ಬಿಜೆಪಿಯ ಭದ್ರಕೋಟೆಯಾಗಿ ರೂಪಗೊಂಡ ಧಾರವಾಡ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಗೆಲವು ಕಂಡಿತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಭಾಗದ ಪ್ರಬಲ ಲಿಂಗಾಯತ ನಾಯಕ, ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ತೆರಳಿದ್ದಾರೆ.
ಶಿವಾನಂದ ಗೊಂಬಿ/ಬಸವರಾಜ ಹಿರೇಮಠ
ಹುಬ್ಬಳ್ಳಿ (ಮೇ.05): ಬಿಜೆಪಿಯ ಭದ್ರಕೋಟೆಯಾಗಿ ರೂಪಗೊಂಡ ಧಾರವಾಡ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಗೆಲವು ಕಂಡಿತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಭಾಗದ ಪ್ರಬಲ ಲಿಂಗಾಯತ ನಾಯಕ, ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ತೆರಳಿದ್ದಾರೆ. ಇದು ಪ್ರಮುಖ ರಾಜಕೀಯ ವಿದ್ಯಮಾನಗಳಿಗೆ ಕಾರಣವೆನಿಸಿದ್ದು, ಉಳಿದ ಕ್ಷೇತ್ರಗಳ ಮೇಲೂ ಇದರ ಪರಿಣಾಮ ಆಗುತ್ತಿರುವುದು ವಿಶೇಷ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಬಂಡಾಯ ಅಭ್ಯರ್ಥಿಗಳ ಬಿಸಿ ತಾಗಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್
ಶೆಟ್ಟರ್, ಟೆಂಗಿನಕಾಯಿ ಹೈವೋಲ್ಟೇಜ್ ಕದನ: ಇಬ್ಬರು ಮುಖ್ಯಮಂತ್ರಿಗಳನ್ನು (ಎಸ್.ಆರ್.ಬೊಮ್ಮಾಯಿ, ಜಗದೀಶ ಶೆಟ್ಟರ್) ನೀಡಿದ ಕ್ಷೇತ್ರ ಇದು. 1994ರಿಂದ ಈ ವರೆಗೆ ನಡೆದ 6 ಚುನಾವಣೆಗಳಲ್ಲಿ ಬಿಜೆಪಿಯಿಂದ ಜಗದೀಶ ಶೆಟ್ಟರ್ ಆಯ್ಕೆಯಾಗಿದ್ದರು. ಹೀಗಾಗಿ, ಬಿಜೆಪಿ ಭದ್ರಕೋಟೆ ಎನಿಸಿದೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶೆಟ್ಟರ್‌ಗೆ ಈ ಸಲ ಟಿಕೆಟ್ ನಿರಾಕರಿಸಿರುವುದು ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಹೀಗಾಗಿ ಮುನಿಸಿಕೊಂಡಿರುವ ಶೆಟ್ಟರ್, ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಲ್ಲಿ ಶೆಟ್ಟರ್ ಆಗಮನ ಹುಮ್ಮಸ್ಸು ಮೂಡಿಸಿದೆ. ಬಿಜೆಪಿಯಿಂದ ಇಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಹೇಶ ಟೆಂಗಿನಕಾಯಿ ಹುರಿಯಾಳು ಆಗಿದ್ದಾರೆ. ಬಿಜೆಪಿಗೆ ಸಲೀಸಾಗಿ ಸಿಗುತ್ತಿದ್ದ ಕ್ಷೇತ್ರ ಈ ಸಲ ಕೊಂಚ ಕಷ್ಟವೆನಿಸುತ್ತಿದೆ. ಶೆಟ್ಟರನ್ನು ಗೆಲ್ಲಿಸುವ ಮೂಲಕ 36 ವರ್ಷಗಳ ಬಳಿಕ ಕ್ಷೇತ್ರವನ್ನು ಕೈ ವಶಮಾಡಿಕೊಳ್ಳಬೇಕೆಂಬ ಗುರಿ ಕಾಂಗ್ರೆಸ್‌ನದ್ದು. ಕ್ಷೇತ್ರದಲ್ಲಿ ನಿರ್ಣಾಯಕವೆನಿಸಿರುವ ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ 2 ಪಕ್ಷಗಳೂ ಮಾಡುತ್ತಿವೆ. 2 ಎರಡು ಪಕ್ಷಗಳಿಗೂ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದ್ದು, ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ.
ಬಜರಂಗದಳವನ್ನು ಟಚ್ ಮಾಡಿದರೆ ಭಸ್ಮವಾಗಿ ಬಿಡ್ತೀರಾ: ಬಿ.ಎಸ್.ಯಡಿಯೂರಪ್ಪ
ಹುಬ್ಬಳ್ಳಿ-ಧಾರವಾಡ ಪೂರ್ವ
ಕಾಂಗ್ರೆಸ್‌ಗೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ: ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಇದು. ಬಿಜೆಪಿ-ಕೆಜೆಪಿ ಗದ್ದಲದಲ್ಲಿ 2013ರಲ್ಲಿ ಸಲೀಸಾಗಿ ಗೆದ್ದು ಕ್ಷೇತ್ರ ವಶಕ್ಕೆ ಪಡೆದಿರುವ ಕಾಂಗ್ರೆಸ್ ಈಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ದೆ. ಕಾಂಗ್ರೆಸ್‌ನಿಂದ ಪ್ರಸಾದ ಅಬ್ಬಯ್ಯ ಮತ್ತೆ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ನರರೋಗ ತಜ್ಞ ಡಾ.ಕ್ರಾಂತಿಕಿರಣಗೆ ಇದು ಮೊದಲ ಚುನಾವಣೆ. ಕ್ಷೇತ್ರದ ಮೇಲೆ ಕಾಂಗ್ರೆಸ್‌ನದು ಎಷ್ಟುಹಿಡಿತವಿದೆಯೋ ಅದೇ ರೀತಿ ಬಿಜೆಪಿಯೂ ಸಂಘಟನೆಯಿಂದಾಗಿ ಹಿಡಿತ ಸಾಧಿಸಿರುವುದು ವಿಶೇಷ. 1.18 ಲಕ್ಷಕ್ಕೂ ಅಧಿಕ ಮುಸ್ಲಿಂ ಮತದಾರರೇ ಇಲ್ಲಿ ನಿರ್ಣಾಯಕ. ಜತೆ ಜತೆಗೆ ದಲಿತ, ಹಿಂದುಳಿದ, ಲಿಂಗಾಯತ, ಬ್ರಾಹ್ಮಣ, ಎಸ್‌ಎಸ್‌ಕೆ ಮತದಾರರ ಸಂಖ್ಯೆಯೂ ಸಾಕಷ್ಟುಪ್ರಮಾಣದಲ್ಲಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಬೇಕೆಂಬ ಇರಾದೆ ಕಾಂಗ್ರೆಸ್‌ನದ್ದು. ಈ ನಡುವೆ ಬಿಜೆಪಿಯ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಬಿಜೆಪಿಗೆ ಕೊಂಚ ಅಡ್ಡಗಾಲು ಎಂದು ಹೇಳಲಾಗುತ್ತಿದೆ. ಇನ್ನು ಇದೇ ಮೊದಲ ಬಾರಿಗೆ ಓವೈಸಿಯ ಎಐಎಂಐಎಂ ಪಕ್ಷದಿಂದ ದುರ್ಗಪ್ಪ ಬಿಜವಾಡ ಎಂಬುವವರು ಕಣಕ್ಕಿಳಿದಿರುವುದು ಕಾಂಗ್ರೆಸ್‌ನಲ್ಲಿ ಕೊಂಚ ನಡುಕವನ್ನುಂಟು ಮಾಡಿದೆ.
ಕುಂದಗೋಳ
ಕುಂದಗೋಳದಲ್ಲಿ ತ್ರಿಕೋನ ಸ್ಪರ್ಧೆ: ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕುಸುಮಾವತಿ ಶಿವಳ್ಳಿ ಕಣಕ್ಕಿಳಿದಿದ್ದಾರೆ. ಇವರಿಗೆ ಟಿಕೆಟ್ ನೀಡುವುದಕ್ಕೆ ಪಕ್ಷದಲ್ಲೇ ಭಾರೀ ವಿರೋಧ ವ್ಯಕ್ತವಾಗಿತ್ತು. ಒಂದು ವೇಳೆ ಇವರಿಗೆ ಟಿಕೆಟ್ ನೀಡಿದ್ದೇ ಆದರೆ ನಾವೇ ಸೋಲಿಸುತ್ತೇವೆ ಎಂದು ಒಂದು ಬಣ ಎಚ್ಚರಿಕೆಯನ್ನೂ ನೀಡಿತ್ತು. ಆದರೂ ವಿರೋಧದ ನಡುವೆಯೇ ಪಕ್ಷ ಕುಸುಮಾವತಿ ಅವರಿಗೆ ಮಣೆ ಹಾಕಿ ತನ್ನ ಹುರಿಯಾಳನ್ನಾಗಿಸಿದೆ. ಬಿಜೆಪಿಯಿಂದ ಸಚಿವ ಸಿ.ಸಿ.ಪಾಟೀಲ ಸಂಬಂಧಿಕ ಎಂ.ಆರ್.ಪಾಟೀಲ ಇಲ್ಲಿ ಕಣಕ್ಕಿಳಿದಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಸಂಬಂಧಿಕ ಮಾಜಿ ಎಸ್.ಐ.ಚಿಕ್ಕನಗೌಡರ, ಬಿಜೆಪಿ ಟಿಕೆಟ್ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಬಿಜೆಪಿಯ ಪಾಟೀಲರಷ್ಟೇ ಚಿಕ್ಕನಗೌಡರ ಕೂಡ ಹಿಡಿತ ಸಾಧಿಸಿದವರು. ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇನ್ನು ಜೆಡಿಎಸ್‌ನಿಂದ ಹಜರತ್ ಅಲಿ ಜೋಡಮನಿ ಕಣಕ್ಕಿಳಿದಿದ್ದಾರೆ. ಲಿಂಗಾಯತ, ಕುರುಬ, ಮುಸ್ಲಿಂ ಮತಗಳೇ ಇಲ್ಲಿ ನಿರ್ಣಾಯಕ ಎನಿಸಿವೆ.
ನವಲಗುಂದ
ಬಂಡಾಯ ನೆಲದಲ್ಲಿ ವಿಜಯ ಪತಾಕೆ ಯಾರದು?: ಕಳಸಾ- ಬಂಡೂರಿ ಹೋರಾಟ, ಬಂಡಾಯದ ನೆಲ ಎಂದರೆ ಥಟ್ಟನೆ ನೆನಪಾಗುವುದು ನವಲಗುಂದ. ಈ ಕ್ಷೇತ್ರದಲ್ಲೀಗ ರಾಜಕೀಯ ಬಲು ಜೋರಾಗಿದೆ. ಬಿಜೆಪಿಯಿಂದ ಶಂಕರ ಪಾಟೀಲ ಮುನೇನಕೊಪ್ಪ ಮರು ಆಯ್ಕೆ ಬಯಸಿ ಕಣಕ್ಕಿಳಿದರೆ, ಜೆಡಿಎಸ್‌ನ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇನ್ನು ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಸಚಿವ ಕೆ.ಎನ್.ಗಡ್ಡಿ ಜೆಡಿಎಸ್‌ನ ಹುರಿಯಾಳಾಗಿದ್ದು, ಹಿಂದಿನಂತೆ ಈ ಸಲವೂ ತ್ರಿಕೋನ ಸ್ಪರ್ಧೆ ಏರ್ಪಟ್ಟಂತಾಗಿದೆ. ಲಿಂಗಾಯತ ಮತಗಳೇ ಇಲ್ಲಿ ನಿರ್ಣಾಯಕ. ಆದರೂ ಕುರುಬ, ರಡ್ಡಿ, ದಲಿತ, ಮುಸ್ಲಿಂ ಮತಗಳು ಸಾಕಷ್ಟುಪ್ರಮಾಣದಲ್ಲಿವೆ. ಮೂವರು ಒಂದೊಂದು ಸಮುದಾಯಕ್ಕೆ ಸೇರಿದವರಾಗಿರುವುದು ವಿಶೇಷ. ಮುನೇನಕೊಪ್ಪಗೆ, ತುಪರಿಹಳ್ಳ, ಕಳಸಾ- ಬಂಡೂರಿ ಯೋಜನೆಯ ಡಿಪಿಆರ್‌ಗೆ ಅನುಮೋದನೆ ಸಿಕ್ಕಿರುವುದು ಪ್ಲಸ್ ಪಾಯಿಂಟ್ ಆಗಿದ್ದರೆ, ಕೋನರಡ್ಡಿಗೆ ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿನೋದ ಅಸೂಟಿ ಸಾಥ್ ನೀಡಿರುವುದು ದೊಡ್ಡಶಕ್ತಿಯಾಗಿದೆ.
ಕಲಘಟಗಿ
ದೋಸ್ತಿಗಳೇ ಇಲ್ಲಿ ಎದುರಾಳಿಗಳು: ಒಂದು ಕಾಲದ ದೋಸ್ತಿಗಳೇ ಇಲ್ಲಿ ಎದುರಾಳಿಗಳು. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಸಂತೋಷ ಲಾಡ್- ನಾಗರಾಜ ಛಬ್ಬಿ ಭಾರೀ ಪೈಪೋಟಿ ನಡೆಸಿದ್ದರು. ಕೊನೆಗೆ ಲಾಡ್‌ಗೆ ಕಾಂಗ್ರೆಸ್ ಮಣೆ ಹಾಕಿದರೆ, ಟಿಕೆಟ್ ಸಿಗದೇ ಮುನಿಸಿಕೊಂಡ ಛಬ್ಬಿ ಬಿಜೆಪಿ ಹುರಿಯಾಳಾಗಿದ್ದಾರೆ. ಇಷ್ಟುವರ್ಷ ಚುನಾವಣೆಯಲ್ಲಿ ಜೋಡೆತ್ತುಗಳಂತೆ ಇಬ್ಬರು ಜೊತೆಗೂಡಿ ನಡೆಸುತ್ತಿದ್ದರು. ಆದರೆ ಇದೀಗ ಬದ್ಧ ವೈರಿಗಳಂತೆ ಹೋರಾಟಕ್ಕಿಳಿದಿದ್ದಾರೆ. ತಮ್ಮದೇ ಸಾಮರ್ಥ್ಯ ಹೊಂದಿರುವ ಇಬ್ಬರಿಗೂ ಕ್ಷೇತ್ರದ ಮೇಲೆ ಹಿಡಿತವಿದೆ. ಆದರೂ ಕಾಂಗ್ರೆಸ್‌ನ ಲಾಡ್ ಬಲ ಕೊಂಚ ಮುಂದಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಸಿ.ಎಂ.ನಿಂಬಣ್ಣವರ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರ ಬದಲು ಛಬ್ಬಿ ಕರೆದುಕೊಂಡು ಬಂದು ಟಿಕೆಟ್ ಕೊಟ್ಟಿರುವುದು ಅವರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿರುವುದು ಕ್ಷೇತ್ರದ ಮೇಲೆ ಕೊಂಚ ಪರಿಣಾಮ ಬೀರಿದೆ. ಇದು ಛಬ್ಬಿಗೆ ಮೈನಸ್. ಲಿಂಗಾಯತ ಸಮುದಾಯವೇ ಇಲ್ಲಿ ನಿರ್ಣಾಯಕ.
ಧಾರವಾಡ
ದೇಸಾಯಿ ವರ್ಸಸ್ ಕುಲಕರ್ಣಿ ಟಫ್ ಫೈಟ್: ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಅಮೃತ ದೇಸಾಯಿ ಎದುರು ಸೋಲು ಕಂಡವರು. ಈ ಬಾರಿಯೂ ದೇಸಾಯಿ ವರ್ಸಸ್ ವಿನಯ ಮಧ್ಯೆ ನೇರ ಪೈಪೋಟಿ. ಇಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಸೋಲು-ಗೆಲುವಿಗೆ ಜಾತಿ ಸಮೀಕರಣ ಪ್ರಶ್ನೆ ಇಲ್ಲ. ಕೊಲೆ ಆರೋಪ ಹೊತ್ತಿರುವ ವಿನಯ ಕುಲಕರ್ಣಿ ಕಾನೂನು ತೊಡಕಿನಿಂದ ಕ್ಷೇತ್ರದ ಹೊರಗಿದ್ದುಕೊಂಡೇ ಚುನಾವಣೆ ಎದುರಿಸುವಂತಾಗಿದೆ. ಪತ್ನಿ ಶಿವಲೀಲಾ ಹಾಗೂ ಅಭಿಮಾನಿಗಳ ಬಳಗವೇ ಪ್ರಚಾರದ ಉಸ್ತುವಾರಿ ವಹಿಸಿದ್ದಾರೆ. ಕುಲಕರ್ಣಿ ಅವರನ್ನು ಮತ್ತೊಮ್ಮೆ ಮಣಿಸಲು ದೇಸಾಯಿ ತೀವ್ರ ಪ್ರಯತ್ನಕ್ಕೆ ಬಿಜೆಪಿಯ ಕೆಲವರು ಕಾಂಗ್ರೆಸ್ ಸೇರಿರುವುದು ಅಡ್ಡಿ ಎನಿಸುತ್ತಿದೆ. ಇಷ್ಟುದಿನಗಳ ಕಾಲ ಅಮೃತ ಜೊತೆಗಿದ್ದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ತವನಪ್ಪ ಅಷ್ಟಗಿ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಇದರ ಮಧ್ಯೆ ಜೆಡಿಎಸ್‌ನಿಂದ ಧಾರವಾಡದ ಉದ್ಯಮಿ ಮಂಜುನಾಥ ಹಗೇದಾರ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಮಧುಲತಾ ಗೌಡರ್ ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ರಾವಣ ಹುಟ್ಟಿಬಂದರೂ ಬಜರಂಗದಳ ಬ್ಯಾನ್ ಅಸಾಧ್ಯ: ಅರವಿಂದ ಲಿಂಬಾವಳಿ
ಹುಬ್ಬಳ್ಳಿ-ಧಾರವಾಡ ಪಶ್ಚಿಮ
ಬೆಲ್ಲದ ಸಿಹಿ ಕೈಗೆ ಸಿಗುತ್ತಾ?: ಅಳೆದು ತೂಗಿ ಕೊನೆ ಕ್ಷಣದಲ್ಲಿ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿಯೊಂದಿಗೆ ನೇರ ಪೈಪೋಟಿ ಶುರುವಾಗಿದೆ. ತಮ್ಮೆರಡು ಚುನಾವಣೆಗಳಲ್ಲಿ ಮುಸ್ಲಿಂ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ವಿರುದ್ಧ ಧರ್ಮದ ಆಧಾರದಲ್ಲಿ ಸರಳವಾಗಿ ಗೆದ್ದು ಬಂದಿದ್ದ ಹಾಲಿ ಶಾಸಕ ಅರವಿಂದ ಬೆಲ್ಲದ ಅವರಿಗೆ ಈ ಬಾರಿ ಬ್ರಾಹ್ಮಣ ಸಮುದಾಯದ ಜತೆಗೆ ಎಲ್ಲ ಸಮುದಾಯದೊಂದಿಗೆ ಉತ್ತಮ ನಂಟು ಹೊಂದಿರುವ ದೀಪಕ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಇಷ್ಟಾಗಿಯೂ ಕ್ಷೇತ್ರ ಬಿಜೆಪಿ ಭದ್ರಕೋಟೆ. ಬೆಲ್ಲದ ಪ್ರಬಲ ಲಿಂಗಾಯತ ಸಮುದಾಯದ ಮುಖಂಡನಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕೃಪಾಕಟಾಕ್ಷವೂ ಇದೆ. ಬ್ರಾಹ್ಮಣರ ಮತಗಳನ್ನು ಚಿಂಚೋರೆ ಪಡೆಯದಂತೆ ದಿಗ್ಬಂಧನ ಹಾಕುವ ಸಾಮರ್ಥ್ಯ ಜೋಶಿಗಿದೆ. ಕ್ಷೇತ್ರದಲ್ಲಿ ಜೆಡಿಎಸ್ ನಿಂದ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ ಸಹ ಸ್ಪರ್ಧಿಸುತ್ತಿದ್ದು, ಒಟ್ಟು ಕ್ಷೇತ್ರದಲ್ಲಿ 16 ಜನರು ಚುನಾವಣಾ ಕಣದಲ್ಲಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.