ಸರ್ವಜ್ಞನ ನಾಡಲ್ಲಿ ಕೌರವನ ಸತ್ವಪರೀಕ್ಷೆ; ಬಿ.ಸಿ.ಪಾಟೀಲ್‌ ಕ್ಷೇತ್ರ ಉಳಿಸಿಕೊಳ್ತಾರಾ?

By Kannadaprabha News  |  First Published Nov 28, 2019, 3:13 PM IST

ಸರ್ವಜ್ಞನ ನಾಡಲ್ಲಿ ಕೌರವನ ಸತ್ವಪರೀಕ್ಷೆ! ಬಿಜೆಪಿ, ಕಾಂಗ್ರೆಸ್‌ ನಡುವೆ ನೇರ ಹಣಾಹಣಿ | ಸಾದರ ಲಿಂಗಾಯತ ಮತದಾರರೇ ನಿರ್ಣಾಯಕರು | ಬಿ.ಸಿ.ಪಾಟೀಲ್‌ ಕ್ಷೇತ್ರ ಉಳಿಸಿಕೊಳ್ತಾರಾ? ಪಕ್ಷದ್ರೋಹವೇ ಕಾಂಗ್ರೆಸ್ಸಿನ ಬನ್ನಿಕೋಡಗೆ ಪ್ರಬಲ ಅಸ್ತ್ರ


ಹಾವೇರಿ (ನ. 28): ಸರ್ವಜ್ಞನ ನಾಡಿನಲ್ಲಿ ಉಪ ಚುನಾವಣೆಯ ರಂಗು ಏರುತ್ತಿದ್ದು, ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಬಿ.ಸಿ. ಪಾಟೀಲ್‌ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕ್ಷೇತ್ರ ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ.

ಚುನಾವಣಾ ಕಣದಲ್ಲಿ ಕಳೆದ ಬಾರಿ ವಿರೋಧಿಯಾಗಿದ್ದವರು ಈ ಬಾರಿ ಕೈಜೋಡಿಸಿ ಜೊತೆಗೆ ನಿಂತಿದ್ದಾರೆ. ಅದೇ ರೀತಿ ಜೊತೆಗಿದ್ದವರು ವಿರೋಧಿಯಾಗಿದ್ದಾರೆ. ಕಳೆದ ನಾಲ್ಕು ಬಾರಿ ಪರಸ್ಪರ ಮುಖಾಮುಖಿಯಾಗಿದ್ದ ‘ಕೌರವ’ ಖ್ಯಾತಿಯ ಬಿ.ಸಿ. ಪಾಟೀಲ್‌ ಮತ್ತು ಯು.ಬಿ. ಬಣಕಾರ ಈಗ ಒಂದಾಗಿ ಜೋಡೆತ್ತಿನಂತೆ ಚುನಾವಣೆ ಎದುರಿಸುತ್ತಿದ್ದಾರೆ. ಪಾಟೀಲ್‌ ಅವರ ಜೊತೆಗಿದ್ದ ಬಿ.ಎಚ್‌. ಬನ್ನಿಕೋಡ ಅವರು ಇದೀಗ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪ್ರಬಲ ಸವಾಲು ಒಡ್ಡಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆಯುತ್ತಿದೆ.

Tap to resize

Latest Videos

undefined

ರಾಣೆಬೆನ್ನೂರು ಉಪಚುನಾವಣೆ: ಹಳೆ ಹುಲಿ ಕೋಳಿವಾಡಗೆ ಯುವಕನ ಸವಾಲ್‌

2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಬಂದಿದ್ದ ಬಿ.ಸಿ.ಪಾಟೀಲ್‌ ಅಭಿವೃದ್ಧಿಯ ಕಾರಣ ಮುಂದೊಡ್ಡಿ ರಾಜೀನಾಮೆ ನೀಡಿದರು. ಇದರಿಂದ ಕೇವಲ ಒಂದೂವರೆ ವರ್ಷಕ್ಕೆ ಚುನಾವಣೆ ಎದುರಾಗಿದ್ದು, ಈ ಬಾರಿ ಕ್ಷೇತ್ರದ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದೆ. ಮಂತ್ರಿಗಿರಿ ಕನಸು ಕಾಣುತ್ತಿರುವ ಪಾಟೀಲ್‌ ಅವರು ಗೆದ್ದು ಕ್ಷೇತ್ರ ಉಳಿಸಿಕೊಳ್ಳಲು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

ಪಕ್ಷ ದ್ರೋಹ ಮಾಡಿದ ಪಾಟೀಲರಿಗೆ ಚುನಾವಣೆ ಮೂಲಕವೇ ಪಾಠ ಕಲಿಸುತ್ತೇನೆ ಎಂದು ಕಾಂಗ್ರೆಸ್‌ನ ಬನ್ನಿಕೋಡ ಪಣ ತೊಟ್ಟಿದ್ದಾರೆ. ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಬ್ಬಿಣಕಂತಿ ಮಠದ ಶಿವಲಿಂಗ ಸ್ವಾಮೀಜಿ ನಾಮಪತ್ರ ವಾಪಸ್‌ ಪಡೆದಿರುವುದರಿಂದ ತೆನೆ ಹೊತ್ತ ಮಹಿಳೆ ಕ್ಷೇತ್ರದಿಂದ ಔಟ್‌ ಆಗಿದ್ದಾಳೆ.

ಮುನಿಸು ಮರೆತ ಬಣಕಾರ್‌

ಯು.ಬಿ.ಬಣಕಾರ್‌ ಅವರು ಕಳೆದ ಬಾರಿ ಅತ್ಯಲ್ಪ ಮತಗಳ ಅಂತರದಿಂದ ಸೋಲುಂಡಿದ್ದರು. ಈ ಕಾರಣಕ್ಕಾಗಿಯೇ ಕ್ಷೇತ್ರ ಬಿಟ್ಟುಕೊಡಲು ಆರಂಭದಲ್ಲಿ ನಿರಾಕರಿಸಿದ್ದರು. ಹೀಗಾಗಿ, ಅವರಿಗೆ ನಿಗಮ- ಮಂಡಳಿಯೊಂದರ ಅಧ್ಯಕ್ಷಗಿರಿ ನೀಡಿದ್ದಲ್ಲದೆ ಲಿಂಗಾಯತ ಸಮುದಾಯದ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದಿನ ಮೂರೂವರೆ ವರ್ಷಗಳ ಕಾಲ ಮುಂದುವರೆಯುವ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟು ಸಮಾಧಾನಪಡಿಸಲಾಯಿತು. ನಂತರವಷ್ಟೇ ಬಣಕಾರ್‌ ಅವರು ಪಾಟೀಲ್‌ ಪರ ಕೆಲಸ ಮಾಡಲು ಮುಂದಾದರು.

ಕರದಂಟು ಮೆಲ್ಲಲು ಸಹೋದರರ ಪೈಪೋಟಿ; ಜಾರಕಿಹೊಳಿದ್ವಯರ ಪೈಕಿ ಗೆಲ್ಲೋರು ಯಾರು?

ತ್ರಿಪದಿ ಕವಿ ಸರ್ವಜ್ಞನ ಜನ್ಮಸ್ಥಳ ಹೊಂದಿರುವ ಖ್ಯಾತಿಯ ಜತೆಗೆ ಪ್ರಸಿದ್ಧ ದುರ್ಗಾದೇವಿಯ ಸುಕ್ಷೇತ್ರ ಒಳಗೊಂಡ ಹಿರೇಕೆರೂರು ಕ್ಷೇತ್ರ ಸಹಕಾರಿ ಧುರೀಣರು, ಹೋರಾಟಗಾರರು, ಸಿನಿಮಾ ನಟನನ್ನು ರಾಜಕಾರಣಕ್ಕೆ ಪರಿಚಯಿಸಿದೆ. ರಾಜ್ಯಕ್ಕೆ ಸಭಾಧ್ಯಕ್ಷರನ್ನು ನೀಡಿದ ಕ್ಷೇತ್ರ. ಬಿ.ಜಿ. ಬಣಕಾರ ಅವರು ಇದೇ ಕ್ಷೇತ್ರದಿಂದ ಆಯ್ಕೆಯಾಗಿ ಸಭಾಧ್ಯಕ್ಷರಾಗಿದ್ದರು. ಎರಡು ಬಾರಿ ಚಲನಚಿತ್ರ ನಟ ಬಿ.ಸಿ. ಪಾಟೀಲರನ್ನು ಶಾಸಕರನ್ನಾಗಿಸಿದ ಕ್ಷೇತ್ರವಿದು.

ಅಭಿವೃದ್ಧಿ ವರ್ಸಸ್‌ ದ್ರೋಹ

ಅಭಿವೃದ್ಧಿ ಹಾಗೂ ಪಕ್ಷ ದ್ರೋಹ ವಿಷಯವು ಪ್ರಚಾರದಲ್ಲಿ ಪ್ರಮುಖ ವಿಷಯವಾಗಿವೆ. ಕ್ಷೇತ್ರದ ಅಭಿವೃದ್ಧಿ, ನೀರಾವರಿ ಯೋಜನೆಗೆ ಹಿಂದಿನ ಸರ್ಕಾರ ಅನುದಾನ ನೀಡದ್ದರಿಂದ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿರುವುದಾಗಿ ಬಿ.ಸಿ.ಪಾಟೀಲ್‌ ಹೇಳುತ್ತಿದ್ದಾರೆ.

ಆಯ್ಕೆ ಮಾಡಿದ ಮತದಾರರಿಗೆ ಅವಮಾನ ಮಾಡಿ, ಪಕ್ಷ ದ್ರೋಹ ಎಸಗಿದವರಿಗೆ ಪಾಠ ಕಲಿಸಿ ಎಂದು ಕಾಂಗ್ರೆಸ್‌ನ ಬನ್ನಿಕೋಡ ಮತದಾರರ ಬಳಿ ಹೋಗುತ್ತಿದ್ದಾರೆ. ಕ್ಷೇತ್ರದ ಜನತೆ ಎರಡನ್ನೂ ಕೇಳಿಸಿಕೊಂಡು ತಮ್ಮ ನಿರ್ಧಾರವನ್ನು ಮತದಾನದ ಮೂಲಕವೇ ತಿಳಿಸಲು ಕಾಯುತ್ತಿದ್ದಾರೆ.

ಕಳೆದ ನಾಲ್ಕು ಚುನಾವಣೆಗಳಲ್ಲಿ ಮುಖಾಮುಖಿ ಆಗುತ್ತಿದ್ದ ಬಿ.ಸಿ.ಪಾಟೀಲ್‌ ಅವರೊಂದಿಗೆ ಈ ಸಲ ಬಿಜೆಪಿ ಮಾಜಿ ಶಾಸಕ ಯು.ಬಿ. ಬಣಕಾರ ಜೊತೆಯಾಗಿರುವುದರಿಂದ ಬಿಜೆಪಿಗೆ ಹೆಚ್ಚಿನ ಬಲ ಬಂದಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದಿರುವುದರಿಂದ ಪಾಟೀಲರಿಗೆ ಈಗ ಗೆಲ್ಲಲೇಬೇಕಾದ ಒತ್ತಡ ಹಾಗೂ ಅನಿವಾರ್ಯತೆಯಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ಮೂರು ತಿಂಗಳ ಅವಧಿಯಲ್ಲಿ ನೂರಾರು ಕೋಟಿ ರು. ಅನುದಾನ ತಂದಿರುವುದು ಹಾಗೂ ಸಮ ಪ್ರಮಾಣದಲ್ಲಿ ಮತದಾರರ ಬೆಂಬಲ ಹೊಂದಿರುವ ಬಣಕಾರ ಮತ್ತು ಪಾಟೀಲ ಜೊತೆಯಾಗಿರುವುದು ಬಿಜೆಪಿಗೆ ಪ್ಲಸ್‌ ಪಾಯಿಂಟ್‌ ಆಗಿದೆ.

ಅಥಣಿ ಉಪಚುನಾವಣೆ: ಕುಮಟಳ್ಳಿಯನ್ನು ಗೆಲ್ಲಿಸುವ ಹೊಣೆ ಸವದಿಗೆ

ಬನ್ನಿಕೋಡ ಏನು ಕಮ್ಮಿ ಇಲ್ಲ

ಕಬ್ಬಿಣಕಂತಿ ಮಠದ ಸ್ವಾಮೀಜಿ ಕಣದಿಂದ ಹಿಂದಕ್ಕೆ ಸರಿದಿರುವುದು ಬಿಜೆಪಿಗೆ ಅನುಕೂಲವಾಗಿದೆ. ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ಮುಖ ನೋಡಿಕೊಂಡು ಪಾಟೀಲರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಆದರೂ ಎರಡು ಬಾರಿ ಶಾಸಕರಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಬನ್ನಿಕೋಡ ಅವರನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಪಾಟೀಲರ ವಿರುದ್ಧದ ಪಕ್ಷ ದ್ರೋಹದ ಆರೋಪ, ತಾವು ಶಾಸಕರಾಗಿದ್ದಾಗ ಮಾಡಿದ ನೀರಾವರಿ ಯೋಜನೆಗಳು ಬನ್ನಿಕೋಡಗೆ ಪ್ಲಸ್‌ ಪಾಯಿಂಟ್‌ ಆಗಿವೆ.

ಕಾಂಗ್ರೆಸ್‌ ಪಕ್ಷ ಸಹ ಇದನ್ನು ಪ್ರತಿಷ್ಠೆಯಾಗಿ ಪಡೆದಿದ್ದು, ತಾನು ಗೆಲ್ಲಲೇಬೇಕು, ಪಕ್ಷಕ್ಕೆ ದ್ರೋಹ ಮಾಡಿದವರಿಗೆ ತಕ್ಕ ಪಾಠ ಕಲಿಸಲೇಬೇಕೆಂದು ಒಂದಾಗಿ ಕೆಲಸ ಮಾಡುತ್ತಿದೆ. ಇನ್ನುಳಿದ ಅಭ್ಯರ್ಥಿಗಳ ಸ್ಪರ್ಧೆಯಿಂದ ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರುವ ಸಾಧ್ಯತೆಯೂ ಇಲ್ಲ.

ಲಿಂಗಾಯತರೇ ನಿರ್ಣಾಯಕ

ಹಿರೇಕೆರೂರು ಅಲಿಖಿತ ಸಾದರ ಲಿಂಗಾಯತ ಮೀಸಲು ಕ್ಷೇತ್ರವೆಂದೇ ಪರಿಗಣಿತವಾಗಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಈ ಸಮುದಾಯಕ್ಕೆ ಸೇರಿದ 70 ಸಾವಿರ ಮತದಾರರು ಕ್ಷೇತ್ರದಲ್ಲಿದ್ದಾರೆ. ಅದರಲ್ಲೂ ಸಾದರ ಲಿಂಗಾಯತರೇ ಹೆಚ್ಚು. ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದವರೇ ಈ ಕ್ಷೇತ್ರದಲ್ಲಿ ಅನೇಕ ಬಾರಿ ಆಯ್ಕೆಯಾಗಿದ್ದಾರೆ.

ಇದೇ ಕಾರಣಕ್ಕೆ ಎಲ್ಲ ಪಕ್ಷಗಳೂ ಇದೇ ಸಮುದಾಯದವರಿಗೆ ಮಣೆ ಹಾಕುತ್ತಾ ಬಂದಿವೆ. ಈಗಲೂ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳಿಬ್ಬರೂ ಸಾದರ ಲಿಂಗಾಯತರೇ ಆಗಿದ್ದಾರೆ. ಎಸ್ಸಿ-ಎಸ್ಟಿಸಮುದಾಯದ 30 ಸಾವಿರ ಮತಗಳಿದ್ದು, ಮುಸ್ಲಿಂ, ಕುರುಬ ಸಮುದಾಯಗಳೆರಡೂ ಸುಮಾರು 15 ಸಾವಿರ ಮತಗಳಿವೆ.

ಬಣಕಾರ ಮತ್ತು ಬಿ.ಸಿ. ಪಾಟೀಲ್‌ ಇಬ್ಬರ ವೈಯಕ್ತಿಕ ವರ್ಚಸ್ಸು ಕೆಲಸ ಮಾಡುವುದರಿಂದ ಎಲ್ಲ ಸಮುದಾಯಗಳ ಮತಗಳನ್ನು ಪಡೆದರೆ ಕಮಲದ ಬಾವುಟ ಹಾರಬಹುದು. ಯಡಿಯೂರಪ್ಪ ಸಿಎಂ ಆಗಿರಬೇಕು ಎಂಬ ಕಾರಣಕ್ಕೆ ಬಣಕಾರ ಹಾಗೂ ಮೂಲ ಬಿಜೆಪಿಗರು ಒಳಹೊಡೆತ ನೀಡುವ ಸಾಧ್ಯತೆ ಕಡಿಮೆ. ಇದರಿಂದ ಬಿಜೆಪಿ ಅಭ್ಯರ್ಥಿ ತುಸು ನಿರಾಳರಾಗಿದ್ದಾರೆ.

ಬಿಜೆಪಿ ಗೆಲ್ಲದ ಕ್ಷೇತ್ರದಲ್ಲಿ ‘ಕಮಲ’ ಅರಳಿಸುತ್ತಾರಾ ಡಾಕ್ಟರ್‌?

ಕಣದಲ್ಲಿ 9 ಅಭ್ಯರ್ಥಿಗಳು

ಕ್ಷೇತ್ರದಲ್ಲಿ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿ.ಸಿ. ಪಾಟೀಲ್‌ (ಬಿಜೆಪಿ), ಬಿ.ಎಚ್‌.ಬನ್ನಿಕೋಡ (ಕಾಂಗ್ರೆಸ್‌), ದೇವೆಂದ್ರಪ್ಪ ಜಯಪ್ಪ (ಉತ್ತಮ ಪ್ರಜಾಕೀಯ ಪಾರ್ಟಿ), ಮಂಜುನಾಥ ಜಿ.ಎಸ್‌. ಗಣೇಶಪ್ಪ (ಕರ್ನಾಟಕ ರಾಷ್ಟ್ರ ಸಮಿತಿ), ಹರೀಶ ಇಂಗಳಗೊಂದಿ ಸಿದ್ದಪ್ಪ (ಕರ್ನಾಟಕ ಜನತಾ ಪಕ್ಷ), ಕೋಡಿಹಳ್ಳಿ ಉಜನಪ್ಪ ತಂದೆ ಜಟ್ಟೆಪ್ಪ (ಪಕ್ಷೇತರ), ರಾಜಶೇಖರ ದೂದಿಹಳ್ಳಿ ಕಲ್ಲಪ್ಪ (ಪಕ್ಷೇತರ), ರುದ್ರಯ್ಯ ಸಾಲಿಮಠ ತಂದೆ ಅಂದಾನಯ್ಯ(ಪಕ್ಷೇತರ), ಸಿದ್ದಪ್ಪ ಕಲ್ಲಪ್ಪ ಪೂಜಾರ (ಪಕ್ಷೇತರ) ಕಣದಲ್ಲಿದ್ದಾರೆ.

- ನಾರಾಯಣ ಹೆಗಡೆ 

click me!