ಪ್ರತಿ ಸಾರಿ ಧಾರಾಕಾರ ಮಳೆ ಎದುರಾದಾಗಲೂ ಭೂ ಕುಸಿತದ ವರದಿಗಳನ್ನು ಕೇಳುತ್ತಲೆ ಇರುತ್ತೇವೆ. ಈ ಸಾರಿ ಸಹ ಸಾಕಷ್ಟು ಕಡೆ ಭೂಮಿ ಬಾಯ್ದೆರೆದಿದೆ. ಹಾಗಾದರೆ ಇದಕ್ಕೆ ನಿಖರ ಕಾರಣ ಏನು?
ಮಂಗಳೂರು(ಆ.18] ಪ್ರತಿ ಬಾರಿ ಧಾರಾಕಾರ ಮಳೆ ಬಂದಾಗ ಶಿರಾಡಿ ಘಾಟ್, ಚಾರ್ಮಾಡಿ, ಮಡಿಕೇರಿ ಸಂಪಾಜೆ ಘಾಟ್ ಹೆದ್ದಾರಿ ಹಾಗೂ ಕೊಡಗು ಜಿಲ್ಲೆಯ ಪ್ರದೇಶಗಳಲ್ಲಿ ಏಕಾಏಕಿ ಭೂಕುಸಿತ ಉಂಟಾಗುತ್ತಿದ್ದು, ಹೀಗೇಕೆ ಎಂಬ ಯಕ್ಷಪ್ರಶ್ನೆ ಎಲ್ಲರಲ್ಲೂ ತಲೆದೋರುತ್ತಿದೆ. ಈ ಪ್ರಶ್ನೆಗೆ ಭೂಗರ್ಭಶಾಸ್ತ್ರಜ್ಞರು ನಿಖರ ಉತ್ತರ ನೀಡಿದ್ದಾರೆ.
ಕೆಂಪು ಮಣ್ಣಿನಿಂದ ಕೂಡಿದ ಜೇಡಿ ಮಿಶ್ರಿತ ಮಣ್ಣು ಗುಡ್ಡಗಾಡು ಪ್ರದೇಶದಲ್ಲಿ ಸಾಕಷ್ಟುಪ್ರಮಾಣದಲ್ಲಿ ಇದೆ. ಮುಖ್ಯವಾಗಿ ಒಂದು ಕಡೆ ಗುಡ್ಡಗಾಡು ಪ್ರದೇಶ, ಇನ್ನೊಂದು ಕಡೆ ಕಣಿವೆ ಇರುವಲ್ಲಿ ಇದರ ಅಪಾಯ ಜಾಸ್ತಿ. ಇದರ ನಡುವೆ ರಸ್ತೆ ಹಾದುಹೋದರೆ ಮತ್ತಷ್ಟುಅಪಾಯ. ಅನೇಕ ವರ್ಷಗಳ ಕಾಲ ಮಣ್ಣು ಭೂಮಿಯೊಳಗಿನ ಶಿಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿರುತ್ತದೆ. ಮೇಲ್ಮೈಯಲ್ಲಿ ಒತ್ತಡ ಅಧಿಕವಾದಾಗ, ಅದು ಸಡಿಲಗೊಂಡು ದುರ್ಬಲಗೊಳ್ಳುತ್ತದೆ. ಭಾರಿ ಮಳೆಗೆ ಸಹಜವಾಗಿ ಮಣ್ಣು ಕರಗಿ ನೀರಿನೊಂದಿಗೆ ಕೆಳಮುಖವಾಗಿ ಹರಿಯುತ್ತದೆ ಎನ್ನುವುದು ಭೂಗರ್ಭಶಾಸ್ತ್ರ ತಜ್ಞೆ ಡಾ.ಸುಮಿತ್ರಾ ಅಭಿಪ್ರಾಯ.
ಕೊಡಗು ಪ್ರವಾಹ ಸಂಕಷ್ಟದಲ್ಲಿರುವವರಿಗೆ ಸಹಾಯವಾಣಿ
ಕೆಂಪು ಮಿಶ್ರಿತ ಜೇಡಿಮಣ್ಣು ಇರುವ ಕಡೆಯಲ್ಲಿ ಮಳೆಗೆ ಮಣ್ಣು ಬೇಗನೆ ಸಡಿಲಗೊಳ್ಳುತ್ತದೆ. ಭೂಪ್ರದೇಶದ ಕೆಳಪದರಲ್ಲಿ ಶಿಲೆಯಲ್ಲಿ ನೀರು ಇಂಗುವುದಿಲ್ಲ. ಶಿಲೆಯ ಮೇಲ್ಮೈನಲ್ಲಿ ಕೆಲವು ವರ್ಷಗಳ ಕಾಲ ಮಣ್ಣು ಗಟ್ಟಿಯಾಗಿ ಇರುತ್ತದೆ. ಮಳೆ ನೀರು ಶಿಲೆಯಲ್ಲಿ ಭೂಮಿಯೊಳಗೆ ಇಂಗದೇ ಇದ್ದಾಗ ಶಿಲೆಯ ಮೇಲಿನಿಂದ ನೀರು ಕೆಳಕ್ಕೆ ಹರಿದುಹೋಗುತ್ತದೆ. ಕೊಡಗು ಹಾಗೂ ಶಿರಾಡಿ ಘಾಟ್‌ನಲ್ಲಿ ಮಳೆ ಬಂದಾಗ ಇದೇ ಆಗುತ್ತಿದೆ. ಒಳಪದರಲ್ಲಿ ನೀರು ಇಳಿದುಹೋಗುವುದಿಲ್ಲ. ಇದರಿಂದಾಗಿ ಮಳೆ ಬಂದಾಗ ಮಣ್ಣು ಕೊಚ್ಚಿಕೊಂಡು ಎಲ್ಲವನ್ನೂ ಸೆಳೆದುಕೊಂಡು ಹೋಗುತ್ತದೆ ಎನ್ನುವುದು ಡಾ. ಸುಮಿತ್ರಾ ಅವರ ಮಾತು.