ಬೆಳಗಾವಿಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಬಿಗ್‌ಫೈಟ್‌: ಕೆಲವೆಡೆ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸೇ ಮೇಲುಗೈ

By Kannadaprabha News  |  First Published May 3, 2023, 6:42 AM IST

ಒಟ್ಟು 18 ವಿಧಾನಸಭಾ ಕ್ಷೇತ್ರಗಳಿವೆ. ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ 8, ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ 8 ಹಾಗೂ ಕೆನರಾ ಲೋಕಸಭಾ ವ್ಯಾಪ್ತಿಯಲ್ಲಿ 2 ವಿಧಾನಸಭೆ ಕ್ಷೇತ್ರಗಳಿವೆ. ಬಹುತೇಕ ಕಡೆ ಕಾಂಗ್ರೆಸ್‌-ಬಿಜೆಪಿ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ. 


ಶ್ರೀಶೈಲ ಮಠದ

ಬೆಳಗಾವಿ (ಮೇ.03): ಒಂದೆಡೆ ಮಲೆನಾಡು, ಇನ್ನೊಂದೆಡೆ ಬಯಲು ಸೀಮೆ ಹೊಂದಿರುವ ಗಡಿ ಜಿಲ್ಲೆ ಬೆಳಗಾವಿ, ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿದೆ. ಒಟ್ಟು 18 ವಿಧಾನಸಭಾ ಕ್ಷೇತ್ರಗಳಿವೆ. ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ 8, ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ 8 ಹಾಗೂ ಕೆನರಾ ಲೋಕಸಭಾ ವ್ಯಾಪ್ತಿಯಲ್ಲಿ 2 ವಿಧಾನಸಭೆ ಕ್ಷೇತ್ರಗಳಿವೆ. ಬಹುತೇಕ ಕಡೆ ಕಾಂಗ್ರೆಸ್‌-ಬಿಜೆಪಿ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ. ಕೆಲ ಕ್ಷೇತ್ರಗಳಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಮೇಲುಗೈ ಸಾಧಿಸುತ್ತ ಬಂದಿದೆ. ಸಕ್ಕರೆ ಲಾಬಿ ಕೂಡ ಇಲ್ಲಿ ಜೋರಾಗಿದೆ. ಇನ್ನು, ಜೆಡಿಎಸ್‌ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಈ ನಡುವೆ, ಗಡಿಭಾಗದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರಬಲ ಪೈಪೋಟಿ ಒಡ್ಡಿದೆ.

Tap to resize

Latest Videos

ನಿಪ್ಪಾಣಿ
ಜೊಲ್ಲೆ-ಕಾಕಾಸಾಹೇಬ ಪಾಟೀಲ ನಡುವೆ ನೇರ ಹಣಾಹಣಿ:
ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಈ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ವಂಚಿತ, ಜಾರಕಿಹೊಳಿ ಸಹೋದರರ ಆಪ್ತ ಉತ್ತಮ ಪಾಟೀಲ ಎನ್‌ಸಿಪಿಯಿಂದ ಕಣದಲ್ಲಿ ಉಳಿದಿದ್ದಾರೆ. ರಾಜಾರಾಮ್‌ ಪೋವಾರ್‌ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಎಂಇಎಸ್‌ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೀಗಾಗಿ, ಮರಾಠಿಗರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಮರಾಠ ಮತಗಳು ವಿಭಜನೆಯಾಗುವ ಸಾಧ್ಯತೆಗಳಿವೆ. ಚುನಾವಣಾ ಕಣದಲ್ಲಿ 8 ಅಭ್ಯರ್ಥಿಗಳಿದ್ದರೂ ಮೇಲ್ನೋಟಕ್ಕೆ ಇಲ್ಲಿ ಕೈ-ಕಮಲದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಎನ್‌ಸಿಪಿ ಅಭ್ಯರ್ಥಿ ಪಡೆಯುವ ಮತಗಳ ಆಧಾರದ ಮೇಲೆ ಫಲಿತಾಂಶ ಅವಲಂಬಿತವಾಗಿದೆ.

40% ಕಮಿಷನ್‌ನ ಬಿಜೆಪಿಗೆ 40 ಸೀಟು ಮಾತ್ರ ಕೊಡಿ: ರಾಹುಲ್‌ ಗಾಂಧಿ

ಚಿಕ್ಕೋಡಿ- ಸದಲಗಾ
ಹುಕ್ಕೇರಿ-ಕತ್ತಿ ನಡುವಿನ ಕದನ:
ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವರ ಪುತ್ರ, ಹಾಲಿ ಕಾಂಗ್ರೆಸ್‌ ಶಾಸಕ ಗಣೇಶ ಹುಕ್ಕೇರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಚಿಕ್ಕೋಡಿ ಮಾಜಿ ಸಂಸದ ರಮೇಶ ಕತ್ತಿ ಕಣಕ್ಕಿಳಿದಿದ್ದಾರೆ. ಹುಕ್ಕೇರಿ ಮತ್ತು ಕತ್ತಿ ಇಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರು. ತಮ್ಮದೇ ಆದ ವೈಯಕ್ತಿಕ ವರ್ಚಸ್ಸು, ಪ್ರಭಾವ ಹೊಂದಿದ್ದಾರೆ. ತಂದೆಯ ಹೆಸರು ಕೂಡ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ವರವಾಗುವ ಸಾಧ್ಯತೆಗಳಿವೆ. ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಕೂಡ ಇಲ್ಲಿ ಪ್ರಬಲರಾಗಿದ್ದಾರೆ. ಈ ಹಿಂದೆ ಚಿಕ್ಕೋಡಿ ಸಂಸದರಾಗಿರುವುದರಿಂದ ಕ್ಷೇತ್ರದ ಮೇಲೆ ಕತ್ತಿ ಅವರಿಗೂ ಹಿಡಿತವಿದೆ. ಆದರೆ, ರಮೇಶ ಕತ್ತಿ ಅವರು ಇದೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಈ ಕ್ಷೇತ್ರಕ್ಕೆ ಬಿಜೆಪಿಯಿಂದ ಮಹಾಂತೇಶ ಕವಟಗಿಮಠ, ಜಗದೀಶ ಕವಟಗಿಮಠ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದರು. ಕೊನೆಗೆ ಹೈಕಮಾಂಡ್‌ ಅಳೆದು ತೂಗಿ ರಮೇಶ ಕತ್ತಿಗೆ ಟಿಕೆಟ್‌ ನೀಡಿದೆ. ಈ ಕಣದಲ್ಲಿ ಒಟ್ಟು 11 ಅಭ್ಯರ್ಥಿಗಳಿದ್ದರೂ ಇಲ್ಲಿ ಕಾಂಗ್ರೆಸ್‌- ಬಿಜೆಪಿ ನಡುವೆಯೇ ಫೈಟ್‌ ಏರ್ಪಟ್ಟಿದೆ.

ಅಥಣಿ
ಅಥಣಿಯ ಧಣಿ ಯಾರಾಗ್ತಾರೆ?:
ಅಥಣಿ, ಈ ಬಾರಿಯ ಹೈವೋಲ್ಟೇಜ್‌ ಕ್ಷೇತ್ರ. ಲಕ್ಷ್ಮಣ ಸವದಿ ಮತ್ತು ಮಹೇಶ ಕುಮಟಳ್ಳಿ ನಡುವೆಯೇ ಇಲ್ಲಿ ಮತ್ತೊಮ್ಮೆ ಫೈಟ್‌ ಏರ್ಪಟ್ಟಿದೆ. ವಿಪರ್ಯಾಸವೆಂದರೆ 2018ರಲ್ಲಿ ಲಕ್ಷ್ಮಣ ಸವದಿ ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಮಹೇಶ ಕುಮಟಳ್ಳಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಕುಮಟಳ್ಳಿ ಗೆದ್ದು, ನಂತರ ನಡೆದ ‘ಆಪರೇಷನ್‌ ಕಮಲ’ಕ್ಕೆ ಒಳಗಾಗಿ ಬಿಜೆಪಿಗೆ ಸೇರಿ ಉಪ ಚುನಾವಣೆಯಲ್ಲಿ ಗೆದ್ದರು. ಈಗಲೂ ಮತ್ತೆ ಸವದಿ ಮತ್ತು ಕುಮಟಳ್ಳಿ ನಡುವೆಯೇ ಫೈಟ್‌ ಏರ್ಪಟ್ಟಿದೆ. ಆದರೆ, ಲಕ್ಷ್ಮಣ ಸವದಿ ಕಾಂಗ್ರೆಸ್‌ ಹುರಿಯಾಳಾಗಿದ್ದರೆ, ಮಹೇಶ ಕುಮಟಳ್ಳಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಟಿಕೆಟ್‌ ನೀಡಲಿಲ್ಲ ಎಂಬ ಕಾರಣಕ್ಕೆ ಸ್ವಾಭಿಮಾನದ ಪ್ರಶ್ನೆಯನ್ನು ಮುಂದಿಟ್ಟು ಸವದಿ ಅವರು ಕಾಂಗ್ರೆಸ್‌ ಸೇರಿ ಅದೇ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ತಮ್ಮ ಬೆಂಬಲಿಗನಿಗೆ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿರುವ ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ ಅವರ ಆಪ್ತ ಮಹೇಶ ಕುಮಟಳ್ಳಿ, ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಸವದಿ ಮತ್ತು ರಮೇಶ ನಡುವಿನ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಸವದಿ ಬಿಜೆಪಿ ತೊರೆದಿರುವುದು ಕಾಂಗ್ರೆಸ್‌ಗೆ ವರವಾಗುತ್ತಾ? ಅಥವಾ ಬಿಜೆಪಿಗೆ ನಷ್ಟವಾಗುತ್ತಾ? ಎಂಬುದನ್ನು ನಿರ್ಧರಿಸುವುದು ಮತದಾರನೇ. ಇಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ.

ಕಾಗವಾಡ
ಕಾಗೆಗೆ ಪಾಟೀಲ ನೇರ ಪೈಪೋಟಿ:
ಕಾಗವಾಡ ಕ್ಷೇತ್ರದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಬಿಜೆಪಿಯಿಂದ ಕಣಕ್ಕಿಳಿದರೆ, ಮಾಜಿ ಶಾಸಕ ಭರಮಗೌಡ ಕಾಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಕಣದಲ್ಲಿ 13 ಅಭ್ಯರ್ಥಿಗಳಿದ್ದರೂ ಇಲ್ಲಿ ಕಾಂಗ್ರೆಸ್‌- ಬಿಜೆಪಿ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ. ಜೆಡಿಎಸ್‌ನಿಂದ ಶ್ರೀಕಾಂತ ಪಡಸಲಗಿ ಸ್ಪರ್ಧಿಸಿದ್ದಾರೆ. 2018ರಲ್ಲಿ ಶ್ರೀಮಂತ ಕಾಂಗ್ರೆಸ್‌ನಿಂದ, ಕಾಗೆ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆದರೆ, ಶ್ರೀಮಂತ ಪಾಟೀಲ ‘ಆಪರೇಷನ್‌ ಕಮಲ’ಕ್ಕೆ ಒಳಗಾಗಿ ಬಿಜೆಪಿಗೆ ಬಂದಿದ್ದರಿಂದ ಸಹಜವಾಗಿ ರಾಜು ಕಾಗೆ ಕಾಂಗ್ರೆಸ್‌ ಸೇರಿದರು. ಈ ಬಾರಿ ಮತ್ತೆ ಇಬ್ಬರೂ ಪರಸ್ಪರ ಎದುರಾಳಿಗಳು. ಆದರೆ, ಶ್ರೀಮಂತ ಬಿಜೆಪಿಯಿಂದ, ರಾಜು ಕಾಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಈ ಮಧ್ಯೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದು ಈ ಕ್ಷೇತ್ರದ ಫಲಿತಾಂಶದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ.

ಕುಡಚಿ( ಎಸ್‌ಸಿ)
ಬಿಜೆಪಿಯ ರಾಜೀವ ಎದುರು ಹೊಸಮುಖ:
ಕುಡಚಿ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಪಿ.ರಾಜೀವ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಹೊಸಮುಖ ಮಹೇಂದ್ರ ತಮ್ಮಣ್ಣವರ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎಸ್‌.ಬಿ.ಘಾಟಗೆ ಅವರಿಗೆ ಟಿಕೆಟ್‌ ಕೈತಪ್ಪಿದ್ದರೂ ಅವರು ತಟಸ್ಥರಾಗಿದ್ದಾರೆ. ಮಾಜಿ ಶಾಸಕ ಎಸ್‌.ಬಿ.ಘಾಟಗೆ ಪುತ್ರ ಅಮಿತ್‌ ಘಾಟಗೆ 2018ರಲ್ಲಿ ಪಕ್ಷ ಟಿಕೆಟ್‌ ನೀಡಿತ್ತು. ಆದರೆ, ಅಮಿತ್‌ ಸೋಲುಂಡಿದ್ದರು. ಹೀಗಾಗಿ, ಇದೇ ಮೊದಲ ಬಾರಿಗೆ ಈ ಕ್ಷೇತ್ರದಿಂದ ಕಾಂಗ್ರೆಸ್‌ ಹೊಸಮುಖಕ್ಕೆ ಅವಕಾಶ ನೀಡಿದೆ. ಮಹೇಂದ್ರ ತಮ್ಮಣ್ಣವರ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಆಪ್ತ.

ರಾಯಬಾಗ(ಎಸ್‌ಸಿ)
ಐಹೊಳೆ, ಮಾಳಗಿ, ಮೋಹಿತೆ ನಡುವೆ ತ್ರಿಕೋನ ಸ್ಪರ್ಧೆ:
ರಾಯಬಾಗ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಹಾಲಿ ಶಾಸಕ ದುರ್ಯೋಧನ ಐಹೊಳೆ ನಾಲ್ಕನೇ ಬಾರಿಗೆ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ ವಿರುದ್ಧ ಬಂಡುಕೋರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಹಾವೀರ ಮೋಹಿತೆ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸ್ವಯಂ ನಿವೃತ್ತ ಐಎಎಸ್‌ ಅಧಿಕಾರಿ ಶಂಭು ಕಲ್ಲೋಳಕರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಜೊತೆಗೆ, ಕಳೆದ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಪ್ರದೀಪಕುಮಾರ ಮಾಳಗಿ ಈ ಬಾರಿ ಜೆಡಿಎಸ್‌ ಸೇರಿ, ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ಗೆ ಬಂಡಾಯ ಎದುರಾಗಿರುವುದರಿಂದ ಮತಗಳು ವಿಭಜನೆಯಾಗುವ ಸಾಧ್ಯತೆಗಳಿವೆ. ಕಣದಲ್ಲಿ 10 ಅಭ್ಯರ್ಥಿಗಳಿದ್ದರೂ ಮೇಲ್ನೋಟಕ್ಕೆ ಇಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಪೈಪೋಟಿ ಏರ್ಪಟ್ಟಿದೆ.

ಹುಕ್ಕೇರಿ
ಆಗ ಉಮೇಶ, ಈಗ ನಿಖಿಲ್‌ ಜತೆ ಎಬಿಪಿ ಫೈಟ್‌:
ಹುಕ್ಕೇರಿ ವಿಧಾನಸಭಾ ಕ್ಷೇತ್ರ ಕತ್ತಿ ಕುಟುಂಬದ ಭದ್ರಕೋಟೆ. ಇಲ್ಲಿ ಕತ್ತಿ ಸಹೋದರರು ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಈ ಕ್ಷೇತ್ರದಿಂದಲೇ ಸತತವಾಗಿ 8 ಬಾರಿ ಆಯ್ಕೆಯಾಗಿದ್ದ ದಿ.ಉಮೇಶ ಕತ್ತಿ ಅವರ ಅಕಾಲಿಕ ನಿಧನದಿಂದ ಈ ಕ್ಷೇತ್ರ ತೆರವುಗೊಂಡಿತ್ತು. ಈ ಕ್ಷೇತ್ರದ ಮೇಲೆ ಉಮೇಶ ಕತ್ತಿ ಪ್ರಬಲ ಹಿಡಿತ ಹೊಂದಿದ್ದರು. ಅವರ ನಂತರ ಈಗ ಅವರ ಪುತ್ರ ನಿಖಿಲ್‌ ಕತ್ತಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮಾಜಿ ಸಚಿವ ಎ.ಬಿ.ಪಾಟೀಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಜೆಡಿಎಸ್‌ಗೆ ಇಲ್ಲಿ ನೆಲೆ ಇಲ್ಲದಿದ್ದರೂ ಜೆಡಿಎಸ್‌ ಅಭ್ಯರ್ಥಿಯಾಗಿ ಬಸವರಾಜ ಪಾಟೀಲ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ನಿಖಿಲ್‌ ಕತ್ತಿ ಅವರಿಗೆ ತಮ್ಮ ತಂದೆಯ ಅಕಾಲಿಕ ನಿಧನದ ಅನುಕಂಪದ ಅಲೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಎ.ಬಿ.ಪಾಟೀಲ ಅವರನ್ನು ಕಣಕ್ಕಿಳಿಸಿ ಲಿಂಗಾಯತ, ಅಲ್ಪಸಂಖ್ಯಾತ, ದಲಿತ ಮತಗಳಿಗೆ ಕಾಂಗ್ರೆಸ್‌ ತಂತ್ರ ರೂಪಿಸುತ್ತಿದೆ. ಕಾಂಗ್ರೆಸ್‌-ಬಿಜೆಪಿ ನಡುವೆ ಜಿದ್ದಾಜಿದ್ದಿನ ಕದನ ಏರ್ಪಟ್ಟಿದೆ.

ಯಮಕನಮರಡಿ(ಎಸ್‌ಟಿ)
ಸತೀಶ ಜಾರಕಿಹೊಳಿಯೆದುರು ಹೊಸಮುಖ ಸ್ಪರ್ಧೆ:
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಕ್ಷೇತ್ರವಿದು. ಈ ಬಾರಿಯೂ ಸತೀಶ ಜಾರಕಿಹೊಳಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ಹೊಸಮುಖ ಬಸವರಾಜ ಹುಂದ್ರಿ ಸ್ಪರ್ಧಿಸಿದ್ದಾರೆ. ಬಿಜೆಪಿ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಮಾರುತಿ ಅಷ್ಟಗಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಸತೀಶ ಜಾರಕಿಹೊಳಿ ‘ಹಿಂದು’ ಪದದ ಕುರಿತು ನೀಡಿದ ಅವಹೇಳಕಾರಿ ಹೇಳಿಕೆಯನ್ನು ತನ್ನ ಅಸ್ತ್ರವನ್ನಾಗಿಸಿಕೊಂಡ ಬಿಜೆಪಿ, ಕ್ಷೇತ್ರದಲ್ಲಿ ಧರ್ಮಯುದ್ಧ ಸಾರಿತ್ತು. ಹಿಂದು ಸಮಾವೇಶಗಳನ್ನು ಸಂಘಟಿಸುವ ಮೂಲಕ ಸತೀಶ ಜಾರಕಿಹೊಳಿ ವಿರುದ್ಧ ಸಮರ ಸಾರಿತ್ತು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾರುತಿ ಅಷ್ಟಗಿ ಅವರು ಸತೀಶ ಜಾರಕಿಹೊಳಿ ಅವರಿಗೆ ತೀವ್ರ ಪೈಪೋಟಿ ಒಡ್ಡಿದ್ದರು. ಕೆಲವೇ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು. ಬಿಜೆಪಿ ಹೊಸಮುಖಕ್ಕೆ ಅವಕಾಶ ನೀಡಿರುವುದು ಕಾಂಗ್ರೆಸ್‌ಗೆ ಅನುಕೂಲವಾಗಬಹುದು. ಮಾರುತಿ ಅಷ್ಟಗಿಗೆ ಅನುಕಂಪ ಕೂಡ ಇರುವುದರಿಂದ ಪೈಪೋಟಿ ನೀಡುವುದನ್ನು ಅಲ್ಲಗಳೆಯುವಂತಿಲ್ಲ.

ಅರಭಾವಿ
ಬಾಲಚಂದ್ರ ವಿರುದ್ಧ ದಳವಾಯಿ ಲಡಾಯಿ:
ಅರಭಾವಿಯಲ್ಲಿ ವಾಲ್ಮೀಕಿ ಸಮಾಜದ ಪ್ರಭಾವಿ ನಾಯಕ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಕ್ಷೇತ್ರದಿಂದ ಈಗಾಗಲೇ ಐದು ಬಾರಿ ಆಯ್ಕೆಯಾಗಿ ಆರನೇ ಬಾರಿ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ. ಕಾಂಗ್ರೆಸ್‌ನಿಂದ ಅರವಿಂದ ದಳವಾಯಿ ಸ್ಪರ್ಧೆ ಮಾಡುತ್ತಿದ್ದಾರೆ. ಲಿಂಗಾಯತ ಮತದಾರರೇ ಅಧಿಕವಾಗಿರುವ ಸಾಮಾನ್ಯ ಕ್ಷೇತ್ರದಲ್ಲಿ ಹಿಂದುಳಿದ ಜನಾಂಗದ ಬಾಲಚಂದ್ರ ಜಾರಕಿಹೊಳಿಗೆ ಕ್ಷೇತ್ರದ ಜನ ಮಣೆ ಹಾಕಿದ್ದು ವಿಶೇಷ. ಪಕ್ಷಕ್ಕಿಂತ ಇಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿರುವ ಬಾಲಚಂದ್ರ ಜಾರಕಿಹೊಳಿ ಅವರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌, ಇತರ ಪಕ್ಷಗಳು ರಣತಂತ್ರ ಹೆಣೆದಿವೆ. ಕಾಂಗ್ರೆಸ್‌ ಟಿಕೆಟ್‌ ವಂಚಿತ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಹೀಗಾಗಿ, ಇಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಭೀತಿ ಎದುರಾಗಿದೆ.

ಗೋಕಾಕ
ರಮೇಶ ವಿರುದ್ಧ ಹೊಸಮುಖ ಪ್ರಯೋಗ:
ರಾಜ್ಯದ ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ಒಂದಾಗಿರುವ ಗೋಕಾಕದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿಯವರು 7ನೇ ಬಾರಿಗೆ ತಮ್ಮ ಅದೃಷ್ಟಪರೀಕ್ಷೆಗೆ ಇಳಿದಿದ್ದು, ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌, ಹೊಸಮುಖ ಡಾ.ಮಹಾಂತೇಶ ಕಡಾಡಿಗೆ ಟಿಕೆಟ್‌ ನೀಡಿದೆ. ರಮೇಶ ಜಾರಕಿಹೊಳಿ ಅವರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಅವರ ರಾಜಕೀಯ ಬದ್ಧ ವೈರಿಗಳೆಲ್ಲರೂ ಒಂದಾಗಿ, ಚುನಾವಣೆ ಎದುರಿಸುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಚನ್ನಬಸಪ್ಪ ಗಿಡ್ಡನವರ ನಾಮಪತ್ರ ಹಿಂಪಡೆದು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ. ಲಿಂಗಾಯತ ಮತಗಳೇ ಇಲ್ಲಿ ನಿರ್ಣಾಯಕ. ಕಣದಲ್ಲಿ 13 ಅಭ್ಯರ್ಥಿಗಳಿದ್ದರೂ ಕಾಂಗ್ರೆಸ್‌-ಬಿಜೆಪಿ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ. ಹಿಂದಿನ ಬಾರಿ ರಮೇಶ ವಿರುದ್ಧ ಸಮರ್ಥವಾಗಿ ಸ್ಪರ್ಧೆ ಒಡ್ಡಿದ್ದ ಅಶೋಕ ಪೂಜಾರಿಗೆ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದೆ.

ಬೆಳಗಾವಿ ಉತ್ತರ
ಕೈ, ಕಮಲದ ನಡುವೆ ಎಂಇಎಸ್‌ ಪೈಪೋಟಿ:
ಬೆಳಗಾವಿ ಉತ್ತರದಲ್ಲಿ ಈ ಬಾರಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಎರಡೂ ಹೊಸಮುಖಗಳಿಗೆ ಮಣೆ ಹಾಕಿವೆ. ಬಿಜೆಪಿಯಿಂದ ಡಾ.ರವಿ ಪಾಟೀಲ ಕಣದಲ್ಲಿದ್ದರೆ, ಮಾಜಿ ಶಾಸಕ ಫಿರೋಜ್‌ ಸೇಠ್‌ ಅವರ ಸಹೋದರ ಆಸೀಫ್‌ ಸೇಠ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಅಭ್ಯರ್ಥಿ ಅಮರ ಯಳ್ಳೂರಕರ ಪೈಪೋಟಿ ಒಡ್ಡಿದ್ದಾರೆ. ಜೆಡಿಎಸ್‌ನಿಂದ ರೈತ ಮುಖಂಡ ಶಿವಾನಂದ ಮುಗಳಿಹಾಳ, ಆಪ್‌ನಿಂದ ಪತ್ರಕರ್ತ ರಾಜಕುಮಾರ ಟೋಪಣ್ಣವರ ಸ್ಪರ್ಧಿಸಿದ್ದಾರೆ. ಇವರಿಬ್ಬರು ಲಿಂಗಾಯತ ಸಮುದಾಯದವರಾಗಿರುವುದರಿಂದ ಲಿಂಗಾಯತ ಮತ ವಿಭಜನೆಯಾಗುವ ಸಾಧ್ಯತೆಯಿದೆ. ಕಣದಲ್ಲಿ 15 ಅಭ್ಯರ್ಥಿಗಳಿದ್ದರೂ ಇಲ್ಲಿ ಕೈ, ಕಮಲ ಮತ್ತು ಎಂಇಎಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಬೆಳಗಾವಿ ದಕ್ಷಿಣ
ಅಭಯ ಪಾಟೀಲಗೆ ಎಂಇಎಸ್‌ನದ್ದೇ ಸವಾಲು:
ಭಾಷಾಭಿಮಾನದ ಮೂಲಕವೇ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುತ್ತ ಬಂದಿರುವ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ರಣಕಣ ರಂಗೇರಿದೆ. 2004ರಲ್ಲಿ ಹಿರೇಬಾಗೇವಾಡಿ ಕ್ಷೇತ್ರದಿಂದ ಬಿಜೆಪಿಯ ಅಭಯ ಪಾಟೀಲ ಆಯ್ಕೆಯಾಗಿದ್ದರು. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ವೇಳೆ ಬೆಳಗಾವಿ ದಕ್ಷಿಣದಿಂದ ಗೆಲುವು ಸಾಧಿಸಿದರು. 2013ರಲ್ಲಿ ಎಂಇಎಸ್‌ ಬೆಂಬಲಿತ ಸಂಭಾಜಿ ಪಾಟೀಲ ವಿರುದ್ಧ ಅಭಯ ಪರಾಭವಗೊಂಡಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಅಭಯ ಪಾಟೀಲ ಮರು ಆಯ್ಕೆಯಾದರು. ಈ ಬಾರಿ ಮತ್ತೆ ಬಿಜೆಪಿಯಿಂದ ತಮ್ಮ ಅದೃಷ್ಟಪರೀಕ್ಷೆಗೆ ನಿಂತಿದ್ದಾರೆ. ಅಭಯ ಪಾಟೀಲರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ ರಣತಂತ್ರ ಹೆಣೆದಿವೆ. ಕಾಂಗ್ರೆಸ್‌ನಿಂದ ಹೊಸಮುಖ ಪ್ರಭಾವತಿ ಮಾಸ್ತಮರಡಿ ಕಣದಲ್ಲಿದ್ದಾರೆ. ಪ್ರಖರ ಹಿಂದುತ್ವ ಹೋರಾಟಗಾರ ರಮಾಕಾಂತ ಕುಂಡೋಸ್ಕರ್‌ ಅವರು ಎಂಇಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಭಾಷಾ ರಾಜಕೀಯವೇ ಇಲ್ಲಿನ ಬಂಡವಾಳ. ಎಲ್ಲ ಅಭ್ಯರ್ಥಿಗಳು ಭಾಷೆಯ ಹೆಸರಿನಲ್ಲೇ ಮತದಾರರನ್ನು ಓಲೈಸುವ ಯತ್ನ ನಡೆಸಿದ್ದಾರೆ. ಮರಾಠ ಮತಗಳೇ ಇಲ್ಲಿ ನಿರ್ಣಾಯಕ.

ಬೆಳಗಾವಿ ಗ್ರಾಮೀಣ
ಹೆಬ್ಬಾಳಕರಗೆ ರಮೇಶ ಆಪ್ತ ನಾಗೇಶ ಎದುರಾಳಿ:
ಬೆಳಗಾವಿ ಗ್ರಾಮೀಣ, ರಾಜ್ಯದ ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ಒಂದು. ಕಾಂಗ್ರೆಸ್‌ನ ಪ್ರಭಾವಿ ನಾಯಕಿ ಲಕ್ಷ್ಮೇ ಹೆಬ್ಬಾಳಕರ ಮತ್ತೊಮ್ಮೆ ಕಾಂಗ್ರೆಸ್‌ನಿಂದ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೆಬ್ಬಾಳಕರ ವಿರುದ್ಧ ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತ, ಬಿಜೆಪಿಯ ಹೊಸಮುಖ ನಾಗೇಶ ಮನ್ನೋಳಕರ ಪ್ರಮುಖ ಎದುರಾಳಿ. ಕಳೆದ ಚುನಾವಣೆಯಲ್ಲಿ ಲಕ್ಷ್ಮೇ ಹೆಬ್ಬಾಳಕರ ಗೆಲುವಿಗೆ ಶ್ರಮಿಸಿದ್ದ ರಮೇಶ ಜಾರಕಿಹೊಳಿ ಈ ಬಾರಿ ಅವರನ್ನು ಸೋಲಿಸಲು ಶತಾಯಗತಾಯ ಯತ್ನ ನಡೆಸಿದ್ದಾರೆ. ಲಕ್ಷ್ಮೇ ಅವರನ್ನು ಸೋಲಿಸಲು ಪಣತೊಟ್ಟಜಾರಕಿಹೊಳಿ, ಕೊನೆಗೂ ತಮ್ಮ ಆಪ್ತ ನಾಗೇಶಗೆ ಬಿಜೆಪಿ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮರಾಠ ಮತಗಳೇ ಇಲ್ಲಿ ನಿರ್ಣಾಯಕ. ಇಲ್ಲಿಯೂ ಭಾಷಾ ರಾಜಕೀಯ ಮೇಲುಗೈ ಸಾಧಿಸುತ್ತ ಬಂದಿದೆ. ಕಾಂಗ್ರೆಸ್‌, ಬಿಜೆಪಿ ಕದನದ ನಡುವೆಯೇ ಮಹಾರಾಷ್ಟ್ರ ಏಕೀಕರಣ ಸಮಿತಿ ತೀವ್ರ ಪೈಪೋಟಿಯೊಡ್ಡಿದೆ. ಎಂಇಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಆರ್‌.ಎಂ.ಚೌಗಲೆ ಕಣದಲ್ಲಿದ್ದಾರೆ.

ಸವದತ್ತಿ ಯಲ್ಲಮ್ಮ
ಯಲ್ಲಮ್ಮನ ಆಶೀರ್ವಾದ ಯಾರ ಮೇಲೆ?:
ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದ ದಿ.ಆನಂದ ಮಾಮನಿ ಅವರ ಅಕಾಲಿಕ ನಿಧನದಿಂದ ಈ ಕ್ಷೇತ್ರದ ಶಾಸಕ ಸ್ಥಾನ ತೆರವುಗೊಂಡಿತ್ತು. ಆನಂದ ಮಾಮನಿ ಅವರ ಪತ್ನಿ ರತ್ನಾ ಮಾಮನಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಇವರಿಗೆ ಅನುಕಂಪದ ಅಲೆ ಸಿಗುವ ಲೆಕ್ಕಾಚಾರ ಬಿಜೆಪಿಯದು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಪ್ತ ವಿಶ್ವಾಸ ವೈದ್ಯ ಕಾಂಗ್ರೆಸ್‌ನಿಂದ ಕಣದಲ್ಲಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ವಂಚಿತ ಸೌರವ ಚೋಪ್ರಾ, ಜೆಡಿಎಸ್‌ನಿಂದ ಕಣದಲ್ಲಿದ್ದಾರೆ. ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ ಯತ್ನಿಸಿದರೆ, ಕ್ಷೇತ್ರವನ್ನು ತಮ್ಮ ವಶಕ್ಕೆ ಪಡೆಯಲು ಕಾಂಗ್ರೆಸ್‌, ಜೆಡಿಎಸ್‌ ಶತಾಯಗತಾಯ ಯತ್ನ ನಡೆಸಿವೆ. ಇಲ್ಲಿ ಕೈ, ಕಮಲ, ತೆನೆಹೊತ್ತ ಮಹಿಳೆ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಲಿಂಗಾಯತ ಮತಗಳೇ ನಿರ್ಣಾಯಕವಾಗಿವೆ.

ರಾಮದುರ್ಗ
ಕೈ, ಕಮಲ ನಡುವೆ ಜಿದ್ದಾಜಿದ್ದಿ:
ರಾಮದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಹೊಸಮುಖ ಬೆಂಗಳೂರು ಮೂಲದ ಉದ್ಯಮಿ ಚಿಕ್ಕರೇವಣ್ಣ ಅಜ್ಜಪ್ಪ ಅವರಿಗೆ ಬಿಜೆಪಿ ಮಣೆ ಹಾಕಿದೆ. ಚಿಕ್ಕರೇವಣ್ಣ, ಕ್ಷೇತ್ರಕ್ಕೆ ಹೊಸಬರು. ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್‌ ನೀಡಿಲ್ಲ. ಟಿಕೆಟ್‌ ವಂಚಿತ ಮಹಾದೇವಪ್ಪ ಯಾದವಾಡ ಮತ್ತು ಮಲ್ಲಣ್ಣ ಯಾದವಾಡ ಅವರ ಅಸಮಾಧಾನ ಶಮನಗೊಳಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಅಶೋಕ ಪಟ್ಟಣ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಪ್ರಕಾಶ ಮುಧೋಳ ಸ್ಪರ್ಧಿಸಿದ್ದಾರೆ. ಕಣದಲ್ಲಿ ಒಟ್ಟು 13 ಅಭ್ಯರ್ಥಿಗಳಿದ್ದರೂ ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಲಿಂಗಾಯತ ಮತಗಳೇ ನಿರ್ಣಾಯಕ.

ಬೈಲಹೊಂಗಲ
ಕಮಲಕ್ಕೆ ಬಂಡಾಯದ ಸವಾಲು:
ಬೈಲಹೊಂಗಲದಲ್ಲಿ ಈ ಬಾರಿ ಕಳೆದ ಸಲದ ಅಭ್ಯರ್ಥಿಗಳದ್ದೇ ಮುಖಾಮುಖಿ. ಈ ಬಾರಿಯೂ ಬಿಜೆಪಿಗೆ ಬಂಡಾಯದ ಭೀತಿ ಎದುರಾಗಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಮಹಾಂತೇಶ ಕೌಜಲಗಿ ಮತ್ತೊಮ್ಮೆ ತಮ್ಮ ಅದೃಷ್ಟಪರೀಕ್ಷೆಗೆ ನಿಂತಿದ್ದಾರೆ. 2018ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್‌ ವಂಚಿತ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಪಕ್ಷೇತರರಾಗಿ ಕಣದಲ್ಲಿದ್ದು, ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಕಳೆದ ಬಾರಿ ವಿಶ್ವನಾಥ ಪಾಟೀಲ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಜಗದೀಶ ಮೆಟಗುಡ್ಡ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು. ಜೆಡಿಎಸ್‌ನಿಂದ ಶಂಕರ ಮಾಡಲಗಿ ಕಣದಲ್ಲಿದ್ದಾರೆ. ಇಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಕಾಂಗ್ರೆಸ್‌, ಬಿಜೆಪಿ, ಪಕ್ಷೇತರ ಅಭ್ಯರ್ಥಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಬಿಜೆಪಿ ಕಾಲದಲ್ಲಿ ಎಲ್ಲಾ ದುಬಾರಿ, ರೈತರಿಗೆ ಸಂಕಷ್ಟ: ಪ್ರಿಯಾಂಕಾ ಗಾಂಧಿ ಕಿಡಿ

ಖಾನಾಪುರ
ಅಂಜಲಿ, ಹಲಗೇಕರ, ನಾಸೀರ್‌ ಜಿದ್ದಾಜಿದ್ದಿ:
ಭಾಷಾ ರಾಜಕೀಯವೇ ಮೇಲುಗೈ ಸಾಧಿಸುತ್ತ ಬಂದಿರುವ ಖಾನಾಪುರದಲ್ಲಿ ಈ ಬಾರಿಯೂ ಕಳೆದ ಸಲದ ಅಭ್ಯರ್ಥಿಗಳದ್ದೇ ಮುಖಾಮುಖಿ. ಕಾಂಗ್ರೆಸ್‌ ಶಾಸಕಿ ಡಾ.ಅಂಜಲಿ ನಿಂಬಾಳ್ಕರ ಎರಡನೇ ಅವಧಿಗೆ ಕಾಂಗ್ರೆಸ್‌ನಿಂದ ಆಯ್ಕೆ ಬಯಸಿದರೆ, ಬಿಜೆಪಿಯಿಂದ ವಿಠ್ಠಲ ಹಲಗೇಕರ ಎರಡನೇ ಬಾರಿ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ನಿಂದ ನಾಸೀರ್‌ ಬಗವಾನ್‌ ಕಣದಲ್ಲಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಅಭ್ಯರ್ಥಿಯಾಗಿ ಮುರಳೀಧರ ಪಾಟೀಲ ಸ್ಪರ್ಧಿಸಿದ್ದಾರೆ. ಇಲ್ಲಿಯೂ ಮರಾಠ ಮತಗಳೇ ನಿರ್ಣಾಯಕ. ಕಣದಲ್ಲಿ 13 ಅಭ್ಯರ್ಥಿಗಳಿದ್ದರೂ ಮೇಲ್ನೋಟಕ್ಕೆ ಇಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.

ಚನ್ನಮ್ಮನ ಕಿತ್ತೂರು
ದೊಡ್ಡಗೌಡರ ಮಣಿಸಲು ಪಾಟೀಲ ಕಣಕ್ಕೆ:
ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಬಿಜೆಪಿಯಿಂದ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಮಹಾಂತೇಶ ದೊಡ್ಡಗೌಡರ ಗೆಲುವಿನ ಓಟಕ್ಕೆ ಲಗಾಮು ಹಾಕಲು ಕಾಂಗ್ರೆಸ್‌, ಬಾಬಾಸಾಹೇಬ ಪಾಟೀಲ ಅವರನ್ನು ಕಣಕ್ಕಿಳಿಸಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್‌ ವಂಚಿತರಾಗಿದ್ದ ಬಾಬಾಸಾಹೇಬ ಪಾಟೀಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಕಾಂಗ್ರೆಸ್‌ ವಿರುದ್ಧ ಬಂಡಾಯ ಎದ್ದಿದ್ದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಶಾಸಕ ದಿ.ಡಿ.ಬಿ.ಇನಾಮದಾರ ಸ್ಪರ್ಧಿಸಿದ್ದರು. ಕಾಂಗ್ರೆಸ್‌ಗೆ ಎದುರಾದ ಬಂಡಾಯದಿಂದಾಗಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಕಾಂಗ್ರೆಸ್‌-ಬಿಜೆಪಿ ನಡುವೆ ಜಿದ್ದಾಜಿದ್ದಿನ ಕದನ ಏರ್ಪಟ್ಟಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!