ಕತೆಯಲ್ಲಿ ಬಂದ ಊರೇ ಕತೆಯಾಗಿ ಹೋದ ಕತೆ!

By Web Desk  |  First Published Aug 18, 2019, 1:37 PM IST

‘ಹೊರಗೆ ಸುಂದರವಾಗಿ ಕಂಡು, ಗರ್ಭದೊಳಗೆ ನೂರೆಂಟು ನೋವುಗಳು ತುಂಬಿದ್ದರೂ ನಗುತ್ತಾ ಬದುಕುವ ನಿಸರ್ಗವೇ ಹೆಣ್ಣಿಗೆ ಸರಿಯಾದ ಹೋಲಿಕೆ. ಅವಳನ್ನು ಮೀರಿದ ನೋವಿಲ್ಲ’ ಅನ್ನುವ ಒಂದು ಸಾಲನ್ನ ಎದೆಯೊಳಗಿಟ್ಟುಕೊಂಡು ಇದನ್ನು ಒಂದು ಕತೆಯಾಗಿಸಬೇಕು ಅಂತ ಸುಮಾರು ದಿನ ಅಲೆದಾಡಿದ್ದೆ. ಯಾವುದೋ ಗಳಿಗೆಯಲ್ಲಿ ಹುಟ್ಟಿದ ಕತೆಯ ಎಳೆ ಮರೆತುಹೋದ ಹಳೆಯ ಹಾಡಿನ ಸಾಲಿನಂತೆ, ಅಸ್ಪಷ್ಟವಾಗಿ ಆಗಾಗ ನೆನಪಾಗುತ್ತಲೇ ಇರುತ್ತದೆ. ಮರೆತಂತೆ ನಟಿಸುವ ನೆಪಗಳಲ್ಲಿ ಕಾಲ ನೂಕುವ ಅವಕಾಶ ಒಬ್ಬ ಕತೆಗಾರನಿಗಿರುವುದಿಲ್ಲ.


ಹಾಗಂತ ಕತೆ ಹುಟ್ಟಿದ ತಕ್ಷಣ ಬರೆದಿಡುವುದರಲ್ಲಿ ನನಗೆ ನಂಬಿಕೆಯಿಲ್ಲ , ಅದರ ಅಳುವನ್ನೊ ವಿಷಾದವನ್ನೊ ಮೌನವನ್ನೊ ಪೂರ್ತಿಯಾಗಿ ಮೊದಲು ಕೇಳಿಸಿಕೊಳ್ಳಬೇಕು. ಕ್ಷಣವೊಂದನ್ನ ಸೆರೆಹಿಡಿಯುವ ಆ ಪ್ರಕ್ರಿಯೆ ಮೊದಲು ನಮ್ಮ ಬುಡವನ್ನ ಅಲ್ಲಾಡಿಸಿದಾಗಲೇ, ನಾಳೆ ಅದನ್ನು ಓದುವವನ ಕಣ್ಣಂಚಲ್ಲಿ ನೀರನ್ನೊ ತುಟಿಯಂಚಲ್ಲಿ ಸಣ್ಣ ನಗುವನ್ನೊ ಹಾಗೆ ಹೊರಬರದಂತೆ ಒಂದಷ್ಟುದಿನ ಹಿಡಿದಿಟ್ಟಿರುತ್ತದೆ ಅನ್ನುವುದು ಖಾತ್ರಿಯಾಗುತ್ತದೆ.

ಹಾಸನ: ನೆರೆ ಪ್ರದೇಶಕ್ಕೆ ಪ್ರಜ್ವಲ್‌ ಭೇಟಿ

Tap to resize

Latest Videos

undefined

ಹೀಗೆ ಹುಟ್ಟಿದ ಸಾಲೊಂದನ್ನ ಹಿಡಿದು ಅದನ್ನು ಮರೆತುಬಿಡುವುದೋ ಮುಂದುವರಿಸುವುದೋ ಗೊತ್ತಾಗದೆ ಒಂದು ನಡು ಮಳೆಗಾಲದ ಸಂಜೆ ಕೊಟ್ಟಿಗೆಹಾರ ಅನ್ನುವ ಚಾರ್ಮಾಡಿ ಘಾಟಿಗೆ ಅಂಟಿಕೊಂಡೆ ಇರುವ ಊರಲ್ಲಿ ಕಾಫಿ ಹೀರುತ್ತಿದ್ದಾಗ ಜೊತೆಗಿದ್ದ ನನ್ನ ಚಿಕ್ಕಪ್ಪನ ಮಗ ಅವನ ಹತ್ತನೇ ಕ್ಲಾಸಿನ ಪ್ರೇಮಕತೆಯನ್ನ ಹೇಳಲು ಶುರುಮಾಡಿದ. ಅದೇ ಊರಲ್ಲಿ ಹುಟ್ಟಿಬೆಳೆದಿದ್ದ ಅವನಿಗೆ ಹೇಳಿಕೊಂಡು ನೊಂದುಕೊಳ್ಳುವುದಕ್ಕೆ ನೂರೆಂಟು ನೆನಪುಗಳಿದ್ದವು. ಹೈಸ್ಕೂಲು ಮುಗಿಸಿ ಕಾಲೇಜಿಗೆ ಸೇರುವ ಮಧ್ಯೆದಲ್ಲಿ ಮುಗಿದು ಹೋಗಿದ್ದ ಆ ಎಳೆಯ ಪ್ರೇಮಕತೆಯನ್ನ ನಾನೇನೂ ಗಮನವಿಟ್ಟು ಕೇಳಿಸಿಕೊಳ್ಳದಿದ್ದರೂ ಅವನು ಮಾತ್ರ ಕೈಸುಡುವಷ್ಟುಬಿಸಿಯಾಗಿದ್ದ ಕಾಫಿ ತಣ್ಣಗಾಗುವವರೆಗೂ ಹೇಳಿದ.

ಯಾವ ಪ್ರಶ್ನೆಯನ್ನೂ ಕೇಳದಿದ್ದರೆ ಅವನ ದುರಂತಮಯವಾದ ಕತೆಯನ್ನ ನಾನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ ಎಂಬ ಅನುಮಾನ ಬರುವ ಸಾಧ್ಯತೆಯಿದ್ದದ್ದರಿಂದ ಕೊನೆಯ ಸಿಪ್ಪಿನ ಕಾಫಿ ಮುಗಿಸಿ ಯಾವುದಕ್ಕೂ ಇರಲಿ ಎಂಬಂತೆ ಒಂದೇ ಒಂದು ಪ್ರಶ್ನೆ ಕೇಳಿದೆ,

‘ಹುಡುಗಿ ಯಾವೂರಿನವಳು?’

ನನ್ನ ಪ್ರಶ್ನೆಯನ್ನ ಸರಿಯಾಗಿ ಕೇಳಿಸಿಕೊಂಡರೂ ಅವನು ಒಂದರೆಕ್ಷಣ ಸುಮ್ಮನೇ ಇದ್ದ. ಕೊನೆಗೆ ಅಲ್ಲಿಂದಲೇ ಕಾಣುತ್ತಿದ್ದ ಚಾರ್ಮಾಡಿಯ ನೆತ್ತಿಯ ಕಡೆಗೆ ಬೆರಳೆತ್ತಿ ಮುಖ ಸಪ್ಪಗೆ ಮಾಡಿಕೊಂಡ. ‘ಹುಡುಗಿಯ ಊರು ಯಾವುದು ಅಂತ ಕೇಳಿದರೆ..ಗುಡ್ಡ ತೋರಿಸುತ್ತಿಯಲ್ಲಾ ಮಾರಾಯ..’ ಅಂತ ತಣ್ಣಗೆ ರೇಗಿದೆ.

‘ಚಾರ್ಮಾಡಿ ಘಾಟಿಯ ಮಧ್ಯದಲ್ಲಿ ಒಂದು ಊರಿದೆ..ಆಲೇಖಾನ್‌ ಹೊರಟ್ಟಿಅಂತ..ಇಲ್ಲಿಂದ ಎಂಟತ್ತು ಕಿಲೋಮೀಟರ್‌ ಆಗುತ್ತೆ..ಅಲ್ಲೆ ಇರೋದು ಅವಳ ಮನೆ..’ ಅಂತಂದು ತನ್ನ ಪಾಲಿನ ಕಾಫಿಯನ್ನ ಮುಗಿಸಲು ಶುರು ಮಾಡಿದ.

ನೆರೆ ಸಂತ್ರಸ್ತರಿಗೆ ಕೊಲ್ಲೂರು ದೇವಳದಿಂದ 1 ಕೋಟಿ ರು. ನೆರವು

ಆ ಘಾಟಿಯ ಮಧ್ಯೆದಲ್ಲಿ ಇವತ್ತು ನಾಳೆಯೋ ತಲೆ ಮೇಲೆ ಬೀಳಬಹುದಾದಂತಹ ಚೂಪು ತಲೆಯ ಬೆಟ್ಟಗುಡ್ಡಗಳ ನಡುವೆ ಊರು ಮನೆಗಳು ಇರೋಕೆ ಸಾಧ್ಯವೇ ಇಲ್ಲ ಅಂತ ನಾನೆಷ್ಟೆವಾದಿಸಿದರೂ, ಇನ್ನೂ ಹದಿನಾರು ವಯಸ್ಸಿನ ನನ್ನ ತಮ್ಮ ಅಷ್ಟೊಂದು ನೊಂದುಕೊಂಡು ತನ್ನ ಗೆಳತಿಯನ್ನ ಅವಳ ಊರನ್ನ ನೆನಪು ಮಾಡಿಕೊಳ್ಳುವಾಗ ನನಗೆ ನಂಬದೇ ಇರಲು ಸಾಧ್ಯವಾಗಲಿಲ್ಲ.

ಆಗಸಕ್ಕೆ ಸದಾ ಚುಂಬಿಸಿಕೊಂಡೆ ಬದುಕುವ ಗುಡ್ಡಗಳು, ಕಾಲ್ಬೆರಳಿಗೆ ತಾಗುವ ಪ್ರಪಾತದಂಚು, ಸೂರ್ಯನ ಕಿರಣಗಳನ್ನ ಶಾಶ್ವತವಾಗಿ ಬಂಧಿಸಿಡುವಂತಹ ದಟ್ಟಕಾಡು, ತೇಜಸ್ವಿ ಬರೆದ ನಿಗೂಢ ಮನುಷ್ಯರನ್ನ ನೆನಪಿಸುವ ಪರಿಸರ, ರಸ್ತೆ ಬದಿಯಲ್ಲೇ ಮಳೆಗಾಲದಲ್ಲಿ ಬೀಡು ಬಿಡುವ ಜಲಪಾತಗಳು, ಊರಿನ ಜನರ ಗುರುತೇ ಮರೆತಂತಹ ಆ ಹೆಗ್ಗಾಡಿನ ನಡುವೆ ಜನರು ಕಾಫಿ ಏಲಕ್ಕಿ ಬತ್ತ ಬೆಳೆದುಕೊಂಡು, ಮೊಬೈಲಿನ ಹಂಗಿಲ್ಲದೆ , ಹೊರಜಗತ್ತಿನೊಟ್ಟಿಗೆ ಅಷ್ಟಕಷ್ಟೆಸಂಬಂಧವಿಟ್ಟುಕೊಂಡು ಬದುಕುತ್ತಿದ್ದಾರೆ ಅಂತ ಅರಗಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಬೇಕಾಯಿತು.

ಶಿರಾಡಿ ಆಗುಂಬೆ ಹುಲಿಕಲ್‌ ಅಂತಹ ಘಾಟಿಗಳಲ್ಲಿ ಓಡಾಡಿದ್ದರೂ ರಸ್ತೆಯ ಅಕ್ಕ ಪಕ್ಕ ಸಣ್ಣ ಸಣ್ಣ ಊರುಗಳನ್ನ ನೋಡಿದ್ದೇನೆ ಹೊರತು, ಘಾಟಿಯ ಒಳಗೆ ಪಶ್ಚಿಮ ಘಟ್ಟದ ಒಡಲಲ್ಲಿ ಜನರಿರುವ ಊರೊಂದಿದೆ ಅನ್ನುವ ಸಂಗತಿಯೇ ನನ್ನಲ್ಲಿ ಇನ್ನಿಲಿಲ್ಲದ ರೋಮಾಂಚನ ಮೂಡಿಸಿತು. ‘ನಡೀ..ಆ ಊರನ್ನ ನೋಡಿಕೊಂಡು ಬರೋಣ ‘ ಅಂದಿದ್ದಕ್ಕೆ ‘ ಇವತ್ತು ಬೇಡ..ಮಳೆಗಾಲದಲ್ಲಿ ಅಲ್ಲಿಗೆ ಹೋಗೋದು ಕಷ್ಟ..ಇನ್ನೊಮ್ಮೆ ಹೋಗೋಣ..’ ಅಂತ ಹೇಳಿ ಆ ಊರನ್ನ ನೋಡಬೇಕೆಂಬ ನನ್ನಾಸೆಯನ್ನ ನಿಂತಲ್ಲಿಯೇ ಭಗ್ನಗೊಳಿಸಿದ. ವೀಕೆಂಡು ಮುಗಿದು ಮೂಡಿಗೆರೆಗೆ ಬಂದು ಬೆಂಗಳೂರಿನ ಬಸ್ಸುಹತ್ತಿ ಕೂತ ಮೇಲೂ ಆ ಊರಿನ ಬಗ್ಗೆ ಅವನು ಹೇಳಿದ ಮಾತುಗಳು, ಪದಗಳಲ್ಲಿ ಕಟ್ಟಿಕೊಟ್ಟಚಿತ್ರ ನನ್ನ ಮನಸ್ಸಿನಿಂದ ಮರೆಯಾಗುವ ಲಕ್ಷಣಗಳೇ ಕಾಣಿಸಲಿಲ್ಲ.

ಆ ಊರಿನ ಗುಂಗಿನಿಂದ , ಬರೆಯಬೇಕೆಂದಿದ್ದ ಕತೆಯಿಂದ ಎಷ್ಟೆತಲೆ ತಪ್ಪಿಸಿಕೊಂಡು ಓಡಾಡಲು ಪ್ರಯತ್ನಿಸಿದರೂ ಅವೆರೆಡು ಒಟ್ಟೊಟ್ಟಿಗೆ ನನ್ನನ್ನು ಹುಡುಕಿಕೊಂಡು ಬರಲಾರಂಭಿಸಿದವು.

ಕೊನೆಗೊಂದು ನಿರ್ಧಾರಕ್ಕೆ ಬಂದು , ಕಲ್ಪನೆಯಲ್ಲಿ ಹುಟ್ಟಿದ ಕತೆ ನಾನಿನ್ನೂ ನೋಡದ ಆ ಊರಿನಿಂದಲೇ ಶುರುವಾಗಲಿ ಅಂತ ನಿರ್ಧರಿಸಿ ಬರೆಯತೊಡಗಿದೆ.

ಆ ಕಗ್ಗಾಡಿನ ಊರಲ್ಲಿ ಬದುಕುತ್ತಿರುವ ಒಬ್ಬಳು ಸ್ವಾಭಿಮಾನಿ ಹುಡುಗಿ. ತಾಯಿಯಿಲ್ಲ ತಂದೆಗೂ ಅವಳಿಗೂ ಅಷ್ಟಕಷ್ಟೆ, ವರ್ಷಗಳಿಂದ ಮನೆಯಲ್ಲಿ ಮಾತಿನ ಸದ್ದಿಲ್ಲ. ಮನೆಯ ಗದ್ದೆ ತೋಟದಲ್ಲೂ ಕೆಲಸ ಮಾಡಿ ಹತ್ತಿರವಿರುವ ಪೇಟೆಗೂ ಬಂದೂ ಕೆಲಸ ಮಾಡುವ ಆಕೆಯನ್ನ ಒಬ್ಬ ಹುಡುಗ ಸುಮಾರು ದಿನದಿಂದ ಗಮನಿಸುತ್ತಿದ್ದಾನೆ. ಅವಳನ್ನ ಒಮ್ಮೆ ಮಾತಾಡಿಸಿ ತನ್ನೊಳಗೆ ಹುಟ್ಟಿರುವ ಚಳಿಯಿಂದ ಬಿಡುಗಡೆ ದಕ್ಕಿಸಿಕೊಳ್ಳಬೇಕು ಅನ್ನುವುದೇ ಅವನಿಗಿರುವ ಏಕೈಕ ಉದ್ದೇಶ.

ಕುಕ್ಕೆ ದೇಗುಲದಿಂದ 1 ಕೋಟಿ ನೆರವು

ಅವನ ಪಾಡು ಅವಳ ಗಮನಕ್ಕೂ ಬಂದಿದೆ. ಇವನು ಅವಳನ್ನ ಇನ್ನೇನು ಮಾತಾಡಿಸಬೇಕು ಅನ್ನುವ ಕ್ಷಣ ಬಂದಾಗ ಅವಳು ಜೀವನವಿಡಿ ದ್ವೇಷಿಸುತ್ತಾ ಬಂದಿದ್ದ ಅಪ್ಪನ ಸಾವಾಗುತ್ತದೆ. ಸಾವಿನ ಸೂತಕ ಹಿಂಬಾಲಿಸಿ ಅವಳ ಹಳ್ಳಿಗೆ ಹೋಗುವ ಅವನಿಗೆ ಕಾಣಿಸುವುದು ಅವಳ ಇನ್ನೊಂದು ಪ್ರಪಂಚ. ಎಷ್ಟೊದಿನಗಳಿಂದ ಮಾತಾಡಬೇಕು ಅಂತ ಕಾದಿದ್ದ ಅವರಿಬ್ಬರು ಹಾಗೇ ಆ ಸಾವಿನ ಮನೆಯ ಮೌನದಲ್ಲಿ ಇಡೀ ರಾತ್ರಿ ಕಳೆಯುತ್ತಾರೆ. ಕೊನೆಗೆ ಇಡೀ ಊರನ್ನೆ ಎದುರು ಹಾಕಿಕೊಂಡು ಅವಳು ಅಪ್ಪನ ಚಿತೆಗೆ ಬೆಂಕಿಯಿಡುತ್ತಿದ್ದರೆ, ಒಂದು ಮಾತನ್ನು ಆಡದೆ ಆ ಹುಡುಗ ಒಂದೇ ಒಂದು ಹನಿ ಕಣ್ಣೀರಿಟ್ಟುಕೊಂಡು ವಾಪಾಸು ಬರುವುದಕ್ಕೆ ಚಾರ್ಮಾಡಿ ಘಾಟಿಯ ಹಸಿರು ಸಾಕ್ಷಿಯಾಗುತ್ತದೆ ಎಂಬಲ್ಲಿಗೆ ಕತೆ ಮುಗಿಯುತ್ತದೆ.

ಕತೆಯನ್ನು ಓದಿದ ಅನೇಕ ಹತ್ತಿರದ ಗೆಳೆಯರು ಕತೆಯ ಸ್ವಾರಸ್ಯಕ್ಕಿಂತಲೂ ಅದರಲ್ಲಿ ಬರುವ ಪರಿಸರದ ವರ್ಣನೆಯೇ ಚೆನ್ನಾಗಿದೆ, ಆ ಊರಿನ ಚಿತ್ರಣ ಕತೆಗೆ ಬೇರೆಯದೆ ಆಯಾಮ ಕೊಟ್ಟಿದೆ ಅಂತೆಲ್ಲಾ ವಿಮರ್ಶಿಸಿದರು. ಇವರೆಲ್ಲಾ ಇಷ್ಟೊಂದು ಹೊಗಳುತ್ತಿದ್ದಾರೆಂದರೆ ಒಳ್ಳೆಯ ಕತೆ ಇದ್ದರೂ ಇರಬಹುದು ಅನ್ನುವ ಸಣ್ಣ ಅನುಮಾನದೊಂದಿಗೆ ಈ ಕತೆಯನ್ನ ಕತೆಗೆ ಜೀವಕೊಟ್ಟಆಲೇಖಾನ್‌ ಅನ್ನುವ ಊರನ್ನ ಭಾಗಶಃ ಮರೆತೆಬಿಟ್ಟಿದ್ದೆ. ಆದರೆ ಇದೆಲ್ಲಾ ನಡೆದು ಸರಿಸುಮಾರು ಒಂದೂವರೆ ವರ್ಷದ ನಂತರ ಒಂದು ವಿಚಿತ್ರವಾದ ಸನ್ನಿವೇಶದಲ್ಲಿ ನಾನು ಆ ಊರಿಗೆ ಮೊದಲ ಬಾರಿಗೆ ಹೋಗುವಂತಹ ಸಂಧರ್ಭವೊಂದು ಎದುರಾಯಿತು.

ಮೂಡಿಗೆರೆಯ ಸ್ಥಳಿಯ ಯುವಕರೆಲ್ಲಾ ಸೇರಿ ಒಂದು ಕತಾ ಕಾರ್ಯಗಾರವನ್ನ ಏರ್ಪಡಿಸಿ ಅದರ ಆತಿಥ್ಯವನ್ನ ಆಲೇಖಾನಿನ ಗ್ರಾಮಸ್ಥರಿಗೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಆಹ್ವಾನ ಬಂದಾಗ ಯಾವ ಊರನ್ನಿಟ್ಟುಕೊಂಡು ನಾನೊಂದು ಕತೆ ಬರೆದು ಖುಷಿಪಟ್ಟಿದ್ದೇನೋ ಅದೇ ಊರಿಗೆ ಕತೆ ಬರೆಯುವುದು ಹೇಗೆ ಅಂತ ಕಲಿಯುವುದಕ್ಕೆ ಹೋಗಬೇಕಾಗಿದೆಯಲ್ಲ ಅಂತ ಆಶ್ಚರ್ಯವಾಯಿತು. ಕಲ್ಪನೆ ಮತ್ತು ವಾಸ್ತವಗಳ ನಡುವೆ ಬದುಕುವ ಕತೆಗಾರನೊಬ್ಬ ಬಹುಶಃ ಇದಕ್ಕಿಂತ ವಿಚಿತ್ರವೂ ಅಸಂಗತವೂ ಆದ ಸನ್ನಿವೇಶದಲ್ಲಿ ಸಿಲುಕಿಕೊಳ್ಳುವುದು ಸಾಧ್ಯವಿಲ್ಲವೇನೋ.

ಮೊದಲ ಬಾರಿಗೆ ಆ ಊರಿನ ದಾರಿಯಲ್ಲಿ ಹೆಜ್ಜೆಯಿಡುತ್ತಿದ್ದಾಗ ಹೇಳಿಕೊಂಡು ಹಗುರಾಗಲಾರದಂತಹ ಒಂದು ಸಂಕಟವೋ ಸಂಭ್ರಮವೋ ನನ್ನಾವರಿಸಿಕೊಂಡಿತ್ತು. ನನ್ನ ಕಲ್ಪನೆಯಲ್ಲಿ ಅರಳಿದ್ದ ಊರಿಗಿಂತ ನಿಜವಾಗಿಯೂ ಈ ಊರು ಸುಂದರವಾಗಿತ್ತು. ಘಾಟಿಯ ನಡುವೆ ಕಾಫಿ ತೋಟಗಳು, ಅಲ್ಲಲ್ಲಿ ಭತ್ತದ ಗದ್ದೆಗಳು, ಆ ಊರಲ್ಲಿ ಮಾತ್ರ ಏಕಾತನತೆಯನ್ನ ಮರೆತಂತೆ ಹರಿಯುತ್ತಿದ್ದ ಸಣ್ಣದೊಂದು ಹಳ್ಳ, ಮುಚ್ಚಿದ ಸ್ಕೂಲು, ಕಾಂಕ್ರೀಟಿನ ರಸ್ತೆ, ಬೆಳಿಗ್ಗೆ ಎದ್ದು ಮೈಮುರಿಯುತ್ತಾ ನಿಂತರೆ ಕಾಣುವ ಸಹ್ಯಾದ್ರಿ ಶ್ರೇಣಿಗಳು , ಮಾಡಿನ ಮರೆಯಲ್ಲಿ ನಿಂತು ಕತೆ ಬರೆಯಲು ಬಂದಿದ್ದ ನಮ್ಮನ್ನು ನೋಡುತ್ತಿದ್ದ ಆ ಊರಿನ ಜನ..ಇದೆಲ್ಲದರ ನಡುವೆ ನನ್ನ ಕಣ್ಣುಗಳು ಮಾತ್ರ ನನ್ನ ಕತೆಯ ನಾಯಕಿಯನ್ನೆ ಹುಡುಕುತ್ತಿತ್ತು. ಊರು ನಿಜವಾಗಿ ಇದೆ ಅಂದ ಮೇಲೆ ಅವಳ್ಯಾಕೆ ನಿಜವಾಗಿಯೂ ಇರಬಾರದು ಅನ್ನುವ ತರ್ಕವಿಲ್ಲದ ಪ್ರಶ್ನೆಗಳನ್ನ ಕಾರ್ಯಕ್ರಮ ಮುಗಿಯುವವರೆಗೂ ಕೇಳಿಕೊಳ್ಳುತ್ತಲೆ ಇದ್ದೆ.

ಪ್ರವಾಹ ಸಂತ್ರಸ್ತರಿಗೆ ಬೆಂಗಳೂರು ಕಮಿಷನರ್‌ ತಿಂಗಳ ವೇತನ

ನಗರಗಳಲ್ಲಿ ನಾನು ಕತೆ ಬರೆಯುತ್ತೇನೆ ಅಂತೆಲ್ಲಾ ಹೇಳಿದರೆ ಮಾಡೋಕೆ ಬೇರೆ ಏನು ಕೆಲಸ ಇಲ್ಲವಾ ಅಂತಲೇ ಮೊದಲು ಕೇಳೋದು, ಕತೆ ಕಾದಂಬರಿ ಎಲ್ಲ ದುಡ್ಡು ಹುಟ್ಟಿಸದ ಸಮಯ ವ್ಯರ್ಥದ ಸಂಗತಿ ಅಂತಲೇ ಈ ನಗರ ನಂಬಿದೆ. ಆದರೆ ನಮ್ಮನ್ನು ನೋಡಿದ ಆ ಊರಿನ ಜನರ ಕಣ್ಣಲ್ಲಿ ಅಂತಹ ಯಾವುದೇ ವ್ಯಂಗ್ಯವಿರಲಿಲ್ಲ. ಅಲ್ಲಿದ್ದ ಒಂದಿಡಿ ದಿನ ಅವರು ತೋರಿದ ಆತಿಥ್ಯ , ಮಾಡಿ ಬಡಿಸಿದ ಕೆಸುವಿನ ದಂಟಿನ ಪಲ್ಯದ ರುಚಿಯ ನೆನಪು ಅಲ್ಲಿಂದ ಬಂದ ಮೇಲೂ ಮಾಸದೇ ಹಾಗೇ ಉಳಿದಿತ್ತು.

ಇಷ್ಟೊಂದು ನೆನಪು ಬೆರಗು ಸಂತೋಷವನ್ನು ಕೊಟ್ಟಆ ಊರಿನ ಚಿತ್ರ ಆಕಡೆ ಹೋದಾಗಲೆಲ್ಲ ನನ್ನ ಮನಸ್ಸಿನ ಪರದೆಯ ಮೇಲೆ ಒಂದರ್ಧ ಕ್ಷಣವಾದರೂ ಬಂದು ಹೋಗುತ್ತಿತ್ತು.

ಆದರೆ ಮೊನ್ನೆ ಪಶ್ಚಿಮ ಘಟ್ಟಗಳು ಉದ್ದಕ್ಕೂ ಆದ ಮೇಘ ಸ್ಪೋಟಕ್ಕೆ ಸುರಿದ ದನಗೋಳು ಮಳೆಯಲ್ಲಿ ಒಂದೊಂದೆ ಹಳ್ಳಿಗಳು ಕಣ್ಮರೆಯಾದ ಸುದ್ದಿಗಳು ಅಲ್ಲಿಂದ ಬರಲಾರಂಭಿಸಿದವು. ಹಾಗೇ ಮುಳುಗಡೆಯಾಗಿ ಹೋದ ಊರುಗಳ ಪಟ್ಟಿಯಲ್ಲಿ ಆಲೇಖಾನಿನ ಹೆಸರು ನೋಡಿ ನನಗಾದ ಆಘಾತವನ್ನ ವರ್ಣಿಸುವುದು ಹೇಗೋ ಗೊತ್ತಾಗುತ್ತಿಲ್ಲ. ನಮಗೆ ಆತಿಥ್ಯ ಮಾಡಿದ್ದ ಜನ ಎಷ್ಟೊವರುಷಗಳಿಂದ ಬಾಳಿ ಬದುಕಿದ್ದ ಊರು ಮನೆಯನ್ನ ತೊರೆದು ನಿರಾಶ್ರಿತ ಕೇಂದ್ರಗಳಲ್ಲಿ ಕುಳಿತಿದ್ದರು, ಹೆಜ್ಜೆ ಹೆಜ್ಜೆಗೂ ಬೆರಗು ಮೂಡಿಸುತ್ತಿದ್ದ ಆ ಊರಿಗೆ ದಾರಿ ಗುಡ್ಡ ಕುಸಿದು ಛಿದ್ರವಾಗಿ ಬಿದ್ದಿತ್ತು, ಸ್ವರ್ಗಸದ್ರಶವಾಗಿದ್ದ ಆ ಇಡೀ ಊರಿನ ತುಂಬಾ ಈಗ ಬರೀ ಸ್ಮಶಾಣ ಮೌನ. ಆ ಎಲ್ಲಾ ಚಿತ್ರಗಳನ್ನ ನೋಡಿದ ಮೇಲೆ, ನನ್ನ ಕಲ್ಪನೆಯಲ್ಲಿ ಮೂಡಿದ್ದ ಆ ಊರು ನಾನು ನಿಜವಾಗಿಯೂ ಹೋದಾಗ ಕಂಡ ಊರು ಮತ್ತೀಗ ಪ್ರವಾಹದ ಹೊಡೆತಕ್ಕೆ ನಲುಗಿ ಜನರ ಬರುವಿಗಾಗಿ ಕಾಯುತ್ತಿರುವ ಊರು..ಇದರಲ್ಲಿ ಯಾವ ಊರಿನ ಚಿತ್ರವನ್ನ ನೆನಪಿಟ್ಟುಕೊಳ್ಳುವುದೋ ನನಗೀಗ ಗೊತ್ತಾಗುತ್ತಿಲ್ಲ. ಪೃಕ್ರತಿಯೊಂದಿಗೆ ಹುಟ್ಟಿಬದುಕನ್ನ ಕಟ್ಟಿಕೊಂಡು ಕೊನೆಗೆ ಅಲ್ಲೇ ಮಣ್ಣಾಗುವವರ ಮೇಲೆ ಪ್ರಕೃತಿಗೆ ಕೊಂಚವಾದರೂ ಕರುಣೆಯಿರಬೇಕು.

ಎಲ್ಲೆಲ್ಲಿ ಹೊಂಡವಿದೆ ಅಂತ ಗೊತ್ತಿರುವ ರಸ್ತೆಗಳು, ಮಕ್ಕಳಿಲ್ಲದ ಪಾರ್ಕುಗಳು, ತಾಳ್ಮೆಯಿಲ್ಲದ ಸರತಿ ಸಾಲುಗಳು, ಭ್ರಮೆ ಹುಟ್ಟಿಸುವ ಹುಸಿ ಶ್ರೀಮಂತಿಕೆ, ಸಂಪಾದನೆಯನ್ನೂ ಮಾಡಿಸಿ ಖರ್ಚನ್ನೂ ಮಾಡಿಸುವ ನಗರಗಳಲ್ಲಿ ಬದುಕುವ ನಮಗೆ ಅಲೇಖಾನಿನಂತಹ ದೂರದ ಹಳ್ಳಿಗಳು ರಮ್ಯವಾಗಿ ಕಾಣುತ್ತವೆ. ವೀಕೆಂಡು ಬಂದರೆ ಇಲ್ಲಿಂದ ಕಾಲ್ಕಿತ್ತು ಅಲ್ಲೆಲ್ಲೊ ಕೂತು ದೊಡ್ಡ ಜನಗಳ ಹಾಗೆ ನಾವಿಲ್ಲಿ ಆ ಊರಿನ ಬಗ್ಗೆ ಕತೆ ಬರೆಯುವಾಗ ಅವರು ಪ್ರಪಾತದಂಚಲ್ಲಿ ಮತ್ತೆ ಬದುಕು ಕಟ್ಟಿಕೊಳ್ಳುವುದಕ್ಕೆ ಹೋರಾಡುತ್ತಿರುತ್ತಾರೆ. ಹೆಂಡತಿಯ ಮೇಲಿನ ಉದಾಸೀನದಂತೆ ಪ್ರೇಯಸಿಯ ಮೇಲಿನ ಅಸಮಾಧಾನದಂತೆ ನಮಗೂ ಈ ನಗರಕ್ಕೂ ನೂರೆಂಟು ತಕರಾರುಗಳಿರುತ್ತವೆ. ಆದರೆ ಆ ಹಳ್ಳಿಯ ಜನ ವಯಸ್ಸಾದ ತಾಯಿಯನ್ನ ನೋಡಿಕೊಳ್ಳುವ ಹಾಗೆ ವಯಸ್ಸಿಗೆ ಬಂದ ಮಗಳನ್ನ ಸಾಕುವ ಹಾಗೆ ಊರನ್ನ ಸಾಕಿಕೊಂಡು ಬಂದಿರುತ್ತಾರೆ. ಪ್ರಕೃತಿಯ ಮುನಿಸಿಗೆ ಈಗವರ ಊರೇ ಸರ್ವನಾಶವಾಗಿ, ತಮ್ಮ ತಮ್ಮ ಮನೆ ತೋಟ ಗದ್ದೆಗಳು ಎಲ್ಲಿತ್ತು ಅಂತ ಹುಡುಕಬೇಕಾಗ ಪರಿಸ್ಥಿತಿ ಬಂದಿದೆ.

ಕತೆಯಲ್ಲಿ ಬಂದ ಊರು ಹೀಗೆ ಕತೆಯಾಗಿ ಹೋಗುತ್ತದೆ ಅಂತ ಗೊತ್ತಿದ್ದರೆ ಬಹುಶಃ ಆ ಕತೆಯನ್ನೆ ನಾನು ಬರೆಯುತ್ತಿರಲಿಲ್ಲವೇನೋ.

ಮತ್ತೆ ಆ ಊರಿಗೆ ಹೋಗುವ ದಾರಿ ಸರಿಯಾಗಲಿ, ಇನ್ನೊಬ್ಬ ಯಾರೋ ಕತೆಗಾರನಿಗೆ ಆ ಊರು ಸ್ಪೂರ್ತಿಯಾಗಲಿ, ನನ್ನ ಕತೆಯ ಹುಡುಗಿ ನಿಜಕ್ಕೂ ಅಲ್ಲಿದ್ದರೆ ಅವಳ ಬದುಕು ಬೆಚ್ಚಗಿರಲಿ, ಅಲೇಖಾನ್‌ ಅನ್ನುವ ಚಾರ್ಮಾಡಿ ಘಾಟಿಯ ಒಡಲೊಳಗಿನ ಊರು ಮತ್ತದೇ ನಗುವಿನೊಂದಿಗೆ ಚೇತರಿಸಿಕೊಳ್ಳಲಿ ಎನ್ನುವುದೇ ಈಗ ಉಳಿದಿರುವ ಹಾರೈಕೆ.

ಸಚಿನ್‌ ತೀರ್ಥಹಳ್ಳಿ

click me!