ನನ್ನತ್ರ ನಿಮ್ಮಾಟ ನಡೆಯಲ್ಲ: ಅಶ್ವತ್ಥ್‌ಗೆ ಎಚ್‌ಡಿಕೆ ಎಚ್ಚರಿಕೆ

By Govindaraj S  |  First Published Aug 11, 2022, 5:10 AM IST

ಕರಾವಳಿ ಸರಣಿ ಹತ್ಯೆ, ಮಳೆ, ನೆರೆ ಬಗ್ಗೆ ವಿಧಾನಮಂಡಲ ಅಧಿವೇಶನ ನಡೆಸಬೇಕು ಎಂದು ತಮ್ಮ ಒತ್ತಾಯದ ಬಗ್ಗೆ ಅಪಹಾಸ್ಯ ಮಾಡಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.


ಬೆಂಗಳೂರು (ಆ.11): ಕರಾವಳಿ ಸರಣಿ ಹತ್ಯೆ, ಮಳೆ, ನೆರೆ ಬಗ್ಗೆ ವಿಧಾನಮಂಡಲ ಅಧಿವೇಶನ ನಡೆಸಬೇಕು ಎಂದು ತಮ್ಮ ಒತ್ತಾಯದ ಬಗ್ಗೆ ಅಪಹಾಸ್ಯ ಮಾಡಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ‘ಅಶ್ವತ್ಥನಾರಾಯಣ ಹಲ್ಲು ಹಿಡಿದು ಮಾತನಾಡಿದರೆ ಉತ್ತಮ. ಡಿಕೆ ಬ್ರದರುಗಳ ಮುಂದೆ ತೋಳೇರಿಸಿದಂತೆ ನನ್ನ ಹತ್ತಿರ ನಡೆಯಲ್ಲ. ನನ್ನ ಶಕ್ತಿ ಏನೆಂಬುದು ನಿಮಗೆ, ನಿಮ್ಮ ಪಕ್ಷಕ್ಕೆ ಚೆನ್ನಾಗಿ ಗೊತ್ತು. ಈಗಲೂ ಸವಾಲು ಹಾಕುತ್ತಿದ್ದೇನೆ. ಕಲಾಪ ಕರೆದು ನೋಡಿ, ನಿಮ್ಮದೆಲ್ಲಾ ಬಿಚ್ಚಿಡುತ್ತೇನೆ. ಅನುಮಾನವೇ ಬೇಡ’ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಬುಧವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ನಕಲಿ ಸರ್ಟಿಫಿಕೇಟ್‌ ಡೀಲರ್‌ ಯಾರು? ಬ್ಲ್ಯಾಕ್‌ ಮೇಲರ್‌ ಯಾರು? ಬಿಲ್ಡರ್‌ ಯಾರು? ಎನ್ನುವುದು ನನಗಿಂತ ನಿಮ್ಮ ಪಕ್ಷದ ನಾಯಕರಿಗೆ ಚೆನ್ನಾಗಿ ಗೊತ್ತಿದೆ. ಬಿಲ್‌ ಮಾಡಿಕೊಳ್ಳಬೇಕಾದರೆ ಯಾರಿಗೆಲ್ಲಾ ಬ್ಲಾಕ್‌ಮೇಲ್‌ ಮಾಡಿದಿರಿ? ಅಕ್ರಮಗಳ ಗೂಡಿಗೆ ಯಾರಿಂದ ಬೆಂಕಿ ಹಾಕಿಸಿದಿರಿ? ಎನ್ನುವುದನ್ನೂ ಬಲ್ಲೆ. ಮಲ್ಲೇಶ್ವರದಲ್ಲಿ ನೀವು ನಡೆಸಿರುವ ಕರ್ಮಕಾಂಡವನ್ನು ಬಿಚ್ಚಿಡುತ್ತೇನೆ. ಕಲಾಪ ನಡೆಸಿ ನೋಡಿ ಎಂದು ಸವಾಲು ಹಾಕಿರುವ ಅವರು, ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ ಎನ್ನುವಂತೆ ಮಲ್ಲೇಶ್ವರದಲ್ಲಿ ನಿಮ್ಮ ಸದಾರಮೆ ಶೋಕಿ ಎಂತಹದ್ದು ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತಾಗಿದೆ’ ಎಂದು ಟಾಂಗ್‌ ನೀಡಿದ್ದಾರೆ.

Tap to resize

Latest Videos

ಎಲ್ಲಿದ್ಯಪ್ಪಾ ನಿಖಿಲ್ ಟ್ರೋಲ್ ನೆನಪು ಮಾಡಿ ಹೆಚ್‌ಡಿಕೆಗೆ ವ್ಯಂಗ್ಯವಾಡಿದ ಅಶ್ವತ್ ನಾರಾಯಣ್

‘ಯಾರು? ಎಲ್ಲಿ? ಹೇಗೆ ವಿಫಲರಾಗಿದ್ದಾರೆ ಎನ್ನುವುದು ನನಗೂ ಗೊತ್ತು. ಕಳೆದ ಮೂರು ವರ್ಷದಲ್ಲಿ ಗಾಳಿಯಲ್ಲಿ ಗುಂಡು ಹೊಡೆಯುತ್ತಾ ಓತಲಾ ಹೊಡೆದವರು ಯಾರು? ಮುಕ್ಕಿಮುಕ್ಕಿ ಲೂಟಿ ಹೊಡೆದವರು ಯಾರು ಎನ್ನುವುದು ನನಗಿಂತ ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲವೇ’ ಎಂದು ಲೇವಡಿ ಮಾಡಿದ್ದಾರೆ. ‘ನಾನು ಫೈವ್‌ಸ್ಟಾರ್‌ ಹೊಟೇಲ್‌ನಲ್ಲಿ ಇದ್ದೆ. ಅದನ್ನು ನಾನೇ ಹೇಳಿದ್ದೇನೆ. ಇದೇನು ಹೊಸ ವಿಷಯವಲ್ಲ. ನಿಮ್ಮ ಪಕ್ಷದ ಅಮಿತ್‌ ಶಾ, ಜೆ.ಪಿ.ನಡ್ಡಾ, ಅರುಣ್‌ಸಿಂಗ್‌ ಎಲ್ಲರೂ ಬೆಂಗಳೂರಿಗೆ ಬಂದಾಗ ಅದೇ ಫೈವ್‌ ಸ್ಟಾರ್‌ ಹೊಟೇಲ್‌ನಲ್ಲಿಯೇ ಇದ್ದರಲ್ಲವೇ? ಅವರು ಅಲ್ಲಿದ್ದಾಗ ನಿಮ್ಮ ಕಣ್ಣಿಗೆ ಪೊರೆ ಬಂದಿತ್ತಾ? ಮೊನ್ನೆಯಷ್ಟೇ ಬಂದು ಹೋದ ಅಮಿತ್‌ ಶಾ ಅವರು ಯಾವ ಹೊಟೇಲ್‌ನಲ್ಲಿ ಬಿಡಾರ ಹೂಡಿದ್ದರು? ನಿಮ್ಮ ನಾಯಕರೆಲ್ಲಾ ಬೆಂಗಳೂರಿಗೆ ಬಂದಾಗ ಕೃಷ್ಣಾ, ಅನುಗ್ರಹ ಅಥವಾ ಕಾವೇರಿ ಹಿಂದೆ ಗುಡಿಸಲಿನಲ್ಲಿ ಮಲಗುತ್ತಾರಾ? ಹೇಳಿ ಅಶ್ವತ್ಥನಾರಾಯಣ’ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾಖಲೆ ಇದ್ದರೆ ಬಿಚ್ಚಿಡಿ: ‘ಸುಳ್ಳು ದಾಖಲೆ ಸೃಷ್ಟಿಯ ಶೂರ... ನನ್ನ ಮೇಲೆ ವಿನಾಕಾರಣ ಆರೋಪ ಮಾಡುವ ಬದಲು, ದಾಖಲೆ ಇದ್ದರೆ ಬಿಚ್ಚಿಡಿ’ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಸಚಿವರು, ‘ಗಾಳಿಯಲ್ಲಿ ಗುಂಡು ಹಾರಿಸುವುದು, ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದು, ಹಿಟ್‌ ಅಂಡ್‌ ರನ್‌ ಮಾಡಿ ಸಿಕ್ಕಿ ಬೀಳ್ತೀನಿ ಅಂದಾ ಕಣ್ಣೀರು ಹಾಕಿ ಗಮನ ಸೆಳೆಯೋ ಕಣ್ಣೀರ್‌ ಸ್ವಾಮಿ. ಇದೇ ನಿಮ್ಮ ಪಕ್ಷದ ಸಿದ್ಧಾಂತವೇ?’ ಎಂದು ಹರಿಹಾಯ್ದಿದ್ದಾರೆ.

ಸ್ವಾತಂತ್ರ್ಯಕ್ಕೆ ಸೋಗಲಾಡಿ ಸಿದ್ದರಾಮಯ್ಯ ಕೊಡುಗೆ ಏನು?: ಎಚ್‌ಡಿಕೆ ಕಿಡಿ

‘ಎರಡು ಬಾರಿ ಮುಖ್ಯಮಂತ್ರಿ ಆದಾಗ ತಾವು ರಾಮನಗರಕ್ಕೆ ಏನು ಕೊಡುಗೆ ನೀಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ದಾಖಲೆ ಬಿಚ್ಚಿಡಲಾ ಕೇಳುತ್ತಿದ್ದೀರಿ. ಏನೇನು ಬಿಚ್ಚಿತ್ತೀರೋ ಬಿಚ್ಚಿ. ಅದೇನೇ ನಕಲಿ ಸರ್ಟಿಫಿಕೇಟ್‌ ಎಂದು ಬಾಯಿಬಿಡಿ. ಈ ಬಹಿರಂಗ ಸವಾಲನ್ನು ಸ್ವೀಕರಿಸುವಿರೋ ಅಥವಾ ಉತ್ತರ ಕುಮಾರನಂತೆ ಅಡಗಿ ಕೂರುವಿರೋ?’ ಎಂದು ಅಶ್ವತ್ಥ ಕಿಡಿಕಾರಿದ್ದಾರೆ.

click me!