀಮೆಎಣ್ಣೆ ವೆಚ್ಚ ಗ್ಯಾಸ್ಗಿಂತಲೂ ಹೆಚ್ಚಾಗಿರುತ್ತದೆ. ಜೊತೆಗೆ ಅಡುಗೆ ಮಾಡುವಾಗ ಹೊಗೆಯಿಂದ ಮಹಿಳೆಯ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತೆ. ಮನೆಯ ಇತರೆ ಸದಸ್ಯರ ಆರೋಗ್ಯವೂ ಹದಗೆಡುತ್ತದೆ. ಹೀಗಾಗಿ ಅವರು ಸರಿಯಾಗಿರುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
* ಕಿತ್ತೂರು ಕರ್ನಾಟಕ ಬಿಜೆಪಿಯ ಭದ್ರಕೋಟೆ. 2018ರಲ್ಲಿ ಸಿಕ್ಕಷ್ಟುಸೀಟುಗಳೇ ಈ ಬಾರಿಯೂ ಸಿಗಲಿದೆಯೇ?
ಇಲ್ಲ. 2018ರಲ್ಲಿ ಗೆದ್ದಷ್ಟುಸೀಟಲ್ಲ. ಅದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಗೆಲ್ಲಲಿದೆ.
* ಲಕ್ಷ್ಮಣ ಸವದಿ ಬಿಜೆಪಿ ತೊರೆದಿದ್ದಾರೆ. ಜಗದೀಶ್ ಶೆಟ್ಟರ್ ಇದು ಗುಜರಾತ್ ಅಲ್ಲ, ಕರ್ನಾಟಕ ಎಂದಿದ್ದಾರಲ್ಲವೇ ?
ಖಂಡಿತಾ ಇದು ಕರ್ನಾಟಕವೇ ಹೊರತು ಗುಜರಾತ್ ಅಲ್ಲ. ಆದರೆ ನನಗೆ ಹುಬ್ಬಳ್ಳಿ, ಅಲ್ಲಿನ ಜನರು, ಕಾರ್ಯಕರ್ತರ ಸಂಘಟನೆ ಬಗ್ಗೆ ಗೊತ್ತು. 9 ವರ್ಷದಿಂದ ರಾಷ್ಟ್ರ ರಾಜಕಾರಣದಲ್ಲಿದ್ದೇನೆ. ಹುಬ್ಬಳ್ಳಿ ಜನತೆ ಯಾವತ್ತೂ ವ್ಯಕ್ತಿ ನೋಡಿ ಮತ ನೀಡಿಲ್ಲ. ಅವರು ಬಿಜೆಪಿಗೆ ಮತ ನೀಡಿದ್ದಾರೆ. ಶೆಟ್ಟರ್ ಸೋಲಿನ ಅಂತರ ಕಳೆದ ಬಾರಿ ಗೆದ್ದ ಅಂತರಕ್ಕಿಂತ ದುಪ್ಪಟ್ಟಾಗಿರಲಿದೆ. ಸವದಿ ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದರು. ಆದರೂ ಅವರನ್ನು ವಿಧಾನಪರಿಷತ್ ಸದಸ್ಯ, ಉಪಮುಖ್ಯಮಂತ್ರಿ ಮಾಡಿದ್ದೇವೆ. ಅವರಿಬ್ಬರಿಗೂ ಟಿಕೆಟ್ ನೀಡುವುದು ನಮಗೆ ಕಷ್ಟವಿರಲಿಲ್ಲ. ಆದರೆ ಬಿಜೆಪಿ ತತ್ವ, ಸಿದ್ಧಾಂತದ ಮೇಲೆ ನಿಂತಿದೆ. ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಯಾಗಲ್ಲ ಎಂದು ಶೆಟ್ಟರ್ ಮೊದಲೇ ಹೇಳಿದ್ದರು. ಇದು ಅವರದ್ದೇ ನಿರ್ಧಾರವಾಗಿತ್ತು. ಒಬ್ಬ ಶಾಸಕನಾಗಿ ಯುವ ಕಾರ್ಯಕರ್ತನ ಭವಿಷ್ಯವನ್ನು ಯಾಕೆ ಬಲಿ ಕೊಡಬೇಕು. 6 ಬಾರಿ ಶಾಸಕರಾಗಿ, ಮುಖ್ಯಮಂತ್ರಿಯೂ ಆಗಿ, ವಿಪಕ್ಷ ನಾಯಕರಾಗಿ ಕೆಲಸ ಮಾಡಿದವರು. ಶೆಟ್ಟರ್‌ರ ಮತ್ತೆ ಶಾಸಕರಾಗುವ ಕನಸು ಒಬ್ಬ ಕಾರ್ಯಕರ್ತನ ಭವಿಷ್ಯಕ್ಕೆ ಅಡ್ಡಲಾಗಿತ್ತು. ಹೀಗಾಗಿ ಬಿಜೆಪಿ ಕಠಿಣ ನಿರ್ಧಾರ ಕೈಗೊಳ್ಳಬೇಕಾಯ್ತು.
* ಈ ಬಾರಿ 75 ಹೊಸಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದು ಯುವಕರ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು?
ನಾವು ಪ್ರತಿ ಬಾರಿಯೂ ಇದನ್ನು ಮಾಡುತ್ತಿದ್ದೇವೆ. ಕಳೆದ 6 ಬಾರಿಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿಗಮನಿಸಿ. ಬಹುತೇಕ ನಾವು ಶೇ.66ರಿಂದ ಶೇ.85ರಷ್ಟುಬದಲಾವಣೆ ಮಾಡುತ್ತೇವೆ. ನಮಗಿದು ಹೊಸತಲ್ಲ.
* ಚುನಾವಣೆಯ ಕೊನೆ ಹಂತದಲ್ಲಿ 2 ವಿವಾದಗಳು ಸೃಷ್ಟಿಯಾಗಿವೆ. ಈ ಪೈಕಿ ಒಂದು ಕಾಂಗ್ರೆಸ್‌ನ ಬಜರಂಗದಳ ನಿಷೇಧ ಭರವಸೆ. ಇದಕ್ಕೇನು ಹೇಳುತ್ತೀರಿ?
ಕಾಂಗ್ರೆಸ್ ಅಧಿಕಾರಕ್ಕೇ ಬರಲ್ಲ. ಹೀಗಾಗಿ ಬಜರಂಗದಳ ನಿಷೇಧದ ಅವಕಾಶವೂ ಸಿಗಲ್ಲ. ಆದರೆ ಈ ಭರವಸೆಯನ್ನು ನಾವು ವಿರೋಧಿಸುತ್ತೇವೆ. ಕಾಂಗ್ರೆಸ್ ತುಷ್ಟೀಕರಣದ ಆಧಾರದಲ್ಲಿ ರಾಜಕಾರಣವನ್ನು ಹದಗೆಡಿಸುವುದು ಸರಿಯಲ್ಲ. ಅವರು ಪಿಎಫ್‌ಐ ನಿಷೇಧಕ್ಕೆ ಉತ್ತರವಾಗಿ ಅಲ್ಪಸಂಖ್ಯಾತರ ಮನವೊಲಿಸಲು ಮುಂದಾಗಿದ್ದಾರೆ.
* ‘ಕಾಶ್ಮೀರ್ ಫೈಲ್ಸ್’ ಬಳಿಕ ಇದೀಗ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ವಿರೋಧಿಸುತ್ತಿದ್ದಾರೆ. ನಿಮ್ಮ ಅಭಿಪ್ರಾಯವೇನು?
ಇದು ಕಾಂಗ್ರೆಸ್‌ನ ದ್ವಿಮುಖ ನೀತಿ. ದೇಶದ ವಾಸ್ತವಿಕತೆ ಬಗ್ಗೆ ಕಣ್ಮುಚ್ಚಿ ಕೂರಲು ಆಗಲ್ಲ. ಇದರಿಂದ ಆಗುವ ಕೆಟ್ಟಪರಿಣಾಮಗಳಿಂದ ಸಮಾಜವನ್ನು ರಕ್ಷಿಸಬೇಕಿದೆ. ಸುಂಟರಗಾಳಿ ಬಂದಾಗ ತನ್ನ ತಲೆಯನ್ನು ಭೂಮಿ ಒಳಗಡೆ ಹಾಕಿ ಕಂಟಕ ಹೋಯ್ತು ಎಂದು ನಂಬುವ ಉಷ್ಟ್ರಪಕ್ಷಿ ರೀತಿಯಲ್ಲ ಬಿಜೆಪಿ.
* ಬಿಜೆಪಿಯಲ್ಲಿ ಸಿಎಂ ಆಗಬೇಕಿದ್ದರೆ .2500 ಕೋಟಿ, ಮಂತ್ರಿ ಮಾಡಲು .500 ಕೋಟಿ ಕೊಡಬೇಕು ಎಂದು ಕಾಂಗ್ರೆಸ್ ಆರೋಪಿಸಿದೆ. ನಿಜವೇ?
ಈ ಬಗ್ಗೆ ಬಸನಗೌಡ ಯತ್ನಾಳ್ ಕ್ಷಮೆ ಕೇಳಿದ್ದಾರೆ. ಇದನ್ನೇ ಜಾಹೀರಾತಿನಲ್ಲಿ ನೀಡಿ ಕಾಂಗ್ರೆಸ್ ಜನರನ್ನು ವಂಚಿಸುತ್ತಿದೆ. ಅವರು ಕನ್ನಡಿಗರನ್ನು ಅರ್ಥಮಾಡಿಕೊಂಡಿಲ್ಲ.
* ಪ್ರಧಾನಿ ಮೋದಿ ಉಚಿತ ಭಾಗ್ಯಗಳನ್ನು ವಿರೋಧಿಸುತ್ತಾರೆ. ಆದರೆ ಅವರೇ ಸಿಲಿಂಡರ್, ಸಿರಿಧಾನ್ಯ ಸೇರಿದಂತೆ ಅನೇಕ ಉಚಿತ ಭಾಗ್ಯಗಳನ್ನು ನೀಡಿದ್ದಾರಲ್ಲವೇ?
ರಷ್ಯಾ-ಉಕ್ರೇನ್ ಯುದ್ಧ ಹಾಗೂ ಕೊರೋನದಿಂದಾಗಿ ಅನೇಕ ತೊಂದರೆ ಎದುರಾಗಿದೆ. ಇದೇ ಕಾರಣ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ಹೀಗಾಗಿ ಜನರಿಗೆ ಸಹಾಯ ಮಾಡುತ್ತಿದ್ದೇವೆ. ಇದು ತಾತ್ಕಾಲಿಕ ಸೌಲಭ್ಯ, ಉಚಿತ ಭಾಗ್ಯವಲ್ಲ. ನಾವು ಜೀವನಮಟ್ಟವನ್ನು ಸುಧಾರಿಸಿದ್ದೇವೆ. ಬ್ಯಾಂಕ್ ಅಕೌಂಟ್‌ಗೆ ಹಣ ಹಾಕಿಲ್ಲ.
* ಮೀಸಲಾತಿ ನಿಷೇಧದ ಬಗ್ಗೆ ನಿಮ್ಮ ನಿಲುವೇನು?
ಧರ್ಮದ ಆಧಾರದ ಮೇಲೆ ನೀಡುತ್ತಿದ್ದ ಮೀಸಲಾತಿಯನ್ನು ನಾವು ಮೊದಲೇ ರದ್ದು ಮಾಡಬೇಕಿತ್ತು. ನಮ್ಮಿಂದ ತಡವಾಗಿದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ.
ಪ್ರಧಾನಿ ಮೋದಿ ಮುಖದಲ್ಲಿ 2018ರ ಉತ್ಸಾಹ ಇಲ್ಲ: ಜೈರಾಂ ರಮೇಶ್
* 2008 ಹಾಗೂ 2018ರಲ್ಲಿ ಚುನಾವಣೆಗೆ ಬೇರೆ ಬೇರೆ ವಿಚಾರಗಳಿದ್ದವು. ಆದರೂ ಬಿಜೆಪಿಗೆ ಬಹುಮತ ಬಂದಿಲ್ಲ. ಈ ಬಾರಿ ಬಹುಮತದ ವಿಶ್ವಾಸವಿದೆಯೇ?
ಖಂಡಿತಾ ಇದೆ. ಕರ್ನಾಟದಲ್ಲಿ ಬಹುಮತದ ಬಿಜೆಪಿ ಸರ್ಕಾರ ಬರುತ್ತದೆ. ಬಹುಮತಕ್ಕಿಂತ 15 ಸೀಟುಗಳು ಹೆಚ್ಚು ಬರಲಿವೆ.
* ಬಿಜೆಪಿ ಸರ್ಕಾರ ಬಂದರೆ ಮುಖ್ಯಮಂತ್ರಿ ಯಾರಾಗುತ್ತಾರೆ?
ಈಗ ಬೊಮ್ಮಾಯಿ ಇದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.