ರೇಷ್ಮೆನಗರಿ ರಾಮನಗರ ಜಿಲ್ಲೆಗೆ 5ನೇ ಬಾರಿ ಮುಖ್ಯಮಂತ್ರಿ ಗಾದಿ ಸಿಗುವ ನಿರೀಕ್ಷೆಗಳು ಹುಸಿಯಾಗಿದ್ದು, ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಹುದ್ದೆ ದೊರಕಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೂಲಕ ಐದನೇ ಬಾರಿಗೆ ಮುಖ್ಯಮಂತ್ರಿ ಸಿಎಂ ಗಾದಿ ಒಲಿಯುತ್ತಿದೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು.
ಎಂ.ಅಫ್ರೋಜ್ ಖಾನ್
ರಾಮನಗರ (ಮೇ.19): ರೇಷ್ಮೆನಗರಿ ರಾಮನಗರ ಜಿಲ್ಲೆಗೆ 5ನೇ ಬಾರಿ ಮುಖ್ಯಮಂತ್ರಿ ಗಾದಿ ಸಿಗುವ ನಿರೀಕ್ಷೆಗಳು ಹುಸಿಯಾಗಿದ್ದು, ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಹುದ್ದೆ ದೊರಕಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೂಲಕ ಐದನೇ ಬಾರಿಗೆ ಮುಖ್ಯಮಂತ್ರಿ ಸಿಎಂ ಗಾದಿ ಒಲಿಯುತ್ತಿದೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಶಿವಕುಮಾರ್ ಅವರಿಗೆ ಡಿಸಿಎಂ ಸ್ಥಾನ ನೀಡಿ ಸಮಾಧಾನ ಪಡಿಸಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ವರಿಷ್ಠರು ನೀಡಿದ್ದ ಜವಾಬ್ದಾರಿಯನ್ನು ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರುವ ಮೂಲಕ ಪೂರ್ಣ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು ಹಿಡಿದಿದ್ದರು.
ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಸಿಎಂ ಕುರ್ಚಿಯ ಪ್ರಬಲ ಆಕಾಂಕ್ಷಿಯಾಗಿದ್ದರು. ಈ ಹಿಂದೆ ಅಂದರೆ 1952ರಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಜಿಲ್ಲೆಯವರೇ ಆದ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾಗಿದ್ದರು. ಇದಾದ 71 ವರ್ಷಗಳ ತರುವಾಯ ಅಂದರೆ 2023ರಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಾರೆ ಎಂಬ ವಿಶ್ವಾಸ ಗಟ್ಟಿಯಾಗಿತ್ತು. ಅಲ್ಲದೆ, 7ನೇ ವಿಧಾನಸಭೆಯಲ್ಲಿ ಕನಕಪುರ ಕ್ಷೇತ್ರ ಶಾಸಕರಾಗಿದ್ದ ರಾಮಕೃಷ್ಣ ಹೆಗಡೆ ಅವರು 10ನೇ ಮುಖ್ಯಮಂತ್ರಿಯಾಗಿದ್ದರು.
ಗೆದ್ದರೂ, ಸೋತರು ಇದೇ ನನ್ನ ಕರ್ಮಭೂಮಿ: ಸಿ.ಪಿ.ಯೋಗೇಶ್ವರ್
ಈ ಹಿಂದೆ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರಗಳಲ್ಲಿ ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವಿ ರಾಜಕಾರಣಿಯಾದ ಶಿವಕುಮಾರ್ ಅವರಿಗೆ ಅವಕಾಶ ದೊರೆತು 16ನೇ ವಿಧಾನಸಭೆಯಲ್ಲಿ 24ನೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದನ್ನು ನೋಡಲು ಜಿಲ್ಲೆಯ ಜನರು ಕಾತುರರಾಗಿದ್ದರು. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಕಾದಾಟ ತೀವ್ರ ಕುತೂಹಲ ಮೂಡಿಸಿತ್ತು. ಆದರೀಗ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿಯವರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಗೆ ಮನವೊಲಿಸಿ ಬಿಕ್ಕಟ್ಟು ಶಮನಗೊಳಿಸಿದ್ದಾರೆ.
ಸಂಭ್ರಮದ ಬದಲು ಬೇಸರ: ಡಿ.ಕೆ.ಶಿವಕುಮಾರ್ ಅವರು ಸೋನಿಯಾ ಗಾಂಧಿರವರ ಮಾತಿಗೆ ಮನ್ನಣೆ ನೀಡಿ ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಂಡಿದ್ದಾಯಿತು. ಆದರೆ, ಡಿಕೆಶಿರವರ ಈ ನಿರ್ಧಾರದಿಂದ ಅವರ ಅಭಿಮಾನಿಗಳು ಹಾಗೂ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮ ಪಡುವುದರ ಬದಲು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯರವರು ಹೆಸರು ಘೋಷಣೆಯಾದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ತವರು ಜಿಲ್ಲೆಯಲ್ಲಿ ಗಲಾಟೆಗಳಾಗುತ್ತವೆ ಎಂಬ ಕಾರಣಕ್ಕೆ ಹೈ ಅಲರ್ಚ್ ಆಗಿರಲು ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳು ಜಿಲ್ಲೆಯ ಪೊಲೀಸರಿಗೆ ಸೂಚನೆ ನೀಡಿದ್ದರು.
ಡಿಕೆಶಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿದರೆ ಗಲಾಟೆ, ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ತುಕಡಿಯನ್ನು ಮುಂಜಾಗೃತ ಕ್ರಮವಾಗಿ ನಿಯೋಜನೆ ಮಾಡಿದ್ದರು. ಆದರೆ, ಡಿಕೆ ಸಹೋದರರು ಯಾರು ಪ್ರತಿಭಟನೆಗಳನ್ನು ನಡೆಸಬಾರದು. ಪಕ್ಷಕ್ಕೆ ಮುಜುಗರ ಆಗುವಂತೆ ನಡೆದುಕೊಳ್ಳಬಾರದೆಂದು ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದರು. ಈ ಕಾರಣದಿಂದಾಗಿ ಡಿಕೆಶಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆಯನ್ನು ವ್ಯಕ್ತಪಡಿಸಲಿಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಗಾದಿ ಕೈತಪ್ಪಿರುವುದರಿಂದ ನೋವಿನಲ್ಲಿರುವ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸದೆ, ಉಪಮುಖ್ಯಮಂತ್ರಿ ಹುದ್ದೆ ಸಿಕ್ಕಿದ್ದಕ್ಕೆ ಸಂಭ್ರಮವೂ ಪಡದೆ ಬೇಸರದಲ್ಲಿದ್ದಾರೆ.
ಸೈನಿಕನನ್ನು ಮಕಾಡೆ ಮಲಗಿಸಿದ ದಳಪತಿ: ಯೋಗೇಶ್ವರ್ ವಿರುದ್ಧ ಎರಡನೇ ಬಾರಿ ಗೆದ್ದ ಎಚ್‌ಡಿಕೆ
ರಾಮನಗರ ಜಿಲ್ಲೆಗೆ ಒಲಿದಿದ್ದ ಸಿಎಂ ಗಾದಿ: 1952ರ ಮೊದಲ ವಿಧಾನಸಭೆಯಲ್ಲಿ ಮೈಸೂರು ರಾಜ್ಯದ ಪ್ರಭಾವಿ ನಾಯಕರಾಗಿದ್ದ ಕೆಂಗಲ್ ಅವರಿಗೆ ಮುಖ್ಯಮಂತ್ರಿ ಪದವಿ ಒಲಿದು 4 ವರ್ಷ 5 ತಿಂಗಳು ಆಡಳಿತ ನಡೆಸಿದ್ದರು. 1983ರಲ್ಲಿ ರಾಜ್ಯದಲ್ಲಿ ಮೊಟ್ಟದ ಮೊದಲ ಬಾರಿಗೆ ಬಿಜೆಪಿ ಬೆಂಬಲದೊಂದಿಗೆ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿತು. ಆಗ ಹೆಗಡೆಯವರು ಉಭಯ ಸದನಗಳ ಸದಸ್ಯರಾಗಿರಲಿಲ್ಲ. ಅವರಿಗಾಗಿ ಕನಕಪುರದಿಂದ ಚುನಾಯಿತರಾಗಿದ್ದ ಪಿ.ಜಿ.ಆರ್.ಸಿಂಧ್ಯಾ ಸ್ಥಾನ ತೆರವು ಮಾಡಿಕೊಟ್ಟರು. ಕನಕಪುರದಲ್ಲಿ ನಡೆದ ಮರು ಚುನಾವಣೆಯಲ್ಲಿ ಹೆಗಡೆ ಗೆಲುವು ಸಾಧಿಸಿ, ಸದನ ಸದಸ್ಯರಾದರು. 1994ರ ಚುನಾವಣೆಯಲ್ಲಿ ರಾಮನಗರದಿಂದಲೇ ಗೆದ್ದ ದೇವೇಗೌಡರು ಮುಖ್ಯಮಂತ್ರಿ ಹುದ್ದೆಗೇರಿ 17 ತಿಂಗಳು ಆಡಳಿತ ನಡೆಸಿದರು. ರಾಮನಗರ ಪ್ರತಿನಿಧಿ ಆಗಿದ್ದಾಗಲೇ ಪ್ರಧಾನಮಂತ್ರಿ ಹುದ್ದೆಯೂ ಒಲಿಯಿತು. 2004ರಲ್ಲಿ ರಾಮನಗರ ಕ್ಷೇತ್ರದಿಂದ ಗೆದ್ದ ಕುಮಾರಸ್ವಾಮಿ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದಲ್ಲಿ 20 ತಿಂಗಳು ಹಾಗೂ 2018ರಲ್ಲಿ ಜೆಡಿಎಸ್ - ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ 2ನೇ ಬಾರಿ 14 ತಿಂಗಳು ಸಿಎಂ ಹುದ್ದೆ ನಿಭಾಯಿಸಿದ್ದರು.