ಸದಾಕಾಲ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗುವ ಜಿಲ್ಲೆಯ ಹುನಗುಂದ, ರಾಜ್ಯಕ್ಕೆ ಅಲ್ಪಕಾಲ ಮುಖ್ಯಮಂತ್ರಿಯನ್ನು ನೀಡಿದ ಕ್ಷೇತ್ರ. ಈ ಹಿಂದೆ ಈ ಕ್ಷೇತ್ರದಿಂದ ಗೆದ್ದಿದ್ದ ಎಸ್.ಆರ್.ಕಂಠಿ ಅವರು 1962ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಈಶ್ವರ ಶೆಟ್ಟರ
ಬಾಗಲಕೋಟೆ (ಏ.08): ಸದಾಕಾಲ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗುವ ಜಿಲ್ಲೆಯ ಹುನಗುಂದ, ರಾಜ್ಯಕ್ಕೆ ಅಲ್ಪಕಾಲ ಮುಖ್ಯಮಂತ್ರಿಯನ್ನು ನೀಡಿದ ಕ್ಷೇತ್ರ. ಈ ಹಿಂದೆ ಈ ಕ್ಷೇತ್ರದಿಂದ ಗೆದ್ದಿದ್ದ ಎಸ್.ಆರ್.ಕಂಠಿ ಅವರು 1962ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಸ್ವಾತಂತ್ರ್ಯಾ ನಂತರದ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಇಲ್ಲಿ ಪಾರುಪತ್ಯ ಸ್ಥಾಪಿಸಿದೆ. ಪ್ರಸ್ತುತ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಕಾಣುತ್ತಿದೆಯಾದರೂ ಪಕ್ಷೇತರ ಅಭ್ಯರ್ಥಿ ಸಹ ಈ ಬಾರಿ ಪೈಪೋಟಿ ನೀಡುವ ಸಾಧ್ಯತೆ ಇದೆ. ಹೀಗಾಗಿ, ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
undefined
ಕಾಂಗ್ರೆಸ್‌ನಿಂದ ಈಗಾಗಲೇ ಮಾಜಿ ಶಾಸಕ, ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿಜಯಾನಂದ ಕಾಶಪ್ಪನವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಬಿಜೆಪಿಯಿಂದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಅವರೇ ಪಕ್ಷದ ಹುರಿಯಾಳು ಆಗುವ ಸಂಭವ ಹೆಚ್ಚು. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ, ತ್ರಿಕೋನ ಸ್ಪರ್ಧೆಗೆ ಕಾರಣರಾಗಿ 25 ಸಾವಿರ ಮತಗಳನ್ನು ಪಡೆದಿದ್ದ ಎಸ್.ಆರ್.ನವಲಿ ಹಿರೇಮಠ ಅವರು ಈ ಬಾರಿ ಮತ್ತೆ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಇರುವುದರಿಂದ ಸಹಜವಾಗಿ ಕ್ಷೇತ್ರದ ಚುನಾವಣಾ ಕಣ ರಂಗೇರಲಿದೆ.
ಮತ್ತೆ ಬಿಜೆಪಿ ನೇತೃತ್ವದ ಸರ್ಕಾರನ್ನೇ ಗೆಲ್ಲಿಸಿ: ಕೇಂದ್ರ ಸಚಿವ ಪಿಯೂಷ್ ಗೋಯಲ್
2004ರಿಂದ ಈವರೆಗೆ ಹುನಗುಂದ ಕ್ಷೇತ್ರ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ನೇರ ಕದನಕ್ಕೆ ಸಾಕ್ಷಿಯಾಗಿದೆ. ಈ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಹುದೊಡ್ಡ ಶಕ್ತಿಯಾಗಿ ಬೆಳೆದು, 1989ರಿಂದ 99ರವರೆಗಿನ ಮೂರು ಚುನಾವಣೆಗಳಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ್ದ ಎಸ್.ಆರ್.ಕಾಶಪ್ಪನವರ ಅವರು ಶಾಸಕರಿದ್ದಾಗಲೇ 2003ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅಲ್ಲಿಯವರೆಗೂ ಕ್ಷೇತ್ರದಲ್ಲಿ ನೆಲೆ ಕಾಣದಿದ್ದ ಬಿಜೆಪಿಗೆ ನಂತರ ನಡೆದ ಉಪಚುನಾವಣೆಯೇ ಶಕ್ತಿಯಾಯಿತು. ಉಪ ಚುನಾವಣೆಯಲ್ಲಿ ಗೆಲ್ಲಲಾಗದಿದ್ದರೂ ಪಕ್ಷದ ಸಂಘಟನೆಗೆ ಪ್ರೇರೇಪಣೆ, ಸಹಕಾರ ದೊರಕಿತು. ಬಳಿಕ, ನಡೆದ 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಖಾತೆ ತೆರೆಯಿತು. ಬಿಜೆಪಿಯಿಂದ ಸ್ಪರ್ಧಿಸಿದ್ದ ದೊಡ್ಡನಗೌಡ ಪಾಟೀಲ ಜಯ ಸಾಧಿಸಿದರು. 2008ರಲ್ಲಿಯೂ ಮತ್ತೆ ಬಿಜೆಪಿ ಗೆಲುವು ಕಂಡಿತು. ಆದರೆ, 2013ರಲ್ಲಿ ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ ವಿಧಾನಸಭೆಗೆ ಆಯ್ಕೆಯಾದರು. 2018ರಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲ ಮತ್ತೆ ಆಯ್ಕೆಯಾಗುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಒದಗಿಸಿದ್ದಾರೆ.
ಕ್ಷೇತ್ರದ ಹಿನ್ನೆಲೆ: 1957ರಿಂದ ಈವರೆಗೆ ನಡೆದ 15 ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ 9 ಬಾರಿ ಗೆಲುವು ಕಂಡಿದ್ದರೆ, ಬಿಜೆಪಿ 3 ಬಾರಿ, ಜನತಾ ಪರಿವಾರ 2 ಬಾರಿ ಗೆದ್ದಿದೆ. ಒಮ್ಮೆ ಪಕ್ಷೇತರರಿಗೂ ಈ ಕ್ಷೇತ್ರ ಒಲಿದಿದೆ. ಕಾಶಪ್ಪನವರ ಕುಟುಂಬ ಐದು ಬಾರಿ ಗೆಲುವು ಸಾಧಿಸಿದ್ದರೆ, ದೊಡ್ಡನಗೌಡ ಪಾಟೀಲ ಅವರು 3 ಬಾರಿ ಗೆಲುವು ದಾಖಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಆರ್.ಕಂಠಿ ಸಹ 3 ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ವಿಶೇಷ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಮತದಾರರಿಗೆ ಉಡುಗೊರೆ: ಕುಸುಮಾ, ಡಿಕೆಸು ಸೇರಿ ಮೂವರ ವಿರುದ್ಧ ಕೇಸ್
ಜಾತಿ ಲೆಕ್ಕಾಚಾರ: ಹುನಗುಂದ ಮತಕ್ಷೇತ್ರದಲ್ಲಿ ಅಂದಾಜು 2,14,145 ಮತದಾರರಿದ್ದು, ಲಿಂಗಾಯತರೇ ನಿರ್ಣಾಯಕರು. ನಂತರದ ಸ್ಥಾನದಲ್ಲಿ ಅಲ್ಪಸಂಖ್ಯಾತರು. ಕುರುಬ ಸಮಾಜದವರು, ರೆಡ್ಡಿ, ದಲಿತ ಸಮುದಾಯಗಳವರಿದ್ದಾರೆ. ಈ ಕ್ಷೇತ್ರದ ಮತ್ತೊಂದು ವಿಶೇಷತೆ ಎಂದರೆ ಲಿಂಗಾಯತ ಸಮುದಾಯದ ಒಳಪಂಗಡಗಳಲ್ಲಿ ಪಂಚಮಸಾಲಿ ಮತಗಳು ಹೆಚ್ಚಾಗಿರುವುದು. ಅವುಗಳ ಜತೆಗೆ ಬಣಜಿಗ, ನೇಕಾರ ಸಮುದಾಯದ ಮತಗಳು ಸಹ ಚುನಾವಣೆಯ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಹೊಂದಿವೆ.