ಎಚ್‌ಐವಿ ಪೀಡಿತೆ ಎಂದು ಹೇಳಿ ಅತ್ಯಾಚಾರದಿಂದ ಪಾರಾದ ದಿಟ್ಟ ಮಹಿಳೆ!| ಯಾರಾಕೆ? ಈ ಘಟನೆ ನಡೆದಿದ್ದೆಲ್ಲಿ? ಇಲ್ಲಿದೆ ಸಂಪೂರ್ಣ ವಿವರ
ಔರಂಗಾಬಾದ್[ಏ.14]: ಮಹಿಳೆಯೊಬ್ಬರು ತೋರಿದ ಸಮಯಪ್ರಜ್ಞೆ ಅವರನ್ನು ಅತ್ಯಾಚಾರದಿಂದ ಬಚಾವ್ ಮಾಡಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ವೇಳೆ, ಚುರುಕುಬುದ್ಧಿ ಪ್ರಯೋಗಿಸಿದ ಮಹಿಳೆ, ತಾನು ಎಚ್‌ಐವಿ ಸೋಂಕಿತೆ ಎಂದು ಸುಳ್ಳು ಹೇಳಿದ್ದಾಳೆ. ಇದರಿಂದ ಗಾಬರಿ ಬಿದ್ದ ಆರೋಪಿ, ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಪ್ರಕರಣ ಸಂಬಂಧ ವಿಲಾಸ್ ಅವದ್ (22) ಎಂಬಾತ ಜೈಲುಪಾಲಾಗಿದ್ದಾನೆ.
ಆಗಿದ್ದೇನು?:
ಮಾ.25ರಂದು 29 ವರ್ಷದ ಮಹಿಳೆ ತನ್ನ ಪುತ್ರಿಯೊಂದಿಗೆ ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದರು. ಆದರೆ, ಸ್ವಗ್ರಾಮಕ್ಕೆ ತೆರಳುವ ವೇಳೆ ಮಹಿಳೆ ಬಳಿ ಕೇವಲ 10 ರು. ಉಳಿದಿತ್ತು. ಹೀಗಾಗಿ, ತಮ್ಮ ಊರಿನ ಕಡೆಗೆ ತೆರಳುವ ವಾಹನವೊಂದರಲ್ಲಿ ಡ್ರಾಪ್ ಪಡೆಯಲು ಮಹಿಳೆ ಮುಂದಾದರು. ಈ ಪ್ರಕಾರ, ಮೋಟರ್‌ಸೈಕಲ್‌ನಲ್ಲಿ ಬಂದ ಆರೋಪಿಯು, ಮಹಿಳೆ ಮತ್ತು ಆಕೆಯ ಪುತ್ರಿಗೆ ಊರಿಗೆ ಬಿಡಲು ಒಪ್ಪಿ ಗಾಡಿಯಲ್ಲಿ ಕೂರಿಸಿಕೊಂಡಿದ್ದ.
ಆದರೆ, ಮಹಿಳೆಯ ಗ್ರಾಮದತ್ತ ತೆರಳದೆ, ಬೇರೆಡೆ ಕರೆದೊಯ್ದು, ಆಯುಧದಿಂದ ಬೆದರಿಸಿ ಅತ್ಯಾಚಾರಕ್ಕೆ ಮುಂದಾದ. ಈ ವೇಳೆ ಧೃತಿಗೆಡದ ಮಹಿಳೆ ಭಾರೀ ಚಾಣಾಕ್ಷತನವನ್ನು ಉಪಯೋಗಿಸಿ, ತಾನು ಎಚ್‌ಐವಿ ಸೋಂಕು ಪೀಡಿತ ಮಹಿಳೆ ಎಂದು ಹೇಳಿಕೊಂಡಿದ್ದಾರೆ. ಆಗ ಮಹಿಳೆ ಮೇಲೆ ಅತ್ಯಾಚಾರ ಎಸಗಿದರೆ, ತನಗೂ ಎಚ್‌ಐವಿ ಸೋಂಕು ತಗುಲುತ್ತದೆ ಎಂಬ ಭೀತಿಯಿಂದ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದ.