ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಕೋಟೆಯನ್ನು ಪುಡಿ ಮಾಡಿ ಜೆಡಿಎಸ್ ಮೇಲುಗೈ ಸಾಧಿಸಿತ್ತು. ಆದರೆ, 2018ರ ಚುನಾವಣೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಹಾಗೂ ತಲಾ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಗೆಲುವು ಸಾಧಿಸಿತ್ತು.
ತುಮಕೂರು (ಮೇ.06): ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಕೋಟೆಯನ್ನು ಪುಡಿ ಮಾಡಿ ಜೆಡಿಎಸ್ ಮೇಲುಗೈ ಸಾಧಿಸಿತ್ತು. ಆದರೆ, 2018ರ ಚುನಾವಣೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಹಾಗೂ ತಲಾ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಜಯಚಂದ್ರ ಅವರಂತಹ ಮುಖಂಡರುಗಳನ್ನು ಒಳಗೊಂಡ ತುಮಕೂರಿನಲ್ಲಿ ಚುನಾವಣಾ ಕಣ ರಂಗೇರಿದೆ.
ತುಮಕೂರು
ಬಿಜೆಪಿಗೆ ಬಂಡಾಯದ ಕಾಟ: ಬಿಜೆಪಿಯ ಭದ್ರಕೋಟೆ, ತುಮಕೂರಿನಲ್ಲಿ ಈ ಬಾರಿ ಹಾಲಿ ಶಾಸಕ ಜ್ಯೋತಿ ಗಣೇಶ್ ಬಿಜೆಪಿ ಅಭ್ಯರ್ಥಿ. ಸತತ ಎರಡು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಗೋವಿಂದರಾಜು ಮೂರನೇ ಬಾರಿ ಜೆಡಿಎಸ್‌ನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಅನುಕಂಪದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ 10 ಚುನಾವಣೆಯಲ್ಲಿ ಷಫಿ ಅಹಮದ್ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ನೀಡುತ್ತಾ ಬಂದಿತ್ತು. ಈ ಬಾರಿ ಬೇರೆಯವರಿಗೆ ಟಿಕೆಟ್ ನೀಡಿದೆ. ಕೊನೆ ಕ್ಷಣದಲ್ಲಿ ಷಫಿ ಅಹಮದ್ ಅಳಿಯ, ಮಾಜಿ ಶಾಸಕ ರಫೀಕ್ ಅಹಮದ್‌ಗೆ ಟಿಕೆಟ್ ತಪ್ಪಿಸಿ ಕಾಂಗ್ರೆಸ್ ಇಕ್ಬಾಲ್‌ಗೆ ಟಿಕೆಟ್ ನೀಡಿದೆ. ಷಫಿ ಅಹಮದ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಮಧ್ಯೆ, ಮಾಜಿ ಸಚಿವ ಸೊಗಡು ಶಿವಣ್ಣ ಅವರು ಪಕ್ಷೇತರರಾಗಿ ಸ್ಪರ್ಧಿಸಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿದೆ.
undefined
ತುಮಕೂರು ಗ್ರಾಮಾಂತರ
ಬಿಜೆಪಿಗೆ ನಕಲಿ ಬಾಂಡ್ ಅಸ್ತ್ರ: ಬಿಜೆಪಿಯಿಂದ ಸುರೇಶಗೌಡ, ಅಭ್ಯರ್ಥಿ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಗೌರಿಶಂಕರ್ ಅವರು 16,500 ನಕಲಿ ಬಾಂಡ್‌ಗಳನ್ನು ನೀಡಿದ್ದಾರೆ ಎಂದು ದೂರಿ ಸುರೇಶಗೌಡ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಗೌರಿಶಂಕರ್‌ರನ್ನು ಅನರ್ಹಗೊಳಿಸಿತ್ತು. ಹೈಕೋರ್ಚ್ ತೀರ್ಪಿಗೆ ತಡೆಯಾಜ್ಞೆ ತಂದಿರುವ ಗೌರಿಶಂಕರ್, ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ನಕಲಿ ಬಾಂಡ್‌ಗಳನ್ನೇ ಬಿಜೆಪಿ ಚುನಾವಣಾ ಅಸ್ತ್ರವಾಗಿಸಿಕೊಂಡು ಹೊರಟಿದೆ. ಕಾಂಗ್ರೆಸ್‌ನಿಂದ ಷಣ್ಮುಖಪ್ಪ ಅವರು ಸ್ಪರ್ಧಾಕಣದಲ್ಲಿ ಇದ್ದಾರೆ. ಇಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣೆ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.
ಕುಣಿಗಲ್
ಡಿಕೆಶಿ ಸಂಬಂಧಿ ಕಟ್ಟಿ ಹಾಕಲು ಕಮಲ, ದಳ ತಂತ್ರ: ಕಾಂಗ್ರೆಸ್‌ನಿಂದ ಹಾಲಿ ಶಾಸಕ ಡಾ.ರಂಗನಾಥ್, ಬಿಜೆಪಿಯಿಂದ ಕೃಷ್ಣಕುಮಾರ್ ಕಣದಲ್ಲಿದ್ದಾರೆ. ಕೃಷ್ಣಕುಮಾರ್ ಅವರು ಜೆಡಿಎಸ್‌ನ ರವಿ ನಾಗರಾಜಯ್ಯನವರ ಸಂಬಂಧಿ. ಜೆಡಿಎಸ್, ಕೊನೆ ಕ್ಷಣದಲ್ಲಿ ತನ್ನ ಅಭ್ಯರ್ಥಿ ಡಿ.ನಾಗರಾಜಯ್ಯ ಅವರನ್ನು ಬದಲಿಸಿ ಅವರ ಪುತ್ರ ರವಿ ಡಿ. ನಾಗರಾಜಯ್ಯಗೆ ಟಿಕೆಟ್ ನೀಡಿದೆ. ರವಿ ಡಿ.ನಾಗರಾಜಯ್ಯ ಅವರು ಈ ಹಿಂದೆ ತುಮಕೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಂಬಂಧಿಯಾಗಿರುವ ಡಾ.ರಂಗನಾಥ್ ಅವರನ್ನು ಈ ಬಾರಿ ಕಟ್ಟಿಹಾಕಲು ಜೆಡಿಎಸ್ ಹಾಗೂ ಬಿಜೆಪಿ ತಂತ್ರ ರೂಪಿಸಿವೆ. ಕಾಂಗ್ರೆಸ್‌ನಲ್ಲಿದ್ದ ಮುದ್ದಹನುಮೇಗೌಡರು ಬಿಜೆಪಿಗೆ ಬಂದಿರುವುದು ಪಕ್ಷಕ್ಕೆ ಬಲ ತಂದಿದೆ.
ಶಿರಾ
ಜಯಚಂದ್ರಗೆ ಬಿಜೆಪಿ, ಜೆಡಿಎಸ್ ಫೈಟ್: 2018ರ ಚುನಾವಣೆಯಲ್ಲಿ ಗೆದ್ದು, ಅನಾರೋಗ್ಯದ ಕಾರಣ ಜೆಡಿಎಸ್‌ನ ಬಿ.ಸತ್ಯನಾರಾಯಣ ಮೃತಪಟ್ಟಿದ್ದರು. ಬಳಿಕ, ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವುದರೊಂದಿಗೆ ಮೊದಲ ಬಾರಿಗೆ ಶಿರಾದಲ್ಲಿ ಕಮಲದ ಬಾವುಟ ಹಾರಿಸಿತ್ತು. ಉಪಚುನಾವಣೆಯಲ್ಲಿ ಜಯಗಳಿಸಿದ್ದ ರಾಜೇಶಗೌಡ, ಈ ಬಾರಿಯೂ ಬಿಜೆಪಿ ಅಭ್ಯರ್ಥಿ. ಸತತ ಎರಡು ಸೋಲು ಅನುಭವಿಸಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಜಯಚಂದ್ರ, ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ. ಜೆಡಿಎಸ್ ಈ ಬಾರಿ ಉಗ್ರೇಶ್‌ಗೆ ಟಿಕೆಟ್ ನೀಡಿದೆ. ಮೊದಲಿನಿಂದಲೂ ಈ ಕ್ಷೇತ್ರ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಕೋಟೆಯಾಗಿತ್ತು. ಕಳೆದ ಉಪಚುನಾವಣೆಯಲ್ಲಿ ಅಚ್ಚರಿಯೆಂಬಂತೆ ಬಿಜೆಪಿ ಜಯಗಳಿಸಿತ್ತು. ಹೀಗಾಗಿ, ಇಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮೂರೂ ಮಂದಿ ಕುಂಚಿಟಿಗರಾಗಿರುವುದರಿಂದ ಆ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.
ಕೊರಟಗೆರೆ
ಪರಮೇಶ್ವರ್‌ಗೆ ಅದೃಷ್ಟ ಕೈ ಹಿಡಿಯುತ್ತಾ?: ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಡಿಸಿಎಂ ಪರಮೇಶ್ವರ್ ಮತ್ತೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಜೊತೆಗೆ ಸಿಎಂ ಆಕಾಂಕ್ಷಿ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ, ಪರಮೇಶ್ವರ್‌ಗೆ ಈ ಬಾರಿ ಅದೃಷ್ಟಕೈಹಿಡಿಯುತ್ತಾ ಎಂಬುದನ್ನು ನೋಡಬೇಕಿದೆ. ಜೆಡಿಎಸ್‌ನಿಂದ ಮಾಜಿ ಶಾಸಕ ಸುಧಾಕರ್ ಲಾಲ್ ಹಾಗೂ ಬಿಜೆಪಿಯಿಂದ ನಿವೃತ್ತ ಐಎಎಸ್ ಅಧಿಕಾರಿ, ಎಡಗೈ ಸಮುದಾಯದ ಅನಿಲ್ ಕುಮಾರ್ ಅಭ್ಯರ್ಥಿ. ಪರಿಶಿಷ್ಟಜಾತಿಯ ಎಡಗೈ ಸಮುದಾಯದವರು, ಒಕ್ಕಲಿಗರು ಹಾಗೂ ಲಿಂಗಾಯತರು ಇಲ್ಲಿ ಸಾಕಷ್ಟುಸಂಖ್ಯೆಯಲ್ಲಿದ್ದಾರೆ.
ಮಧುಗಿರಿ
ತ್ರಿಕೋನ ಸ್ಪರ್ಧೆ: ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕೆ.ಎನ್.ರಾಜಣ್ಣ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ಎಲ್.ಸಿ.ನಾಗರಾಜ್ ಸ್ಪರ್ಧಿಸಿದ್ದರೆ, ಜೆಡಿಎಸ್‌ನಿಂದ ವೀರಭದ್ರಪ್ಪ ಅಭ್ಯರ್ಥಿಯಾಗಿದ್ದಾರೆ. ಈ ಹಿಂದೆ, ದೇವೇಗೌಡರ ಬಗ್ಗೆ ಕೆ.ಎನ್.ರಾಜಣ್ಣ ಆಡಿದ್ದರೆನ್ನಲಾದ ಮಾತು ವೈರಲ್ ಆಗಿತ್ತು. ಇದೇ ವಿಷಯವನ್ನು ಜೆಡಿಎಸ್ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಇನ್ನು, ಬಿಜೆಪಿ ಅಭ್ಯರ್ಥಿ ನಾಗರಾಜ್ ಹಾಗೂ ‘ಕೈ’ ಅಭ್ಯರ್ಥಿ ಕೆ.ಎನ್.ರಾಜಣ್ಣ, ಇಬ್ಬರೂ ‘ನಾಯಕ’ ಸಮುದಾಯಕ್ಕೆ ಸೇರಿದವರು. ಹೀಗಾಗಿ, ಇಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ತಿಪಟೂರು
ನಾಗೇಶ್‌ಗೆ ಷಡಕ್ಷರಿ ಟಕ್ಕರ್: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮತ್ತೆ ಇಲ್ಲಿ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಕೆ.ಷಡಕ್ಷರಿ ಸ್ಪರ್ಧಿಸಿದ್ದಾರೆ. ತಮ್ಮದು ಕೊನೆಯ ಚುನಾವಣೆ ಎನ್ನುತ್ತಾ ಷಡಕ್ಷರಿಯವರು ಮತ ಕೇಳುತ್ತಿದ್ದಾರೆ. ಲಿಂಗಾಯತರ ದೊಡ್ಡ ಓಟ್‌ಬ್ಯಾಂಕ್ ಇಲ್ಲಿದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಾರೆಂಬ ಕಾರಣಕ್ಕೆ ಹಿಂದಿನ ಚುನಾವಣೆಯಲ್ಲಿ ಲಿಂಗಾಯತ ಮತಗಳು ನಾಗೇಶ್‌ಗೆ ಶಿಫ್‌್ಟಆಗಿದ್ದವು. ಈಗ ಯಡಿಯೂರಪ್ಪನವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿರುವುದರಿಂದ ಲಿಂಗಾಯತರು ಯಾವ ಪಕ್ಷಕ್ಕೆ ಮತ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಿಜೆಪಿಯ ಬಿ.ಸಿ. ನಾಗೇಶ್ ಅವರಿಗೆ ಲಿಂಗಾಯತರ ಜೊತೆಗೆ ಲಿಂಗಾಯಿತೇತರರ ಬೆಂಬಲ ಕೂಡ ಇರುವುದು ಪ್ಲಸ್ ಪಾಯಿಂಟ್. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ 15 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದ ಶಾಂತಕುಮಾರ್, ಈ ಬಾರಿ ಜೆಡಿಎಸ್ ಅಭ್ಯರ್ಥಿ
ಗುಬ್ಬಿ
ಬಿಜೆಪಿಯಿಂದ ಹೊಸಮುಖ ಕಣಕ್ಕೆ: ಕಳೆದ ಬಾರಿ ಜೆಡಿಎಸ್‌ನಿಂದ ಶಾಸಕರಾಗಿದ್ದ ಎಸ್.ಆರ್.ಶ್ರೀನಿವಾಸ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ. ಒಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು, ಬಳಿಕ ಜೆಡಿಎಸ್ ಸೇರಿದ್ದ ಶ್ರೀನಿವಾಸ್, ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಈಗ ಜೆಡಿಎಸ್ ತೊರೆದು, ಕಾಂಗ್ರೆಸ್‌ಗೆ ಬಂದಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ 35 ಸಾವಿರ ಮತ ಪಡೆದಿದ್ದ ಯುವಕ, ದಿಲೀಪ್ ಕುಮಾರ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಜೆಡಿಎಸ್‌ನಿಂದ ನಾಗರಾಜ್, ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ, ಲಿಂಗಾಯತರು ಸಮ ಪ್ರಮಾಣದಲ್ಲಿ ಇದ್ದಾರೆ.
ಪಾವಗಡ
ಕೈ, ದಳದ ಮಧ್ಯೆ ಕಾದಾಟ: ಪಾವಗಡ, ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ವೆಂಕಟರಮಣಪ್ಪ ಅವರು ಇಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದರು. ಈ ಬಾರಿ ಕಾಂಗ್ರೆಸ್, ಅವರ ಬದಲಿಗೆ ಅವರ ಮಗ ವೆಂಕಟೇಶ್‌ಗೆ ಟಿಕೆಟ್ ನೀಡಿದೆ. ಜೆಡಿಎಸ್‌ನಿಂದ ಕೆ.ಎಂ.ತಿಮ್ಮರಾಯಪ್ಪ ಅವರು ಕಣಕ್ಕೆ ಇಳಿದಿದ್ದು, ಈ ಹಿಂದೆ ಎರಡು ಬಾರಿ ಶಾಸಕರಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಇನ್ನು, ಬಿಜೆಪಿಯಿಂದ ಕೃಷ್ಣಾನಾಯ್ಕ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ನಾಗೇಂದ್ರ ಕುಮಾರ್ ಕಣದಲ್ಲಿದ್ದಾರೆ. ಈಗಿಲ್ಲಿ ಬಿಜೆಪಿ, ನೆಲೆ ಕಂಡುಕೊಂಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪಾವಗಡದಲ್ಲಿ ಬಿಜೆಪಿಗೆ ಅತ್ಯಧಿಕ ಮತ ಕೂಡ ಬಂದಿದೆ. ಆದರೂ, ಮೇಲ್ನೋಟಕ್ಕೆ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಣಾಹಣಿ ಇದೆ.
ಮಂಡ್ಯದಲ್ಲಿ ನಿಖಿಲ್ ಸೋಲಿಸಿದ್ದಕ್ಕೆ ಕಾಂಗ್ರೆಸ್‌ಗೆ ಈಗ ಪಶ್ಚಾತ್ತಾಪ: ಎಚ್.ಡಿ.ಕುಮಾರಸ್ವಾಮಿ
ತುರುವೇಕೆರೆ
ಬಿಜೆಪಿಗೆ ಜೆಡಿಎಸ್ ಸೆಡ್ಡು: ಜೆಡಿಎಸ್‌ನ ಭದ್ರಕೋಟೆಯಾಗಿದ್ದ ತುರುವೇಕೆರೆಯಲ್ಲಿ ಕಳೆದ ಬಾರಿ ಬಿಜೆಪಿಯ ಮಸಾಲ ಜಯರಾಮ್ ಗೆದ್ದಿದ್ದರು. ಈ ಬಾರಿ ಮತ್ತೆ ಅವರೇ ಬಿಜೆಪಿ ಅಭ್ಯರ್ಥಿ. ಬಿಜೆಪಿ ಈ ಕ್ಷೇತ್ರದಲ್ಲಿ ಗೆದ್ದಿರುವುದು ಎರಡು ಬಾರಿ ಮಾತ್ರ. ಒಕ್ಕಲಿಗರ ದೊಡ್ಡ ಓಟ್‌ಬ್ಯಾಂಕ್ ಇರುವ ತುರುವೇಕೆರೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಟಿ.ಕೃಷ್ಣಪ್ಪ ಕಣದಲ್ಲಿದ್ದಾರೆ. ಮೂರು ಬಾರಿ ಶಾಸಕರಾಗಿರುವ ಕೃಷ್ಣಪ್ಪ ಅವರದ್ದು ಈ ಬಾರಿ ಕೊನೆಯ ಚುನಾವಣೆ. ಈ ಹಿಂದೆ ಜಗ್ಗೇಶ್ ಅವರು ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದು ಬಿಟ್ಟರೆ ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಸಾಧನೆ ಮಾಡಿಲ್ಲ. ಇನ್ನು, ಜೆಡಿಎಸ್‌ನಲ್ಲಿದ್ದ ಬೆಮೆಲ್ ಕಾಂತರಾಜು ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ನೇರ ಹಣಾಹಣಿ ಇರುವುದು ಜೆಡಿಎಸ್ ಮತ್ತು ಬಿಜೆಪಿ ನಡುವೆ ಇದೆ.
ಚಿಕ್ಕನಾಯಕನಹಳ್ಳಿ
ತ್ರಿಕೋನ ಸ್ಪರ್ಧೆ: ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಈ ಬಾರಿಯೂ ಬಿಜೆಪಿ ಅಭ್ಯರ್ಥಿ. ಜೆಡಿಎಸ್‌ನಿಂದ ಮಾಜಿ ಶಾಸಕ ಸುರೇಶ್‌ಬಾಬು ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಇತ್ತೀಚೆಗಷ್ಟೆಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಕಿರಣಕುಮಾರ್ ಅಭ್ಯರ್ಥಿ. ಕಳೆದ ಚುನಾವಣೆಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಪುತ್ರ ಇಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 40 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಒಕ್ಕಲಿಗ ಮತ ವಿಭಜನೆಯಾಗಿದ್ದರಿಂದ ಜೆಡಿಎಸ್‌ನ ಸುರೇಶ್ ಬಾಬು ಸೋತು, ಮಾಧುಸ್ವಾಮಿ ವಿಜಯದ ನಗೆ ಬೀರಿದ್ದರು. ಈ ಬಾರಿ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.