ಕಾಂಗ್ರೆಸ್‌ ಭದ್ರಕೋಟೆ ಚಾಮರಾಜನಗರದಲ್ಲಿ ಸೋಮಣ್ಣರಿಂದ ಬಿಜೆಪಿ ರಣಕಹಳೆ

By Kannadaprabha NewsFirst Published May 5, 2023, 8:40 AM IST
Highlights

ತಮಿಳುನಾಡಿಗೆ ಹೊಂದಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಜನತಾ ಪರಿವಾರದ ನೆಲೆಯನ್ನು ಈಗ ಬಿಜೆಪಿ ಅವರಿಸಿಕೊಂಡಿದ್ದು, ಈ ಮೊದಲು ಮಹದೇವಪ್ರಸಾದ್‌-ಧ್ರುವನಾರಾಯಣ ಜೋಡಿಯಿಂದಾಗಿ ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು.

ದೇವರಾಜು ಕಪ್ಪಸೋಗೆ

ಚಾಮರಾಜನಗರ (ಮೇ.05): ತಮಿಳುನಾಡಿಗೆ ಹೊಂದಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಜನತಾ ಪರಿವಾರದ ನೆಲೆಯನ್ನು ಈಗ ಬಿಜೆಪಿ ಅವರಿಸಿಕೊಂಡಿದ್ದು, ಈ ಮೊದಲು ಮಹದೇವಪ್ರಸಾದ್‌-ಧ್ರುವನಾರಾಯಣ ಜೋಡಿಯಿಂದಾಗಿ ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಧ್ರುವನಾರಾಯಣ ನಿರ್ಗಮನ, ಇದೀಗ ಕ್ಷೇತ್ರಕ್ಕೆ ವಿ.ಸೋಮಣ್ಣ ಆಗಮನದಿಂದ ಜಿಲ್ಲೆಯ ಚಿತ್ರಣವೇ ಬದಲಾಗಿದ್ದು, ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಲಿಂಗಾಯತರು, ನಾಯಕ ಜನಾಂಗ ಮತದ ಜೊತೆಗೆ ಅಹಿಂದ ಮತ ವಿಭಜನೆಯಿಂದ ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದ್ದರೆ, ಕಾಂಗ್ರೆಸ್‌ ಅಹಿಂದ ಮತಗಳನ್ನೇ ಗಟ್ಟಿಯಾಗಿ ನೆಚ್ಚಿಕೊಂಡಿದೆ.

ಚಾಮರಾಜನಗರ
ಅಭಿವೃದ್ಧಿ ವಿಚಾರದ್ದೇ ಇಲ್ಲಿ ಭಾರಿ ಸದ್ದು!:
ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈ ಬಾರಿ ಬಿಜೆಪಿ ಪ್ರಬಲ ಅಭ್ಯರ್ಥಿ ಸಚಿವ ವಿ. ಸೋಮಣ್ಣ ವಿರುದ್ಧ ಹಾಲಿ ಕಾಂಗ್ರೆಸ್‌ ಶಾಸಕ ಸಿ. ಪುಟ್ಟರಂಗ ಶೆಟ್ಟಿನಾಲ್ಕನೇ ಬಾರಿಗೆ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ವೀರಶೈವರು, ನಾಯಕ ಜನಾಂಗ ಬಿಜೆಪಿ ಪರವಾಗಿ ಹಾಗೂ ಅಹಿಂದ ವರ್ಗ ಕಾಂಗ್ರೆಸ್‌ ಪರವಾಗಿ ನಿಲ್ಲುವ ಸಾಧ್ಯತೆ ಇದೆ. ಬಿಎಸ್ಪಿಯಿಂದ ಹ.ರಾ.ಮಹೇಶ್‌ ಕಣಕ್ಕಿಳಿರುವುದರಿಂದ ಶೆಟ್ಟರ ಮತ ಬುಟ್ಟಿಗೆ ಕೈ ಹಾಕುವ ಸಾಧ್ಯತೆ ಹೆಚ್ಚಿದೆ. ನಾಲ್ಕನೇ ಬಾರಿಗೆ ಶಾಸಕರಾಗಲು ಯತ್ನಿಸಿರುವ ಪುಟ್ಟರಂಗೆಶೆಟ್ಟಿಗೆ ಅಭಿವೃದ್ಧಿ ವಿರೋಧಿ ಅಲೆ ಇದೆ. ಬಿಜೆಪಿ ಅಭ್ಯರ್ಥಿ ಸೋಮಣ್ಣ ಅಭಿವೃದ್ಧಿಗಾಗಿ ಬೆಂಬಲಿಸಿ, ಮೂರು ಬಾರಿ ಕಾಂಗ್ರೆಸ್‌ ಗೆಲ್ಲಿಸಿದರೂ ಜಿಲ್ಲಾ ಕೇಂದ್ರ ಕೇಂದ್ರ ನಿರೀಕ್ಷಿತ ಅಭಿವೃದ್ಧಿಯಾ ಗಿಲ್ಲ ಎಂದು ಗಮನ ಸೆಳೆದರೆ. ಪುಟ್ಟರಂಗಶೆಟ್ಟಿಜನರ ಕೈಗೆ ಸುಲಭವಾಗಿ ಸಿಗುವ ಶಾಸಕ ಎಂಬ ಹೆಗ್ಗಳಿಕೆಯೇ ಪ್ಲಸ್‌ ಪಾಯಿಂಟ್‌. ಚುನಾವಣೆ ಸಮಯದಲ್ಲಿ ಮಾತ್ರ ಕ್ಷೇತ್ರ ನೆನಪು ಮಾಡಿಕೊಳ್ಳುವ ವಾಟಾಳ್‌ ನಾಗರಾಜು, ಜೆಡಿಎಸ್‌ನ ಆಲೂರು ಮಲ್ಲುಗೆ ಪರಿಸ್ಧಿತಿ ಇಲ್ಲಿ ಸುಲಭವಾಗಿಲ್ಲ.

ಶೆಟ್ಟರ್‌ ಬಿಟ್ಟು ಚುನಾವಣೆ ಎದುರಿಸುತ್ತಿರುವ ಬಿಜೆಪಿ: ಜಗದೀಶ್‌ ಸಾಥ್‌ ನೀಡಿರುವುದು ಕಾಂಗ್ರೆಸ್‌ಗೆ ದೊಡ್ಡ ಶಕ್ತಿ

ಹನೂರು
ಕುಟುಂಬ ಹಗೆಯ ನಡುವೆ ಜೆಡಿಎಸ್‌ ಪ್ರಬಲ ಪೈಪೋಟಿ:
ಕುಟುಂಬ ರಾಜಕಾರಣಕ್ಕೆ ಹೆಸರಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ನಡುವೆ ಜೆಡಿಎಸ್‌ ಪ್ರಬಲ ಸ್ಪರ್ಧೆಯೊಡಿದ್ದು, ಹಾಲಿ ಶಾಸಕ ಆರ್‌. ನರೇಂದ್ರ ಮತ್ತೇ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಮಾಜಿ ಶಾಸಕಿ ಪರಿಮಳ ನಾಗಪ್ಪ ಪುತ್ರ ಡಾ.ಪ್ರೀತನ್‌ ನಾಗಪ್ಪ ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿ. ಕುರುಬ ಜನಾಂಗದ ಎಂ.ಆರ್‌.ಮಂಜುನಾಥ್‌ ಜೆಡಿಎಸ್‌ ಅಭ್ಯರ್ಥಿಯಾಗಿ ಕಳೆದ ಭಾರಿ 44 ಸಾವಿರ ಮತ ಪಡೆಯುವ ಮೂಲಕ ಗಮನ ಸೆಳೆದಿದ್ದರು. ಹಾಲಿ ಶಾಸಕ ನರೇಂದ್ರ ಸತತ ನಾಲ್ಕನೇ ಬಾರಿಗೆ ಗೆಲುವಿನ ನಿರೀಕ್ಷೆಯಲ್ಲಿದ್ದು, ಸುಲಭ ವಾಗಿ ಜನರ ಕೈಗೆ ಸಿಗುತ್ತಾರೆ ಎಂಬುದು ಪ್ಲಸ್‌ ಪಾಯಿಂಟ್‌. ಹನೂರಿನಲ್ಲಿ ದಲಿತ ಮತಗಳು ಹೆಚ್ಚಿದ್ದು, ಮೂರು ಪಕ್ಷಗಳಿಗೂ ಮತ ವಿಭಜನೆಯಾಗುವ ಸಾಧ್ಯತೆ ಇದೆ. ಅಹಿಂದ ಮತಗಳನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡು ಪಕ್ಷಗಳು ನೆಚ್ಚಿಕೊಂಡಿವೆ. ಲಿಂಗಾಯಿತರಲ್ಲಿ ಒಗ್ಗಟ್ಟಿನ ಕೊರತೆ ಬಿಜೆಪಿಗೆ ತಲೆನೋವಾಗಿದೆ. ಹೀಗಾಗಿ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಗುಂಡ್ಲುಪೇಟೆ
ಪೇಟೆ ಅಖಾಡದಲ್ಲಿ ಕಾಂಗ್ರೆಸ್‌-ಬಿಜೆಪಿ ಟಫ್‌ಫೈಟ್‌!:
ವೀರಶೈವ ಸಮುದಾಯ ಪ್ರಾಬಲ್ಯವಿರುವ ಕ್ಷೇತ್ರವಿದು. ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ನಿರಂಜನ್‌ಕುಮಾರ್‌ಗೆ ಬಂಡಾಯ ಎದುರಾಗಿದ್ದು, ಚಾಮುಲ್‌ ನಿರ್ದೇಶಕ ಎಂ.ಪಿ. ಸುನೀಲ್‌ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಜೊತೆಗಿದ್ದ ಕಡಬೂರು ಮಂಜುನಾಥ್‌ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಕಣ ಕ್ಕಿಳಿದಿರುವ ಎಚ್‌.ಎಂ.ಗಣೇಶ್‌ ಪ್ರಸಾದ್‌ ಪ್ರಬಲ ಪೈಪೋಟಿ ನೀಡುತ್ತಿದ್ದು, ತಂದೆ ದಿ.ಎಚ್‌.ಎಸ್‌.ಮಹದೇವಪ್ರಸಾದ್‌ ಐದು ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಜನರ ಕಷ್ಟಸುಖಗಳಿಗೆ ಭಾಗಿಯಾಗಿರುವುದನ್ನು ಮುಂದಿಟ್ಟು ಕೊಂಡು ಮತ ಕೇಳುತ್ತಿದ್ದಾರೆ. ಹಾಲಿ ಶಾಸಕ ನಿರಂಜನ್‌ ಕುಮಾರ್‌ ನಾನು ಕಳೆದ ಐದು ವರ್ಷದಲ್ಲೇ 25 ವರ್ಷದಲ್ಲಿ ನಡೆಯದ ಅಭಿವೃದ್ಧಿ ಮಾಡಿದ್ದೇನೆ ಎಂದು ಮತ ಕೇಳುತ್ತಿದ್ದು, ಬಿಜೆಪಿ ಎಸ್ಸಿ,ಎಸ್ಟಿಮತ್ತು ಲಿಂಗಾಯಿತ ಮೀಸಲಾತಿಯಿಂದ ಲಾಭದ ನಿರೀಕ್ಷೆ ಯಲ್ಲಿದ್ದರೆ, ಕಾಂಗ್ರೆಸ್‌ ಅಂಹಿಂದ ಮತ ಜೊತೆಗೆ ಲಿಂಗಾಯತ ಮತಗಳನ್ನು ನೆಚ್ಚಿಕೊಂಡಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿದೆ.

ಬಿಜೆಪಿ ಗೆದ್ರೆ ಮತ್ತೆ ಬೊಮ್ಮಾಯಿ ಸಿಎಂ: ಧರ್ಮೇಂದ್ರ ಪ್ರಧಾನ್‌

ಕೊಳ್ಳೇಗಾಲ
ಅನುಕಂಪದ ಅಲೆ, ಬಂಡಾಯದ ಬೇಗೆ ಮಧ್ಯೆ ಅರಳುತ್ತಾ ಕಮಲ?:
ದಲಿತರ ಪ್ರಾಬಲ್ಯದ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದ್ದು, ಕಳೆದ ಬಾರಿ ಬಿಎಸ್ಪಿಯಿಂದ ಆಯ್ಕೆಯಾಗಿದ್ದ ಎನ್‌.ಮಹೇಶ್‌ ಈ ಬಾರಿ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಎರಡನೇ ಬಾರಿಗೆ ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ ಕಣಕ್ಕಿಳಿದಿದ್ದಾರೆ. 19 ವರ್ಷಗಳ ವನವಾಸದಿಂದ ಪಾರು ಎಂದು ಅನುಕಂಪ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ಜೆಡಿಎಸ್‌ನಿಂದ ಮಾಜಿ ಪೊಲೀಸ್‌ ಅಧಿಕಾರಿ ಪುಟ್ಟಸ್ವಾಮಿ ಅವರು ಸ್ಪರ್ಧಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬಿಜೆಪಿ ಎಸ್ಟಿಮೋರ್ಚಾದ ಅಧ್ಯಕ್ಷ ಕಿನಕಹಳ್ಳಿ ರಾಚಯ್ಯ ಬಂಡಾಯವಾಗಿ ಸ್ಪರ್ಧಿಸಿದ್ದು, ಇವರು ಯಾರಿಗೆ ಮುಳುವಾಗುತ್ತಾರೆ ಕಾದು ನೋಡ ಬೇಕಿದೆ. ಕಳೆದ ಬಾರಿ ಖಾತೆ ತೆರೆದು ಗಮನ ಸೆಳೆದಿದ್ದು ಬಿಎಸ್ಪಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಯಲ್ಲಿದೆ. ಮಹೇಶ್‌ ವೀರಶೈವರ ಮತದ ಜೊತೆಗೆ ಅಹಿಂದ ಮತದ ಮೇಲೆ ಕಣ್ಣಿಟ್ಟಿದ್ದು, ಎ.ಆರ್‌. ಕೃಷ್ಣಮೂರ್ತಿ ಅಹಿಂದ ಮತಗಳನ್ನು ಹೆಚ್ಚಿನ ಮಟ್ಟದಲ್ಲಿ ನೆಚ್ಚಿಕೊಂಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!