Karnataka Assembly Elections 2023: ಕಾಂಗ್ರೆಸ್‌-ಬಿಜೆಪಿ ಟಿಕೆಟ್‌ ಇನ್ನೂ ಕಗ್ಗಂಟು..!

By Kannadaprabha News  |  First Published Apr 6, 2023, 1:00 AM IST

ಕುಂದಗೋಳ ಹಲವು ವೈಶಿಷ್ಟ್ಯಗಳಿಂದ ಕೂಡಿದ ಕ್ಷೇತ್ರ. ಕಾಂಗ್ರೆಸ್ಸಿನ ಕುಸುಮಾವತಿ ಶಿವಳ್ಳಿಯೇ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ವಿರೋಧ ಎದುರಿಸುವಂತಾಗಿದೆ. ಹೀಗಾಗಿ, ಈ ಸಲ ಅವರಿಗೆ ಟಿಕೆಟ್‌ ಗ್ಯಾರಂಟಿ ಇಲ್ಲ. ಇನ್ನು ಬಿಜೆಪಿಯಲ್ಲೂ ಟಿಕೆಟ್‌ ಯಾರಿಗೆ ಎಂಬುದು ಖಚಿತವಾಗಿಲ್ಲ. ಎರಡು ಪಕ್ಷಗಳಲ್ಲೂ ಭಾರೀ ಪೈಪೋಟಿ ನಡೆದಿದೆ


ಶಿವಾನಂದ ಗೊಂಬಿ

ಹುಬ್ಬಳ್ಳಿ(ಏ.06):  ಹಿಂದುಸ್ತಾನಿ ಸಂಗೀತಕ್ಕೆ ಹೆಸರುವಾಗಿರುವ ಕುಂದಗೋಳದಲ್ಲೀಗ ಚುನಾವಣಾ ರಾಜಕೀಯದ ತಾಲೀಮು ಬಲು ಜೋರಾಗಿದೆ. ಇದು ಹಲವು ವೈಶಿಷ್ಟ್ಯಗಳಿಂದ ಕೂಡಿದ ಕ್ಷೇತ್ರ. ಕಾಂಗ್ರೆಸ್ಸಿನ ಕುಸುಮಾವತಿ ಶಿವಳ್ಳಿಯೇ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ವಿರೋಧ ಎದುರಿಸುವಂತಾಗಿದೆ. ಹೀಗಾಗಿ, ಈ ಸಲ ಅವರಿಗೆ ಟಿಕೆಟ್‌ ಗ್ಯಾರಂಟಿ ಇಲ್ಲ. ಇನ್ನು ಬಿಜೆಪಿಯಲ್ಲೂ ಟಿಕೆಟ್‌ ಯಾರಿಗೆ ಎಂಬುದು ಖಚಿತವಾಗಿಲ್ಲ. ಎರಡು ಪಕ್ಷಗಳಲ್ಲೂ ಭಾರೀ ಪೈಪೋಟಿ ನಡೆದಿದೆ. ಇದರೊಂದಿಗೆ ಜೆಡಿಎಸ್‌, ಆಪ್‌ ಪಕ್ಷಗಳು ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿವೆ.

Latest Videos

undefined

ಸಂಗೀತದ ಮೇರು ಪರ್ವತಗಳನ್ನು ಹುಟ್ಟುಹಾಕಿರುವ ಕ್ಷೇತ್ರವಿದು. ಸವಾಯಿ ಗಂಧರ್ವರ ಹುಟ್ಟೂರು. ಗಂಗೂಬಾಯಿ ಹಾನಗಲ್‌, ಭೀಮಸೇನ ಜೋಶಿ ಗಾಯಕರಾಗಿ ಹೊರಹೊಮ್ಮಿದ್ದು ಇಲ್ಲಿನ ತಾಲೀಮಿನಿಂದಲೆ.

ಬಿಜೆಪಿ ಮುಖಂಡ YOGESH GOWDA ಹತ್ಯೆ ಪ್ರಕರಣ, ಬಿರಾದಾರ್‌ ಮಾಫಿ ಸಾಕ್ಷಿಗೆ ಹೈಕೋರ್ಟ್ ಒಪ್ಪಿಗೆ

ಒಮ್ಮೆ ಬಿಟ್ಟು ಒಮ್ಮೆ ಗೆಲುವು:

1957 ಮತ್ತು 1962ರಲ್ಲಿ ನಡೆದ ಚುನಾವಣೆಯಲ್ಲಿ ಟಿ.ಕೆ. ಕಾಂಬಳಿ ಹಾಗೂ 2013 ಹಾಗೂ 2018ರಲ್ಲಿ ಸಿ.ಎಸ್‌. ಶಿವಳ್ಳಿ ಸತತವಾಗಿ ಎರಡು ಬಾರಿ ಆಯ್ಕೆಯಾಗಿದ್ದನ್ನು ಹೊರತುಪಡಿಸಿದರೆ, ಉಳಿದೆಲ್ಲ ಚುನಾವಣೆಗಳಲ್ಲಿ ಪ್ರತಿ ಸಲವೂ ಬದಲಾವಣೆ ಬಯಸಿದ ಹಾಲಿ ಶಾಸಕರಿಗೆ ಪಾಠ ಕಲಿಸಿದ ಹೆಮ್ಮೆ ಈ ಕ್ಷೇತ್ರದ್ದು.

ಕೆಲವರು ಒಮ್ಮೆ ಬಿಟ್ಟು ಮತ್ತೊಮ್ಮೆ ಗೆಲವು ಸಾಧಿಸಿದ್ದುಂಟು. ಆದರೆ, ನಿರಂತರವಾಗಿ ಆಯ್ಕೆಯಾಗಿಲ್ಲ. 1957ರಿಂದ ಈ ವರೆಗೆ ಬರೋಬ್ಬರಿ 15 ಚುನಾವಣೆಗಳನ್ನು ಕಂಡಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ 9 ಬಾರಿ ಗೆಲವು ಕಂಡರೆ, ಜನತಾ ಪರಿವಾರದವರು 3 ಬಾರಿ, 2 ಸಲ ಪಕ್ಷೇತರರು, ಒಂದು ಬಾರಿ ಮಾತ್ರ ಬಿಜೆಪಿ ಗೆಲವು ಕಂಡಿದೆ. ಈ ಕಾರಣದಿಂದ ಕಾಂಗ್ರೆಸ್ಸಿನ ಭದ್ರಕೋಟೆ ಎನಿಸಿದರೂ, ಈಗ ಬಿಜೆಪಿ ಕೂಡ ಅಷ್ಟೇ ಹಿಡಿತವನ್ನು ಹೊಂದಿದೆ.

ಕಾಂಗ್ರೆಸ್ಸಿನ ಟಿ.ಕೆ. ಕಾಂಬಳಿ 2 ಸಲ, ಸಿ.ಎಸ್‌. ಶಿವಳ್ಳಿ 3 ಸಲ ಆಯ್ಕೆಯಾಗಿದ್ದಾರೆ. ಉಳಿದಂತೆ ಎಸ್‌.ಆರ್‌. ಬೊಮ್ಮಾಯಿ, ರಂಗನಗೌಡರ, ಎಂ.ಎಸ್‌. ಕಟಗಿ, ವಿ.ಎಸ್‌. ಕುಬಿಹಾಳ, ಬಿ.ಎ. ಉಪ್ಪಿನ, ಜಿ.ಎಚ್‌. ಜುಟ್ಟಲ್‌, ಎಂ.ಎಸ್‌. ಅಕ್ಕಿ , ಎಸ್‌.ಐ. ಚಿಕ್ಕನಗೌಡರ ತಲಾ ಒಂದು ಬಾರಿ ಆಯ್ಕೆಯಾದವರು. ಕುಸುಮಾವತಿ ಶಿವಳ್ಳಿ ಉಪಚುನಾವಣೆಯಲ್ಲಿ ಗೆದ್ದು ಸದ್ಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಈಗಿನ ಚಿತ್ರಣ:

ಸದ್ಯ ಕಾಂಗ್ರೆಸ್ಸಿನ ಕುಸುಮಾವತಿ ಶಿವಳ್ಳಿ ಪ್ರತಿನಿಧಿಸುತ್ತಿದ್ದರೂ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಕಾಂಗ್ರೆಸ್ಸಿನಲ್ಲೇ ಹೆಚ್ಚಾಗಿದೆ. ಇವರಿಗೆ ಟಿಕೆಟ್‌ ನೀಡಬೇಡಿ ಎಂದು ಒಂದು ಬಣ ಪಟ್ಟು ಹಿಡಿದಿದ್ದು, ಒಂದು ವೇಳೆ ಕುಸುಮಾವತಿ ಅಥವಾ ಅವರ ಕುಟುಂಬದವರಿಗೆ ಟಿಕೆಟ್‌ ನೀಡಿದರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಯಾರಿಗೆ ಟಿಕೆಟ್‌ ನೀಡಬೇಕೆನ್ನುವುದು ಕೆಪಿಸಿಸಿಗೆ ದೊಡ್ಡ ಸವಾಲಿನ ಪ್ರಶ್ನೆಯಾದಂತಾಗಿದೆ.

ಇನ್ನು ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ನಾಲ್ಕು ಬಾರಿ ಟಿಕೆಟ್‌ ಪಡೆದು ಮೂರು ಬಾರಿ ಸೋತಿರುವ ಎಸ್‌.ಐ. ಚಿಕ್ಕನಗೌಡರ ಮತ್ತೆ ಟಿಕೆಟ್‌ ಕೇಳಿದ್ದಾರೆ. ಇವರು ಬಿಎಸ್‌ವೈ ಸಂಬಂಧಿಕರು ಆಗಿರುವುದು ಈ ಸಲವೂ ತಮಗೆ ಟಿಕೆಟ್‌ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಇನ್ನೂ ಸಚಿವ ಸಿ.ಸಿ.ಪಾಟೀಲರ ಸಂಬಂಧಿ ಎಂ.ಆರ್‌.ಪಾಟೀಲ ಕೂಡ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಈ ಇಬ್ಬರಲ್ಲಿ ಯಾರಿಗೆ ಟಿಕೆಟ್‌ ನೀಡುವುದು ಎಂಬ ಗೊಂದಲ ಬಿಜೆಪಿಯಲ್ಲೂ ಇದೆ. ಕುರುಬ ಸಮುದಾಯಕ್ಕೆ ಕೊಡಿ ಎಂಬ ಬೇಡಿಕೆಯನ್ನು ಆ ಸಮುದಾಯ ಪಕ್ಷದ ಮುಂದಿಟ್ಟಿದೆ. ಈ ಎಲ್ಲದರ ನಡುವೆ ಆಮ್‌ ಆದ್ಮಿ ಪಕ್ಷ, ಜೆಡಿಎಸ್‌ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಯಾರಿ ನಡೆಸಿದೆ.
ಬಿಜೆಪಿ ಹಾಗೂ ಕಾಂಗ್ರೆಸ್‌ ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು ಕಾಯ್ದು ನೋಡಬೇಕು.

ಪಕ್ಷೇತರರಾಗಿ ಗೆದ್ದಿದ್ದ ಬೊಮ್ಮಾಯಿ

ಕುಂದಗೋಳ ತಾಲೂಕು ಕಮಡೊಳ್ಳಿ ಮೂಲದ ಎಸ್‌.ಆರ್‌. ಬೊಮ್ಮಾಯಿ 1967ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಕ್ಷೇತ್ರದ ಪ್ರಥಮ ಪಕ್ಷೇತರ ಶಾಸಕರು ಕೂಡ ಇವರೆ. ಬಳಿಕ ಕುಂದಗೋಳ ಕ್ಷೇತ್ರವನ್ನು ಬಿಟ್ಟು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಆಯ್ಕೆಯಾಗಿ ಸಚಿವ, ಮುಖ್ಯಮಂತ್ರಿಯೂ ಆದರು. ಕುಂದಗೋಳ ಮೂಲದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಹುದ್ದೆ ವರೆಗೆ ಏರಿದ ಏಕೈಕ ವ್ಯಕ್ತಿ ಇವರು. ಇನ್ನು ಸಿ.ಎಸ್‌. ಶಿವಳ್ಳಿ ಕೂಡ ಮೊದಲಿಗೆ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಕಂಡು ನಂತರ ಕಾಂಗ್ರೆಸ್‌ ಸೇರಿದ್ದರು.

ಬೆಳಗಾವಿ ರಾಜಕಾರಣ ಹುಬ್ಬಳ್ಳಿಗೆ ಶಿಫ್ಟ್: ರಹಸ್ಯ ಸಭೆಯಲ್ಲಿ ನಡೆದಿದ್ದೇನು?

ಮೊದಲ ಮಹಿಳಾ ಶಾಸಕಿ

2019ರ ಉಪಚುನಾವಣೆಯಲ್ಲಿ ಆಯ್ಕೆಯಾದ ಕುಸುಮಾವತಿ ಶಿವಳ್ಳಿ ಕ್ಷೇತ್ರದ ಮೊದಲ ಮಹಿಳಾ ಶಾಸಕಿಯಾಗಿದ್ದಾರೆ.

ಮತದಾರರು
ಒಟ್ಟು ಮತದಾರರು- 182963

ಪುರುಷ- 94129
ಮಹಿಳೆ- 88827
ಇತರೆ- 7

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!