ಬೆಳಗಾವಿಯಲ್ಲಿ ಈಗ ಸಚಿವ ಸ್ಥಾನಕ್ಕಾಗಿ ಸಮುದಾಯವಾರು ಪೈಪೋಟಿ ಆರಂಭಗೊಂಡಿದೆ. ಇದರ ಲಾಬಿ ದೆಹಲಿವರೆಗೂ ಹೋಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ, ಬೆಳಗಾವಿ ಗ್ರಾಮೀಣದ ಲಕ್ಷ್ಮಿ ಹೆಬ್ಬಾಳಕರ, ಅಥಣಿಯ ಶಾಸಕ ಲಕ್ಷ್ಮಣ ಸವದಿ, ವಿಪ ಸದಸ್ಯ ಪ್ರಕಾಶ ಹುಕ್ಕೇರಿ, ರಾಮದುರ್ಗದ ಶಾಸಕ ಹಾಗೂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅಶೋಕ ಪಟ್ಟಣ ಪ್ರಮುಖ ಸಚಿವಾಕಾಂಕ್ಷಿಗಳಾಗಿದ್ದಾರೆ.
ಜಗದೀಶ ವಿರಕ್ತಮಠ
ಬೆಳಗಾವಿ(ಮೇ.19): ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದ್ದು, 135 ಸ್ಥಾನಗಳನ್ನು ಪಡೆದುಕೊಂಡಿದೆ. ಈಗಾಗಲೇ ದೆಹಲಿಯಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದ್ದರೆ, ಅದರಿಂದಾಚೆಗೆ ಸಚಿವ ಸ್ಥಾನಕ್ಕೂ ಲಾಬಿ ತೆರೆಮರೆಯಲ್ಲಿ ನಡೆಯುತ್ತಿದೆ. ಈ ಪೈಕಿ ಬೆಳಗಾವಿ ಜಿಲ್ಲೆಯ ಹಲವರು ಪೈಪೋಟಿಯಲ್ಲಿದ್ದಾರೆ. ಕಾಂಗ್ರೆಸ್‌ಗೆ ಬಂದಿರುವ ಒಟ್ಟು ಸ್ಥಾನಗಳಲ್ಲಿ ಶೇ.12.27ರಷ್ಟು ಪಾಲು ಬೆಳಗಾವಿ ಜಿಲ್ಲೆಯೊಂದರಲ್ಲೇ ಇದೆ. ಅಂದರೆ 135 ಸ್ಥಾನಗಳ ಪೈಕಿ 11 ಸ್ಥಾನಗಳನ್ನು (ಒಟ್ಟು 18ರ ಸ್ಥಾನಗಳ ಪೈಕಿ) ಬೆಳಗಾವಿ ಜಿಲ್ಲೆಯೊಂದರಲ್ಲೇ ಇದ್ದು, ಬೆಂಗಳೂರಿನಲ್ಲಿ 12 ಸ್ಥಾನಗಳು (ಒಟ್ಟು 28) ಪಡೆದುಕೊಂಡಿದೆ. ಆದರೆ, ಪ್ರದರ್ಶನದಲ್ಲಿ ಬೆಳಗಾವಿ ಉತ್ತಮವಾಗಿದೆ.
ರಾಜಕೀಯದ ಶಕ್ತಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಈಗ ಸಚಿವ ಸ್ಥಾನಕ್ಕಾಗಿ ಸಮುದಾಯವಾರು ಪೈಪೋಟಿ ಆರಂಭಗೊಂಡಿದೆ. ಇದರ ಲಾಬಿ ದೆಹಲಿವರೆಗೂ ಹೋಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ, ಬೆಳಗಾವಿ ಗ್ರಾಮೀಣದ ಲಕ್ಷ್ಮಿ ಹೆಬ್ಬಾಳಕರ, ಅಥಣಿಯ ಶಾಸಕ ಲಕ್ಷ್ಮಣ ಸವದಿ, ವಿಪ ಸದಸ್ಯ ಪ್ರಕಾಶ ಹುಕ್ಕೇರಿ, ರಾಮದುರ್ಗದ ಶಾಸಕ ಹಾಗೂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅಶೋಕ ಪಟ್ಟಣ ಪ್ರಮುಖ ಸಚಿವಾಕಾಂಕ್ಷಿಗಳಾಗಿದ್ದಾರೆ.
ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಿಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ ಪ್ರಬಲ ಪೈಪೋಟಿಯಲ್ಲಿದ್ದಾರೆ. ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಬರಲು ಕಾರಣವಾಗಿದ್ದು, ಕಾಗವಾಡ, ಕುಡಚಿ, ಚ.ಕಿತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣ ಎಂಬ ವಾದ ಮುಂದಿಡುವ ಸಾಧ್ಯತೆ ಇದೆ. ಪ್ರಕಾಶ ಹುಕ್ಕೇರಿ ಅವರು ಸತತ ಐದು ಬಾರಿ ಶಾಸಕರಾಗಿ, ಸಂಸದರಾಗಿ, ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಕಾಂಗ್ರೆಸ್‌ಗೆ ನಿಷ್ಠನಾಗಿರುವುದು, ಪಕ್ಷದ ಹಿರಿತಲೆ ಎಂಬ ಕಾರಣಗಳನ್ನು ಮುಂದಿಟ್ಟಿದ್ದಾರೆ. ಇಲ್ಲವಾದಲ್ಲಿ, ಮೂರು ಬಾರಿ ಆಯ್ಕೆಯಾಗಿರುವ ತಮ್ಮ ಪುತ್ರ ಗಣೇಶ ಹುಕ್ಕೇರಿಗಾದರೂ ಸಚಿವ ಸ್ಥಾನ ನೀಡುವಂತೆ ಕೇಂದ್ರದ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಯಮಕನಮರಡಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪಕ್ಷ ಸಂಘಟನೆ ಜತೆಗೆ ಸವದತ್ತಿ, ಕುಡಚಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಗೆಲುವಿಗೂ ಕಾರಣೀಕರ್ತರವಾಗಿದ್ದಾರೆ. ಜತೆಗೆ ಪರಿಶಿಷ್ಟವರ್ಗದ ಪ್ರಭಾವಿ ನಾಯಕ. ಈ ಭಾಗದಲ್ಲಿ ಹಿಂದುಳಿದ ವರ್ಗದ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಅವರು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದು, ಡಿಸಿಎಂ ಹುದ್ದೆ ಮೇಲೂ ಕಣ್ಣಿಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಭಾರೀ ಮತಗಳ ಅಂತರದಿಂದ ಗೆದ್ದಿರುವ ಲಕ್ಷ್ಮೀ ಹೆಬ್ಬಾಳಕರ, ಮಹಿಳಾ ಕೋಟಾ ಮತ್ತು ಲಿಂಗಾಯತ ಕೋಟಾ ಎರಡರಲ್ಲೂ ಸಚಿವ ಸ್ಥಾನಕ್ಕೆ ಬೇಡಿಕೆ ಇಡಲಿದ್ದಾರೆ. ಅಲ್ಲದೇ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಲಕ್ಷ್ಮೇ ಹೆಬ್ಬಾಳಕರ ಕೂಡ ಹೆಚ್ಚಿನ ಶ್ರಮ ವಹಿಸಿದ್ದಾರೆ.
ಬಿಜೆಪಿ ಸೋಲಿಗೆ ದಿ.ಅಂಗಡಿ ಅನುಪಸ್ಥಿತಿಯೂ ಕಾರಣ: ಸಂಸದೆ ಮಂಗಲ
ಅದರಂತೆ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ರಾಮದುರ್ಗ ಶಾಸಕ ಅಶೋಕ ಪಟ್ಟಣ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಮಹಾಂತೇಶ ಕೌಜಲಗಿ ತಂದೆ ಶಿವಾನಂದ ಕೌಜಲಗಿ ಕೂಡ ಸಚಿವರಾಗಿ ಕೆಲಸ ಮಾಡಿದವರು. ಇನ್ನು ಅಶೋಕ ಪಟ್ಟಣ ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು, ಈ ಇಬ್ಬರೂ ಶಾಸಕರು ಕೂಡ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇವರೆಲ್ಲರ ನಡುವೆ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಲಕ್ಷ್ಮಣ ಸವದಿ ಅವರ ಹೆಸರು ಮುಂಚೂಣಿಯಲ್ಲಿವೆ ಎಂದು ಮೂಲಗಳು ಹೇಳುತ್ತಿವೆ.
ಬಿಜೆಪಿಯಲ್ಲಿ ಉಳಿದಿದ್ದು ಒಬ್ಬರೆ ಸಚಿವರು!
ಕಳೆದ ಬಾರಿ ಬಿಜೆಪಿ ಸರ್ಕಾರದಲ್ಲಿ ಲಕ್ಷ್ಮಣ ಸವದಿ, ದಿ.ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ ಮಂತ್ರಿಯಾಗಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಸವದಿ, ಬೊಮ್ಮಾಯಿ ಸರ್ಕಾರದಲ್ಲಿ ಡಿಸಿಎಂ ಸ್ಥಾನದ ಜತೆಗೆ ಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಯಿತು. ಇನ್ನು ಸಿಡಿ ಪ್ರಕರಣದಲ್ಲಿ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಎಸ್‌ವೈ ಸಂಪುಟದಲ್ಲಿದ್ದ ಶ್ರೀಮಂತ ಪಾಟೀಲಗೆ ಬೊಮ್ಮಾಯಿ ಸರ್ಕಾರದಲ್ಲಿ ಕೊಕ್ ನೀಡಲಾಗಿತ್ತು. ಅದೇ ರೀತಿ ಉಮೇಶ ಕತ್ತಿಯವರ ಅಕಾಲಿಕ ನಿಧನದಿಂದ ಜಿಲ್ಲೆಗೆ ಮತ್ತೊಂದು ಸ್ಥಾನ ಕಡಿಮೆಯಾಗಿತ್ತು. ಶಶಿಕಲಾ ಜೊಲ್ಲೆ ಮಾತ್ರ ಪೂರ್ಣ ಅವಧಿಗೆ ಸಚಿವೆಯಾಗಿದ್ದರು.