ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಾಬಲ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಮಲ ಅರಳಿಸಿದ ಖ್ಯಾತಿ ಸಚಿವ ಸುಧಾಕರ್ ಅವರದು. ಕಳೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿದೆ.
ದಯಾಸಾಗರ್ ಎನ್.
ಚಿಕ್ಕಬಳ್ಳಾಪುರ (ಮೇ.04): ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಾಬಲ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಮಲ ಅರಳಿಸಿದ ಖ್ಯಾತಿ ಸಚಿವ ಸುಧಾಕರ್ ಅವರದು. ಕಳೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿದೆ. ಉಳಿದಂತೆ 4 ಕ್ಷೇತ್ರಗಳ ಪೈಕಿ ಒಂದರಲ್ಲಿ ಜೆಡಿಎಸ್, ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ತಮ್ಮ ಹಿಡಿತ ಸಾಧಿಸಿವೆ. ಈ ಬಾರಿ ಜಿಲ್ಲೆಯಲ್ಲಿ ಕಮಲವನ್ನು ಅರಳಿಸಲೇ ಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಪಣ ತೊಟ್ಟಿದ್ದರೆ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಬಿಜೆಪಿಯ ಏಳ್ಗೆ ತಡೆಯಲು ಪ್ರತಿತಂತ್ರ ರೂಪಿಸುತ್ತಿವೆ. ಹೀಗಾಗಿ, ಎಲ್ಲೆಡೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜಿಲ್ಲೆಯಲ್ಲಿ ಒಕ್ಕಲಿಗರ (ರೆಡ್ಡಿಗಳ) ಮತ್ತು ದಲಿತರ ಮತಗಳೇ ನಿರ್ಣಾಯಕ.
ಚಿಕ್ಕಬಳ್ಳಾಪುರ
ಸುಧಾಕರ್‌ಗೆ ಕೈ ದಳ ಪೈಪೋಟಿ: ಸಚಿವ ಸುಧಾಕರ್ ಸ್ಪರ್ಧೆಯಿಂದಾಗಿ ಇದೊಂದು ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ‘ಆಪರೇಷನ್ ಕಮಲ’ಕ್ಕೆ ಒಳಗಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಸುಧಾಕರ್, ಬಳಿಕ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಸಚಿವರಾದರು. ಉಪ ಚುನಾವಣೆ ಸೇರಿದಂತೆ ಕಳೆದ ಮೂರು ಚುನಾವಣೆಗಳಲ್ಲಿ ಸಚಿವ ಡಾ.ಕೆ.ಸುಧಾಕರ್ ಗೆಲುವು ಸಾಧಿಸಿ, ಹ್ಯಾಟ್ರಿಕ್ ಸಾಧನೆಯ ಸಂತಸದಲ್ಲಿದ್ದಾರೆ ನಾಲ್ಕನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ನ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಎರಡು ಬಾರಿ ಪರಾಭವಗೊಂಡಿದ್ದು, ಮೂರನೇ ಬಾರಿಗೆ ಶತಾಯ ಗತಾಯ ಗೆಲ್ಲಬೇಕೆಂದು ಹಠ ತೊಟ್ಟಿದ್ದಾರೆ. ಇವರಿಬ್ಬರೂ ಒಕ್ಕಲಿಗರೇ ಆಗಿದ್ದು, ಇವರ ನಡುವೆ ಬಲಿಜ ಜನಾಂಗದ ಪ್ರದೀಪ್ ಈಶ್ವರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಬಿಜೆಪಿಯದು ಸಿಂಗಲ್ ಡ್ರೈವರ್ ಡಬಲ್ ಎಂಜಿನ್ ಸರ್ಕಾರ, ಕರ್ನಾಟಕದಿಂದ ದೇಶಕ್ಕೇ ಮೆಸೇಜ್: ಸುಧೀಂದ್ರ ಕುಲಕರ್ಣಿ
ಗೌರಿಬಿದನೂರು
ಶಿವಶಂಕರ ರೆಡ್ಡಿಯನ್ನು ಕಟ್ಟಿಹಾಕಲು ಬಿಜೆಪಿ, ಜೆಡಿಎಸ್ ಯತ್ನ: ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 5 ಬಾರಿಯಿಂದ ಜಯಭೇರಿ ಬಾರಿಸಿರುವ ಕಾಂಗ್ರೆಸ್‌ನ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಆರನೇ ಬಾರಿಗೆ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಡಾ.ಎಚ್.ಎಸ್.ಶಶಿಧರ್ ಕಣದಲ್ಲಿದ್ದು, ಶಿವಶಂಕರ ರೆಡ್ಡಿಯವರನ್ನು ಸೋಲಿಸಲು ಪಣತೊಟ್ಟಿದ್ದಾರೆ. ಜೆಡಿಎಸ್‌ನಿಂದ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ನರಸಿಂಹ ಮೂರ್ತಿಯವರು ಮತ್ತೊಮ್ಮೆ ಜೆಡಿಎಸ್‌ನಿಂದ ಸ್ಪರ್ಧೆಗೆ ಅಣಿಯಾಗಿದ್ದಾರೆ. ಇವರ ನಡುವೆ ಪಕ್ಷೇತರರಾದ ಕೆಂಪರಾಜು ಮತ್ತು ಕೆ.ಎಚ್.ಪುಟ್ಟಸ್ವಾಮಿ ಗೌಡ ಕೂಡ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಬಾಗೇಪಲ್ಲಿ
ಸುಬ್ಬಾರೆಡ್ಡಿಗೆ ಸಿಪಿಎಂನ ಡಾ.ಅನಿಲ್ ಕುಮಾರ್ ಟಕ್ಕರ್: ಹಿಂದೊಮ್ಮೆ ಕಮ್ಯೂನಿಸ್ಟರ ಭದ್ರಕೋಟೆಯಾಗಿದ್ದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ, ನಂಜುಂಡಪ್ಪ ವರದಿಯಂತೆ ಅತಿ ಹಿಂದುಳಿದ ಕ್ಷೇತ್ರ. ಇಲ್ಲಿ ಬಡವರ ಸಂಖ್ಯೆಯೇ ಹೆಚ್ಚಿದ್ದು, ಕಮ್ಯೂನಿಸ್ಟರ ಪ್ರಭಾವ ಈಗಲೂ ಇದೆ. ಕಾಂಗ್ರೆಸ್‌ನ ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಮೂರನೇ ಬಾರಿಗೆ ಆಯ್ಕೆ ಬಯಸಿದ್ದು, ‘ಕೈ’ ಅಭ್ಯರ್ಥಿಯಾಗಿದ್ದಾರೆ. ಇವರಿಗೆ ಸಿಪಿಎಂನ ಡಾ.ಅನಿಲ್ ಕುಮಾರ್ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇವರಿಗೆ ಜೆಡಿಎಸ್ ಬೆಂಬಲ ಘೋಷಿಸಿದೆ. ಜೊತೆಗೆ, ಕಮ್ಯುನಿಸ್ಟ್ ಮುಖಂಡ ಮಾಜಿ ಶಾಸಕ ದಿವಂಗತ ಜಿ.ವಿ.ಶ್ರೀರಾಮರೆಡ್ಡಿಯವರ ಸಾವಿನ ಅನುಕಂಪದ ಅಲೆ ಇವರ ಬೆನ್ನಿಗಿದೆ. ವರ್ತುಲ ರಸ್ತೆ ಪ್ರಾಧಿಕಾರದ ಅಧ್ಯಕ್ಷ ಹಾಗೂ ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷ ಸಿ.ಮುನಿರಾಜು, ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಿಥುನ್ ರೆಡ್ಡಿ ಕೂಡ ಪೈಪೋಟಿ ಒಡ್ಡಿದ್ದಾರೆ. ಕಾಂಗ್ರೆಸ್, ಸಿಪಿಎಂ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಶಿಡ್ಲಘಟ್ಟ
ಕಾಂಗ್ರೆಸ್‌ಗೆ ಬಂಡಾಯದ ಬಿಸಿ: ರೇಷ್ಮೆ ನಗರಿ ಖ್ಯಾತಿಯ ಶಿಡ್ಲಘಟ್ಟಕ್ಷೇತ್ರದ ನಗರ ಭಾಗದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಗ್ರಾಮಾಂತರ ಭಾಗದಲ್ಲಿ ಕೃಷಿಕರು ಹೆಚ್ಚಿದ್ದಾರೆ. ಕಳೆದ ಬಾರಿಯ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಅವರು, ಈ ಬಾರಿಯೂ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದಾರೆ. ಇವರಿಗೆ ಬಿಜೆಪಿಯ ಸೀಕಲ್ ರಾಮಚಂದ್ರ ಗೌಡ ಮತ್ತು ಕಾಂಗ್ರೆಸ್‌ನ ರಾಜೀವ್ ಗೌಡ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಭವಗೊಂಡಿದ್ದ ಪುಟ್ಟು ಆಂಜಿನಪ್ಪ ಈ ಬಾರಿಯೂ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇದು ಕಾಂಗ್ರೆಸ್‌ಗೆ ತೊಡಕಾಗಿದೆ.
ರಾಜ್ಯ ರಕ್ಷಿಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಡಿ.ಕೆ.ಶಿವಕುಮಾರ್
ಚಿಂತಾಮಣಿ
ಎಂ.ಕೃಷ್ಣಾರೆಡ್ಡಿ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಬೀಳುತ್ತಾ?: ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 2013ರವರೆಗೂ ಎರಡು ಕುಟುಂಬಗಳ (ಚೌಡಾರೆಡ್ಡಿ ಮತ್ತು ಕೆ.ಎಂ. ಕೃಷ್ಣಾರೆಡ್ಡಿ) ನಡುವೆಯೇ ಶಾಸಕ ಸ್ಥಾನ ಹಂಚಿಕೆಯಾಗುತ್ತಿತ್ತು. ಅದನ್ನು ಮುರಿದು ಜೆಡಿಎಸ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಿದ್ದು, ಹಾಲಿ ಶಾಸಕ, ವಿಧಾನಸಭೆಯ ಮಾಜಿ ಉಪಾಧ್ಯಕ್ಷ ಎಂ.ಕೃಷ್ಣಾರೆಡ್ಡಿ. ಇವರು ಕಳೆದೆರಡು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದು, ಈ ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಸಜ್ಜಾಗಿದ್ದಾರೆ. ಈ ಬಾರಿಯೂ ಇವರು ಜೆಡಿಎಸ್ ಹುರಿಯಾಳು. ಕಳೆದೆರಡು ಬಾರಿ ಸೋಲಿನ ರುಚಿ ಕಂಡಿರುವ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್, ಈ ಬಾರಿಯೂ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದಾರೆ. ಇವರಿಗೆ ಪೈಪೋಟಿ ನೀಡಲು ಬಿಜೆಪಿಯ ಜಿ.ಎನ್.ವೇಣುಗೋಪಾಲ್ ಸಜ್ಜಾಗಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.