ಕಾಶ್ಮೀರ ಮತ್ತೆ ಎಲ್ಲರಿಗೂ ಮುಕ್ತ: ಆರ್ಟಿಕಲ್ 370 ರದ್ದಾದ 2 ತಿಂಗಳ ನಂತರ ಕಣಿವೆ ರಾಜ್ಯ ಹೇಗಿದೆ?

By Web Desk  |  First Published Oct 9, 2019, 11:37 AM IST

ಈ ವರ್ಷದ ಆಗಸ್ಟ್‌ 5ರಂದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಪ್ರವಾಸಿಗರಿಗೆ/ ಹೊರಗಿನವರಿಗೆ ನಿಷೇಧ ಹೇರಲಾಗಿತ್ತು. ಇದೀಗ ಈ ನಿಷೇಧವನ್ನು ರದ್ದುಪಡಿಸಲಾಗಿದ್ದು, ಗುರುವಾರದಿಂದ ಪ್ರವಾಸಿಗರು ಭೇಟಿ ನೀಡಬಹುದು ಎಂದು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್‌ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಸ್ಥಾನಮಾನ ರದ್ದಾದ 2 ತಿಂಗಳಲ್ಲಿ ಏನೇನಾಯ್ತು, ಈಗ ಅಲ್ಲಿನ ಸ್ಥಿತಿ ಹೇಗಿದೆ, ಇನ್ನೂ ಯಾವ್ಯಾವುದಕ್ಕೆ ನಿರ್ಬಂಧವಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.


ರಾತ್ರೋರಾತ್ರಿ ಪ್ರವಾಸಿಗರನ್ನು ಕಾಶ್ಮೀರದಿಂದ ಹೊರಹಾಕಿದ್ದರು!

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪ್ರವಾಸಿಗರಿಗೆ ಮತ್ತು ಅಮರನಾಥ ಯಾತ್ರಿಕರಿಗೆ ಉಗ್ರರಿಂದ ಅಪಾಯ ಇರುವ ಸುಳಿವು ನೀಡಿ ಕಳೆದ ಆಗಸ್ಟ್‌ 2ರಂದು ಅಮರನಾಥ ಯಾತ್ರಿಕರು ಮತ್ತು ಪ್ರವಾಸಿಗರು ಕಾಶ್ಮೀರವನ್ನು ಕೂಡಲೇ ತೊರೆದು ವಾಪಸಾಗಬೇಕೆಂದು ಅಲ್ಲಿನ ರಾಜ್ಯ ಸರ್ಕಾರ ದಿಢೀರ್‌ ಸೂಚನೆ ನೀಡಿತ್ತು. ನಂತರ ಕಣಿವೆ ರಾಜ್ಯದಲ್ಲಿದ್ದ ಪ್ರವಾಸಿಗರನ್ನು ಮೂರು ದಿನದಲ್ಲಿ ಸಂಪೂರ್ಣವಾಗಿ ಹೊರ ಕಳಿಸಲಾಗಿತ್ತು. ಅದಕ್ಕೂ ಮುನ್ನ ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಹೆಚ್ಚುವರಿ ಸೇನೆಯನ್ನು ಜಮಾವಣೆ ಮಾಡಿದಾಗಲೇ 20000 ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಹಾಗೂ 2 ಲಕ್ಷ ಕಾರ್ಮಿಕರು ರಾಜ್ಯ ತೊರೆದಿದ್ದರು.

Latest Videos

ಅಸಲಿ ಮುಖದ ಅನಾವರಣ: ಪಾಕ್ ರಾಯಭಾರ ಕಚೇರಿಯಿಂದ ಹೆಣವಾಗಲು ಉಗ್ರರಿಗೆ ಹಣ

ನಂತರ ಆಗಸ್ಟ್‌ 5ರಂದು ಕೇಂದ್ರ ಸರ್ಕಾರ ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರವನ್ನು ಮೂರು ಭಾಗ ಮಾಡಿತು. ಜೊತೆಗೆ ಹೊರಗಿನ ಯಾರೂ ರಾಜ್ಯ ಪ್ರವೇಶಿಸದಂತೆ ನಿಷೇಧ ಹೇರಿತು. ವಿಶೇಷ ಸ್ಥಾನಮಾನ ಹಿಂಪಡೆತದಿಂದ ಅಲ್ಲಿ ಹಿಂಸಾಚಾರ ಉಂಟಾಗಬಹುದು, ಗಲಭೆ ಎದ್ದು ಉದ್ವಿಗ್ನ ಪರಿಸ್ಥಿತಿ ತಲೆದೋರಬಹುದೆಂದು ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿತ್ತು.

ಸಕಲ ಸಿದ್ಧತೆ ಬಳಿಕ 370ನೇ ವಿಧಿ ರದ್ದು

ಜುಲೈ ಕೊನೆಯ ವಾರ ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆಯೇ ಜಮ್ಮು-ಕಾಶ್ಮೀರದ ಭದ್ರತೆಯನ್ನು ಹೆಚ್ಚಿಸಿತ್ತು. 38000 ಹೆಚ್ಚುವರಿ ಯೋಧರನ್ನು ಕಳುಹಿಸಿ ಭದ್ರತೆಯನ್ನು ಬಿಗಿಗೊಳಿಸಿತು. ಅದರ ಬೆನ್ನಲ್ಲೇ ಉಗ್ರ ದಾಳಿಯ ನೆಪ ಹೇಳಿ ಅಮರನಾಥ ಯಾತ್ರೆ ಮತ್ತು ದುರ್ಗಾದೇವಿ ಯಾತ್ರೆಯನ್ನು ರದ್ದು ಮಾಡಿತು. ಈ ಎಲ್ಲಾ ಮುಂಜಾಗ್ರತಾ ಕ್ರಮಗಳಿಂದಾಗಿ ಜಮ್ಮ-ಕಾಶ್ಮೀರದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

ಇದರ ಬೆನ್ನಲ್ಲೇ ಪ್ರಮುಖ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಿ ಆಗಸ್ಟ್‌ 5ರಂದು ಈ ಎಲ್ಲಾ ಕುತೂಹಲಕ್ಕೆ ತೆರೆ ಹಾಡಿದ ಕೇಂದ್ರ ಸರ್ಕಾರ ಅತ್ಯಂತ ನಾಜೂಕಿನಿಂದ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿಯನ್ನು ರದ್ದುಮಾಡಿತು. ಹಿಂಸಾಚಾರ, ಗಲಭೆ ಉಂಟಾಗದಂತೆ ಫೋನ್‌, ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಿ, ಕಫä್ರ್ಯ ಜಾರಿ ಮಾಡಿತ್ತು.

ಕಣಿವೆಯಲ್ಲಿ ನಡೆಯುತ್ತಿರುವುದು ಧರ್ಮಯುದ್ಧ: ಇಮ್ರಾನ್ ಇವಾಗ ತೆಪ್ಪಗಿದ್ದರೆ ಚೆಂದ!

ಕಾಶ್ಮೀರದ ಪರಿಸ್ಥಿತಿ ಈಗ ಹೇಗಿದೆ?

370ನೇ ವಿಧಿ ರದ್ದುಪಡಿಸಿ 65 ದಿನ ಕಳೆದ ಬಳಿಕವೂ ಜಮ್ಮು-ಕಾಶ್ಮೀರಲ್ಲಿ ಹಲವಾರು ನಿರ್ಬಂಧಗಳು ಇವೆ. ಸದಾ ಬ್ಯುಸಿ ಇರುತ್ತಿದ್ದ ಶ್ರೀಗರ, ಲಾಲ್‌ ಚೌಕ್‌ನಲ್ಲಿ ಅಂಗಡಿ ಮುಂಗಟ್ಟುಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಪ್ರಸಿದ್ಧ ದಾಲ್‌ಲೇಕ್‌ ಹಾಗೂ ಹೌಸ್‌ಬೋಟ್‌ಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ. ಈಗಲೂ ಸಂವಹನಕ್ಕೆ ಸಮಸ್ಯೆಯಿದೆ. ಮೊಬೈಲ್‌ ಮತ್ತು ಇಂಟರ್‌ನೆಟ್‌ ಬಳಕೆ ಸಾಧ್ಯವಾಗುತ್ತಿಲ್ಲ. ಬಿಗುವಿನ ವಾತಾವರಣ ಇರುವುದರಿಂದಾಗಿ ಮಾರ್ಕೆಟ್‌ಗಳಲ್ಲಿ ಮೊದಲಿನಂತೆ ಜನಜಂಗುಳಿ ಇಲ್ಲ, ಸಾರಿಗೆ ವ್ಯವಸ್ಥೆಯೂ ವ್ಯವಸ್ಥಿತವಾಗಿಲ್ಲ ಎಂದು ಹೇಳಲಾಗುತ್ತಿದೆ. ಶಾಲೆಗಳು ಆರಂಭವಾಗಿವೆ. ಆದರೆ ಭಯದ ಕಾರಣ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೆಮುಂದೆ ನೋಡುತ್ತಿದ್ದಾರೆ. ವಿಶೇಷ ಸ್ಥಾನಮಾನ ರದ್ದತಿ ಬಳಿಕ ಪೊಲೀಸ್‌ ಭದ್ರತೆ, ಬ್ಯಾರಿಕೇಡ್‌ಗಳು ಎಲ್ಲೆಂದರಲ್ಲಿ ಇರುವ ಕಾರಣ ಜನರು ಮೊದಲಿನಂತೆ ಮುಕ್ತವಾಗಿ ಓಡಾಡುತ್ತಿಲ್ಲ.

ಹೊಸ ಕಾಶ್ಮೀರ, ಹೊಸ ಸ್ವರ್ಗ: ಪ್ರಧಾನಿ ಮೋದಿ ಭರವಸೆ!

ಇನ್ನೂ ಏನೇನು ನಿರ್ಬಂಧ ಇದೆ?

ಇತ್ತೀಚೆಗೆ ಜಮ್ಮು ಕಾಶ್ಮೀರದ ಬೇರೆ ಬೇರೆ ಪ್ರದೇಶಗಳ ಪರಿಸ್ಥಿತಿ ನೋಡಿಕೊಂಡು ಕೆಲವು ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಕೆಲವೆಡೆ ಸ್ಥಿರ ದೂರವಾಣಿ ಸೇವೆಗಳನ್ನು ಪುನಾರಂಭ ಮಾಡಲಾಗಿದೆ. ಕೆಲ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿದೆ. ವಾಹನ ಸಂಚಾರವೂ ಆರಂಭಗೊಂಡಿದೆ. ಆದರೆ ಭದ್ರತಾ ವ್ಯವಸ್ಥೆ ಮಾತ್ರ ಎಂದಿನಂತೆಯೇ ಇದೆ. ಅಹಿತಕರ ಘಟನೆಗಳು ನಡೆಯದಿರಲಿ ಎಂದು ಸೆಕ್ಷನ್‌ 144 ಅಡಿಯಲ್ಲಿ ನಾಲ್ಕು ಅಥವಾ ಹೆಚ್ಚಿನ ಜನರು ಗುಂಪುಗುಂಪಾಗಿ ನಿಲ್ಲುವುದನ್ನು ನಿಷೇಧ ಮಾಡಲಾಗಿದೆ. ಕಾಶ್ಮೀರದಲ್ಲಿ ನಿರ್ಬಂಧ ತುಸು ಹೆಚ್ಚಿದ್ದರೆ, ಜಮ್ಮು ಕ್ರಮೇಣ ಸಹಜ ಸ್ಥಿತಿಗೆ ಬಂದಿದೆ. ಸಾರಿಗೆ, ವ್ಯಾಪಾರ, ಮಾರುಕಟ್ಟೆಎಲ್ಲವೂ ಸಹಜವಾಗಿದೆ. ಆದರೆ ಮೊಬೈಲ್‌ ಮತ್ತು ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಸೇಬು ಇಳುವರಿ ಇದೆ, ಕೊಳ್ಳುವವರೇ ಇಲ್ಲ!

ಕಾಶ್ಮೀರದ ಪ್ರಮುಖ ಬೆಳೆ ಸೇಬು. ಅಲ್ಲಿನ ಅರ್ಧಕ್ಕರ್ದ ಜನರ ಜೀವನಾಧಾರವೇ ಸೇಬು ಬೆಳೆ. ಈ ವರ್ಷ ಇಳುವರಿ ಅತ್ಯುತ್ತಮವಾಗಿತ್ತು. ಆದರೆ ರಫ್ತಿಗೆ ಹಿನ್ನಡೆಯಾಗಿದೆ. ರೈತರಿಂದ ನೇರವಾಗಿ ಸೇಬು ಖರೀದಿಸುವುದಾಗಿ ಸರ್ಕಾರ ಹೇಳಿದ್ದು, ಅದಕ್ಕೆ ವ್ಯವಸ್ಥೆಯನ್ನೂ ಮಾಡಿದೆ. ಆದರೆ ಸರ್ಕಾರಕ್ಕೆ ಮಾರಲು ಬೆಳೆಗಾರರು ಸಿದ್ಧವಿಲ್ಲ. ಮಾರ್ಕೆಟ್‌ ಬೆಲೆಗಿಂತ ಸರ್ಕಾರ ಅತಿ ಕಡಿಮೆ ಕೇಳುತ್ತಿದೆ ಎಂಬುದು ಜನರ ವಿರೋಧಕ್ಕೆ ಕಾರಣ. ಈ ಮುಂಚೆ ಸೇಬು ಮಾರಾಟ ಮಾಡುತ್ತಿದ್ದವರಿಗೆ ದಿಢೀರನೆ ಮಾರಾಟ ನಿಲ್ಲಿಸಿಬಿಟ್ಟರೆ ಮುಂದೆ ತೊಂದರೆಯಾಗಬಹುದು ಎಂದೂ ಸರ್ಕಾರಕ್ಕೆ ಸೇಬು ಮಾರಲು ಜನರು ಹಿಂದೇಟು ಹಾಕುತ್ತಿದ್ದಾರೆ.

18 ತಿಂಗಳೊಳಗೆ ಕಾಶ್ಮೀರಿ ನಾಯಕರ ಬಿಡುಗಡೆ: ಕೈಗೆ ಸಚಿವ ಸಿಂಗ್‌ ಟಾಂಗ್‌!

ಮಾಜಿ ಸಿಎಂ ಒಮರ್‌, ಮುಫ್ತಿಗೆ ಇನ್ನೂ ಇಲ್ಲ ಬಿಡುಗಡೆ ಭಾಗ್ಯ

ಆರ್ಟಿಕಲ್‌ 370 ರದ್ದತಿಗೂ ಮುನ್ನ ಭದ್ರತಾ ದೃಷ್ಟಿಯಿಂದ ಜಮ್ಮು-ಕಾಶ್ಮೀರದ 400ಕ್ಕೂ ಹೆಚ್ಚು ಪ್ರಮುಖ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಇಡಲಾಗಿತ್ತು. ಸುಮಾರು 2 ತಿಂಗಳ ಬಂಧನದ ಬಳಿಕ ಇತ್ತೀಚೆಗೆ ಕೆಲ ಪ್ರಮುಖ ರಾಜಕೀಯ ನಾಯಕರನ್ನು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ. ಆದರೆ ಮಾಜಿ ಮುಖ್ಯಮಂತ್ರಿಗಳಾದ ಒಮರ್‌ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಮತ್ತು ಸಜ್ಜದ್‌ ಗನಿ ಮತ್ತಿತರರನ್ನು ಇನ್ನೂ ಗೃಹಬಂಧನದಲ್ಲಿ ಇಡಲಾಗಿದೆ.

ಫೋನ್‌, ಇಂಟರ್ನೆಟ್‌ ಇಲ್ಲದೆ ಪ್ರವಾಸಿಗರು ಬರುತ್ತಾರಾ?

ಗುರುವಾರದಿಂದ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವುದಾಗಿ ಜಮ್ಮು-ಕಾಶ್ಮೀರ ರಾಜ್ಯಪಾಲರು ಹೇಳಿದ್ದಾರೆ. ಆದರೆ ಕಣಿವೆ ರಾಜ್ಯದಲ್ಲಿನ 370ನೇ ವಿಧಿ ರದ್ದತಿ ಬಳಿಕ ವಿಧಿಸಿದ್ದ ಎಲ್ಲಾ ನಿರ್ಬಂಧಗಳು ಇನ್ನೂ ತೆರವಾಗಿಲ್ಲ. ಈಗಲೂ ಅಲ್ಲಿ ಸಂವಹನಕ್ಕೆ ಅಡೆತಡೆಗಳಿವೆ. ಮೊಬೈಲ್‌ ಫೋನ್‌, ಇಂಟರ್‌ನೆಟ್‌ ಸರಿಯಾಗಿ ಎಲ್ಲಾ ಕಡೆ ಲಭ್ಯವಿಲ್ಲ. ಹೀಗಿರುವಾಗ ಅಲ್ಲಿಗೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯವನ್ನು ಸರ್ಕಾರ ಹೇಗೆ ಕಲ್ಪಿಸುತ್ತದೆ ಎಂಬುದು ಕೆಲವರ ಪ್ರಶ್ನೆಯಾಗಿದೆ.

ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ ಭೂಲೋಕದ ಸ್ವರ್ಗ

ಪ್ರತಿ ವರ್ಷ ದಸರಾ ಮತ್ತು ದೀಪಾವಳಿ ಸಮಯದಲ್ಲಿ ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಮಹಾರಾಷ್ಟ್ರ, ಗುಜರಾತ್‌, ಪಶ್ಚಿಮ ಬಂಗಾಳಗಳಿಂದ ಅಸಂಖ್ಯಾತ ಪ್ರವಾಸಿಗರು ದಸರಾ ರಜೆಯಲ್ಲಿ ಬಂದು ಹೋಗುತ್ತಿದ್ದರು. ಆದರೆ ಜಮ್ಮು-ಕಾಶ್ಮೀರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಕಾರಣ ಕಳೆದ ಎರಡು ತಿಂಗಳಿನಿಂದ ಕಾಶ್ಮೀರ ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ವರ್ಷದ ಮೊದಲ ಏಳು ತಿಂಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದರು. ಜುಲೈ ತಿಂಗಳಲ್ಲಿ ಸುಮಾರು 3,40,000 ಯಾತ್ರಿಕರು ಆಗಮಿಸಿದ್ದರು. ಆದರೆ ಆಗಸ್ಟ್‌ 5ರ ಬಳಿಕ ಕೇವಲ 150 ವಿದೇಶಿ ಪ್ರಯಾಣಿಕರು ಮಾತ್ರ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಕಾಶ್ಮೀರ ವಿಷಯದಲ್ಲಿ ಇಡೀ ವಿಶ್ವ ಭಾರತವನ್ನೇ ನಂಬುತ್ತೆ, ನಮ್ಮನ್ನಲ್ಲ: ಪಾಕ್‌ ಸಚಿವ

ಪ್ರವಾಸೋದ್ಯಮ ಉತ್ತೇಜನಕ್ಕೆ ಬ್ಯಾಕ್‌ ಟು ವ್ಯಾಲಿ ಯೋಜನೆ

ಕಾಶ್ಮೀರಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ‘ಕಣಿವೆಗೆ ಹಿಂದುರುಗಿ’ (ಬ್ಯಾಕ್‌ ಟು ವ್ಯಾಲಿ) ಎಂಬ ಯೋಜನೆಯನ್ನು ಜಾರಿ ಮಾಡಿದೆ. ಆರ್ಟಿಕಲ್‌ 370 ರದ್ದು ಮಾಡಿದ ಬಳಿಕ ಕಣಿವೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪರಿಚಯಿಸಿರುವ ಪ್ರಪ್ರಥಮ ಯೋಜನೆ ಇದಾಗಿದೆ. ಇದರಡಿಯಲ್ಲಿ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಾಶ್ಮೀರ ಪ್ರವಾಸೋದ್ಯಮದ ಬಗ್ಗೆ ಜಾಹೀರಾತುಗಳನ್ನು ನೀಡಲಾಗುತ್ತದೆ. ಅಲ್ಲದೆ ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯು ‘ಪರ್ಯಟನ್‌ ಪರ್ವ’ ಎಂಬ ಉತ್ಸವವನ್ನು ದೆಹಲಿಯಲ್ಲಿ ಆಯೋಜಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರಯತ್ನಿಸುತ್ತಿದೆ.

click me!