ಕಾರ್ಯಾಧ್ಯಕ್ಷ ಕಗ್ಗಂಟು : ಕೆಪಿಸಿಸಿ ಅಧ್ಯಕ್ಷತೆ ವಿಳಂಬ

By Kannadaprabha News  |  First Published Jan 18, 2020, 7:48 AM IST

ಕೆಪಿಸಿಸಿಗೆ ನಾಲ್ಕು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಮಾಡಬೇಕೋ ಅಥವಾ ಎರಡು ಹುದ್ದೆಗಳು ಸಾಕೋ ಎಂಬ ಹೊಸ ಗೊಂದಲ ಹೈಕಮಾಂಡ್‌ಗೆ ಆರಂಭವಾಗಿದೆ. ಇದೇ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಘೋಷಣೆಯೂ ವಿಳಂಬವಾಗುತ್ತಿದೆ


ಬೆಂಗಳೂರು [ಜ.18]:  ಕೆಪಿಸಿಸಿಗೆ ಎಷ್ಟುಮಂದಿ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಹೊಸ ಗೊಂದಲ ಹುಟ್ಟಿಕೊಂಡ ಪರಿಣಾಮ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಡಿ.ಕೆ. ಶಿವಕುಮಾರ್‌ ಅವರ ಹೆಸರು ಘೋಷಿಸುವುದನ್ನು ಕಾಂಗ್ರೆಸ್‌ ಹೈಕಮಾಂಡ್‌ ಮುಂದೂಡಿದೆ.

ಕೆಪಿಸಿಸಿಗೆ ನಾಲ್ಕು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಮಾಡಬೇಕೋ ಅಥವಾ ಎರಡು ಹುದ್ದೆಗಳು ಸಾಕೋ ಎಂಬ ಹೊಸ ಗೊಂದಲ ಹೈಕಮಾಂಡ್‌ಗೆ ಆರಂಭವಾಗಿದೆ. ಇದಕ್ಕೆ ಕಾರಣ ನಾಲ್ಕು ಹುದ್ದೆ ಸೃಷ್ಟಿಸಬೇಕು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾದ ಮಂಡಿಸಿದ್ದರೆ, ಎರಡು ಸಾಕು ಎಂದು ಮತ್ತೊಬ್ಬ ನಾಯಕ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್‌ಗೆ ತಿಳಿಸಿರುವುದು.

Tap to resize

Latest Videos

ಡಿ.ಕೆ. ಶಿವಕುಮಾರ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದಾದರೆ ನಾಲ್ಕು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸಬೇಕು ಎಂದು ತಮ್ಮ ದೆಹಲಿ ಭೇಟಿಯ ವೇಳೆ ಸಿದ್ದರಾಮಯ್ಯ ಹೈಕಮಾಂಡ್‌ಗೆ ಮನವಿ ಮಾಡಿದ್ದರು. ಗುರುವಾರ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿದ್ದ ಮತ್ತೊಬ್ಬ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಾಲ್ಕು ಮಂದಿ ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಬೇಡ. ಎರಡು ಕಾರ್ಯಾಧ್ಯಕ್ಷ ಹುದ್ದೆ ಸಾಕು ಎಂಬ ಹೊಸ ವಾದ ಮುಂದಿಟ್ಟಿದ್ದಾರೆ.

ರಾಜ್ಯ ಕಾಂಗ್ರೆಸ್‌ ನಾಯಕರ ಈ ವಿಭಿನ್ನ ವಾದ ಸರಣಿ ಹಿನ್ನೆಲೆಯಲ್ಲಿ ಹೈಕಮಾಂಡ್‌ ಸ್ಪಷ್ಟನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಶಿವಕುಮಾರ್‌ ಹೆಸರು ಘೋಷಣೆ ಮುಂದಕ್ಕೆ ಹೋಗಿದ್ದು, ಸೋಮವಾರ ಈ ಬಗೆಗಿನ ಘೋಷಣೆ ಹೊರ ಬೀಳಬಹುದು ಎನ್ನಲಾಗುತ್ತಿದೆ.

ಕಾರ್ಯಾಧ್ಯಕ್ಷ ಹುದ್ದೆ ನಾಲ್ಕಾ? ಎರಡಾ?:  ಡಿ.ಕೆ. ಶಿವಕುಮಾರ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಿದ ನಂತರ ಅವರು ಮನಸೋ ಇಚ್ಛೆ ಅಧಿಕಾರ ನಡೆಸದಂತೆ ಕಟ್ಟಿಹಾಕಲು ಒಂದು ವ್ಯವಸ್ಥೆ ಇರಬೇಕು ಎಂಬ ಕಾರಣಕ್ಕೆ ರಾಜ್ಯದ ಹಿರಿಯ ನಾಯಕರು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಗೆ ಹೈಕಮಾಂಡ್‌ ಮುಂದೆ ಬೇಡಿಕೆಯಿಟ್ಟಿದ್ದರು. ಹಿರಿಯರಾದ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಬ್ಬರದ್ದು ಇದೇ ವಾದ. ಆದರೆ, ಕಾರ್ಯಾಧಕ್ಷ್ಯರ ಸಂಖ್ಯೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಅಭಿಪ್ರಾಯ ಭೇದವಿದೆ.

ಸಿದ್ದರಾಮಯ್ಯ ಅವರು ಬೆಂಗಳೂರು, ಮೈಸೂರು, ಹೈದರಾಬಾದ್‌ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ವಿಭಾಗಗಳಿಗೆ ತಲಾ ಒಬ್ಬರಂತೆ ನಾಲ್ಕು ಕಾರ್ಯಾಧ್ಯಕ್ಷರನ್ನು ಸೃಷ್ಟಿಸಬೇಕು ಎಂದು ಹೈಕಮಾಂಡ್‌ ಮುಂದೆ ವಾದ ಮಂಡಿಸಿದ್ದಾರೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ವಿರೋಧವಿದೆ.

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ್ರೆ ಕರ್ನಾಟಕ ಕಾಂಗ್ರೆಸ್‌ಗೆ ಆಗುವ 8 ಲಾಭ-ನಷ್ಟಗಳು.....

ನಾಲ್ಕು ಕಾರ್ಯಾಧ್ಯಕ್ಷರನ್ನು ಸೃಷ್ಟಿಮಾಡಿದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಗೊಂದಲ ನಿರ್ಮಾಣವಾಗುತ್ತದೆ. ಕೆಪಿಸಿಸಿ ಅಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕ ಹಾಗೂ ನಾಲ್ಕು ಕಾರ್ಯಾಧ್ಯಕ್ಷರು ಸೇರಿ ಹಲವು ಅಧಿಕಾರ ಕೇಂದ್ರಗಳು ಸೃಷ್ಟಿಯಾದಂತೆ ಆಗುತ್ತದೆ. ಇದು ಪಕ್ಷಕ್ಕೆ ಒಳ್ಳೆಯದಲ್ಲ. ಆದರೆ, ರಾಜ್ಯದ ಎಲ್ಲ ಭಾಗಗಳನ್ನು ಸಮದೂಗಿಸಲು ವಿಭಾಗವಾರು ಪ್ರಾತಿನಿಧ್ಯ ನೀಡಬೇಕು ಎಂಬ ವಾದ ಸರಿಯಿದೆ. ಅದರಂತೆ ಬೆಂಗಳೂರು ವಿಭಾಗದ ವ್ಯಾಪ್ತಿಗೆ ಬರುವ ಡಿ.ಕೆ. ಶಿವಕುಮಾರ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆತರೆ, ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಇನ್ನು ಹೈದರಾಬಾದ್‌ ಕರ್ನಾಟಕ ವಿಭಾಗದಿಂದ ಈಗಾಗಲೇ ಈಶ್ವರ್‌ ಖಂಡ್ರೆ ಅವರು ಕಾರ್ಯಾಧ್ಯಕ್ಷರಾಗಿದ್ದಾರೆ. ಹೀಗಾಗಿ ಮುಂಬೈ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಲು ಒಬ್ಬರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿದರೆ ಸಾಕು ಎಂದು ಖರ್ಗೆ ಹೈಕಮಾಂಡ್‌ ಮುಂದೆ ವಾದ ಮಂಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಕೆ ಶಿವಕುಮಾರ್‌ಗೆ KPCC ಅಧ್ಯಕ್ಷ ಪಟ್ಟ ಒಲಿಯಲು 5 ಕಾರಣಗಳು..

ಹಿರಿಯ ನಾಯಕರ ಈ ವಾದ ಮಂಡನೆಯಿಂದ ತುಸು ಗೊಂದಲಕ್ಕೆ ಒಳಗಾಗಿರುವ ಹೈಕಮಾಂಡ್‌ ಈ ಬಗ್ಗೆ ಪರಾಮರ್ಶೆ ನಡೆಸಿ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದೆ. ಕಾರ್ಯಾಧ್ಯಕ್ಷ ಹುದ್ದೆಯ ಬಗ್ಗೆ ತೀರ್ಮಾನ ಕೈಗೊಂಡ ನಂತರವೇ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಶಿವಕುಮಾರ್‌ ಹೆಸರನ್ನು ಘೋಷಣೆ ಮಾಡುವ ಉದ್ದೇಶ ಹೈಕಮಾಂಡ್‌ಗೆ ಇದೆ ಎನ್ನಲಾಗುತ್ತಿದೆ.

 ಸತೀಶ್‌ರನ್ನು ದೆಹಲಿಗೆ ಕರೆದಿದ್ದೇ ಖರ್ಗೆ?

ನಾಲ್ಕು ಕಾರ್ಯಾಧ್ಯಕ್ಷ ಹುದ್ದೆ ಬೇಡ. ಮುಂಬೈ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಲು ಮತ್ತೊಂದು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಮಾಡಿದರೆ ಸಾಕು ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೈಕಮಾಂಡ್‌ ಬಳಿ ವಾದ ಮಂಡಿಸಿದ ಬೆನ್ನಲ್ಲೇ ಈ ಭಾಗದ ನಾಯಕ ಸತೀಶ್‌ ಜಾರಕಿಹೊಳಿ ದೆಹಲಿಗೆ ತೆರಳಿ ಲಾಬಿ ಆರಂಭಿಸಿದ್ದು ಕುತೂಹಲ ಮೂಡಿಸಿದೆ.

ಶುಕ್ರವಾರ ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿದ ಸತೀಶ್‌ ಜಾರಕಿಹೊಳಿ ಕಾರ್ಯಾಧ್ಯಕ್ಷ ಹುದ್ದೆಗೆ ಬೇಡಿಕೆ ಮಂಡಿಸಿದರು ಎಂದು ಮೂಲಗಳು ತಿಳಿಸಿವೆ. ಹೀಗೆ ಜಾರಕಿಹೊಳಿ ಹಠಾತ್‌ ದೆಹಲಿಗೆ ತೆರಳಿ, ಹೈಕಮಾಂಡ್‌ ಮುಂದೆ ಹುದ್ದೆಗೆ ಬೇಡಿಕೆಯಿಡಲು ಖರ್ಗೆ ಅವರ ಸೂಚನೆಯೇ ಕಾರಣ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಪಾಳಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸತೀಶ್‌ ಜಾರಕಿಹೊಳಿ ಅವರು ಇದೀಗ ಖರ್ಗೆ ಅವರ ಸೂಚನೆಯಂತೆ ದೆಹಲಿಗೆ ತೆರಳಿದರು ಎಂದು ಹೇಳಲಾಗುತ್ತಿದೆ.

click me!