'ಮೈಸೂರು: ಆನೆ ಶಿಬಿರಗಳಲ್ಲಿ ಮೂಲ ಸೌಕರ‍್ಯಗಳೇ ಇಲ್ಲ!’

By Kannadaprabha NewsFirst Published Nov 7, 2019, 1:01 PM IST
Highlights

ರಾಜ್ಯದಲ್ಲಿರುವ ಬಹುತೇಕ ಆನೆ ಶಿಬಿರಗಳಲ್ಲಿ ಸಮರ್ಪಕವಾದ ಮೂಲ ಸೌಕರ್ಯ ಹಾಗೂ ವೈದ್ಯಕೀಯ ಸೌಲಭ್ಯಗಳು ಇಲ್ಲ ಎಂದು ತಜ್ಞರ ಸಮಿತಿ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ. ವೈಲ್ಡ್‌ ಲೈಫ್‌ ಫಸ್ಟ್‌ ಆರ್ಗನೈಸೇಷನ್‌ ಟ್ರಸ್ಟ್‌ನ ಟ್ರಸ್ಟಿಕೆ.ಎಂ.ಚಿನ್ನಪ್ಪ, ತಮಿಳುನಾಡಿನ ವೈದ್ಯ ಡಾ.ಕಳೈವಣ್ಣನ್‌ ಮತ್ತು ನೊಯಿಡಾದ ವೈದ್ಯ ಡಾ.ಎನ್‌.ವಿ.ಕೆ.ಅಶ್ರಫ್‌ ಅವರು ಅ.16ರಿಂದ 19ರವರೆಗೆ ರಾಜ್ಯದ 6 ಆನೆ ಶಿಬಿರಗಳಗೆ ಭೇಟಿ ನೀಡಿ ಅಧ್ಯಯನ ನಡೆಸಿ ಸಿದ್ಧಪಡಿಸಿದ ವರದಿಯನ್ನು ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದ್ದಾರೆ.

ಮೈಸೂರು(ನ.07): ರಾಜ್ಯದಲ್ಲಿರುವ ಬಹುತೇಕ ಆನೆ ಶಿಬಿರಗಳಲ್ಲಿ ಸಮರ್ಪಕವಾದ ಮೂಲ ಸೌಕರ್ಯ ಹಾಗೂ ವೈದ್ಯಕೀಯ ಸೌಲಭ್ಯಗಳು ಇಲ್ಲ ಎಂದು ತಜ್ಞರ ಸಮಿತಿ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.

ರಾಜ್ಯದ ಆನೆ ಶಿಬಿರಗಳಲ್ಲಿ ಸಂಭವಿಸಿದ ಆನೆಗಳ ಸರಣಿ ಸಾವಿಗೆ ನಿಖರ ಕಾರಣ ತಿಳಿಯಲು ಉನ್ನತ ಮಟ್ಟದ ಸಮಿತಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ವಕೀಲ ಎನ್‌.ಪಿ.ಅಮೃತೇಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ನಿಧನ

ವೈಲ್ಡ್‌ ಲೈಫ್‌ ಫಸ್ಟ್‌ ಆರ್ಗನೈಸೇಷನ್‌ ಟ್ರಸ್ಟ್‌ನ ಟ್ರಸ್ಟಿಕೆ.ಎಂ.ಚಿನ್ನಪ್ಪ, ತಮಿಳುನಾಡಿನ ವೈದ್ಯ ಡಾ.ಕಳೈವಣ್ಣನ್‌ ಮತ್ತು ನೊಯಿಡಾದ ವೈದ್ಯ ಡಾ.ಎನ್‌.ವಿ.ಕೆ.ಅಶ್ರಫ್‌ ಅವರು ಅ.16ರಿಂದ 19ರವರೆಗೆ ರಾಜ್ಯದ 6 ಆನೆ ಶಿಬಿರಗಳಗೆ ಭೇಟಿ ನೀಡಿ ಅಧ್ಯಯನ ನಡೆಸಿ ಸಿದ್ಧಪಡಿಸಿದ ವರದಿಯನ್ನು ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು.

ಆನೆ ಶಿಬಿರ ಇರುವ ಸ್ಥಳ, ಜಲಮೂಲ, ಸೌಕರ್ಯ, ಆರೋಗ್ಯ ನಿರ್ವಹಣೆ, ಪ್ರಾಣಿಗಳ ಪರಿಸ್ಥಿತಿ ಮತ್ತು ಪ್ರಾಣಿಗಳ ಕಲ್ಯಾಣ ಅಂಶಗಳ ಮೇಲೆ ತಜ್ಞರ ಸಮಿತಿ ಅಧ್ಯಯನ ಮಾಡಿದ ವರದಿಯನ್ನು ನ್ಯಾಯಪೀಠ ದಾಖಲಿಸಿಕೊಂಡಿತು. ಜತೆಗೆ, ವರದಿಯಲ್ಲಿ ಮಾಡಲಾಗಿರುವ ಶಿಫಾರಸುಗಳ ಅನುಷ್ಠಾನ ಮತ್ತು ಅರ್ಜಿ ಸಂಬಂಧ ಹಿಂದೆ ನ್ಯಾಯಾಲಯ ಹೊರಡಿಸಿದ ಆದೇಶಗಳನ್ನು ಪಾಲಿಸಿರುವ ಬಗ್ಗೆ ನ.21ರೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.

ಮೂಲ ಸೌಕರ್ಯ ಇಲ್ಲ:

ಆರು ಆನೆ ಶಿಬಿರಗಳಿಗೆ ಮೂವರು ಪಶು ವೈದ್ಯರು ಇದ್ದಾರೆ. ಶಸ್ತ್ರ ಚಿಕಿತ್ಸೆ ಸಾಧನಗಳು ಸೇರಿದಂತೆ ವೈದ್ಯರು ತಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲು ಮೂಲ ಸೌಕರ್ಯಗಳಿಲ್ಲ. ತುರ್ತು ಚಿಕಿತ್ಸೆ ಒದಗಿಸಲು ಔಷಧಾಲಯ ಹಾಗೂ ಔಷಧಿ ಸಂಗ್ರಹಿಸಿಡಲು ಶೈತ್ಯಾಗಾರ ಇಲ್ಲ. ಯಾವುದೇ ವೈದ್ಯರಿಗೆ ಸಹಾಯಕರು ಇಲ್ಲ. ಬಹುತೇಕ ಆನೆ ಶಿಬಿರಗಳಲ್ಲಿ ಆಹಾರ ತಯಾರಿಕಾ ಕೇಂದ್ರಗಳಲ್ಲಿ ನೈರ್ಮಲ್ಯ ಹಾಗೂ ಗುಣಮಟ್ಟಇಲ್ಲ. ಆನೆಗಳ ಆರೋಗ್ಯ ನಿರ್ವಹಣೆ ಸರಿಯಿಲ್ಲ. ವಾರ್ಷಿಕ ಬಜೆಟ್‌ನಲ್ಲಿ ಆನೆಗಳ ಆರೋಗ್ಯ ರಕ್ಷಣೆಗೆ ನಿರ್ದಿಷ್ಟಅನುದಾನ ನಿಗದಿ ಮಾಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜೆಡಿಎಸ್‌ನಿಂದ ನಾನು ಈಗ ದೂರ ಎಂದು ಪುನರುಚ್ಛರಿಸಿದ ಜಿಟಿಡಿ

ಹಾಗೆಯೇ, ಆರು ಆನೆ ಶಿಬಿರಗಳಿಗೆ ಭೇಟಿ ನೀಡಿದಾಗ ಅಲ್ಲಿ 96 ಆನೆಗಳು ಇದ್ದವು. 2016ರಿಂದ 2019ರಲ್ಲಿ 18 ಆನೆಗಳು ಸಾವನ್ನಪ್ಪಿವೆ. 2019ರಲ್ಲಿಯೇ 4, 2018ರಲ್ಲಿ 7 ಆನೆ ಸಾವನ್ನಪ್ಪಿವೆ. ನಾಲ್ಕು ಅಪ್ರಾಪ್ತ ಆನೆಗಳು, 14 ವಯಸ್ಕ ಆನೆಗಳು ಅಸುನೀಗಿವೆ. ಅನೇಕ ಆನೆಗಳು ಸೂಕ್ತ ಚಿಕಿತ್ಸೆ ಇಲ್ಲದೆ ಅನಾರೋಗ್ಯದಿಂದ ಸಾವನ್ನಪ್ಪಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಮಿತಿಯ ಶಿಫಾರಸುಗಳು

ಒಂದು ಶಿಬಿರದಲ್ಲಿ 15ಕ್ಕೂ ಹೆಚ್ಚು ಆನೆಗಳನ್ನು ಇರಿಸಬಾರದು. 15ಕ್ಕೂ ಹೆಚ್ಚು ಆನೆಗಳು ಇದ್ದರೆ, ಎರಡು ಅಥವಾ ಮೂರು ಶಿಬಿರಗಳಾಗಿ ವಿಂಗಡಿಸಬೇಕು. ಆನೆಗಳ ಶಿಬಿರವು ಸಂರಕ್ಷಿತ ಪ್ರದೇಶದಲ್ಲಿರಬೇಕು. ಬೇಡಿಕೆಯಲ್ಲಿರುವ ಆನೆಗಳ ಶಿಬಿರ, ಹೊಸದಾಗಿ ತರಬೇತಿ ನೀಡಲ್ಪಟ್ಟಆನೆಗಳ ಶಿಬಿರ ಮತ್ತು ಸೆರೆಹಿಡಿದ ಆನೆಗಳ ಶಿಬಿರವೆಂದು ಮೂರು ವರ್ಗಗಳಾಗಿ ಶಿಬಿರಗಳನ್ನು ವಿಂಗಡಿಸಬೇಕು. ಸಂರಕ್ಷಿತ ಅರಣ್ಯ ಪ್ರದೇಶ ಹಾಗೂ ಹುಲಿ ಅಭಯಾರಣ್ಯದಲ್ಲಿ ಗಸ್ತು ತಿರುಗಲು ಹಾಗೂ ಸಫಾರಿಗೆ ಅಗತ್ಯವಿರುವ ಸಂಖ್ಯೆಯಲ್ಲಿ ಮಾತ್ರ ಆನೆಗಳನ್ನು ಇರಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಇನ್ನು 60ನೇ ದಶಕದಲ್ಲಿದ್ದ ಸ್ಥಳದಲ್ಲಿಯೇ ಸಕ್ಕರೆ ಬೈಲು ಆನೆ ಶಿಬಿರವನ್ನು ಮುಂದುವರಿಸಬೇಕು. ಸೆರೆಹಿಡಿದ ಆನೆಗಳನ್ನು ಮಳೆ ಹಾಗೂ ಬೆಳಕಿನಿಂದ ರಕ್ಷಣೆ ಇರುವ ಸ್ಥಳದಲ್ಲಿ ಇರಿಸಬೇಕು. ಚಿಕಿತ್ಸೆ ನೀಡಲು ಆನೆ ಶಿಬಿರದ ಪಕ್ಕದಲೇ ದೊಡ್ಡ ಚಿಕಿತ್ಸಾ ಕೇಂದ್ರ ಹಾಗೂ ಔಷಧಾಲಯ ತೆರೆಯಬೇಕು. ಔಷಧಗಳು ಹಾಗೂ ಅಗತ್ಯ ಎಲ್ಲಾ ಸಲಕರಣೆಗಗಳನ್ನು ದಾಸ್ತಾನು ಮಾಡಿರಬೇಕು. ಆನೆ ಶಿಬಿರಗಳಲ್ಲಿ ರೆಫ್ರಿಜಿರೇಟರ್‌, ಸ್ಟೆರಲೈಜರ್‌ ಮತ್ತು ಮೂಲ ಪ್ರಯೋಗಾಲಯದ ಸಲಕರಣೆಗಳ ಇರಬೇಕು. ಆನೆ ಶಿಬಿರಗಳ ನಿರ್ವಹಣೆ ಕುರಿತು ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ಪಶುವೈದ್ಯಕೀಯ ಸಂಸ್ಥೆ ಹಾಗೂ ವನ್ಯಜೀವಿ ವೈದ್ಯಕೀಯ ಸಂಶೋಧನಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.

click me!