Karnataka Assembly Elections 2023: ಬಿಜೆಪಿ-ಕಾಂಗ್ರೆಸ್‌ ಟಿಕೆಟ್‌ಗೆ ಜಿದ್ದಾಜಿದ್ದಿ ಫೈಟ್‌..!

By Kannadaprabha News  |  First Published Dec 13, 2022, 10:00 AM IST

ಬಿಜೆಪಿಯ ಶಕ್ತಿ ಕೇಂದ್ರ ಎನಿಸಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಶಕ್ತಿ ಕುಂದಿಸಲು ಈಗಲೇ ಕಾಂಗ್ರೆಸ್‌ ತಯಾರಿ ನಡೆಸಿದ್ದರೆ, ಇನ್ನಷ್ಟು ಶಕ್ತಿ ವೃದ್ಧಿಕೊಳ್ಳಲು ಬಿಜೆಪಿ ಮುಷ್ಟಿಬಿಗಿ ಮಾಡುತ್ತಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ಸಮರಕ್ಕೆ ಅಖಾಡ ಸಿದ್ಧಗೊಳಿಸುತ್ತಿವೆ.
 


ಶಿವಾನಂದ ಗೊಂಬಿ

ಹುಬ್ಬಳ್ಳಿ(ಡಿ.13): ವಿಧಾನಸಭೆಗೆ ಆರು ತಿಂಗಳು ಬಾಕಿಯಿರುವಾಗಲೇ ಉತ್ತರ ಕರ್ನಾಟಕದ ಹೆಬ್ಬಾಗಿಲು ಧಾರವಾಡ ಜಿಲ್ಲೆಯಲ್ಲಿ ಚುನಾವಣೆ ಕಾವು ರಂಗೇರುತ್ತಿದೆ. ಬಿಜೆಪಿಯ ಶಕ್ತಿ ಕೇಂದ್ರ ಎನಿಸಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಶಕ್ತಿ ಕುಂದಿಸಲು ಈಗಲೇ ಕಾಂಗ್ರೆಸ್‌ ತಯಾರಿ ನಡೆಸಿದ್ದರೆ, ಇನ್ನಷ್ಟು ಶಕ್ತಿ ವೃದ್ಧಿಕೊಳ್ಳಲು ಬಿಜೆಪಿ ಮುಷ್ಟಿಬಿಗಿ ಮಾಡುತ್ತಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ಸಮರಕ್ಕೆ ಅಖಾಡ ಸಿದ್ಧಗೊಳಿಸುತ್ತಿವೆ.

Tap to resize

Latest Videos

ಒಂದು ಕಾಲದಲ್ಲಿ ಧಾರವಾಡ ಜಿಲ್ಲೆ ಕಾಂಗ್ರೆಸ್ಸಿನ ಭದ್ರಕೋಟೆಯಂತಿತ್ತು. ಈದ್ಗಾ ಮೈದಾನದ ಹೋರಾಟ ಧಾರವಾಡ ಜಿಲ್ಲೆಯಷ್ಟೇ ಅಲ್ಲ, ಉತ್ತರ ಕರ್ನಾಟಕದಲ್ಲೇ ಬಿಜೆಪಿಗೆ ಗಟ್ಟಿನೆಲೆ ಒದಗಿಸಿದ್ದು ಇತಿಹಾಸ. ಹುಬ್ಬಳ್ಳಿ-ಧಾರವಾಡ ಪೂರ್ವ, ಸೆಂಟ್ರಲ್‌, ಪಶ್ಚಿಮ, ಧಾರವಾಡ ಗ್ರಾಮೀಣ, ಕಲಘಟಗಿ, ಕುಂದಗೋಳ, ನವಲಗುಂದ ಹೀಗೆ ಏಳು ಕ್ಷೇತ್ರವನ್ನು ಜಿಲ್ಲೆ ಹೊಂದಿದೆ. ಏಳರ ಪೈಕಿ ಐದರಲ್ಲಿ ಬಿಜೆಪಿ ಶಾಸಕರಿದ್ದರೆ, ಎರಡರಲ್ಲಿ ಕಾಂಗ್ರೆಸ್ಸಿಗರು ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಲೋಕಸಭಾ ಕ್ಷೇತ್ರ, ನಾಲ್ಕು ವಿಧಾನ ಪರಿಷತ್ತಿನ ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿಗರಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯದೇ ಪಾರುಪತ್ಯ. ಜೆಡಿಎಸ್‌ನಲ್ಲಿ ಇದ್ದವರೆಲ್ಲರೂ ಬಿಜೆಪಿ, ಕಾಂಗ್ರೆಸ್‌ ಸೇರ್ಪಡೆ ಆಗಿರುವುದರಿಂದ ಜೆಡಿಎಸ್‌ ಅಸ್ತಿತ್ವ ಇಲ್ಲದಂತಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ 2023: ಬಲ ಹೆಚ್ಚಿಸಿಕೊಳ್ಳುವತ್ತ ಬಿಜೆಪಿ ಚಿತ್ತ..!

1.ಹು-ಧಾ ಸೆಂಟ್ರಲ್‌: ಶೆಟ್ಟರ್‌ ವಿರುದ್ಧ ಯಾರು?

ಮುಖ್ಯಮಂತ್ರಿ ಹುದ್ದೆಗೇರಿದ ಜಗದೀಶ್‌ ಶೆಟ್ಟರ್‌ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ. ಕಳೆದ ಆರು ಅವಧಿಯಿಂದ ಶೆಟ್ಟರ್‌ ಅವರೇ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಶೆಟ್ಟರ್‌ ವಿರುದ್ಧ ಸ್ಪರ್ಧಿಸಿದ ಬಹುತೇಕರು ಇದೀಗ ಬಿಜೆಪಿಯಲ್ಲಿದ್ದಾರೆ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ಸಲ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಶೆಟ್ಟರ್‌ ವಿರುದ್ಧವೇ ಸೋತವರು. ಉಳಿದಂತೆ ಶಂಕರಣ್ಣ ಮುನವಳ್ಳಿ, ಮಹೇಶ ನಾಲ್ವಾಡ, ರಾಜಣ್ಣ ಕೊರವಿ ಹೀಗೆ ಎಲ್ಲರೂ ಇದೀಗ ಬಿಜೆಪಿಯಲ್ಲಿದ್ದಾರೆ. 1994ರಿಂದ ಈವರೆಗೆ ಶೆಟ್ಟರ್‌ ಅವರನ್ನು ಮಾತ್ರ ಅಲ್ಲಾಡಿಸಲು ಕಾಂಗ್ರೆಸ್‌-ಜೆಡಿಎಸ್‌ಗೆ ಸಾಧ್ಯವಾಗಿಲ್ಲ. ಈ ಬಾರಿಯೂ ಕ್ಷೇತ್ರದಿಂದ ಶೆಟ್ಟರ್‌ ಕಣಕ್ಕಿಳಿಯಲಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡರ, ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಅಳಿಯ ರಜತ್‌ ಉಳ್ಳಾಗಡ್ಡಿಮಠ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ್‌, ಸತೀಶ ಮೆಹರವಾಡೆ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಹೀಗೆ ಒಂಭತ್ತು ಜನ ಹೆಸರು ಕೇಳಿ ಬರುತ್ತಿದೆ. ಜೆಡಿಎಸ್‌ನಲ್ಲಿ ಯಾವುದೇ ಪ್ರಮುಖ ಅಭ್ಯರ್ಥಿ ಹೆಸರು ಕೇಳಿಬರುತ್ತಿಲ್ಲ.

2.ಹು-ಧಾ ಪೂರ್ವ: ಅಬ್ಬಯ್ಯಗೆ ಬಿಜೆಪಿ ಕೊಡುವುದೇ ಟಕ್ಕರ್‌?

ಕೆಜೆಪಿ-ಬಿಜೆಪಿ ಜಗಳದಲ್ಲಿ ಆಯ್ಕೆಯಾದ ಕಾಂಗ್ರೆಸ್‌ನ ಪ್ರಸಾದ್‌ ಅಬ್ಬಯ್ಯ, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ ಹಿಡಿತ ಸಾಧಿಸಿ 2ನೇ ಬಾರಿಗೆ ಚುನಾಯಿತರಾಗಿದ್ದಾರೆ. ಈ ಬಾರಿಯೂ ಟಿಕೆಟ್‌ ಆಕಾಂಕ್ಷಿಯಾಗಿರುವ ಅಬ್ಬಯ್ಯ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ, ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ ಸೇರಿ ಇಬ್ಬರು ಕಾಂಗ್ರೆಸ್‌ನಿಂದ ಟಿಕೆಟ್‌ ಬಯಸಿ ಅರ್ಜಿಸಲ್ಲಿಸಿದ್ದಾರೆ. ಇಷ್ಟಾದರೂ ಮತ್ತೆ ಅಬ್ಬಯ್ಯ ಅವರಿಗೇ ಟಿಕೆಟ್‌ ನೀಡುವ ಸಾಧ್ಯತೆ ಹೆಚ್ಚು. ಅಬ್ಬಯ್ಯ ಗೆಲುವಿಗೆ ಬ್ರೇಕ್‌ ಹಾಕಬೇಕೆಂಬ ಹಂಬಲ ಬಿಜೆಪಿಯದ್ದು. ಇದಕ್ಕಾಗಿ ಗಟ್ಟಿಕುಳದ ಹುಡುಕಾಟದಲ್ಲಿ ತೊಡಗಿದೆ. 2008ರಲ್ಲಿ ಶಾಸಕರಾಗಿದ್ದ ವೀರಭದ್ರಪ್ಪ ಹಾಲಹರವಿ, ಕೆಜೆಪಿಯಿಂದ ಕಣಕ್ಕಿಳಿದಿದ್ದ ಯಡಿಯೂರಪ್ಪ ಆಪ್ತ ಶಂಕರಪ್ಪ ಬಿಜವಾಡ, ಡಾ.ಕ್ರಾಂತಿಕಿರಣ, ಚಂದ್ರಶೇಖರ ಗೋಕಾಕ ಟಿಕೆಟ್‌ ರೇಸ್‌ನಲ್ಲಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ವಿಜಯ್‌ ಗುಂಟ್ರಾಳ ಈ ಬಾರಿ ಎಐಎಂಐಎಂ ಪಕ್ಷದ ಆಕಾಂಕ್ಷಿ. ಜೆಡಿಎಸ್‌ ಮಾತ್ರ ಇನ್ನೂ ಕಾದು ನೋಡುv ತಂತ್ರ ಅನುಸರಿಸುತ್ತಿದೆ.

3.ಹು-ಧಾ ಪಶ್ಚಿಮ: ಬೆಲ್ಲದ ಎದುರಾಳಿ ಯಾರು?

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ ಮೊದಲು ಧಾರವಾಡ ಶಹರ ಎಂದು ಗುರುತಿಸಲ್ಪಡುತ್ತಿತ್ತು. 2013ರಿಂದ ಅರವಿಂದ ಬೆಲ್ಲದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆವರೆಗೂ ಅರವಿಂದ ಬೆಲ್ಲದ ಹೆಸರು ಕೇಳಿ ಬಂದಿತ್ತು. ಈ ಸಲವೂ ಬಿಜೆಪಿಯಿಂದ ಬೆಲ್ಲದ ಸ್ಪರ್ಧಿಸುವುದು ಬಹುತೇಕ ಖಚಿತ. ಇವರಿಗೆ ಎದುರಾಳಿಯಾಗಲು ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿದೆ. ಎಸ್‌.ಆರ್‌.ಮೋರೆ ಅವರ ಪುತ್ರಿ ಕೀರ್ತಿ ಮೋರೆ, ಹಿರಿಯ ನಾಯಕರಾದ ದೀಪಕ ಚಿಂಚೋರೆ, ಪಿ.ಎಚ್‌. ನೀರಲಕೇರಿ, ನಾಗರಾಜ ಗೌರಿ ಸೇರಿದಂತೆ ಹತ್ತು ಮಂದಿ ಟಿಕೆಟ್‌ಗಾಗಿ ಪೈಪೋಟಿಗಿಳಿದಿದ್ದಾರೆ. ಹೇಗಾದರೂ ಮಾಡಿ ಬಿಜೆಪಿಯಿಂದ ಕ್ಷೇತ್ರವನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂಬ ಇರಾದೆ ಕಾಂಗ್ರೆಸ್‌ನದ್ದು. ಜೆಡಿಎಸ್‌ನಿಂದ ಗುರುರಾಜ ಹುಣಸೀಮರದ ಆಕಾಂಕ್ಷಿಯಾಗಿದ್ದಾರೆ.

4.ಧಾರವಾಡ ಗ್ರಾ.: ದೇಸಾಯಿಗೆ ಪಕ್ಷದಲ್ಲೇ ಪೈಪೋಟಿ

ಧಾರವಾಡ ಗ್ರಾಮೀಣ ಕ್ಷೇತ್ರ ಅತ್ಯಂತ ವೈಶಿಷ್ಟ್ಯದಿಂದ ಕೂಡಿರುವ ಕ್ಷೇತ್ರ. ಸದ್ಯ ಬಿಜೆಪಿಯ ಅಮೃತ ದೇಸಾಯಿ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಸಮಬಲದ ಪೈಪೋಟಿ ಇದೆ. ವಿನಯ ಕುಲಕರ್ಣಿ ಈ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾದವರು. ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿ ಕೂಡ ಆಗಿದ್ದವರು. ಕಳೆದ ಚುನಾವಣೆಯಲ್ಲಿ ಅಮೃತ ದೇಸಾಯಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿ ಜೋಶಿ ವಿರುದ್ಧ ಸೋತಿರುವ ವಿನಯ್‌ ಕುಲಕರ್ಣಿ ಮತ್ತೊಮ್ಮೆ ಈ ಕ್ಷೇತ್ರದಿಂದಲೇ ಮರುಹುಟ್ಟು ಬಯಸಿದ್ದಾರೆ. ಆದರೆ ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಆರೋಪಿಯಾಗಿರುವ ವಿನಯ್‌ಗೆ ಜಿಲ್ಲಾ ಪ್ರವೇಶಕ್ಕೆ ಕೋರ್ಚ್‌ ನಿಷೇಧಿಸಿದೆ. ಜಿಲ್ಲೆಯ ಹೊರಗಿದ್ದುಕೊಂಡೇ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಬೇಕೆಂಬ ಪ್ರಯತ್ನವನ್ನು ವಿನಯ್‌ ನಡೆಸುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಇಸ್ಮಾಯಿಲ್‌ ತಮಟಗಾರ ಅವರು ಕೂಡ ಟಿಕೆಟ್‌ ಆಕಾಂಕ್ಷಿ. ಬಿಜೆಪಿಯಲ್ಲೂ ಶಾಸಕ ಅಮೃತ ದೇಸಾಯಿ ಬದಲು ತಮಗೇ ಟಿಕೆಟ್‌ ಕೊಡಿ ಎಂಬ ಬೇಡಿಕೆ ಇಟ್ಟಿರುವ ಮಾಜಿ ಶಾಸಕಿ ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ, ತವನಪ್ಪ ಅಷ್ಟಗಿ ಪೈಪೋಟಿಗಿಳಿದಿದ್ದಾರೆ. ಜೆಡಿಎಸ್‌ನಲ್ಲಿ ಈ ಕ್ಷೇತ್ರದಲ್ಲೂ ಈವರೆಗೆ ಟಿಕೆಟ್‌ ಆಕಾಂಕ್ಷಿಗಳಿಲ್ಲ.

5.ನವಲಗುಂದ: ಮುನೇನಕೊಪ್ಪ ಎದುರಾಳಿ ಯಾರು?

ಮಹದಾಯಿ ಹೋರಾಟ, ಬಂಡಾಯದ ನೆಲ ಎಂದರೆ ಥಟ್ಟನೆ ನೆನಪಾಗುವುದು ನವಲಗುಂದ. ಈ ಕ್ಷೇತ್ರವನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪ್ರತಿನಿಧಿಸುತ್ತಿದ್ದಾರೆ. ಇಷ್ಟುವರ್ಷ ಜೆಡಿಎಸ್‌ ಪ್ರಬಲವಾಗಿದ್ದರಿಂದ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮಧ್ಯೆ ಇಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿತ್ತು. ಜೆಡಿಎಸ್‌ನಲ್ಲಿದ್ದ ಮಾಜಿ ಶಾಸಕ ಎನ್‌.ಎಚ್‌.ಕೋನರಡ್ಡಿ ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿದ್ದಾರೆ. ಹೀಗಾಗಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ನೇರಾನೇರ ಸ್ಪರ್ಧೆ ನಡೆಯುವುದು ಬಹುತೇಕ ಖಚಿತ. ಆದರೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದಿದ್ದಲ್ಲಿ ಮತ್ತೆ ಯಾರಾದರೂ ಜೆಡಿಎಸ್‌ಗೆ ಹೋಗಿ ಸ್ಪರ್ಧಿಸಿದರೆ ತ್ರಿಕೋನ ಸ್ಪರ್ಧೆ ನಡೆದರೂ ಅಚ್ಚರಿಯೇನಲ್ಲ. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಭಾರೀ ಫೈಟ್‌ ನಡೆಯುತ್ತಿದೆ. ಕೋನರಡ್ಡಿ ಅವರಲ್ಲದೆ, ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿನೋದ ಅಸೂಟಿ, ಮಾಜಿ ಸಚಿವ ಕೆ.ಎನ್‌.ಗಡ್ಡಿ, ರಾಜಶೇಖರ ಮೆಣಸಿನಕಾಯಿ ಸೇರಿ ಎಂಟು ಮಂದಿ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್‌ನಲ್ಲಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಲಾಗಿದೆ.

ಚುನಾವಣಾ ಹೊಸ್ತಿಲಲ್ಲಿ ಜೆಡಿಎಸ್‌ ಸಂಘಟನೆ ಚುರುಕು..!

6.ಕಲಘಟಗಿಗೆ ಲಾಡೋ, ಛಬ್ಬಿಯೋ?

ಕಲಘಟಗಿ ಕ್ಷೇತ್ರದಲ್ಲಿ ದಿನೇದಿನೇ ಚುನಾವಣೆ ರಂಗು ಏರುಗತಿಯಲ್ಲೇ ಸಾಗುತ್ತಿದ್ದು, ಈಗಲೇ ಹೈವೋಲ್ಟೇಜ್‌ ಕ್ಷೇತ್ರವಾಗಿ ಪರಿಣಮಿಸುತ್ತಿದೆ. ಒಂದು ಕಾಲದಲ್ಲಿ ಬಿಜೆಪಿ ಭದ್ರಕೋಟೆಯಂತಿದ್ದ ಕಲಘಟಗಿಯಲ್ಲಿ 2008ರಲ್ಲಿ ಬಳ್ಳಾರಿಯಿಂದ ವಲಸೆ ಬಂದ ಗಣಿಧಣಿ ಸಂತೋಷ ಲಾಡ್‌ ಕಾಂಗ್ರೆಸ್ಸಿನಿಂದ ಗೆಲುವು ಕಂಡರು. 2 ಬಾರಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿ ಸಚಿವರೂ ಆಗಿದ್ದರು. ಆದರೆ 2018ರಲ್ಲಿ ಬಿಜೆಪಿಯ ನಿಂಬಣ್ಣವರ ವಿರುದ್ಧ ಪರಾಭವಗೊಂಡರು. ಆಮೇಲೆ ಕೆಲ ತಿಂಗಳು ಕ್ಷೇತ್ರದಿಂದ ಲಾಡ್‌ ನಾಪತ್ತೆಯಾಗಿದ್ದರು. ಆಗ ಈ ಕ್ಷೇತ್ರವನ್ನು ಕಾಂಗ್ರೆಸ್‌ನ ಮೇಲ್ಮನೆ ಮಾಜಿ ಸದಸ್ಯ ನಾಗರಾಜ ಛಬ್ಬಿ ಎಂಟ್ರಿ ಕೊಟ್ಟು ತಾವೇ ಅಭ್ಯರ್ಥಿಯೆಂದು ಘೋಷಿಸಿಕೊಂಡಿದ್ದಾರೆ. ಇದರಿಂದಾಗಿ ಕಂಗೆಟ್ಟಲಾಡ್‌ ಮತ್ತೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾ ನಾನು ಕ್ಷೇತ್ರವನ್ನು ಬಿಟ್ಟಿಲ್ಲ. ಬಿಡುವುದೂ ಇಲ್ಲ. ನಾನೇ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದುಂಟು. ಇಬ್ಬರು ನಾಯಕರು ಈಗಿನಿಂದಲೇ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆಯುತ್ತಿದ್ದು, ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇದರ ಜತೆಗೆ ಇನ್ನೊಬ್ಬ ಕಾಂಗ್ರೆಸ್‌ ಮುಖಂಡ ಬಂಗಾರೇಶ ಹಿರೇಮಠ ಕೂಡ ಪಕ್ಷದ ಟಿಕೆಟ್‌ ಆಕಾಂಕ್ಷಿ. ಇನ್ನು ಬಿಜೆಪಿಯಲ್ಲಿ ಹಾಲಿ ಶಾಸಕ ನಿಂಬಣ್ಣವರ ಮತ್ತೊಮ್ಮೆ ಸ್ಪರ್ಧಿಸುವ ಉಮೇದಿನಲ್ಲಿದ್ದರೂ ಪಕ್ಷದ ಮುಖಂಡ ಮಹೇಶ ಟೆಂಗಿನಕಾಯಿ ಹೆಸರು ಕೂಡ ಕೇಳಿ ಬರುತ್ತದೆ.

8.ಕುಂದಗೋಳ: ಕುಸುಮಾವತಿಗೆ ಪಕ್ಷದವರೇ ಎದುರಾಳಿ

ಕುಂದಗೋಳ ಕ್ಷೇತ್ರವನ್ನು ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ದಿ.ಸಿ.ಎಸ್‌.ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಪ್ರತಿನಿಧಿಸುತ್ತಿದ್ದಾರೆ. ಕಳೆದ ಬಾರಿ ಸಿ.ಎಸ್‌. ಶಿವಳ್ಳಿ ಗೆಲುವು ಕಂಡಿದ್ದರು. ಆದರೆ ಕೆಲ ಸಮಯದಲ್ಲೇ ಇಹಲೋಕ ತ್ಯಜಿಸಿದ್ದರಿಂದ ನಡೆದ ಉಪಚುನಾವಣೆಯಲ್ಲಿ ಪತ್ನಿ ಕುಸುಮಾವತಿ ಶಿವಳ್ಳಿ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಕುಸುಮಾವತಿ ಮತ್ತೊಂದು ಅವಧಿಗೆ ಆಕಾಂಕ್ಷಿಯಾಗಿದ್ದಾರೆ. ಆದರೂ ಟಿಕೆಟ್‌ಗಾಗಿ ಪಕ್ಷದಲ್ಲಿ ಭಾರೀ ರೇಸ್‌ ನಡೆಯುತ್ತಿದೆ. 15ಕ್ಕೂ ಹೆಚ್ಚು ಮಂದಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟು ಪ್ರಯತ್ನಕ್ಕಿಳಿದಿದ್ದಾರೆ. ಅದರಲ್ಲಿ ಮಾಜಿ ಶಾಸಕ ಎಂ.ಎಸ್‌.ಅಕ್ಕಿ, ಕುಸುಮಾವತಿ ಮೈದುನ ಮುತ್ತಣ್ಣ ಶಿವಳ್ಳಿ, ಶಿವಾನಂದ ಬೆಂತೂರ ಸೇರಿ ಹಲವು ಪ್ರಮುಖರಿದ್ದಾರೆ. ಅದೇ ರೀತಿ ಜೆಡಿಎಸ್‌ನಿಂದ ಒಂದು ಕಾಲದ ಸಿ.ಎಸ್‌.ಶಿವಳ್ಳಿ ಅವರ ಆಪ್ತ ಹಜರತ್‌ ಅಲಿ ಜೋಡಮನಿ ಸ್ಪರ್ಧಿಸುವ ಉಮೇದಿನಲ್ಲಿದ್ದಾರೆ. ಬಿಜೆಪಿಯಿಂದ ಎಂ.ಆರ್‌.ಪಾಟೀಲ, ಎಸ್‌.ಐ.ಚಿಕ್ಕನಗೌಡ ಹೆಸರು ಕೇಳಿ ಬರುತ್ತಿದೆ. ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವುದು ಖಚಿತ.

click me!