* ಬಿಜೆಪಿ ತನ್ನತ್ತ ಸೆಳೆದರೆ ಎಂಬ ಆತಂಕ ಕಾಂಗ್ರೆಸ್ಸಿಗಿದೆ
* ಪ್ರಸ್ತುತ ಸನ್ನಿವೇಶದಲ್ಲಿ ಸೂಕ್ಷ್ಮ ಹೆಜ್ಜೆ ಇಡುತ್ತಿರುವ ಕಾಂಗ್ರೆಸ್
* ತನ್ನ ನಿರ್ಧಾರವೇನು ಎಂಬುವುದನ್ನು ಇನ್ನೂ ಸ್ಪಷ್ಟಪಡಿಸದ ಕಾಂಗ್ರೆಸ್
ಬ್ರಹ್ಮಾನಂದ ಹಡಗಲಿ
ಬೆಳಗಾವಿ(ಆ.21): ಬೆಳಗಾವಿ ಮಹಾನಗರ ಪಾಲಿಕೆಗೆ ಸೆ.3ರಂದು ಚುನಾವಣೆ ನಡೆಯಲಿದೆ. ಇದುವರೆಗೆ ಭಾಷಾ ಹೋರಾಟದ ಮೇಲೆ ನಡೆಯುತ್ತಿದ್ದ ಚುನಾವಣೆ ಇದೀಗ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಬಿಜೆಪಿ ಈಗಾಗಲೇ ಪಕ್ಷದ ಚಿಹ್ನೆಯ ಮೇಲೆಯೇ ಚುನಾವಣೆ ಅಖಾಡಕ್ಕೆ ಇಳಿಯಲು ಘೋಷಿಸಿದೆ. ಆದರೆ, ಕಾಂಗ್ರೆಸ್ ಮಾತ್ರ ತನ್ನ ನಿರ್ಧಾರವೇನು ಎಂಬುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಜೆಡಿಎಸ್ ಕೂಡ 58 ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ.
ಹಾಗಾದರೆ ಬಿಜೆಪಿ ಏಕೆ ಪಕ್ಷದ ಚಿಹ್ನೆಯಡಿ ಅಭ್ಯರ್ಥಿಗಳನ್ನು ಹಾಕಲು ಮುಂದಾಗಿದೆ? ಯಾವ ತಂತ್ರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಪಾಲಿಕೆಯನ್ನು ತನ್ನ ಕೈವಶ ಮಾಡಲು ಹೊರಟಿದೆ? ಕಾಂಗ್ರೆಸ್‌ನ ರಾಜಕೀಯ ತಂತ್ರವನ್ನೇ ಬಿಜೆಪಿ ಭೇದಿಸಲು ಹೊರಟಿದೆಯಾ ಎಂಬ ಹತ್ತು ಹಲವಾರು ಪ್ರಶ್ನೆಗಳು ಈಗ ಉದ್ಭವವಾಗಿವೆ.
ಬೆಳಗಾವಿ ಮಹಾರಾಷ್ಟ್ರದ ಗಡಿ ಹಂಚಿಕೊಂಡ ಜಿಲ್ಲೆ. ಸಹಜವಾಗಿ ಇಲ್ಲಿ ಕನ್ನಡಿಗರು ಮಾತ್ರವಲ್ಲದೆ ಮರಾಠಿ ಮಾತನಾಡುವ ಜನರು ವಾಸಿಸಿದ್ದಾರೆ. ಆದರೆ, ಇದನ್ನೇ ತನ್ನ ಚುನಾವಣೆ ಅಸ್ತ್ರವಾಗಿಸಿಕೊಂಡು ಬಂದ ಎಂಇಎಸ್‌ಗೆ ಠಕ್ಕರ್ ಕೊಡಲು ಕನ್ನಡಿಗರು ಕೂಡ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದಿದ್ದರು. ಆದರೆ, ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಎಂಇಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಅಲ್ಲಿರುವ ಬಹುತೇಕರು ರಾಷ್ಟ್ರೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಈಗ ಮತ್ತೋರ್ವ ಶಾಸಕರಿಂದ ಮತ್ತೊಂದು ಖ್ಯಾತೆ
ಬಿಜೆಪಿ ತಂತ್ರಗಾರಿಕೆ, ಚಾಣಾಕ್ಷ ನಡೆ:
ಪಾಲಿಕೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಚಾಣಾಕ್ಷ ನಡೆ ಅನುಸರಿಸಿದೆ. ಬೆಳಗಾವಿ ಕನ್ನಡಿಗರು ಮತ್ತು ಮರಾಠಿಗರು ಒಟ್ಟಿಗೆ ನೆಲೆಸುವ ಪ್ರದೇಶ. ಹೀಗಾಗಿ ಒಬ್ಬರನ್ನು ಸಮಾಧಾನಪಡಿಸಲು ಹೋದರೆ ಮತ್ತೊಬ್ಬ ಭಾಷಿಕರು ಪಕ್ಷದಿಂದ ದೂರವಾಗುತ್ತಾರೆ ಎಂಬ ಆತಂಕ ಬಿಜೆಪಿಯದ್ದು. ಈ ನಿಟ್ಟಿನಲ್ಲಿ ಇಬ್ಬರನ್ನೂ ತನ್ನೆಡೆಗೆ ಸೆಳೆಯಲು ಬಿಜೆಪಿ ಅನುಸರಿಸಿದ ತಂತ್ರಗಾರಿಕೆಯ ಫಲವೆ ಪಕ್ಷದ ಚಿಹ್ನೆಯಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿರುವುದು.
ಬಿಜೆಪಿ ಬೆಳಗಾವಿ ಜಿಲ್ಲೆಯಲ್ಲಿ ತನ್ನ ಅಸ್ತಿತ್ವ ಸಾಧಿಸಿದೆ. ಈ ಹಿಂದೆ ಎಂಇಎಸ್‌ನಲ್ಲಿ ಗುರುತಿಸಿಕೊಂಡಿದ್ದ ಹಲವರು ಬಿಜೆಪಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇದನ್ನು ಮನಗಂಡಿರುವ ಬಿಜೆಪಿ ವರಿಷ್ಠರು ಭಾಷಾವಾರು ಅಖಾಡಕ್ಕೆ ಇಳಿಯುವವರಿಗೆ ಬೆಂಬಲ ನೀಡುವ ಬದಲು ತಮ್ಮ ಪಕ್ಷದ ಚಿಹ್ನೆಯಡಿ ಸ್ಪರ್ಧೆ ಮಾಡುವಂತೆ ಮಾಡುವ ತಂತ್ರಗಾರಿಕೆ ಹೆಣೆದಿದ್ದಾರೆ. ಇದರಿಂದ ಉಭಯ ಭಾಷಿಕರ ಸಮಸ್ಯೆ ಉದ್ಭವವಾಗಲ್ಲ. ಪಕ್ಷದ ಚೌಕಟ್ಟಿನಡಿ ಅವರು ಸ್ಪರ್ಧೆ ಮಾಡುವುದರಿಂದ ಪಕ್ಷಕ್ಕೆ ಲಾಭ ಎಂಬ ಲೆಕ್ಕಾಚಾರದಡಿ ವರಿಷ್ಠರು ಈ ತೀರ್ಮಾನಕ್ಕೆ ಬಂದಿರಬಹುದು ಎನ್ನಲಾಗಿದೆ.
'ಬೆಳಗಾವಿ ಪಾಲಿಕೆ ಬಿಜೆಪಿ ಗೆಲುವು ನಿಶ್ಚಿತ'
ಕನ್ನಡ ಮತ್ತು ಮರಾಠಿ ಎರಡೂ ಭಾಷಿಕರ ಮತಗಳನ್ನು ತನ್ನತ್ತ ಸೆಳೆಯಲು ಬಿಜೆಪಿ ಈ ತಂತ್ರಗಾರಿಕೆಯನ್ನೂ ಹೂಡಿರಬಹುದು. ಈಗಾಗಲೇ ಈ ಹಿಂದೆ ನಡೆದ ಲೋಕಸಭಾ ಉಪಚುನಾವಣೆಯ ವೇಳೆ ಎಂಇಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೂ ಬಿಜೆಪಿ ಅಭ್ಯರ್ಥಿಯ ಗೆಲುವನ್ನು ತಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಬಿಜೆಪಿ ವರಿಷ್ಠರು ಚಿಹ್ನೆ ಅಡಿ ಅಭ್ಯರ್ಥಿ ಸ್ಪರ್ಧೆಯ ಚಿಂತನೆ ಹಿಂದೆ ಇದು ಕೂಡ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿಗೆ ಮುಂದಿರುವ ದೊಡ್ಡ ಸವಾಲೆಂದರೆ ಅಭ್ಯರ್ಥಿ ಆಯ್ಕೆ. ಆಯ್ಕೆಗಿರುವ ಮಾನದಂಡಗಳೇನು? ಯಾವ ಭಾಷಾ ಆಧಾರದ ಮೇಲೆ ಆಯ್ಕೆ ಮಾಡಬೇಕು? ಎಂಬುವುದು ಸ್ವಲ್ಪ ಸವಾಲಿನ ಕೆಲಸವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕಾಂಗ್ರೆಸ್ ಚಿಂತನೆಗೆ ಕಾರಣವಾಯ್ತಾ ಬಿಜೆಪಿ ನಿರ್ಧಾರ:
ಬಿಜೆಪಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸುವುದಾಗಿ ದೃಢ ನಿರ್ಧಾರ ತೆಗೆದುಕೊಂಡಿದೆ. ಆದರೆ, ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಿಜೆಪಿಯಂತೆ ಪಕ್ಷದ ಚಿಹ್ನೆಯಡಿ ಸ್ಪರ್ಧೆ ಮಾಡಬೇಕಾ ಅಥವಾ ಬೇಡವೇ ಎನ್ನುವ ತೋಳಲಾಟದಲ್ಲಿಯೇ ಇದ್ದಾರೆ ಕೈ ವರಿಷ್ಠರು. ಕಾಂಗ್ರೆಸ್ ನಾಯಕರು ಈ ಕುರಿತು ಈಗಾಗಲೇ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿದ್ದಾರೆ. ಆದರೆ, ಇನ್ನೂ ಯಾವ ರೀತಿಯ ಸ್ಪರ್ಧೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿಲ್ಲ. ಬಿಜೆಪಿಯ ಚಾಣಾಕ್ಷ ನಡೆಯಿಂದಾಗಿ ಕಾಂಗ್ರೆಸ್‌ಗೆ ಸ್ವಲ್ಪ ಒಳಹೊಡೆತ ನೀಡುವ ಸಾಧ್ಯತೆ ಇದೆ. ಹೀಗಾಗಿ ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ತೋಳಲಾಟದಲ್ಲಿದ್ದಂತೆ ಕಾಣುತ್ತಿದ್ದಾರೆ ಕೈ ನಾಯಕರು. ಜತೆಗೆ ಅವರ ನಡೆ ಕೂಡ ತೀವ್ರ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಪಕ್ಷ ಕೂಡ ಉಭಯ ಭಾಷಿಕರ ಮನವೊಲಿಸಿಕೊಳ್ಳುವ ಸಂಬಂಧ ಸ್ವತಂತ್ರ ಅಭ್ಯರ್ಥಿಗಳನ್ನು ಬೆಂಬಲಿಸುವ ನಿರ್ಧಾರಕ್ಕೂ ಬರಬಹುದು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟವೇ. ಕಾರಣ ಕಾಂಗ್ರೆಸ್ ಸ್ವತಂತ್ರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದ ನಂತರ ಅವರನ್ನು ಬಿಜೆಪಿ ತನ್ನತ್ತ ಸೆಳೆದರೆ ಎಂಬ ಆತಂಕವೂ ಇದೆ. ಏಕೆಂದರೆ ಸ್ವತಂತ್ರ ಅಭ್ಯರ್ಥಿ ಯಾರ ಪರವೂ ಮತ ಹಾಕಬಹುದು. ಹೀಗಾಗಿ ಕಾಂಗ್ರೆಸ್ ಪ್ರಸ್ತುತ ಸನ್ನಿವೇಶದಲ್ಲಿ ಸೂಕ್ಷ್ಮ ಹೆಜ್ಜೆಗಳನ್ನು ಇಡುತ್ತಿದೆ.