
ರಾಂಚಿ[ಸೆ.19]: ದೇಶದ ಸಮಗ್ರ ಅಭಿವೃದ್ಧಿಗೆ ಒಂದು ರಾಷ್ಟ್ರ ಒಂದು ಭಾಷೆ ಬೇಕು ಎಂದು ರಾಷ್ಟ್ರೀಯ ಹಿಂದಿ ದಿವಸ್ ಪ್ರಯುಕ್ತ ಮಾಡಿದ್ದ ತಮ್ಮ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿಂದಿ ಹೇರಿಕೆಯ ಯಾವುದೇ ಪ್ರಸ್ತಾಪವನ್ನು ನಾನು ಮಾಡಿಲ್ಲ, ನನ್ನ ಮಾತನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಹಿಂದಿಯೇತರ ಭಾಷಿಕ ರಾಜ್ಯಗಳಲ್ಲಿ ಅದರಲ್ಲೂ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇಳಿಬಂದಿದ್ದ ಭಾರೀ ಪ್ರತಿಭಟನೆಯ ಕೂಗನ್ನು ತಣ್ಣಗಾಗಿಸುವ ಯತ್ನ ಮಾಡಿದ್ದಾರೆ.
ಅತ್ತ ದೇಶಕ್ಕೊಂದೇ ಭಾಷೆ ಎಂದ ಶಾ: ಇತ್ತ ಹಿಂದಿ ದಿನ ಆಚರಣೆಗೆ ಸಿದ್ದು ವಿರೋಧ!
ಬುಧವಾರ ರಾಂಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ನಾನು ದೇಶದಲ್ಲಿ ಹಿಂದಿ ಹೇರಿಕೆ ಮಾಡಬೇಕು ಎಂದು ಹೇಳಿಯೇ ಇಲ್ಲ. ದ್ವಿತೀಯ ಭಾಷೆಯನ್ನಾಗಿ ಹಿಂದಿಯನ್ನು ಬಳಸಿ, ಹಿಂದಿಯೊಂದಿಗೆ ಪ್ರಾದೇಶಿಕ ಭಾಷೆಯನ್ನೂ ಬೆಳೆಸಿ ಎಂದು ಹೇಳಿದ್ದೆ. ನಾನು ಕೂಡ ಗುಜರಾತಿ ಮಾತನಾಡುವ ಹಿಂದಿಯೇತರ ರಾಜ್ಯ ಗುಜರಾತ್‌ನಿಂದ ಬಂದಿದ್ದೇನೆ. ನಾನು ಅಂದು ಮಾಡಿದ ಭಾಷಣವನ್ನು ಸರಿಯಾಗಿ ಕೇಳಿ. ಅದರಲ್ಲಿ ಪ್ರಾದೇಶಿಕ ಭಾಷೆಯನ್ನು ಬಲ ಪಡಿಸುವ ಬಗ್ಗೆ ಪದೇ ಪದೇ ಹೇಳಿದ್ದೇನೆ. ನನ್ನ ಹೇಳಿಕೆಯಲ್ಲಿ ಯಾರಿಗಾದರೂ ರಾಜಕೀಯ ಮಾಡಬೇಕು ಎಂಬ ಉದ್ದೇಶವಿದ್ದಲ್ಲಿ ಅದು ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಒಂದು ದೇಶ, ಒಂದೇ ಭಾಷೆ: ಹಿಂದಿ ರಾಷ್ಟ್ರೀಯ ಭಾಷೆಯಾಗಿಸಲು ಶಾ ಮನವಿ
ಯಾವುದೇ ವಿದ್ಯಾರ್ಥಿ ಮಾತೃ ಭಾಷೆಯಲ್ಲಿ ಕಲಿತರೆ ಮಾತ್ರ ಮಾನಸಿಕವಾಗಿ ಗಟ್ಟಿಯಾಗಿ ಬೆಳೆಯಲು ಸಾಧ್ಯ. ಇಲ್ಲಿ ಮಾತೃ ಬಾಷೆ ಎಂದರೆ ಹಿಂದಿ ಅಲ್ಲ. ಆಯಾ ರಾಜ್ಯದ ಭಾಷೆ. ಆದರೆ ದೇಶಕ್ಕೆ ಒಂದೇ ಭಾಷೇ ಇರಬೇಕು. ಯಾರಾದರೂ ಬೇರೆ ಭಾಷೆ ಕಲಿಯುವುದಿದ್ದರೆ ಅವರ ಮೊದಲ ಆಯ್ಕೆ ಹಿಂದಿಯಾಗಿರಬೇಕು. ನಾನು ಈ ಬಗ್ಗೆ ಮನವಿ ಮಾಡಿದ್ದೆ ಅಷ್ಟೇ. ಇದರಲ್ಲಿ ಏನು ತಪ್ಪಿದೆ ಅನ್ನುವುದು ನನಗೆ ಗೊತ್ತಿಲ್ಲ. ಅಲ್ಲದೇ ದೇಶದಲ್ಲಿ ಸ್ಥಳೀಯ ಭಾಷೆಯ ಉಳಿವಿಗೆ ಆಂದೋಲನ ನಡೆಸಬೇಕು. ಇಲ್ಲದಿದ್ದರೆ ನ್ಯೂಜಿಲೆಂಡ್ ಹಾಗೂ ಆಸ್ಪ್ರೇಲಿಯನ್ನರು ತಮ್ಮ ಮಾತೃ ಭಾಷೆಯನ್ನು ಕಳೆದುಕೊಂಡ ಸ್ಥಿತಿ ನಮಗೂ ಬರಲಿದೆ ಎಂದು ಹೇಳಿದ್ದಾರೆ.
ಹಿಂದಿ ಪ್ರೀತಿಸದವರು, ದೇಶಪ್ರೇಮಿಗಳಲ್ಲ: ಸಿಎಂ ಬಿಪ್ಲಬ್ ಹೇಳಿಕೆ ಸತ್ಯಕ್ಕೆ ದೂರ!
ಕಳೆದ ಶನಿವಾರ ಹಿಂದಿ ದಿವಸ್ ಆಚರಣೆ ವೇಳೆ ದೇಶದಲ್ಲಿ ಒಂದು ಭಾಷೆ ಇದ್ದರೆ ಜಾಗತಿಕವಾಗಿ ಗುರುತಿಸಿಕೊಳ್ಳಬಹುದು. ಹಾಗಾಗಿ ತಮ್ಮ ಭಾಷೆ ಜತೆಗೆ ಹಿಂದಿಯನ್ನು ಜನ ಕಲಿಯಬೇಕು ಎಂದು ಅಮಿತ್ ಶಾ ಹೇಳಿದ್ದರು. ಶಾ ಹೇಳಿಕೆ ದೇಶಾದ್ಯಂತ, ಅದರಲ್ಲೂ ದಕ್ಷಿಣ ಭಾರತದಲ್ಲಿ ವಿರೋಧದ ಕಿಡಿ ಹತ್ತಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.