ಗೋಮಾಂಸ ಸೇವನೆಯಿಂದ ಹೆಚ್ಚುತ್ತಿದೆ ಕಾಳ್ಗಿಚ್ಚು; ಕಾಡಿಗೆ ಇಡಬೇಡಿ ಕಿಚ್ಚು!

By Kannadaprabha News  |  First Published Aug 27, 2019, 3:58 PM IST

ಜಗತ್ತಿನ ಅತಿದೊಡ್ಡ ಕಾಡು ಧಗಧಗ |  ಪ್ರತಿ ಸೆಕೆಂಡ್‌ಗೆ 5 ಫುಟ್‌ಬಾಲ್‌ ಅಂಗಳದಷ್ಟುಅರಣ್ಯ ಬೆಂಕಿಗೆ ಆಹುತಿ! ಇಲ್ಲಿ ಜಗತ್ತಿನ 20% ಆಮ್ಲಜನಕ ಉತ್ಪಾದನೆ


ವಿಶ್ವದ ಅತಿದೊಡ್ಡ ಮಳೆಕಾಡು ಅಮೆಜಾನ್‌ನಲ್ಲಿ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ಎಕರೆ ಅರಣ್ಯ ಸುಟ್ಟು ಬೂದಿಯಾಗುತ್ತಿದೆ. ಪ್ರತಿ ವರ್ಷದಂತೆ ಕಾಳ್ಗಿಚ್ಚು ಸಂಭವಿಸಿದ್ದರೂ ಈ ಬಾರಿಯ ಭೀಕರತೆ ಇಡೀ ಮಾನವ ಸಂಕುಲವನ್ನು ಆತಂಕಕ್ಕೆ ದೂಡಿದೆ. ವಿಶ್ವದ ಶ್ವಾಸಕೋಶ ಎಂದು ಕರೆಯಲ್ಪಡುವ ಅಮೆಜಾನ್‌ ಕಾಡುಗಳ ವಿಶೇಷತೆ ಏನು, ಕಾಳ್ಗಿಚ್ಚಿನ ತೀವ್ರತೆ ಎಷ್ಟಿದೆ, ಅದಕ್ಕೆ ಕಾರಣ ಏನು ಎಂಬ ವಿವರ ಇಲ್ಲಿದೆ.

ಅಮೆಜಾನ್‌ ವಿಶೇಷತೆ ಏನು?

Tap to resize

Latest Videos

undefined

ಜಗತ್ತಿನ ಎರಡನೇ ಅತಿ ಉದ್ದದ ನದಿ ಅಮೆಜಾನ್‌ ದಕ್ಷಿಣ ಅಮೆರಿಕದಲ್ಲಿ ಹುಟ್ಟಿ9 ರಾಷ್ಟ್ರಗಳ ಮೂಲಕ 6840 ಕಿ.ಮೀ. ಸಾಗಿ ಅಟ್ಲಾಂಟಿಕ್‌ ಮಹಾಸಾಗರ ಸೇರುತ್ತದೆ. ಈ ನದಿಯ ಅಕ್ಕಪಕ್ಕದ 55 ಲಕ್ಷ ಚದರ ಕಿ.ಮೀ. ಪ್ರದೇಶದಲ್ಲಿ ದಟ್ಟಕಾಡು ಆವರಿಸಿದ್ದು , ಇದು ಜಗತ್ತಿನ ಅತಿ ದೊಡ್ಡ ಕಾಡು ಎಂದು ಹೆಸರಾಗಿದೆ. ಪಕ್ಷಿ-ಪ್ರಾಣಿಗಳ, ಸಸ್ಯಸಂಕುಲಗಳ ಜೀವವೈವಿಧ್ಯತೆಯೇ ಅಲ್ಲಿ ಮನೆಮಾಡಿದೆ. ಜಗತ್ತಿನ ಒಟ್ಟು ಜೀವಿಗಳ ಪೈಕಿ 10% ಜೀವಿಗಳು ಅಲ್ಲಿ ವಾಸವಾಗಿವೆ. ಸಾವಿರಾರು ನದಿಗಳು ಈ ಕಾಡಿನ ಮೂಲಕ ಹರಿದು ಹೋಗುತ್ತವೆ.

ವಿಶ್ವದ ‘ಶ್ವಾಸಕೋಶ’ದಲ್ಲಿ ಕಾಡ್ಗಿಚ್ಚು: ಧಗ ಧಗ ಉರಿಯುತ್ತಿದೆ ಅಮೆಜಾನ್‌ ಕಾಡು!

9 ರಾಷ್ಟ್ರಗಳಲ್ಲಿ ಹಬ್ಬಿದ ಮಳೆಕಾಡು

ಅಮೆಜಾನ್‌ ಮಳೆಕಾಡು ದಕ್ಷಿಣ ಅಮೆರಿಕದ 9 ರಾಷ್ಟ್ರಗಳಲ್ಲಿ ಹಬ್ಬಿದೆ. ಬ್ರೆಜಿಲ್‌(60%), ಪೆರು (10%), ಕೊಲಂಬಿಯಾ(10%), ವೆನೆಜುವೆಲಾ, ಈಕ್ವೆಡಾರ್‌, ಬೊಲಿವಿಯಾ, ಗಯಾನಾ, ಸುರಿನಾಮ್‌ ಮತ್ತು ಫ್ರೆಂಚ್‌ ಗಯಾನಾಗಳಲ್ಲಿ ಈ ಕಾಡು ಆವರಿಸಿದೆ.

ಪ್ರತಿ ಸೆಕೆಂಡ್‌ಗೆ 1.5 ಎಕರೆ ಕಾಡು ನಾಶ!

ಕಾಳ್ಗಿಚ್ಚು ಅಮೆಜಾನ್‌ ಕಾಡುಗಳಲ್ಲಿ ಸಾಮಾನ್ಯ. ಜುಲೈನಿಂದ ಅಕ್ಟೋಬರ್‌ವರೆಗೆ ಕಾಳ್ಗಿಚ್ಚು ಪ್ರಕರಣಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಗುಡುಗು ಮಿಂಚು, ರೈತರು ಬೆಳೆ ತೆಗೆದು ಕೃಷಿ ತ್ಯಾಜ್ಯಗಳಿಗೆ ಬೆಂಕಿ ಇಟ್ಟಾಗ, ಒತ್ತುವರಿ ಹಾಗೂ ಟಿಂಬರ್‌ ಮಾಫಿಯಾ ಮತ್ತಿತರೆ ಕಾರಣಗಳಿಂದ ಸಾಮಾನ್ಯವಾಗಿ ಅಮೆಜಾನ್‌ ಕಾಡುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ.

ಇತ್ತೀಚೆಗೆ ಉತ್ತರ ಬ್ರೆಜಿಲ್‌ ಭಾಗ ಅತಿ ಹೆಚ್ಚು ಕಾಳ್ಗಿಚ್ಚಿಗೆ ತುತ್ತಾಗುತ್ತಿದೆ. ಅಮೆಜಾನ್‌ ಕಾಡುಗಳ ನಾಶದ ಪರ್ವ ಆರಂಭವಾಗಿದ್ದು, 1970ರ ದಶಕದಲ್ಲಿ. 1990 ಮತ್ತು 2000ನೇ ಇಸವಿಗಳಿಂದ ಇದು ತೀವ್ರವಾಗಿ ನಡೆಯುತ್ತಿದೆ. 2004ರಲ್ಲಿ ಬ್ರೆಜಿಲ್‌ವೊಂದರಲ್ಲಿಯೇ 28,000 ಚದರ ಕಿ.ಮೀ. ಕಾಡು ನಾಶವಾಗಿದೆ. ಕಳೆದ ವರ್ಷವೂ 2,900 ಚದರ ಕಿ.ಮೀ. ಅರಣ್ಯ ನಾಶವಾಗಿದೆ. ಈ ವರ್ಷ ಅಮೆಜಾನ್‌ ಕಾಳ್ಗಿಚ್ಚು ಇಡೀ ಮಾನವ ಸಂಕುಲವನ್ನೇ ಆತಂಕಕ್ಕೆ ದೂಡಿದೆ. ಏಕೆಂದರೆ ಅನಿಯಂತ್ರಿತವಾಗಿ ಬೆಂಕಿ ದಿನೇದಿನೇ ಹೆಚ್ಚೆಚ್ಚು ಪ್ರದೇಶಕ್ಕೆ ವ್ಯಾಪಿಸುತ್ತಿದೆ.

ವ್ಯಾಪಕವಾಗಿ ಬೆಂಕಿ ಆವರಿಸಿರುವುದರಿಂದ ಎಷ್ಟುಪ್ರಮಾಣದಲ್ಲಿ ಕಾಡು ನಾಶವಾಗಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವರ್ಷ ಬೆಜ್ರಿಲ್‌ವೊಂದರಲ್ಲಿಯೇ 85% ಅಗ್ನಿ ಅವಘಡಗಳು ಹೆಚ್ಚಾಗಿವೆ. ಜನವರಿ 1ರಿಂದ ಆಗಸ್ಟ್‌ 1ರವರೆಗೆ ಅಂದಾಜು 9,250 ಚದರ ಕಿ.ಮೀ. ಕಾಡು ನಾಶವಾಗಿದೆ. ಮತ್ತೊಂದು ಅಂದಾಜಿನ ಪ್ರಕಾರ ಪ್ರತಿ ಸೆಕೆಂಡ್‌ಗೆ 1.5 ಎಕರೆ ಕಾಡು ನಾಶವಾಗುತ್ತಿದೆ. ಇನ್ನೊಂದು ಅಂದಾಜಿನ ಪ್ರಕಾರ ಪ್ರತಿ ಸೆಕೆಂಡಿಗೆ 5 ಫುಟ್ಬಾಲ್‌ ಅಂಗಳದಷ್ಟುಕಾಡು ಬೆಂಕಿಗೆ ಆಹುತಿಯಾಗುತ್ತಿದೆ.

ಅಮೆಜಾನ್‌ ಕಾಡಿಗೆ ಈ ವರ್ಷ ಎಷ್ಟುಸಲ ಬೆಂಕಿ?

ಬ್ರೆಜಿಲ್‌- 78,300 ಸಲ

ವೆನಿಜುವೆಲಾ- 26000 ಸಲ

ಬೊಲಿವಿಯಾ-17,200 ಸಲ

ಕೊಲಂಬಿಯಾ-14,200 ಸಲ

ಪೆರು-5680 ಸಲ

ಗಯಾನಾ-890 ಸಲ

ಈಕ್ವೆಡಾರ್‌-290 ಸಲ

ಸುರಿನಾಮ್‌-160 ಸಲ

ಫ್ರೆಂಚ್‌ ಗಯಾನಾ-11 ಸಲ

ಅಮೆಜಾನ್‌ಗೆ ನೈಸರ್ಗಿಕವಾಗಿ ಬೆಂಕಿ ಬೀಳೋದಿಲ್ಲ!

ಅಮೆಜಾನ್‌ ಕಾಡುಗಳು ಅಮೆರಿಕದ ಕ್ಯಾಲಿಫೋರ್ನಿಯಾ ಕಾಡುಗಳಂತೆ ಎಲೆ ಉದುರಿಸುವ ಕಾಡುಗಳಲ್ಲ. ಇವು ಮಳೆ ಕಾಡುಗಳಾದ್ದರಿಂದ ಯಾವಾಗಲೂ ತೇವಾಂಶವಿರುತ್ತದೆ. ಆದ್ದರಿಂದ ನೈಸರ್ಗಿಕವಾಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಕಡಿಮೆ. ಮಾನವನ ಹಸ್ತಕ್ಷೇಪವೇ ಅಲ್ಲಿ ಅಗ್ನಿ ಅವಘಡಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಟಿಂಬರ್‌ ಮಾಫಿಯಾ, ಕೃಷಿ ಭೂಮಿ ಅಂಚಿನಲ್ಲಿರುವ ಪ್ರದೇಶದ ಒತ್ತುವರಿ ಇಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇದೇ ಮಾಫಿಯಾವೇ ಇಂದು ಅಮೆಜಾನ್‌ ಮಳೆಕಾಡು ಅಗ್ನಿಯಲ್ಲಿ ಬೆಂದು ಹೋಗುತ್ತಿರುವುದಕ್ಕೆ ಕಾರಣ. ಇದಕ್ಕೆ ಬ್ರೆಜಿಲ್‌ ಸರ್ಕಾರವೂ ಬೆಂಬಲವಾಗಿ ನಿಂತಿದೆ! ಪ್ರಸ್ತುತ ಅಧ್ಯಕ್ಷರಾಗಿರುವ ಜೈರ್‌ ಬೊಲ್ಸೊನಾರೋ ಅವರು ಚುನಾವಣೆ ಸಂದರ್ಭದಲ್ಲಿ ಸಂರಕ್ಷಿತ ಅರಣ್ಯ ಪ್ರದೇಶಗಳ ಮೇಲಿನ ನಿರ್ಬಂಧವನ್ನು ಸಡಲಿಸುವ ಆಶ್ವಾಸನೆ ನೀಡಿದ್ದರು. ಹಾಗಾಗಿ ಅರಣ್ಯ ನಾಶದ ಹಿಂದೆ ದೊಡ್ಡ ಲಾಬಿ ನಡೆಯುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ಅಮೆಜಾನ್‌ನಲ್ಲಿ ಭಯಂಕರ ಕಾಡ್ಗಿಚ್ಚು: ಉಪಗ್ರಹದ ಕಣ್ಣಿಗೂ ಹೊಗೆ ಕಾಣಿಸ್ತು!

ದನದ ಮಾಂಸ ಸೇವನೆ ಹೆಚ್ಚಳದಿಂದ ಕಾಳ್ಗಿಚ್ಚು ಹೆಚ್ಚಳ?

ಅಮೆಜಾನ್‌ ಕಾಡು ಒಂಭತ್ತು ರಾಷ್ಟ್ರಗಳಲ್ಲಿ ಹರಡಿಕೊಂಡಿದ್ದರೂ ಈಗಿನ ಕಾಳ್ಗಿಚ್ಚಿನಿಂದ ಬ್ರೆಜಿಲ್‌ನಲ್ಲಿರುವ ಕಾಡೇ ಹೆಚ್ಚು ನಾಶವಾಗುತ್ತಿದೆ. ಇದಕ್ಕೆ ಅಲ್ಲಿನ ಸ್ಥಳೀಯರು ಮರ ಕಡಿಯುತ್ತಿರುವುದು ಮತ್ತು ಯಥೇಚ್ಛವಾಗಿ ಸಾಕಿರುವ ಹಸುಗಳಿಗೆ ಮೇವು ಬಳಸುತ್ತಿರುವುದು ಮುಖ್ಯ ಕಾರಣ ಎನ್ನಲಾಗುತ್ತಿದೆ. ಮಾಂಸಕ್ಕಾಗಿಯೇ ಗೋವುಗಳನ್ನು ಸಾಕುವುದು ಬ್ರೆಜಿಲ್‌ ರೈತರ ಪ್ರಮುಖ ಕಸುಬು. ಜಗತ್ತಿನ ಗೋಮಾಂಸ ರಫ್ತಿನ ಪೈಕಿ ಬ್ರೆಜಿಲ್‌ವೊಂದೇ 20% ಗೋಮಾಂಸವನ್ನು ರಫ್ತು ಮಾಡುತ್ತದೆ.

ಕಳೆದ ವರ್ಷವೊಂದರಲ್ಲಿಯೇ ಬ್ರೆಜಿಲ್‌ 16.4 ಲಕ್ಷ ಟನ್‌ ಗೋಮಾಂಸವನ್ನು ರಫ್ತು ಮಾಡಿತ್ತು. ಬ್ರೆಜಿಲ್‌ನ ಗೋಮಾಂಸ ಕಂಪನಿಗಳಿಗೆ ಚೀನಾ ಮತ್ತು ಹಾಂಕಾಂಗ್‌ನಲ್ಲಿ ಭಾರೀ ಬೇಡಿಕೆ ಇದೆ. ಬ್ರೆಜಿಲ್‌ನ ಗೋಮಾಂಸ ಉತ್ಪಾದನೆ ದಂಧೆಯೇ ಅಮೆಜಾನ್‌ ಕಾಡುಗಳಿಗೆ ಕುತ್ತು ತಂದಿದೆ ಎಂಬ ಅಂಶವೊಂದು ಈಗ ಚರ್ಚೆಯಾಗುತ್ತಿದೆ. ಅಂದರೆ ವಾತಾವರಣದ ಉಷ್ಣಾಂಶ ಹೆಚ್ಚಾಗಲು ಕಾರಣವಾಗುವ ಹಸಿರುಮನೆ ಅನಿಲದ ಬಿಡುಗಡೆ ಬ್ರೆಜಿಲ್‌ನಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಗೋಮಾಂಸ ಉತ್ಪಾದನೆ. ಹಸುಗಳು ಅತಿಹೆಚ್ಚು ಮೀಥೇನ್‌ ಬಿಡುಗಡೆ ಮಾಡುತ್ತವೆ.

ಹಸಿರುಮನೆ ಉಷ್ಣಾಂಶ ಹೆಚ್ಚಳಕ್ಕೆ ಸಾಕುಪ್ರಾಣಿಗಳಿಂದ ಬಿಡುಗಡೆಯಾಗುವ ಮೀಥೇನ್‌ ಶೇ.14.5ರಷ್ಟುಕಾರಣ. ಸಾಕುಪ್ರಾಣಿಗಳಲ್ಲಿ ಉತ್ಪತ್ತಿಯಾಗುವ ಒಟ್ಟು ಮಿಥೇನ್‌ ಅನಿಲದಲ್ಲಿ 40% ಕೇವಲ ಹಸುಗಳಿಂದಲೇ ಉತ್ಪತ್ತಿಯಾಗುತ್ತದೆ. ಬ್ರೆಜಿಲ್‌ ಗೋಮಾಂಸ ರಫ್ತಿಗಾಗಿ ಹೆಚ್ಚೆಚ್ಚು ಹಸುಗಳನ್ನು ಸಾಕುವುದರಿಂದ ಸಹಜವಾಗಿಯೇ ಅಲ್ಲಿ ಮಿಥೇನ್‌ ಪ್ರಮಾಣ ಅಧಿಕವಾಗಿ ಅಮೆಜಾನ್‌ ಕಾಡುಗಳಿಗೆ ಕಂಟಕವಾಗುತ್ತಿದೆ.

ಇದು ಜಗತ್ತಿಗೇ ಆತಂಕ ಹುಟ್ಟಿಸಿರುವ ಬೆಂಕಿ

ಅಮೆಜಾನ್‌ ಕಾಡುಗಳಿಂದ ಕೇವಲ ಬ್ರೆಜಿಲ್‌ ಮತ್ತಿತರ ದಕ್ಷಿಣ ಅಮೆರಿಕ ದೇಶಗಳಿಗೆ ಮಾತ್ರ ಉಪಯೋಗವಿಲ್ಲ. ಅಗಾಧ ಪ್ರಮಾಣದ ಜೀವ ವೈವಿಧ್ಯತೆಯನ್ನು ಒಳಗೊಂಡಿರುವ ಅಮೆಜಾನ್‌ ಕಾಡು ಲಕ್ಷಾಂತರ ಟನ್‌ ಕಾರ್ಬನ್‌ ಹೀರಿಕೊಂಡು ಜಾಗತಿಕ ತಾಪಮಾನವನ್ನು ನಿಯಂತ್ರಿಸುತ್ತದೆ. ಆದರೆ ಅರಣ್ಯ ನಾಶ ಮತ್ತು ಕಾಳ್ಗಿಚ್ಚಿನಿಂದ ಈ ಕಾಡು ಶೇಖರಿಸಿಕೊಂಡಿರುವ ಕಾರ್ಬನ್‌ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಮತ್ತು ಕಾರ್ಬನ್‌ ಹೀರಿಕೊಳ್ಳುವ ಅಮೆಜಾನ್‌ನ ಸಾಮರ್ಥ್ಯ ಕಡಿಮೆಯಾಗುತ್ತದೆ.

ಆಗ ಜಾಗತಿಕ ತಾಪಮಾನ ಅಧಿಕವಾಗುತ್ತದೆ. ಕಾರ್ಬನ್‌ ಹೊರಸೂಸುವಿಕೆ ಮತ್ತು ಅರಣ್ಯ ನಾಶ ಹೆಚ್ಚಾದಲ್ಲಿ ಮಳೆ ಅಕಾಲಿಕವಾಗಿ ಸುರಿಯಬಹುದು ಅಥವಾ ಬರ ಬರಬಹುದು. ಕಾಡು ನಾಶವಾದರೆ ಅದು ಜೀವ ವೈವಿಧ್ಯತೆ, ಕೃಷಿ, ಮಾನವನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಅಮೆಜಾನ್‌ ಕಾಡುಗಳ ನಾಶದ ಬಗ್ಗೆ ಇಡೀ ಜಗತ್ತು ಗಂಭೀರವಾಗಿ ಚಿಂತಿಸಬೇಕಾದ ಮತ್ತು ಅದರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

ಭೂಮಿಯ ಶ್ವಾಸಕೋಶ ಎನ್ನುವುದೇಕೆ?

ಅಮೆಜಾನ್‌ ಮಳೆ ಕಾಡುಗಳಲ್ಲಿನ ಮರಗಳು ಪ್ರತಿ ವರ್ಷ 200 ಕೋಟಿ ಟನ್‌ ಕಾರ್ಬನ್‌ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತವೆ. ಜಗತ್ತಿಗೆ ಅಗತ್ಯವಿರುವ 20% ಆಮ್ಲಜನಕವು ಇಲ್ಲಿಂದಲೇ ಉತ್ಪತ್ತಿಯಾಗುತ್ತಿದೆ. ಕಾರ್ಬನ್‌ ಡೈ ಆಕ್ಸೈಡನ್ನು ಹೀರಿ ಜಾಗತಿಕ ತಾಪಮಾನ ನಿಯಂತ್ರಿಸುವಲ್ಲಿ ಅಮೆಜಾನ್‌ ಕಾಡು ಗಮನಾರ್ಹ ವಹಿಸುತ್ತಿವೆ. ಹಾಗಾಗಿ ಈ ಕಾಡುಗಳನ್ನು ಜಗತ್ತಿನ ಶ್ವಾಸಕೋಶ ಎಂದು ಕರೆಯಲಾಗುತ್ತದೆ. ಅಲ್ಲದೆ ದಕ್ಷಿಣ ಅಮೆರಿಕ ಖಂಡದಲ್ಲಿ ಮಳೆ ಸುರಿಯುವುದಕ್ಕೆ ಈ ಕಾಡೇ ಕಾರಣ. ಒಂದು ವೇಳೆ ಇಲ್ಲಿ ಕಾಡು ನಾಶವಾಗಿ ಮಳೆ ಕಡಿಮೆಯಾದರೆ ಬ್ರೆಜಿಲ್‌, ಉರುಗ್ವೆ, ಪೆರುಗ್ವೆ ಮತ್ತು ಅರ್ಜೆಂಟೀನಾದಲ್ಲಿ ಚಳಿಗಾಲದಲ್ಲೇ ತೀವ್ರ ಬರ ಉಂಟಾಗಿ ಕೃಷಿಗೆ ತೊಡಕಾಗುತ್ತದೆ.

ಬೆಂಕಿ ನಂದಿಸಲು ಪ್ರಯತ್ನ ನಡೆಯುತ್ತಿದೆಯೇ?

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಹಲವಾರು ದೇಶಗಳು ಅಮೆಜಾನ್‌ ಕಾಡಿಗೆ ಬೆಂಕಿ ಬಿದ್ದಿರುವುದಕ್ಕೆ ಕಳವಳ ವ್ಯಕ್ತಪಡಿಸಿವೆ. ಬ್ರೆಜಿಲ್‌ನ 44000 ಸೈನಿಕರು ಮಿಲಿಟರಿ ವಿಮಾನ ಬಳಸಿ ನಿರಂತರವಾಗಿ ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ. ಜಿ-7 ಶೃಂಗದಲ್ಲಿ ಅಮೆಜಾನ್‌ ಕಾಡು ನಾಶವನ್ನು ಪ್ರಮುಖ ವಿಷಯವಾಗಿ ಪರಿಗಣಿಸಲು ತೀರ್ಮಾನಿಸಲಾಗಿದೆ. ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಅರಣ್ಯ ನಾಶವನ್ನು ಇದರ ಸದಸ್ಯ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ಇನ್ನು ‘ಅಮೆಜಾನ್‌ಗಾಗಿ ಪ್ರಾರ್ಥನೆ’ ಎಂದು ಅದರ ಉಳಿವಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟ ನಡೆಯುತ್ತಿದೆ.

10%- ಜಗತ್ತಿನ ಜೀವಿಗಳ ವಾಸಸ್ಥಾನ ಅಮೆಜಾನ್‌

55 ಲಕ್ಷ ಚದರ ಕಿ.ಮೀ. - ಅಮೆಜಾನ್‌ ಮಳೆಕಾಡಿನ ವಿಸ್ತೀರ್ಣ

2ನೇ ಅತಿ ಉದ್ದದ ನದಿ- ನೈಲ್‌ ನದಿಯ ನಂತರ ಜಗತ್ತಿನ ಎರಡನೇ ಅತಿ ಉದ್ದದ ನದಿ ಅಮೆಜಾನ್‌

40,000- ಸಸ್ಯ ಪ್ರಭೇದಗಳು

1300- ಪಕ್ಷಿ ಪ್ರಭೇದಗಳು

3000- ವಿಧದ ಮೀನುಗಳು

430-ವಿಧದ ಸಸ್ತನಿಗಳು

25 ಲಕ್ಷ - ವಿಧದ ಕೀಟಗಳು

430- ವಿಧದ ಉಭಯವಾಸಿಗಳು

380- ವಿಧದ ಸರೀಸೃಪಗಳು

click me!