ಜೈನಮುನಿಗಳ ಹತ್ಯೆ ಅತ್ಯಂತ ಅಮಾನುಷವಾಗಿದ್ದು, ಇಡೀ ಪ್ರಪಂಚವೇ ತಲೆತಗ್ಗಿಸುವಂತಾಗಿದೆ. ರಾಜ್ಯ ಸರ್ಕಾರ ತನಿಖೆ ಮಾಡುವುದಾಗಿ ತಿಳಿಸಿದ್ದನ್ನು ಸ್ವಾಗತಿಸುತ್ತೇವೆ. ಆದರೆ ಇದರ ಜೊತೆಗೆ ಸಿಬಿಐ ತನಿಖೆಯನ್ನೂ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಶಿವಮೊಗ್ಗ (ಜು.13): ಜೈನಮುನಿಗಳ ಹತ್ಯೆ ಅತ್ಯಂತ ಅಮಾನುಷವಾಗಿದ್ದು, ಇಡೀ ಪ್ರಪಂಚವೇ ತಲೆತಗ್ಗಿಸುವಂತಾಗಿದೆ. ರಾಜ್ಯ ಸರ್ಕಾರ ತನಿಖೆ ಮಾಡುವುದಾಗಿ ತಿಳಿಸಿದ್ದನ್ನು ಸ್ವಾಗತಿಸುತ್ತೇವೆ. ಆದರೆ ಇದರ ಜೊತೆಗೆ ಸಿಬಿಐ ತನಿಖೆಯನ್ನೂ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈನಮುನಿ ಹತ್ಯೆ ಹಿಂದೆ ದೊಡ್ಡ ಷಡ್ಯಂತ್ರ ಇದೆ. ನಮ್ಮ ರಾಜ್ಯದ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇದೆ. ಒಂದೆಡೆ ಪೊಲೀಸರು ತನಿಖೆ ಮಾಡಲಿ, ಮತ್ತೊಂದೆಡೆ ಈ ಪ್ರಕರಣ ಸಿಬಿಐ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಪ್ರೇಮ್‌ಸಿಂಗ್ ಚಾಕು ಇರಿತ ಪ್ರಕರಣ, ಹರ್ಷ, ಪ್ರವೀಣ್ ನೆಟ್ಟಾರ್, ಮಂಗಳೂರು ಆಟೋ ಬ್ಲಾಸ್ಟ್ ಪ್ರಕರಣದಲ್ಲಿ ವಿದೇಶಿ ಭಯೋತ್ಪಾದಕರ ನಂಟು ಇರುವುದು ಉನ್ನತ ತನಿಖೆಯಿಂದ ಬಹಿರಂಗವಾಗಿದೆ. ಹೀಗಾಗಿ, ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರವೇನೋ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದೆ. ಆದರೆ ಇಷ್ಟುಸಾಲದು. ಇದರ ಹಿಂದೆ ಮತ್ತಷ್ಟುಶಕ್ತಿಗಳು ಇವೆ. ಅವೆಲ್ಲ ಬಯಲಿಗೆ ಬರಬೇಕಾದರೆ ಸಿಬಿಐ ತನಿಖೆ ನಡೆಸಬೇಕು. ಹಿಂದುಗಳ ಹತ್ಯೆ ಮುಂದುವರಿಯುತ್ತಿದ್ದು, ಈ ಬಗ್ಗೆಯೂ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಶಕ್ತಿ ಯೋಜನೆಯಿಂದ ರಾಜ್ಯದ ದೇವಸ್ಥಾನ ಭರ್ತಿ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಜಿಟಿಡಿ ಪ್ರಶಂಸೆ
ಬಿಜೆಪಿ ಮತ್ತೆ ಧರಣಿ: ಬೆಳಗಾವಿಯ ಜೈನ ಮುನಿ ಬರ್ಬರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ಬುಧವಾರವೂ ಸದನದ ಬಾವಿಗೆ ಇಳಿದು ಕೆಲ ಕಾಲ ಧರಣಿ ಮಾಡಿದರು. ವಿಧಾನಸೌಧ ಆವರಣದಲ್ಲಿ ಬಿಜೆಪಿ ಸದಸ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಮೇಲ್ಮನೆ ಕಲಾಪವು ಬುಧವಾರ ಒಂದು ತಾಸು ತಡವಾಗಿ ಆರಂಭವಾಯಿತು. ಸಿಬಿಐ ತನಿಖೆಗೆ ಆಗ್ರಹಿಸಿ ಮಂಗಳವಾರ ಧರಣಿ ಆರಂಭಿಸಿದ್ದ ಬಿಜೆಪಿ ಸದಸ್ಯರು ಬುಧವಾರ ಕಲಾಪ ಆರಂಭದಲ್ಲೇ ಸದನ ಬಾವಿಗೆ ಇಳಿದು ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಸಭಾನಾಯಕ ಬೋಸರಾಜು, ಜೈನ ಮುನಿ ಕೊಲೆ ಪ್ರಕರಣ ಸಂಬಂಧ ಗೃಹ ಸಚಿವರೇ ಸಿಬಿಐ ತನಿಖೆಯ ಅಗತ್ಯವಿಲ್ಲ. ನಮ್ಮ ಪೊಲೀಸರೇ ತನಿಖೆ ನಡೆಸಲು ಸಮರ್ಥರಿದ್ದಾರೆ ಎಂದು ಹೇಳಿದ್ದಾರೆ.
ಹೀಗಾಗಿ ಸಿಬಿಐ ತನಿಖೆಗೆ ವಹಿಸುವುದಿಲ್ಲ ಸ್ಪಷ್ಟವಾಗಿ ಹೇಳಿದರು. ಇದಕ್ಕೆ ಅಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ನಿಮ್ಮ ಭಾವನೆಗಳಿಗೆ ಸರ್ಕಾರ ಸ್ಪಂದಿಸಲಿದೆ. ಈಗ ನಮ್ಮ ಪೊಲೀಸರೇ ತನಿಖೆ ಮಾಡುತ್ತಿದ್ದಾರೆ. ಈ ತನಿಖಾ ವರದಿ ನಿಮಗೆ ತೃಪ್ತಿಯಾಗದಿದ್ದರೆ ಮುಂದಿನ ವಿಚಾರದ ಬಗ್ಗೆ ಚರ್ಚಿಸೋಣ. ನಿಷ್ಪಕ್ಷಪಾತ ತನಿಖೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಸುಖಾಸುಮ್ಮನೆ ಮಾತನಾಡಿ ರಾಜ್ಯದ ಜನತೆಯಲ್ಲಿ ಅನುಮಾನ ಹುಟ್ಟಿಸುವುದು ಬೇಡ. ಈ ವಿಚಾರದಲ್ಲಿ ರಾಜಕೀಯ ಬೆರೆಸೋದು ಬೇಡ. ಎಲ್ಲರೂ ಸೇರಿ ಮುನಿಗಳ ಕೊಲೆಗೆ ನ್ಯಾಯ ಒದಗಿಸೋಣ’ ಎಂದರು.
ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ: ಭವಿಷ್ಯ ನುಡಿದ ಶಾಸಕ ವಿಜಯೇಂದ್ರ
ಇದಕ್ಕೆ ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ತನ್ನ ಹಠಮಾರಿತನ ಬಿಡಬೇಕು. ಬೆಳಗಾವಿಯಲ್ಲಿ ಜೈನ ಮುನಿ ಕೊಲೆ, ಟಿ.ನರಸೀಪುರದಲ್ಲಿ ವೇಣುಗೋಪಾಲ್ ಕೊಲೆಯಿಂದ ರಾಜ್ಯದಲ್ಲಿ ಅಶಾಂತಿ ನಿರ್ಮಾಣವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು ಒತ್ತಾಯಿಸಿದರು. ಸಿಬಿಐ ತನಿಖೆಗೆ ಕೊಡುವುದಿಲ್ಲ ಎಂದು ಸಭಾನಾಯಕರು ಪುನರುಚ್ಚರಿಸಿದ ಪರಿಣಾಮ ಕೋಪಗೊಂಡ ಕೋಟಾ, ರಾಜ್ಯ ಸರ್ಕಾರ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ. ಇದು ದಪ್ಪ ಚರ್ಮದ ಸರ್ಕಾರ ಎಂದು ಟೀಕಿಸಿದರು. ರಾಜ್ಯಪಾಲರಿಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಧರಣಿಯನ್ನು ಹಿಂಪಡೆಯುವುದಾಗಿ ಹೇಳಿದರು.