ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಸರ್ಕಾರಕ್ಕೆ ಯತ್ನ?

By Kannadaprabha News  |  First Published Nov 3, 2019, 11:22 AM IST

ರಹಸ್ಯ ರಾಜಕೀಯ ಬೆಳವಣಿಗೆಗಳು ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದು, ಶಿವಸೇನೆ- ಎನ್‌ಸಿಪಿ ಸರ್ಕಾರ ಅಸ್ತಿತ್ವಕ್ಕೆ ಬರಬಹುದು ಎಂಬ ಲೆಕ್ಕಾಚಾರಗಳು ಕೇಳಿಬಂದಿವೆ.


ಮುಂಬೈ (ನ.03): ಮಹಾರಾಷ್ಟ್ರದ ಮುಖ್ಯಮಂತ್ರಿ ಗದ್ದುಗೆಗಾಗಿ ಬಿಜೆಪಿ ಹಾಗೂ ಶಿವಸೇನೆ ನಡುವೆ ಸೃಷ್ಟಿಯಾಗಿರುವ ಕಗ್ಗಂಟು  ಬಗೆಹರಿದಿಲ್ಲ. ಈ ನಡುವೆ, ರಹಸ್ಯ ರಾಜಕೀಯ ಬೆಳವಣಿಗೆಗಳು ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದು, ಶಿವಸೇನೆ- ಎನ್‌ಸಿಪಿ ಸರ್ಕಾರ ಅಸ್ತಿತ್ವಕ್ಕೆ ಬರಬಹುದು ಎಂಬ ಲೆಕ್ಕಾಚಾರಗಳು ಕೇಳಿಬಂದಿವೆ.

ಬಿಜೆಪಿಯ ಜತೆಗಿನ ಸಂಬಂಧ ಕಡಿದುಕೊಂಡು ಶಿವಸೇನೆ ಹೊರಬಂದರೆ, ಎನ್‌ಸಿಪಿ ಜತೆ ಸೇರಿ ಸರ್ಕಾರ ರಚಿಸುವುದು. ಕಾಂಗ್ರೆಸ್ಸಿನ ಪರೋಕ್ಷ ಬೆಂಬಲ ಪಡೆದು ಬಹುಮತ ಸಾಬೀತು ಪರೀಕ್ಷೆಯಿಂದ ಪಾಸ್‌ ಆಗುವ ಯೋಜನೆಯೊಂದನ್ನು ಎನ್‌ಸಿಪಿ ಸಿದ್ಧಪಡಿಸಿದೆ ಎಂದು ಹೇಳಲಾಗುತ್ತಿದೆ.

Tap to resize

Latest Videos

undefined

ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಆಪ್ತರಾಗಿರುವ ಸಂಜಯ್‌ ರಾವತ್‌ ಅವರ ಜತೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಎನ್‌ಸಿಪಿ ನಾಯಕರ ಜತೆ ಸಭೆ ನಡೆಸಿ ಪ್ಲ್ಯಾನ್‌ವೊಂದನ್ನು ರೂಪಿಸಿದ್ದಾರೆ ಎನ್ನಲಾಗಿದೆ. ಈ ನಡುವೆ, ಒಬ್ಬ ಶಾಸಕನನ್ನು ಹೊಂದಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ ಅವರು ಶನಿವಾರ ಪವಾರ್‌ ಜತೆ ಮಾತುಕತೆ ನಡೆಸಿದ್ದಾರೆ.

ಸೋಮವಾರ ಶರದ್‌ ಪವಾರ್‌ ಅವರು ದೆಹಲಿಗೆ ತೆರಳಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಆನಂತರ ಶಿವಸೇನೆ- ಎನ್‌ಸಿಪಿ ಸರ್ಕಾರ ರಚನೆ ಹಾಗೂ ಕಾಂಗ್ರೆಸ್ಸಿನ ಪಾತ್ರದ ಕುರಿತು ಸ್ಪಷ್ಟಚಿತ್ರಣ ಲಭಿಸುವ ಸಾಧ್ಯತೆ ಇದೆ.

ಎನ್‌ಸಿಪಿ ಪ್ಲ್ಯಾನ್‌ ಇದು

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಸ್ಥಾನ ಬೇಕು. ಶಿವಸೇನೆ (56) ಹಾಗೂ ಎನ್‌ಸಿಪಿ (54) ಒಗ್ಗೂಡಿದರೆ 110 ಸ್ಥಾನಗಳಾಗುತ್ತವೆ. ಪಕ್ಷೇತರರು ಹಾಗೂ ಇತರ ಶಾಸಕರ ಬೆಂಬಲ ಪಡೆದು ಈ ಸಂಖ್ಯೆಯನ್ನು 125ಕ್ಕೆ ಹೆಚ್ಚಿಸಿಕೊಳ್ಳುವುದು. ಬಹುಮತ ಸಾಬೀತು ವೇಳೆ ಕಾಂಗ್ರೆಸ್‌ನ 44 ಸದಸ್ಯರನ್ನು ಗೈರು ಹಾಜರಾಗಿಸಿದರೆ ಸದನದ ಬಲ 244ಕ್ಕೆ ಕುಸಿಯಲಿದೆ. ಆಗ ಬಹುಮತಕ್ಕೆ 123 ಸ್ಥಾನಗಳು ಸಾಕಾಗುತ್ತವೆ ಎಂಬ ಲೆಕ್ಕಾಚಾರವಿದೆ. ಬಲಪಂಥೀಯ ವಿಚಾರಧಾರೆ ಹೊಂದಿರುವ ಶಿವಸೇನೆ ಜತೆಗೂಡಿ ಸರ್ಕಾರ ರಚಿಸಲು ಕಾಂಗ್ರೆಸ್‌ ಶಾಸಕರೇನೋ ಒಲವು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಹಿರಿಯ ನಾಯಕರು ಸುತಾರಾಂ ಒಪ್ಪುತ್ತಿಲ್ಲ ಎನ್ನಲಾಗಿದೆ.

ರಾಷ್ಟ್ರಪತಿ ಬಿಜೆಪಿ ಜೇಬಲ್ಲಿ ಇದ್ದಾರಾ?: ಶಿವಸೇನೆ

ನವೆಂಬರ್‌ 7ರೊಳಗೆ ಸರ್ಕಾರ ರಚನೆ ಆಗದೇ ಹೋದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ ಎಂದು ಬಿಜೆಪಿ ಮುಖಂಡ ಸುಧೀರ್‌ ಮುಂಗಂಟಿವಾರ್‌ ನೀಡಿದ ಹೇಳಿಕೆಯನ್ನು ಶಿವಸೇನೆಯು ತನ್ನ ಪಕ್ಷದ ಮುಖವಾಣಿ ಪತ್ರಿಕೆ ‘ಸಾಮ್ನಾ’ದಲ್ಲಿ ಖಂಡಿಸಿದೆ. ‘ರಾಷ್ಟ್ರಪತಿಯೇನು ನಿಮ್ಮ ಜೇಬಿನಲ್ಲಿದ್ದಾರಾ? ಅವರ ಸೀಲ್‌ (ಮೊಹರು) ನಿಮ್ಮ ಮಹಾರಾಷ್ಟ್ರ ಕಚೇರಿಯಲ್ಲಿದೆಯೇ?’ ಎಂದು ಪತ್ರಿಕೆಯಲ್ಲಿ ಶಿವಸೇನೆ ಪ್ರಶ್ನಿಸಿದ್ದು, ‘ಜನಾದೇಶವನ್ನು ಬಿಜೆಪಿ ಅವಮಾನ ಮಾಡುತ್ತಿದೆ’ ಎಂದು ಕಿಡಿಕಾರಿದೆ. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಸಂಜಯ ರಾವುತ್‌, ‘ರಾಷ್ಟ್ರಪತಿ ಆಳ್ವಿಕೆ ಹೇರುವ ಪ್ರಯತ್ನವನ್ನು ಬಿಜೆಪಿ ಮಾಡಿದರೆ ಕಾದು ನೋಡುವ ತಂತ್ರವನ್ನು ಬಿಡಬೇಕಾಗುತ್ತೆ ಹುಷಾರ್‌’ ಎಂದು ಎಚ್ಚರಿಸಿದ್ದಾರೆ.

ಎನ್‌ಸಿಪಿ ಪ್ಲ್ಯಾನ್‌ ‘ಬಿ’:

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಎನ್‌ಸಿಪಿ ‘ಪ್ಲ್ಯಾನ್‌-ಬಿ’ ರೂಪಿಸುತ್ತಿದೆ ಎಂದು ತಿಳಿದುಬಂದಿದೆ. ಎನ್‌ಸಿಪಿಯ 54 ಹಾಗೂ ಶಿವಸೇನೆಯ 56 ಶಾಸಕರು ಸೇರಿದರೆ ಬಲ 110 ಆಗಲಿದೆ. ಕೆಲವು ಸಣ್ಣ ಪಕ್ಷಗಳು ಹಾಗೂ ಸ್ವತಂತ್ರ ಶಾಸಕರ ಬೆಂಬಲ ಪಡೆದು ಹೇಗಾದರೂ ಮಾಡಿ 125 ಶಾಸಕರ ಬೆಂಬಲ ಕ್ರೋಡೀಕರಿಸುವುದೇ ಈ ಯೋಜನೆ. ಇನ್ನು ಬಿಜೆಪಿಗೆ ನೇರವಾಗಿ ಬೆಂಬಲಿಸಲು ಕಾಂಗ್ರೆಸ್‌ಗೆ ಮನಸ್ಸಿಲ್ಲದ ಕಾರಣ ಪರೋಕ್ಷವಾಗಿ ಅವರ ಬೆಂಬಲ ಪಡೆದು ಬಹುಮತದ ಗೆರೆ ದಾಟುವುದು ಎನ್‌ಸಿಪಿ ಯೋಜನೆಯಾಗಿದೆ.

ಇದಕ್ಕೆ ಪೂರಕವಾಗಿ ಮಾತನಾಡಿದ ಶರದ್‌ ಪವಾರ್‌, ‘ಕಾಂಗ್ರೆಸ್‌ ಉದ್ದೇಶಿತ ಸರ್ಕಾರದ ಭಾಗವಾಗಿರುವುದಿಲ್ಲ. ಅವರು ಬಾಹ್ಯ ಬೆಂಬಲವನ್ನೂ ನೀಡಬೇಕಿಲ್ಲ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವು ವಿಧಾನಸಭೆಯಿಂದ ದೂರ ಉಳಿದರೆ ಸಾಕು. ಆಗ ಬಹುಮತಕ್ಕೆ ಬೇಕಾದ ಸಂಖ್ಯೆ 145ರ ಬದಲು 124 ಅಥವಾ 125ಕ್ಕೆ ಇಳಿಯಲಿದೆ. ಇಂತಹ ಸಂದರ್ಭದಲ್ಲಿ ಎನ್‌ಸಿಪಿ-ಶಿವಸೇನೆ ಹಾಗೂ ಇತರರ ಮೈತ್ರಿಕೂಟಕ್ಕೆ 125 ಸ್ಥಾನ ಲಭಿಸಿದರೆ ಅಲ್ಪಮತದ ಸರ್ಕಾರಕ್ಕೇ ಬಹುಮತ ಪ್ರಾಪ್ತಿಯಾದಂತಾಗುತ್ತದೆ. ಸೇನೆ ಜತೆ ಸೇರಿ ಸರ್ಕಾರ ರಚಿಸದೇ ಇರುವುದು ಕಾಂಗ್ರೆಸ್‌ಗೆ ಕೂಡ ಉತ್ತಮ’ ಎಂದು ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನ.07ಕ್ಕೆ ಸರ್ಕಾರ ಆಗ್ದಿದ್ರೆ ರಾಷ್ಟ್ರಪತಿ ಆಡಳಿತ: ಬಿಜೆಪಿ ನಾಯಕನ ಹೊಸ ವರಾತ!...

‘ಆದರೆ ಈವರೆಗೂ ಶಿವಸೇನೆಯಿಂದ ಮೈತ್ರಿ ಪ್ರಸ್ತಾಪ ಬಂದಿಲ್ಲ. ಮೈತ್ರಿ ಪ್ರಸ್ತಾಪವನ್ನು ಆ ಪಕ್ಷ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಜತೆಗಿನ ಸ್ನೇಹವನ್ನು ಸಂಪೂರ್ಣ ಕಡಿದುಕೊಂಡೇ ನಮ್ಮತ್ತ ಬರಬೇಕು’ ಎಂದು ಪವಾರ್‌ ಸ್ಪಷ್ಟಪಡಿಸಿದರು.

ಈ ನಡುವೆ, ನವೆಂಬರ್‌ 4ರಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜತೆ ಪವಾರ್‌ ಭೇಟಿಯಾಗಲಿದ್ದು, ಮಾತುಕತೆ ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ:

ಶಿವಸೇನೆ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಮೈತ್ರಿಗೆ ಪಕ್ಷದ ರಾಜ್ಯ ಪ್ರಭಾರಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್‌ ಶಿಂದೆ ವಿರೋಧಿಸಿದ್ದಾರೆ.

ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ಮುಖ್ಯ. ಹೀಗಾಗಿ ಸರ್ಕಾರ ರಚನೆಗೆ ಬೆಂಬಲಿಸಬೇಕು ಎಂಬುದು ಇನ್ನೊಂದು ಬಣದ ಆಗ್ರಹ. ಈ ಬಗ್ಗೆ ಸೋನಿಯಾ ಗಾಂಧಿ ಅವರೊಂದಿಗೆ ಮಹಾರಾಷ್ಟ್ರ ಕಾಂಗ್ರೆಸ್‌ ನಿಯೋಗ ಚರ್ಚಿಸಿ, ಎಲ್ಲ ವಿದ್ಯಮಾನಗಳ ಬಗ್ಗೆ ವಿವರಣೆ ನೀಡಿದೆ.

ಈ ಬಗ್ಗೆ ಮಾತನಾಡಿದ ಕಾಂಗ್ರೆಸ್‌ ಶಾಸಕರೊಬ್ಬರು, ‘ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಸರ್ಕಾರ ರಚನೆಗೆ ಕಾಂಗ್ರೆಸ್‌ ಸಿದ್ಧವಿದೆ. ಆದರೆ ಬಿಜೆಪಿ ಜತೆ ನಂಟು ಕಡಿದುಕೊಂಡು ಹೊರಬರಬೇಕು. ಸೇನೆಯನ್ನು ಬೆಂಬಲಿಸಲು ಬಹುತೇಕ ನಮ್ಮ ಶಾಸಕರು ಸಿದ್ಧವಿದ್ದಾರೆ’ ಎಂದರು.

ನವೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!