ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಮೋದಿ ವರ್ಸಸ್ ರಾಹುಲ್ ಆಗಬಾರದು ಎನ್ನುವ ನಿಟ್ಟಿನಲ್ಲಿ ತಂತ್ರಗಾರಿಕೆ ಮಾಡಿತ್ತು. ಕಳೆದ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 30 ಸಮಾವೇಶಗಳು ಹಾಗೂ 12 ದೇವಸ್ಥಾನಗಳನ್ನು ಸುತ್ತಿದ್ದಕ್ಕೆ ಪ್ರತಿಫಲವಾಗಿ ಸಿಕ್ಕಿದ್ದು 77 ಸೀಟ್‌ಗಳು. ಆದರೆ, ಈ ಬಾರಿ ಕೇವಲ 17 ಸೀಟ್‌ಗೆ ಕಾಂಗ್ರೆಸ್ ಹೋರಾಟ ಮುಗಿದಿದೆ.
ಅಹಮದಾಬಾದ್ (ಡಿ.9): ಬಿಜೆಪಿಯ ಮುಷ್ಟಿಯಿಂದ ಈ ಬಾರಿಯೂ ಗುಜರಾತ್ ರಾಜ್ಯವನ್ನು ಕಸಿದುಕೊಳ್ಳುವ ಪ್ರಯತ್ನ ಯಶಸ್ವಿಯಾಗಲಿಲ್ಲ. ಕಳೆದ 27 ವರ್ಷಗಳಿಂದ ಬಿಜೆಪಿಯ ಪ್ರಭುತ್ವದಲ್ಲಿರುವ ಗುಜರಾತ್‌ನಲ್ಲಿ ಈ ಬಾರಿಯೂ ಬಿಜೆಪಿ ಮಹಾ ವಿಜಯ ಸಾಧಿಸಿದೆ. ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದ ಬಿಜೆಪಿ ಬರೋಬ್ಬರಿ 156 ಸೀಟ್‌ಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚುನಾವಣೆಯಲ್ಲಿ ನರೇಂದ್ರ ಮೋದಿ ಮ್ಯಾರಥಾನ್ ಸಮಾವೇಶಗಳು, ರೋಡ್ ಶೋಗಳನ್ನು ಮಾಡಿದರೆ, ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಕೂಡ ಗುಜರಾತ್‌ನಲ್ಲಿಯೇ ಬೀಡುಬಿಟ್ಟಿದ್ದರು. ಆದರೆ, ರಾಹುಲ್ ಗಾಂಧಿ ಮಾತ್ರ ಕೇವಲ ಎರಡೇ ಎರಡು ಸಮಾವೇಶ ಮಾಡಿ ಕಾಂಗ್ರೆಸ್‌ನ ಹಿನ್ನಡೆಗೆ ಕಾರಣರಾದರು. 2017ರ ಗುಜರಾತ್ ಚುನಾವಣೆಯಲ್ಲಿ ನರೇಂದ್ರ ಮೋದಿ 34 ಸಮಾವೇಶಗಳನ್ನು ಮಾಡಿದ್ದರೆ, ಈ ಬಾರಿ 31 ಸಮಾವೇಶಗಳನ್ನು ಮಾಡಿದ್ದರು. ಇನ್ನೊಂದೆಡೆ ಕಳೆದ ಬಾರಿ ಒಂದೂ ಸಮಾವೇಶಗಳನ್ನು ಮಾಡದ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಈ ಬಾರಿ ಬರೋಬ್ಬರಿ 19 ಸಮಾವೇಶಗಳನ್ನು ಮಾಡಿದ್ದರು. ಇನ್ನೊಂದೆಡೆ ರಾಹುಲ್ ಗಾಂಧಿ 2017ರ ಚುನಾವಣೆಯಲ್ಲಿ ಬರೋಬ್ಬರಿ 30 ಸಮಾವೇಶಗಳನ್ನು ಮಾಡಿದ್ದರು. ಅದು ಈ ಬಾರಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದು ಕೇವಲ 2 ಸಮಾವೇಶಗಳನ್ನಷ್ಟೇ ಮಾಡಿದ್ದರು.
ಸೂರತ್ ಹಾಗೂ ರಾಜ್‌ಕೋಟ್‌ನಲ್ಲಿ ರಾಹುಲ್ ಗಾಂಧಿ ಅವರು ಸಮಾವೇಶ ಮಾಡಿದರಾದರೂ ಇಲ್ಲಿನ ಏಳೂ ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆಲುವು ಕಂಡಿದೆ. ಇನ್ನು ಅವರು ತಮ್ಮ ಮಾತಿನಲ್ಲಿ ಎಲ್ಲೂ ಪ್ರಧಾನಿ ಮೋದಿಯನ್ನು ಟೀಕೆ ಮಾಡುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಭಾರತವನ್ನು ಕೂಡಿಸುವ ಕೆಲಸ ಮಾಡಿದ್ದು ಒಬ್ಬ ಗುಜರಾತಿ ಅವರು ಮಹಾತ್ಮ ಗಾಂಧಿ ಎಂದಿದ್ದ ರಾಹುಲ್ ಗಾಂಧಿ, ಆದಿವಾಸಿಗಳನ್ನು ಉದ್ದೇಶಿಸಿ, ಈದೇಶದ ಮೂಲ ಮಾಲೀಕರು ಆದಿವಾಸಿಗಳು ಎನ್ನುವುದನ್ನು ತಮ್ಮ ಅಜ್ಜಿ ಇಂದಿರಾಗಾಧಿ ಯಾವಾಗಲೂ ಹೇಳುತ್ತಿದ್ದರು ಎಂದಿದ್ದರು. ಅದರೊಂದಿಗೆ ಭಾರತ್ ಜೋಡೋ ಯಾತ್ರೆಯ ಬಗ್ಗೆಯೂ ನೆನಪು ಮಾಡಿಕೊಂಡಿದ್ದರು. ಇನ್ನು ಭಾರತ್ ಜೋಡೋ ಯಾತ್ರೆಯ ಗುಜರಾತ್‌ಗೆ ಹೋಗೋದಿಲ್ಲ ಎನ್ನುವುದು ಗೊತ್ತಾದ ಬಳಿಕವಂತೂ ಬಿಜೆಪಿಗೆ ಇನ್ನಷ್ಟು ಗೆಲುವಿನ ವಿಶ್ವಾಸ ಬಂದಿತ್ತು.
ಇವೆಲ್ಲವನ್ನೂ ನೋಡಿದರೆ, ಗುಜರಾತ್ ಚುನಾವಣೆಗೆ ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿಯೇ ಗೈರಾಗಿರುವುದು ಕಂಡು ಬಂದಿದೆ. ಗುಜರಾತ್ ಚುನಾವಣೆಯ ಹಿರಿಯ ವೀಕ್ಷಕರಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ನೇಮಿಸಿತ್ತು. ಇನ್ನೊಂದೆಡೆ ಗುಜರಾತ್ ಚುನಾವಣೆ ಸಂದರ್ಭದಲ್ಲಿಯೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗಲಾಟೆ ನಡೆದಿತ್ತು. ಸಚಿನ್ ಪೈಲಟ್ ಹಾಗೂ ಅಶೋಕ್ ಗೆಹ್ಲೋಟ್ ಹೋರಾಟ ತೀವ್ರವಾದ ನಡುವೆಯೂ ಕಾಂಗ್ರೆಸ್ ಗೆಹ್ಲೋಟ್ ಮೇಲೆ ನಂಬಿಕೆ ಇರಿಸಿ ಜವಾಬ್ದಾರಿ ನೀಡಿತ್ತು.
Gujarat Election Results: ರಾಜ್ಯ ರಾಜಕೀಯದ ಮೇಲಾಗುವ ಪರಿಣಾಮವೇನು?
2017ರಲ್ಲಿ ರಾಹುಲ್ ಗಾಂಧಿ ಮಾಡಿದ 30 ಸಮಾವೇಶಗಳಿಂದ 77 ಸೀಟ್ ಗೆದ್ದಿದ್ದ ಕಾಂಗ್ರೆಸ್ ಶೇ.41.44ರಷ್ಟು ವೋಟ್ ಶೇರ್ ಪಡೆದುಕೊಂಡಿತ್ತು. ಈ ಬಾರಿ ಕೇವಲ 2 ಸಮಾವೇಶ ಮಾಡಿದ್ದ ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಬರೀ 17 ಸೀಟ್ ಗೆದ್ದಿದ್ದರೆ, ವೋಟ್ ಶೇರ್ ಶೇ. 27.30ಕ್ಕೆ ಇಳಿದಿದೆ.
'ಪೇಪರ್‌ನಲ್ಲಿ ಬರ್ದು ಕೊಡ್ತಿನಿ, ಈ ಮೂರ್ ಜನ ಗೆಲ್ತಾರೆ' ಎಂದಿದ್ದ ಕೇಜ್ರಿವಾಲ್, ಅವರ ರಿಸಲ್ಟ್ ನೋಡಿದ್ರಾ?
ರಾಹುಲ್ ಗಾಂಧಿಯನ್ನು ಹೊರಗಿಟ್ಟಿದ್ದು ಕಾಂಗ್ರೆಸ್‌ನ ತಂತ್ರವಾಗಿತ್ತು: ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಶೋಕ್ ಗೆಹ್ಲೋಟ್, ರಾಹುಲ್ ಗಾಂಧಿ ಅವರು ಗುಜರಾತ್ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಅಗತ್ಯವಿಲ್ಲ. ಸದ್ಯ ಭಾರತ್ ಜೋಡೋ ಯಾತ್ರೆಯತ್ತ ಗಮನ ಹರಿಸುತ್ತಿದ್ದು, ಗುಜರಾತ್ ನಲ್ಲಿ ಇರಲು ಸಾಧ್ಯವಾಗುತ್ತಿಲ್ಲ.' ಎಂದಿದ್ದರು. ಇನ್ನೊಬ್ಬ ನಾಯಕರ ಪ್ರಕಾರ, ಗುಜರಾತ್ ಚುನಾವಣೆ ಕಾಂಗ್ರೆಸ್‌ನ ಒನ್ ಮ್ಯಾನ್ ಶೋ ಆಗಬಾರದು ಎನ್ನುವ ಗುರಿಯಲ್ಲಿ ಕಾಂಗ್ರೆಸ್ ಇತ್ತು. ಅದರ ಬದಲು ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರೇ ಕಾಂಗ್ರೆಸ್‌ನ ಮುಖವನ್ನಾಗಿ ಮಾಡುವುದು ಪಕ್ಷದ ಪ್ಲ್ಯಾನ್ ಆಗಿತ್ತು. ಹಿರಿಯ ರಾಜಕೀಯ ಪತ್ರಕರ್ತ ಅಜಯ್ ಝಾ ಪ್ರಕಾರ, ಪ್ರಸ್ತುತ ರಾಹುಲ್ ಗಾಂಧಿಯ ಸಂಪೂರ್ಣ ಗಮನ ಇರುವುದು 2024ರ ಲೋಕಸಭೆ ಚುನಾವಣೆಯ ಮೇಲೆ. ಹಾಗೇನಾದರೂ ಗುಜರಾತ್‌ನಲ್ಲಿ ರಾಹುಲ್ ಕಣಕ್ಕೆ ಇಳಿದಿದ್ದರೆ ಅದು ಮೋದಿ ವರ್ಸಸ್ ರಾಹುಲ್ ಆಗುವ ಸಾಧ್ಯತೆ ಇತ್ತು. ಇದನ್ನು ರಾಹುಲ್ ಕೂಡ ಯೋಚನೆ ಮಾಡಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಮತ್ತೊಂದು ಅವಮಾನಕರ ಸೋಲು ಎದುರಿಸಿದರೆ, ಅದು ವಿಶ್ವಾಸಕ್ಕೆ ಪೆಟ್ಟು ನೀಡುತ್ತದೆ ಎನ್ನುವುದನ್ನು ಅರಿತು ರಾಹುಲ್ ಹಿಂದೆ ಸರಿದಿರಬಹುದು ಎಂದಿದ್ದಾರೆ.