ರಾಜ್ಯ ಸರ್ಕಾರದಲ್ಲಿ ಶಾಸಕ ಎನ್. ಚಲುವರಾಯಸ್ವಾಮಿ ಅವರಿಗೆ ಸಂಪುಟ ದರ್ಜೆಯ ಕೃಷಿ ಮಂತ್ರಿ ಸ್ಥಾನ ಲಭಿಸಿರುವುದರಿಂದ ಚುನಾವಣೆ ಸಂದರ್ಭದಲ್ಲಿ ತಾಲೂಕು ಜನರಿಗೆ ಕೊಟ್ಟಭರವಸೆಗಳನ್ನು ಈಡೇರಿಸುವ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ಹಲವು ಸವಾಲುಗಳು ಎದುರಾಗಿವೆ.
ಕರಡಹಳ್ಳಿ ಸೀತಾರಾಮು
ನಾಗಮಂಗಲ (ಜೂ.03): ರಾಜ್ಯ ಸರ್ಕಾರದಲ್ಲಿ ಶಾಸಕ ಎನ್. ಚಲುವರಾಯಸ್ವಾಮಿ ಅವರಿಗೆ ಸಂಪುಟ ದರ್ಜೆಯ ಕೃಷಿ ಮಂತ್ರಿ ಸ್ಥಾನ ಲಭಿಸಿರುವುದರಿಂದ ಚುನಾವಣೆ ಸಂದರ್ಭದಲ್ಲಿ ತಾಲೂಕು ಜನರಿಗೆ ಕೊಟ್ಟಭರವಸೆಗಳನ್ನು ಈಡೇರಿಸುವ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ಹಲವು ಸವಾಲುಗಳು ಎದುರಾಗಿವೆ. ಮುಂದಿನ ಐದು ವರ್ಷದ ಅವಧಿಯಲ್ಲಿ ಪ್ರಭಾವಿ ಸಚಿವರೂ ಆಗಿರುವ ಎನ್. ಚಲುವರಾಯಸ್ವಾಮಿ ಮನಸ್ಸು ಮಾಡಿದರೆ ಕ್ಷೇತ್ರದ ಚಿತ್ರಣವನ್ನೇ ಬದಲಿಸಬಹುದು. ಏಕೆಂದರೆ ಈ ಹಿಂದೆ ಎರಡು ಬಾರಿ ಸಚಿವರಾಗಿ ಒಂದು ಬಾರಿ ಸಂಸದರಾಗಿ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿರುವ ಅನುಭವವಿದೆ.
ಸ್ಪಷ್ಟ ಬಹುಮತದ ಸರ್ಕಾರವಿದೆ. ಹೀಗಾಗಿ ತಾಲೂಕು ಮತ್ತು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗುತ್ತಾರೆ ಎಂಬುದು ಜಿಲ್ಲೆಯ ರೈತರು ಮತ್ತು ಯುವ ಸಮುದಾಯ ಬಹಳಷ್ಟುನಿರೀಕ್ಷೆಯಲ್ಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಸಿಆರ್‌ಎಸ್‌ಗೆ ಆದಿಚುಂಚನಗಿರಿ ಶ್ರೀಗಳ ಸಂಪೂರ್ಣ ಆಶೀರ್ವಾದವಿದೆ. ಹಾಗಾಗಿ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ.
ಗ್ರಾಮೀಣ ಮಹಿಳೆಯರಿಗೆ ಉಚಿತ ಪ್ರಯಾಣ ಹೇಗೆ?: ಹಲವು ಗ್ರಾಮಗಳಲ್ಲಿ ಬಸ್ ಸೌಲಭ್ಯ ಇಲ್ಲ!
ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ಕೆಲಸ: ಎಲ್ಲ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ ಕರ್ತವ್ಯ ನಿರ್ವಹಿಸಿದರೆ ತಾಲೂಕಿನ ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಕಳೆದ 2005ರಲ್ಲಿ ಸಚಿವರಾಗಿದ್ದ ಚಲುವರಾಯಸ್ವಾಮಿ ಹಳೇ ತಾಲೂಕು ಕಚೇರಿಯನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ಸುಸಜ್ಜಿತವಾದ ಮಿನಿವಿಧಾನ ಸೌಧ ನಿರ್ಮಿಸಿದ್ದರು. ಆದರೆ, ಇಲ್ಲಿನ ಕೃಷಿ ಇಲಾಖೆ, ಉಪ ನೋಂದಣಾಧಿಕಾರಿಗಳ ಕಚೇರಿ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ.
ರೈತರ ಕೃಷಿ ಚಟುವಟಿಕೆಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಕೃಷಿ ಇಲಾಖೆಗೆ ಸ್ವಂತ ಕಟ್ಟಡವಿಲ್ಲ. ಟಿ.ಬಿ.ಬಡಾವಣೆಯ ಖಾಸಗಿ ಕಟ್ಟಡದಲ್ಲಿ ಮಾಸಿಕ 36ಸಾವಿರ ಬಾಡಿಗೆ ಕೊಟ್ಟು ಕಚೇರಿ ನಡೆಸಲಾಗುತ್ತಿದೆ. ಅಲ್ಲದೆ ಇಲಾಖೆಯಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ ಕೊರತೆಯೂ ಇದೆ. ತಾಲೂಕಿನ ಐದು ಹೋಬಳಿ ಕೇಂದ್ರಗಳಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳೇ ಇಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮತ್ತು ಗೋದಾಮಿಗೆ ಸ್ವಂತ ಕಟ್ಟಡ ನಿರ್ಮಿಸಲು ಪಟ್ಟಣದ ಬಿ.ಎಂ.ರಸ್ತೆ ಬದಿಯಲ್ಲಿಯೇ ಇಲಾಖೆಗೆ ಸೇರಿದ ನಿವೇಶನವಿದೆ.
ರಾಜ್ಯ ಸರ್ಕಾರದ ಕೃಷಿ ಸಚಿವರೂ ಆಗಿರುವ ಕ್ಷೇತ್ರದ ಶಾಸಕ ಎನ್.ಚಲುವರಾಯಸ್ವಾಮಿ ತಮ್ಮದೇ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಸುವ ಜೊತೆಗೆ ಇಲಾಖೆಯ ಸ್ವಂತ ಕಟ್ಟಡ ನಿರ್ಮಿಸಲು ತುರ್ತಾಗಿ ಕ್ರಮವಹಿಸಬೇಕಿದೆ. ಕಳೆದ 18ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಮಿನಿವಿಧಾನಸೌಧದ ಕಟ್ಟಡಕ್ಕೆ ಈವರೆಗೂ ಸುಣ್ಣಬಣ್ಣ ಮಾಡಿಸಿಲ್ಲ. ಕಟ್ಟಡ ಶಿಥಿಲಾವಸ್ಥೆ ತಲುಪುತ್ತಿದೆ. ತಹಸೀಲ್ದಾರ್ ಕಚೇರಿಯ ಪಕ್ಕದಲ್ಲೇ ಇರುವ ಶೌಚಾಲಯದ ಬಾಗಿಲುಗಳು ಮುರಿದು ದುರ್ವಾಸನೆ ಬೀರುತ್ತಿದ್ದರೂ ಇದನ್ನು ಸರಿಪಡಿಸುವ ಕಾಳಜಿ ಯಾವೊಬ್ಬ ಅಧಿಕಾರಿಗೂ ಇಲ್ಲದಂತಾಗಿದೆ. ನೆಲ ಅಂತಸ್ತಿನಲ್ಲಿ ಇಲಿ ಹೆಗ್ಗಣಗಳು ಸೇರಿಕೊಂಡಿವೆ. ಇಡೀ ಕಟ್ಟಡಕ್ಕೆ ಸುಣ್ಣಬಣ್ಣ ಸೇರಿದಂತೆ ಸಣ್ಣ ಪುಟ್ಟದುರಸ್ತಿ ಕಾರ್ಯಗಳು ತುರ್ತಾಗಿ ಆಗಬೇಕಿವೆ.
ಕಾಮಗಾರಿಗಳು ತ್ವರಿತಗತಿಯಲ್ಲಿ ಆಗಬೇಕು: ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಸೇರಿದಂತೆ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಬಹಳಷ್ಟುಆಗಬೇಕಿವೆ. ಆಮೆಗತಿಯಲ್ಲಿ ಸಾಗುತ್ತಿರುವ ಮಾರ್ಕೋನಹಳ್ಳಿ ಜಲಾಶಯದಿಂದ ತಾಲೂಕಿನ 128ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ, ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆ, ತಾಲೂಕಿನ ಬಹುತೇಕ ಕೆರೆ ಕಟ್ಟೆಗಳಿಗೆ ಹೇಮಾವತಿ ಜಲಾಶಯದ ನೀರು ತುಂಬಿಸುವ ಏತ ನೀರಾವರಿ ಯೋಜನೆ ಮತ್ತು 450ಕ್ಕೂ ಹೆಚ್ಚು ಗ್ರಾಮಗಳಿಗೆ ಕೆಆರ್‌ಎಸ್‌ನಿಂದ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಿದೆ. ಮತ್ತಷ್ಟುಹೊಸ ಯೋಜನೆಗಳನ್ನು ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕಿರುವುದು ಸಚಿವ ಚಲುವರಾಯಸ್ವಾಮಿಗೆ ದೊಡ್ಡ ಸವಾಲಾಗಿದೆ.
ಚುನಾವಣಾ ಪ್ರಚಾರ ಸಮಯದಲ್ಲಿ ಎಲ್ಲದಕ್ಕೂ ಅಸ್ತು ಎಂದಿದ್ದ ಚಲುವರಾಯಸ್ವಾಮಿ ಈಗ ಸ್ಪಷ್ಟಬಹುಮತದ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ತಾಲೂಕು ಮತ್ತಷ್ಟುಅಭಿವೃದ್ಧಿ ಕಾಣಬೇಕು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಅಧಿಕಾರಿಗಳು ಜನಸ್ನೇಹಿ ಆಡಳಿತ ಕೊಡಬೇಕು. ನಿರುದ್ಯೋಗ ಸಮಸ್ಯೆ ಪರಿಹಾರವಾಗಬೇಕು. ಇದಕ್ಕೆ ಪೂರಕವಾಗಿ ಸಚಿವ ಎನ್.ಚಲುವರಾಯಸ್ವಾಮಿ ಯಾವ ತಂತ್ರ ರೂಪಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪಶು ಆಸ್ಪತ್ರೆಗಳಲ್ಲಿ ವೈದ್ಯರು-ಸಿಬ್ಬಂದಿ ಕೊರತೆ: ಗ್ರಾಮೀಣ ಪ್ರದೇಶದ ರೈತರು ಕೃಷಿಯ ಜೊತೆಗೆ ಹೈನುಗಾರಿಕೆಗೂ ಹೆಚ್ಚು ಒತ್ತು ನೀಡಿರುವ ಪರಿಣಾಮ ತಾಲೂಕಿನಲ್ಲಿ ಒಟ್ಟು 1.20ಲಕ್ಷಕ್ಕೂ ಹೆಚ್ಚು ಹಸು, ಎಮ್ಮೆ, ಮೇಕೆ, ಕುರಿಗಳಿವೆ. ಇವುಗಳ ಆರೋಗ್ಯ ಸುರಕ್ಷತೆಗೆ 6 ಪಶು ಆಸ್ಪತ್ರೆ, 8 ಪಶುಚಿಕಿತ್ಸಾಲಯ ಮತ್ತು 12 ಪಶು ಚಿಕಿತ್ಸಾ ಕೇಂದ್ರಗಳಿವೆ. ಆದರೆ, ಇದಕ್ಕೆ ಪೂರಕವಾಗಿ ವೈದ್ಯರು ಮತ್ತು ಸಿಬ್ಬಂದಿಗಳಿಲ್ಲ. ತಾಲೂಕಿನ ಪಶು ಇಲಾಖೆಗೆ ಮಂಜೂರಾಗಿರುವ ಒಟ್ಟು 101 ಹುದ್ದೆಗಳ ಪೈಕಿ ಕೇವಲ 26 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಬರೋಬ್ಬರಿ 75 ಹುದ್ದೆಗಳು ಖಾಲಿಯಿವೆ. 13ಮಂದಿ ಪಶುವೈದ್ಯರು, 12ಮಂದಿ ಪಶು ವೈದ್ಯಕೀಯ ಪರೀಕ್ಷಕರು, 12 ಮಂದಿ ಸಹಾಯಕರು, 34ಮಂದಿ ಡಿಗ್ರೂಪ್ ನೌಕರರು ಸೇರಿ ಒಟ್ಟು 75ಮಂದಿ ಸಿಬ್ಬಂದಿಗಳ ಕೊರತೆಯಿದೆ. ತಾಲೂಕಿನ ಶಿಕ್ಷಣ ಇಲಾಖೆಯಲ್ಲಿಯೂ 285ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಜೂ.1ರಿಂದ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕ್ರಮವಹಿಸಬೇಕು. ಇಲಾಖೆಯ ಅಧಿಕಾರಿಗಳು ಈಗಾಗಲೇ 100ಮಂದಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದಾರೆ.
ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಬೇಕು: ಶಾಸಕ ವೆಂಕಟಶಿವಾರೆಡ್ಡಿ
ಗಾರ್ಮೆಂಟ್ಸ್ ಸ್ಥಾಪನೆಗೆ ಕೊಡಬೇಕಿದೆ ಆದ್ಯತೆ: ಚುನಾವಣೆ ವೇಳೆ ತಾಲೂಕಿನಲ್ಲಿ ಗಾರ್ಮೆಂಟ್ಸ್ ಮತ್ತು ಕೈಗಾರಿಕಾ ಘಟಕ ಸ್ಥಾಪಿಸಿ ಕನಿಷ್ಠ 10 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು. ಜನರಿಗೆ ಕೊಟ್ಟಭರವಸೆ ಈಡೇರಬೇಕೆಂದರೆ ಈ ಹಿಂದೆ ತಾವೇ ಶಾಸಕರಾಗಿದ್ದ ಅವಧಿಯಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ದೇವಿಹಳ್ಳಿ ಸಮೀಪ ನಿರ್ಮಿಸಲು ಉದ್ದೇಶಿಸಿದ್ದ ಗಾರ್ಮೆಂಟ್ಸ್ ಘಟಕ ಸ್ಥಾಪನೆಗೆ ಆದ್ಯತೆ ಕೊಡುವ ಜೊತೆಗೆ ಕೈಗಾರಿಕಾ ಘಟಕ ನಿರ್ಮಿಸಿ ತಾಲೂಕಿನ ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸಲು ಗಮನಹರಿಸಬೇಕಿದೆ.