ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಆಕಾಂಕ್ಷಿಗಳಿಂದ ಅರ್ಜಿ ಪಡೆದಿರುವ ಕಾಂಗ್ರೆಸ್ ಫೆ. 10ಕ್ಕೆ 100 ಜನರ ಪಟ್ಟಿಬಿಡುಗಡೆ ಮಾಡುವುದಾಗಿ ಹೇಳಿದ್ದರೂ ಅರ್ಜಿ ಸಲ್ಲಿಸಿದವರ ಜತೆ ಹೊರಗಿನವರ ಪೈಪೋಟಿ ಹೆಚ್ಚಿದ್ದರಿಂದ ಪಟ್ಟಿವಿಳಂಬವಾಗುತ್ತಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಜ.28) : ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಆಕಾಂಕ್ಷಿಗಳಿಂದ ಅರ್ಜಿ ಪಡೆದಿರುವ ಕಾಂಗ್ರೆಸ್ ಫೆ. 10ಕ್ಕೆ 100 ಜನರ ಪಟ್ಟಿಬಿಡುಗಡೆ ಮಾಡುವುದಾಗಿ ಹೇಳಿದ್ದರೂ ಅರ್ಜಿ ಸಲ್ಲಿಸಿದವರ ಜತೆ ಹೊರಗಿನವರ ಪೈಪೋಟಿ ಹೆಚ್ಚಿದ್ದರಿಂದ ಪಟ್ಟಿವಿಳಂಬವಾಗುತ್ತಿದೆ.
ಕಾಂಗ್ರೆಸ್ ಶಾಸಕಿ ಕುಸುಮಾವತಿ ಪುನಃರಾಯ್ಕೆ ಬಯಸಿ ಅರ್ಜಿ ಸಲ್ಲಿಸಿದ್ದರೂ ಕುಂದಗೋಳ ಕ್ಷೇತ್ರದ ಟಿಕೆಟ್ ವಿಷಯ ಕೆಪಿಸಿಸಿಗೆ ದೊಡ್ಡ ತಲೆನೋವಾಗಿದೆ. ಇಲ್ಲಿ ಪಕ್ಷದ ಶಾಸಕಿಗೆ ಭಾರಿ ಪೈಪೋಟಿ ಇರುವುದು ಮುಖಂಡರನ್ನು ಕಂಗೆಡಿಸಿದೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಕುಂದಗೋಳ ಟಿಕೆಟ್ ಘೋಷಣೆ ಕಷ್ಟ ಎನ್ನಲಾಗುತ್ತಿದೆ.
ಉತ್ತರ ಕರ್ನಾಟಕದಲ್ಲಿ ಇಂದು ಅಮಿತ್ ‘ಶೋ’
ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಧಾರವಾಡ ಜಿಲ್ಲೆಯಲ್ಲೇ ಕುಂದಗೋಳ ಕ್ಷೇತ್ರದಲ್ಲಿರುವಷ್ಟುಪೈಪೋಟಿ ಬೇರೆ ಕ್ಷೇತ್ರಗಳಲ್ಲಿ ಇಲ್ಲ. ಬರೋಬ್ಬರಿ 17 ಜನ ಇಲ್ಲಿ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಹೀಗೆ ಪೈಪೋಟಿಗೆ ಇಳಿದಿರುವವರ ಪೈಕಿ ಶಾಸಕಿಯ ಮೈದುನ ಹಾಗೂ ಕ್ಷೇತ್ರದ ಹೊರಗಿನವರೂ ಇದ್ದಾರೆ.
ಏಕೆ ಪೈಪೋಟಿ?
ಸಿ.ಎಸ್. ಶಿವಳ್ಳಿ ಈ ಕ್ಷೇತ್ರವನ್ನು 3 ಬಾರಿ ಪ್ರತಿನಿಧಿಸಿದ್ದರು. 2018ರಲ್ಲಿ ಸಿ.ಎಸ್. ಶಿವಳ್ಳಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿ ಮಂತ್ರಿ ಕೂಡ ಆಗಿದ್ದರು. ಆದರೆ ವರ್ಷ ಕಳೆಯುವಷ್ಟರಲ್ಲೇ ಅಕಾಲಿಕ ನಿಧನರಾದರು. ಬಳಿಕ ನಡೆದ ಉಪಚುನಾವಣೆ ವೇಳೆ ಅನುಕಂಪ ಕೆಲಸ ಮಾಡುತ್ತದೆ ಎಂದು ಕೆಪಿಸಿಸಿ ಶಿವಳ್ಳಿ ಅವರ ಪತ್ನಿ ಕುಸುಮಾವತಿಗೆ ಟಿಕೆಟ್ ಘೋಷಿಸಿದಾಗ ಬರೋಬ್ಬರಿ 8 ಜನ ಬಂಡಾಯ ಎದ್ದಿದ್ದರು. ಆಗ ಏನೇನೋ ಕಸರತ್ತು ಮಾಡಿ ಅವರನ್ನೆಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಮಾಧಾನ ಪಡಿಸಿ, ಕುಸುಮಾವತಿ ಗೆಲ್ಲುವಂತೆ ಮಾಡಿದ್ದರು.
ಇದೀಗ ಅವರೆಲ್ಲರ ಜತೆಗೆ ಮತ್ತಷ್ಟುಜನ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದವರ ಸಂಖ್ಯೆ 17ಕ್ಕೇರಿದೆ. ಅರ್ಜಿ ಸಲ್ಲಿಸಿದವರಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಶಾಸಕರ ಮೈದುನ ಮುತ್ತಣ್ಣ ಶಿವಳ್ಳಿ, ಶಿವಾನಂದ ಬೆಂತೂರ ಇದ್ದಾರೆ.
ಒಂದು ವೇಳೆ ಕುಸುಮಾವತಿ ಅವರಿಗೆ ಟಿಕೆಟ್ ಘೋಷಣೆ ಮಾಡಿದರೆ ಪಕ್ಷದಲ್ಲಿ ಬಂಡಾಯ ಏಳುವುದು ಕಟ್ಟಿಟ್ಟಬುತ್ತಿ ಎಂಬ ಸೂಚನೆಯನ್ನು ಅರ್ಜಿ ಸಲ್ಲಿಸಿದವರು ಈಗಾಗಲೇ ವರಿಷ್ಠರಿಗೆ ಸಣ್ಣದಾಗಿ ನೀಡಿರುವುದು ಕೆಪಿಸಿಸಿಗೆ ದೊಡ್ಡ ಸವಾಲಾಗಿದೆ.
ನಿಕೇತರಾಜ್-ಪ್ರಕಾಶಗೌಡ:
ಕೆಪಿಸಿಸಿ ವಕ್ತಾರ, ಬೆಂಗಳೂರು ಮೂಲದ ನಿಕೇತರಾಜ್ ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಅವರು ಅರ್ಜಿ ಕೂಡ ಸಲ್ಲಿಸಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿರುವ ನಿಕೇತರಾಜ್, ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಸ್ಥಳೀಯರಿಗೆ ಟಿಕೆಟ್ ಕೊಡುವುದರಿಂದ ಬಂಡಾಯ ಎದುರಿಸಬೇಕಾದ ಪರಿಸ್ಥಿತಿ ಬಂದರೆ ನಿಕೇತರಾಜ್ ಅವರನ್ನು ಕಣಕ್ಕಿಳಿಸುವ ಚಿಂತನೆಯೂ ನಡೆದಿದೆ.
ಇದರೊಂದಿಗೆ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಅವರು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿಲ್ಲ. ಆದರೆ 2019ರಲ್ಲಿ ನಡೆದ ಉಪಚುನಾವಣೆಯ ಜವಾಬ್ದಾರಿ ಹೊತ್ತಿದ್ದ ಡಿ.ಕೆ. ಶಿವಕುಮಾರ ಅವರ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದವರು. ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಪ್ರಕಾಶಗೌಡ ಮೂಲತಃ ಹಾನಗಲ್ ಕ್ಷೇತ್ರದವರಾದರೂ ಕುಂದಗೋಳ ಕ್ಷೇತ್ರದಲ್ಲಿ ಸಾಕಷ್ಟುಓಡಾಡಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಇವರ ಪಾತ್ರವೂ ಇದೆ. ಬಂಡಾಯ ಶಮನಗೊಳಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಪರವಾಗಿ ಕೆಲಸ ಮಾಡಿದರು.
ಕಾಂಗ್ರೆಸ್ ಮಾಡಿದ ರಾಡಿ ನಮಗೆ ಸರಿಪಡಿಸಲು ಆಗುತ್ತಿಲ್ಲ; ಜಗದೀಶ್ ಶೆಟ್ಟರ್
ಮೇಲಾಗಿ ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಈ ಕ್ಷೇತ್ರದಲ್ಲಿ ಈ ಸಮುದಾಯದ ಮತಗಳು ಸಾಕಷ್ಟುಪ್ರಮಾಣದಲ್ಲಿ ಇರುವುದರಿಂದ ಇವರು ನಿಂತರೆ ಪಕ್ಷಕ್ಕೆ ಅನುಕೂಲ. ಇವರಿಗೆ ಟಿಕೆಟ್ ಕೊಟ್ಟರೆ ಬಂಡಾಯದ ಕೂಗು ಅಷ್ಟೊಂದು ಕೇಳಿ ಬರಲಿಕ್ಕಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಅರ್ಜಿ ಸಲ್ಲಿಸದಿದ್ದರೂ ಅವರ ಹೆಸರು ಇದೀಗ ರೇಸಿನಲ್ಲಿದೆ.