ಪ್ರಧಾನಿ ಮೋದಿ ಮಂಗಳೂರು ಭೇಟಿ ವೇಳೆ ಒಂದೇ ಕಲ್ಲಿಗೆ ಎರಡು ಹಕ್ಕಿ ಬಿಜೆಪಿ ಗುರಿ..!

By Kannadaprabha NewsFirst Published Aug 28, 2022, 4:30 AM IST
Highlights

ಕರಾವಳಿ ಬಿಜೆಪಿ ನಾಯಕರ ಪರ ಟ್ರೋಲ್‌ ಶುರು, ಬೂತ್‌ ಭೇಟಿ ವೇಳೆ ಪ್ರಧಾನಿ ಕಾರ್ಯಕ್ರಮಕ್ಕೂ ಆಹ್ವಾನ, ಕಾರ್ಯಕರ್ತರ ಅಸಮಾಧಾನಕ್ಕೂ ಶಮನ

ಮಂಗಳೂರು(ಆ.28): ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಘಟನೆ ಮುಂದಿಟ್ಟುಕೊಂಡು ಕರಾವಳಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನದ ಪೋಸ್ಟರ್‌ಗಳ ವೈರಲ್‌ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಪಕ್ಷದಿಂದಲೇ ಪ್ರತಿ ಪೋಸ್ಟರ್‌ ಟ್ರೋಲ್‌ ಶುರುವಾಗಿದೆ. ಮಂಗಳೂರಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಕಾರ್ಯಕರ್ತರನ್ನು ಕರೆತರುವ ದಿಶೆಯಲ್ಲಿ ಬೂತ್‌ ಭೇಟಿಯಲ್ಲಿರುವ ಮುಖಂಡರು, ಏಕಕಾಲಕ್ಕೆ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ.

ನಾಯಕರ ವಿರುದ್ಧದ ಅಸಮಾಧಾನ ತಣಿಯಬೇಕು. ಸಮಾವೇಶಕ್ಕೂ ಕಾರ್ಯಕರ್ತರೂ ಆಗಮಿಸಬೇಕು. ಈ ಎರಡು ಅಜೆಂಡಾ ಇರಿಸಿಕೊಂಡು ಪಕ್ಷ ಮುಖಂಡರು ಬೂತ್‌ ಭೇಟಿ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರ ವಿರುದ್ಧದ ಅಸಮಾಧಾನಿತರ ಟ್ರೋಲ್‌ ಹಿಂದೆ ಕಾಂಗ್ರೆಸ್‌ ಕೈವಾಡವನ್ನು ಆರೋಪಿಸುವ ಮುಖಂಡರು, ಈ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಲು ಹೊರಟಿದ್ದಾರೆ.

ಮಂಗಳೂರು: ಮೋದಿ ಸಮಾವೇಶಕ್ಕೆ ಮಳೆ ಭೀತಿ, ಕಾರ್ಯಕ್ರಮಕ್ಕೆ ವಿಶಾಲ ಜರ್ಮನ್‌ ಪೆಂಡಾಲ್‌ ಅಳವಡಿಕೆ

ಪ್ರವೀಣ್‌ ನೆಟ್ಟಾರು ಹತ್ಯೆ ಘಟನೆ ಬಳಿಕ ಕರಾವಳಿಯಲ್ಲಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಭುಗಿಲೇಳುವಂತೆ ಮಾಡಿತ್ತು. ಈ ಅಸಮಾಧಾನವನ್ನು ಪ್ರಧಾನಿ ಮಂಗಳೂರು ಸಮಾವೇಶಕ್ಕೂ ಮುನ್ನವೇ ತಣಿಸಲು ಪಕ್ಷ ನಾಯಕರು ಹರಸಾಹಸ ಪಡುತ್ತಿದ್ದಾರೆ. ಬಿಜೆಪಿಯಲ್ಲಿ ಇರುವ ಅಸಮಾಧಾನಿತರನ್ನು ಕಾಂಗ್ರೆಸ್‌ ಎತ್ತಿಕಟ್ಟುತ್ತಿದೆ ಎನ್ನುವುದು ಪಕ್ಷ ಮುಖಂಡರ ಆರೋಪ. ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕರ ವಿರುದ್ಧ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ ನಡೆಯುತ್ತಿದೆ.

ಕರಾವಳಿ ಬಿಜೆಪಿ ನಾಯಕರ ಬೆನ್ನಿಗೆ ನಿಂತಿರುವ ಸಂಘಪರಿವಾರ ಮುಖಂಡರು ಈಗಾಗಲೇ ಅಖಾಡಕ್ಕೆ ಇಳಿದು ಅಸಮಾಧಾನಿತರನ್ನು ಸಮಾಧಾನ ಪಡಿಸುವ ತಂತ್ರ ನಡೆಸಿದ್ದಾರೆ. ಅಸಮಾಧಾನಿತರ ಮನೆಗಳಿಗೆ ತೆರಳಿ ಸಮಾಧಾನ, ಮನವರಿಕೆಯ ಮಾತನ್ನಾಡಿದ್ದಾರೆ. ಆದರೆ ಈ ಪ್ರಯತ್ನಕ್ಕೆ ವ್ಯತಿರಿಕ್ತವಾಗಿ ಅಸಮಾಧಾನಿತರ ಪರವಾಗಿ ನಾಯಕರ ವಿರುದ್ಧವಾಗಿ ಜಾಲತಾಣದಲ್ಲಿ ಗುಂಪೊಂದು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ನಡೆಸಲಾರಂಭಿಸಿದೆ. ಇದಕ್ಕೆ ಸೆಡ್ಡು ಹೊಡೆಯಲು ಬಿಜೆಪಿಯಿಂದಲೂ ನಾಯಕರ ಪರವಾಗಿ ಪೋಸ್ಟರ್‌ ಹಾಗೂ ಸಾಧನೆಯ ವಿಡಿಯೋ ತುಣುಕು ತಲುಪಿಸುವ ಪ್ರಯತ್ನ ನಡೆಯುತ್ತಿದೆ.

30 ಎಕರೆ ಪ್ರದೇಶದಲ್ಲಿ ಸಮಾವೇಶ: ಮೋದಿ ಮಂಗ್ಳೂರು ರ‍್ಯಾಲಿಗೆ ಭಾರಿ ಸಿದ್ಧತೆ

ಎಲ್ಲ ಬೂತ್‌ ಅಭಿಯಾನ:

ಸೆ.2ರ ಮೋದಿ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ 1,861 ಬೂತ್‌ಗಳನ್ನು ಬಿಜೆಪಿ ಮುಖಂಡರು ಸಂಪರ್ಕಿಸುತ್ತಿದ್ದಾರೆ. ಪ್ರತಿ ಬೂತ್‌ನಿಂದ 100 ಮಂದಿ ಸಮಾವೇಶಕ್ಕೆ ಆಗಮಿಸುವ ಗುರಿ ಇರಿಸಲಾಗಿದೆ. ಎಲ್ಲ 8 ಅಸೆಂಬ್ಲಿ ಕ್ಷೇತ್ರಗಳಿಂದ 1 ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆತರುವ ಪ್ರಯತ್ನ ನಡೆಸಲಾಗಿದೆ. ಇದಕ್ಕಾಗಿ ಬೂತ್‌ ಪ್ರಮುಖರ ಜತೆ ಬಿಜೆಪಿ ಜನಪ್ರತಿನಿಧಿಗಳು, ಮುಖಂಡರು ನಿರಂತರ ಓಡಾಟ, ಸಂಪರ್ಕ ನಡೆಸುತ್ತಿದ್ದಾರೆ. ಇದಕ್ಕಾಗಿ ಪ್ರತ್ಯೇಕವಾಗಿ ವಾಹನ ಪ್ರಮುಖರನ್ನು ನೇಮಕ ಮಾಡಿದ್ದು, ಇವರಿಗೆ ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆತರುವ ಹೊಣೆ ವಹಿಸಲಾಗಿದೆ. ಇದರ ಜತೆಯಲ್ಲೇ ನಾಯಕರ ವಿರುದ್ಧದ ಅಸಮಾಧಾನ ತೊಡೆದುಹಾಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಮೋದಿ ಸಮಾವೇಶ ವೇಳೆಗೆ ಅಲ್ಲಲ್ಲಿ ಇರುವ ಅಸಮಾಧಾನ ಪೂರ್ತಿ ನಿವಾರಣೆಯಾಗಿರಬೇಕು ಎಂದು ಶತಾಯಗತಾಯ ಪ್ರಯತ್ನ ನಡೆಸಲಾಗುತ್ತಿದೆ.

ಬಿಜೆಪಿ ಸಂಘಟನೆಯ ಭದ್ರಕೋಟೆ ಕರಾವಳಿ ಆಗಿದ್ದು, ಇದರಲ್ಲಿ ಒಡಕು ಮೂಡಿಸಲು ಕಾಂಗ್ರೆಸ್‌ ಬಹಳ ಪ್ರಯತ್ನ ನಡೆಸುತ್ತಿದೆ. ವ್ಯಕ್ತಿಗತ ಅಸಮಾಧಾನಿತರನ್ನು ಗುರುತಿಸಿ ಆ ಮೂಲಕವೂ ನಾಯಕರ ವಿರುದ್ಧ ಅಪಪ್ರಚಾರ ನಡೆಸುವ ವ್ಯವಸ್ಥಿತ ಷಡ್ಯಂತರ ನಡೆಸಲಾಗುತ್ತಿದೆ. ಯಾವುದೇ ಅಪಪ್ರಚಾರಕ್ಕೆ ತಲೆಬಾಗುವ ದುರ್ಬಲ ಹೈಕಮಾಂಡ್‌ ಬಿಜೆಪಿಯಲ್ಲಿ ಇಲ್ಲ. ಬೇಡಿಕೆ, ಅಪೇಕ್ಷೆಗಳು ಸಹಜ, ಹಾಗೆಂದು ಇನ್ನೊಬ್ಬರ ತೇಜೋವಧೆ ಮಾಡುವುದು ಸರಿಯಲ್ಲ. ಅಪಪ್ರಚಾರ ನಡೆಸಿ ಅಧಿಕಾರ ಪಡೆಯುತ್ತೇವೆ ಎನ್ನುವುದು ಹಗಲುಗನಸು. ಪಕ್ಷದ ನೈಜ ಕಾರ್ಯಕರ್ತರು ಎಂದಿಗೂ ತತ್ವ ಸಿದ್ಧಾಂತವನ್ನು ಬಿಟ್ಟುಕೊಡುವುದಿಲ್ಲ, ಅಪಪ್ರಚಾರವನ್ನೂ ನಡೆಸುವುದಿಲ್ಲ, ಅದಕ್ಕೆ ಕಿವಿ ಕೂಡ ಕೊಡುವುದಿಲ್ಲ ಅಂತ ದ.ಕ. ಬಿಜೆಪಿ ಅಧ್ಯಕ್ಷ ಸುದರ್ಶನ್‌ ಮೂಡುಬಿದಿರೆ ತಿಳಿಸಿದ್ದಾರೆ.  
 

click me!