ವಯಸ್ಸಾದ ಜೀವಕ್ಕೆ ಬೆಲೆಯೇ ಇಲ್ಲವೇ? ಕೋಮಾಗೆ ಜಾರಿದ ಹೆಂಡತಿಯನ್ನು ಉಳಿಸಿಕೊಳ್ಳಲು ಪರದಾಡುವ ವೃದ್ಧನ ಕಥೆ ಇದು.
ವೀಣಾ ರಾವ್, ಕನ್ನಡ ಪ್ರಭ
ಒಟಿಟಿ: ಝೀ 5
ತಾರಾಗಣ: ಅನುಪಮ್ ಖೇರ್, ನೀನಾ ಕುಲಕರ್ಣಿ, ಮಹಿಮಾ ಚೌಧರಿ, ಅನ್ನು ಕಪೂರ್.
undefined
ಒಂದು ವೃದ್ಧ ಗಂಡ- ಹೆಂಡತಿ. ಗಂಡ ಅರವಿಂದ. ಹೆಂಡತಿ ಮಧು. ಅರವಿಂದನಿಗೆ ರಿಟೈರ್ ಆಗಿದೆ. ಬಂದ ಹಣದಲ್ಲಿ ಲಕ್ನೋ ಬಳಿ ಒಂದು ಸಣ್ಣ ಪಟ್ಟಣದಲ್ಲಿ ಮನೆ ಖರೀದಿಸುತ್ತಾರೆ. ಸುತ್ತಲೂ ಜಾಗ ಇರುವ ವಿಶಾಲವಾದ ಮನೆ ಬೇಕು, ಅಂಗಳದ ತುಂಬಾ ಹೂಗಿಡಗಳನ್ನು ಬೆಳೆಸಬೇಕು ಅದರಂತೆಯೇ ಮನೆ ಕೊಂಡು ತನ್ನ ಇಚ್ಛೆಯಂತೆ ಅಲಂಕರಿಸುತ್ತಾಳೆ, ಮಧು. ಈ ವೃದ್ಧ ಜೋಡಿಗೆ ಎರಡು ಮಕ್ಕಳು. ಮಗಳಿಗೆ ಮದುವೆಯಾಗಿ ಸೆಟಲ್ ಆಗಿದ್ದಾಳೆ. ಮಗನೂ ತನ್ನ ಹೆಂಡತಿಯೊಡನೆ ಆರಾಮಾಗಿ ಇದ್ದಾನೆ. ಅರವಿಂದರ ಬಳಿ ಒಂದಷ್ಟು ಹಣವಿದೆ., ಅಷ್ಟು ಅವರಿಬ್ಬರ ವೃದ್ದಾಪ್ಯ ಜೀವನಕ್ಕೆ ಸಾಕು. ಮಧುಗೆ ಯೂರೋಪ್ ಪ್ರವಾಸ ಹೋಗಬೇಕೆಂಬ ಆಸೆ. ಅದಕ್ಕಾಗಿ ಬಹಳಷ್ಟು ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಅನ್ನು ವಿಚಾರಿಸಿ ಒಂದು ಒಳ್ಳೆಯ ಪ್ಯಾಕೇಜಿನಲ್ಲಿ ಯೂರೋಪ್ ಪ್ರವಾಸಕ್ಕೆ ಬುಕ್ ಮಾಡುತ್ತಾಳೆ. ಪ್ರವಾಸದ ದಿನ ಬಂದೇ ಬಿಡುತ್ತದೆ. ಮಕ್ಕಳು, ಅಳಿಯ, ಸೊಸೆ ಎಲ್ಲರೂ ಶುಭ ಹಾರೈಸಿ ವಿಮಾನ ನಿಲ್ದಾಣಕ್ಕೆ ಬಂದು ಬೀಳ್ಕೊಡುತ್ತಾರೆ. ಇನ್ನೇನು ಚೆಕ್ ಇನ್ ಆಗಿ ಒಳ ಹೋಗಬೇಕು, ಆಗ ಮಧು ಹಠಾತ್ ಕುಸಿದು ಬೀಳುತ್ತಾಳೆ.
ಅರವಿಂದ ಗಾಬರಿಯಿಂದ ಮಧು ಮಧು ಎಂದು ಕೂಗುತ್ತ ಎಚ್ಚರಿಸಲು ಪ್ರಯತ್ನಿಸಿದರೆ, ಮಧು ಉಹುಂ ಇಹದ ಕಡೆ ಎಚ್ಚರವೇ ಇರುವುದಿಲ್ಲ. ಆ್ಯಂಬುಲೆನ್ಸ್ ಬರುತ್ತದೆ. ಮಧು ಆಸ್ಪತ್ರೆಯಲ್ಲಿ ದಾಖಲಾಗುತ್ತಾಳೆ. ಡಾಕ್ಟರ್ ಮೆದುಳಿನ ರಕ್ತಸ್ರಾವ ಎನ್ನುತ್ತಾರೆ. ಮಧು ಕೋಮಾಗೆ ಹೋಗಿ ಬಿಡುತ್ತಾಳೆ. ಅವಳಿಗೆ ಕೃತಕ ಉಸಿರಾಟ, ಕೃತಕ ಎದೆಬಡಿತದ ಮೆಷಿನ್ ಎಲ್ಲ ಅಳವಡಿಸಿರುತ್ತಾರೆ. ಎಷ್ಟು ದಿನ ಹೀಗೆ ಕೃತಕವಾಗಿ ಮಷೀನುಗಳ ಸಹಾಯದಿಂದ ಬದುಕುವುದು? 'ನೀನು ಒಂದು ಫಾರ್ಮಿಗೆ ಸಹಿ ಮಾಡಿದರೆ, ಎಲ್ಲ ಮುಗಿಯುತ್ತದೆ. ಈ ರೀತಿ ಕೃತಕ ಆಸರೆಯಿಂದ ಎಷ್ಟು ದಿನ ಇಡಲು ಆಗುತ್ತದೆ? ಈ ರೀತಿ ಮೆಷಿನುಗಳನ್ನು ಅಳವಡಿಸಲು ತುಂಬಾ ಹಣ ಖರ್ಚಾಗುತ್ತದೆ, ಯೋಚಿಸು,' ಎನ್ನುತ್ತಾರೆ ಡಾಕ್ಟರ್ಸ್.
ದಿ ಗೋಟ್ ಲೈಫ್ (ಆಡು ಜೀವಿತಂ): ಸೌದಿಗೆ ಹೋಗಿ ನೋವು ಅನುಭವಿಸಿದ ಭಾರತೀಯರ ಕಥೆ!
ಅರವಿಂದನಿಗೆ ಆಘಾತವಾಗುತ್ತದೆ. ಅವನಿಗೆ ಮಧು ಇಲ್ಲದ ಜೀವನ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ತಾನು ಸಹಿ ಹಾಕಿದರೆ ತನ್ನ ಮಧ ಸತ್ತು ಹೋಗುತ್ತಾಳೆ. ಅಂದರೆ ತಾನೇ ಅವಳನ್ನು ಕೊಂದಂತೆ ಆಗುತ್ತದೆ. ಹೀಗೆ ಮಾಡಲು ಹೇಗೆ ಸಾಧ್ಯ? ಅವನು ಡಾಕ್ಟರನ್ನು ಕೇಳಿಕೊಳ್ಳುತ್ತಾನೆ 'ನಾನು ಹೇಗಾದರೂ ಹಣ ಹೊಂದಿಸಿ ತರುತ್ತೇನೆ. ಯಾವ ಮಷೀನೂ ತೆಗೆಯಬೇಡಿ. ನನ್ನ ಹೆಂಡತಿ ಖಂಡಿತಾ ಬದುಕುತ್ತಾಳೆ, ನಾನು ಫಾರ್ಮಿಗೆ ಸಹಿ ಹಾಕಲಾರೆ,' ಎಂದು ಅಂಗಲಾಚುತ್ತಾನೆ.
ಅರವಿಂದನ ಮಗನಿಗೆ ತಾಯಿ ಬದುಕುವುದಿಲ್ಲ ಎಂಬ ಅರಿವು ಇರುತ್ತದೆ. ಮಷೀನುಗಳಿಂದ ಮಾತ್ರ ತನ್ನ ತಾಯಿ ಬದುಕಿದ್ದಾಳೆ ಎಂದು ಗೊತ್ತು. ಆತ ಕೂಡ ತಂದೆಗೆ ಹೇಳುತ್ತಾನೆ, 'ಎಷ್ಟು ದಿನ ಹೀಗೆ ಇಟ್ಟರೂ ಅಮ್ಮ ಮರಳಿ ಬರುವುದಿಲ್ಲ. ಫಾರ್ಮಿಗೆ ಸೈನ್ ಮಾಡು. ಈ ಅಳವಡಿಸಿರುವ ಮಷೀನುಗಳಿಗೆ ಬಹಳ ಹಣ ಖರ್ಚಾಗುತ್ತದೆ. ಆಕೆ ನನಗೂ ತಾಯಿ ಆದರೂ ಹೇಳುತ್ತಿದ್ದೇನೆ,' ಎನ್ನುತ್ತಾನೆ. ಆದರೂ ಅರವಿಂದ ಒಪ್ಪುವುದೇ ಇಲ್ಲ. ಮಗ ಕೋಪ ಮಾಡಿಕೊಂಡು ಹೊರಟು ಹೋಗುತ್ತಾನೆ. ಅರವಿಂದ ಸೊಸೆ ಬಳಿ ಅಳುತ್ತಾನೆ. ಸೊಸೆ ಅರವಿಂದನ್ನು ಅರ್ಥ ಮಾಡಿಕೊಳ್ಳುತ್ತಾಳೆ. ತನ್ನ ಮಾವ ಹೇಳುವುದು ಸರಿ ಎನಿಸುತ್ತದೆ. ಮಾವನಿಗೆ ಸಮಾಧಾನ ಮಾಡುತ್ತಾಳೆ. ಅರವಿಂದ ಮಗಳ ಬಳಿ ಸಹಾಯ ಕೇಳುತ್ತಾನೆ. ಮಗಳು ಎರಡು ಲಕ್ಷ ಹಣ ಹಾಗೂ ತನ್ನದೊಂದು ಜೊತೆ ಬಳೆ ಕೊಡುತ್ತಾಳೆ. ಅಮ್ಮನ ಆರೋಗ್ಯಕ್ಕಿಂತ ಇದು ಈಗ ನನಗೆ ಹೆಚ್ಚಲ್ಲ ಹೋಗು. ಅಮ್ಮನನ್ನು ಬದುಕಿಸಿಕೋ ಎನ್ನುತ್ತಾಳೆ. ಆದರೆ ಆ ಹಣವೆಲ್ಲ ಬಹಳ ದಿನಕ್ಕೆ ಸಾಕಾಗದು. ಮಧುಗೆ ಅಳವಡಿಸಿರುವ ಜೀವರಕ್ಷಕ ಮಷೀನುಗಳು ಬಹಳ ದುಬಾರಿ. ಅದಕ್ಕೆ ಹಣ ಪದೇ ಪದೇ ಕಟ್ಟಬೇಕು. ಅರವಿಂದ ತನ್ನ ಮಡದಿ ಪೆಟ್ಟಿಗೆಯೆಲ್ಲಾ ಜಾಲಾಡುತ್ತಾನೆ. ಒಂದು ವಿಮಾ ಪಾಲಿಸಿ ಸಿಗುತ್ತದೆ. ಆದರೆ ಆ ವಿಮೆ ಮಧು ತೀರಿಕೊಂಡ ನಂತರ ನಗದು ವಾರಸುದಾರರಿಗೆ ಸೇರುತ್ತದೆ. ಇದನ್ನು ತಿಳಿದು ಅರವಿಂದನಿಗೆ ಆ ಆಸೆಯೂ ಕಮರಿ ಹೋಗುತ್ತದೆ. ಹೆಂಡತಿಯನ್ನು ಉಳಿಸಿಕೊಳ್ಳಲು ಅವನು ಪಡುವ ಪಾಡು ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಹಣ ಎಲ್ಲಿಯೂ ಸಿಗದೇ ಹತಾಶನಾಗುವ ಅರವಿಂದನಿಗೆ ತಾವು ವೃದ್ಧರು ಬದುಕಲು ಅನರ್ಹರು. ತಾವು ಸಮಾಜಕ್ಕೆ ಹೊರೆ ಎನಿಸಿ ಬಿಡುತ್ತದೆ.
ಎಲ್ಲಿಯೂ ಹಣ ಹುಟ್ಟದೆ ಅರವಿಂದ ಕೊನೆಗೆ ಮಧು ಬಹಳ ಅಕ್ಕರೆಯಿಂದ ಖರೀದಿಸಿದ ಮನೆ ಮಾರುವ ತೀರ್ಮಾನಕ್ಕೆ ಬರುತ್ತಾನೆ. ಅರವಿಂದನ ಸ್ನೇಹಿತ (ಅನು ಕಪೂರ್) ಅರವಿಂದನಿಗೆ ಧೈರ್ಯ ಸಾಂತ್ವನ ಹೇಳುತ್ತಾನೆ. ಹೆಜ್ಜೆ ಹೆಜ್ಜೆಗೂ ಅರವಿಂದನ ಜೊತೆಗಿದ್ದು, ಗೆಳೆತನದ ನಿಜವಾದ ಅರ್ಥ ಮಾಡಿಸುತ್ತಾನೆ. ಅನ್ನು ಕಪೂರ್ ಸಹಾಯ ಮಾಡಿದರೂ ಸಾಕಾಗುವುದಿಲ್ಲ. ಮನೆ ಮಾರಲು ಅರವಿಂದನ ಮಗ ಸುತರಾಂ ಒಪ್ಪುವುದಿಲ್ಲ. ಮನೆಯ ಕಾಗದ ಪತ್ರಗಳಿಗೆ ಸಹಿ ಹಾಕುವುದಿಲ್ಲ ಎಂದು ಬಿಡುತ್ತಾನೆ. ಹತಾಶನಾದ ಅರವಿಂದ ತನ್ನ ತಮ್ಮನ ಬಳಿ ಬರುತ್ತಾನೆ. ತಮ್ಮ ಪಿತ್ರಾರ್ಜಿತ ಮನೆಯನ್ನು ತಾನೊಬ್ಬನೇ ಉಪಯೋಗಿಸುತ್ತಿರುವ ತಮ್ಮನಿಂದ ಏನಾದರೂ ಸಹಾಯ ಆಗಬಹುದು ಎಂಬ ದೂರದ ಆಸೆ. ತಮ್ಮ ಒಂದು ಲಕ್ಷ ಕೊಟ್ಟು ಕೈ ತೊಳೆದು ಕೊಳ್ಳುತ್ತಾನೆ.
ಕ್ರಿಕೆಟ್ ಪ್ರೇಮದ ಕಹಿ ಸತ್ಯ: 'ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ' ಒಂದು ವಿಮರ್ಶೆ
ಅರವಿಂದ ತನ್ನ ಪ್ರೀತಿಯ ಮಡದಿಗಾಗಿ ಸಂಕಟ ಪಟ್ಟಾಗಲೆಲ್ಲ ಅನು ಕಪೂರ್ ಸಮಾಧಾನಿಸುವುದು, ಮನೆ ಮಾರಲು ಮಗನ ಒಪ್ಪಿಗೆ ಬೇಕೇ ಬೇಕು ಎಂದು ಬುದ್ಧಿ ಹೇಳುವುದು, ನಿನ್ನ ಜೊತೆ ನಾನಿದ್ದೇನೆ, ಎಂದು ಅರವಿಂದನಿಗೆ ಧೈರ್ಯ ಹೇಳುವುದು, ಇವೆಲ್ಲ ಅನುಕಪೂರ್ ಅಭಿನಯದಲ್ಲಿ ಬಹಳ ಸಹಜವಾಗಿ ಮೂಡಿ ಬಂದಿದೆ. ವಿಮಾ ಪಾಲಿಸಿ ಅಧಿಕಾರಿ ಬಳಿ ಅರವಿಂದ ಹಣ ಬೇಡುವುದು ಮನಸ್ಸಿಗೆ ತುಂಬಾ ಆಘಾತ ಎನಿಸುತ್ತದೆ. ಮುದುಕರಾದ ಮೇಲೆ ನಮ್ಮಿಂದ ಸಮಾಜಕ್ಕೆ ಯಾವುದೇ ಉಪಕಾರ ಇಲ್ಲ. ಹಾಗಾದರೆ ಮುದುಕರ ಜೀವಕ್ಕೆ ಬೆಲೆ ಇಲ್ಲವೇ ಎನಿಸಿ ಬಿಡುತ್ತದೆ. ಇದು ಬಹಳ ಯೋಚಿಸಬೇಕಾದ ವಿಷಯ.
ಬೇರೆ ದಾರಿಯಿಲ್ಲದೆ ಅರವಿಂದ ಮನೆ ಮಾರಿ ಬಿಡುತ್ತಾನೆ. ಮಗನ ಸಿಗ್ನೇಚರ್ ತಾನೇ ಫೋರ್ಜರಿ ಮಾಡುತ್ತಾನೆ. ಇದು ತಪ್ಪು ಎನಿಸಿದರೂ ಬೇರೆ ದಾರಿ ಇರುವುದಿಲ್ಲ, ಇದಕ್ಕಾಗಿ ಬಹಳ ಹಳಹಳಿಸುತ್ತಾನೆ. ಮನೆಯಲ್ಲಿ ವಿಮಾ ಪಾಲಿಸಿಗೆ ಹುಡುಕುವಾಗ ಒಂದು ಹಳೆಯ ಪತ್ರ ಸಿಗುತ್ತದೆ. ಅರವಿಂದನ ಸಹಪಾಟಿ ಅಂಬಿಕಾ ಬರೆದ ಪತ್ರ. ಬಹಳ ಹಳೆಯ ಪತ್ರ. ಆದರೆ ಅರವಿಂದ್ ಅದನ್ನು ಓದಿಯೇ ಇರುವುದಿಲ್ಲ. ಅದನ್ನು ಅನುಕಪೂರ್ ತಂದು ಕೈಯಲ್ಲಿಟ್ಟು ಈಗಲಾದರೂ ಓದು ಎಂದರೂ ಪತ್ನಿಯ ಚಿಂತೆಯಲ್ಲಿ ಆಗಲೂ ಓದುವುದಿಲ್ಲ. ಒಮ್ಮೆ ಅಚಾನಕ್ ಆಗಿ ಅಂಬಿಕಾ ಸಿಗುತ್ತಾಳೆ. ಅವಳಿಗೆ ಅರವಿಂದನನ್ನು ನೋಡಿ ಸಂತೋಷವಾಗುತ್ತದೆ. ಬಾ ಮನೆಗೆ ಹೋಗೋಣ ಎಂದು ಮನೆಗೆ ಕರೆದುಕೊಂಡು ಹೋಗುತ್ತಾಳೆ. ಅಂಬಿಕಾಳಿಗೆ ವಯಸ್ಸಾಗಿದ್ದರೂ ಅವಳು ಮಾಡಿಕೊಂಡ ಅಲಂಕಾರ ಅವಳನ್ನು ಇನ್ನೂ ಸುಂದರಿಯಾಗಿ ಕಾಣುವಂತೆ ಮಾಡಿರುತ್ತದೆ. ಅವಳು ಅರವಿಂದನಿಗೆ ಹೇಳುತ್ತಾಳೆ 'ನನ್ನ ನೋಡಿದರೆ ಆಶ್ಚರ್ಯವಾಗುತ್ತದೆಯೇ ಮೇಕಪ್ ಜಾಸ್ತಿ ಆಯಿತೇ? ಒಳಗಿನ ಸಂಕಟ ಮುಚ್ಚಿ ಕೊಳ್ಳಲು ಹೊರಗೆ ಹೀಗೆ ಅಲಂಕಾರದ ಕವಚ ತೊಡಬೇಕಾಗುತ್ತದೆ ಎನ್ನುತ್ತಾಳೆ. ಅವನ ಕಷ್ಟ ಸುಖ ಕೇಳುತ್ತಾಳೆ. ಮಧು ವಿಷಯ ತಿಳಿದು ವಿಷಾದಿಸುತ್ತಾಳೆ. ತನಗೂ ಗಂಡ ತೀರಿ ಹೋಗಿದ್ದು ಮಗ ವಿದೇಶದಲ್ಲಿ ಸೆಟಲ್ ಆಗಿರುವುದು, ಇಲ್ಲಿ ತಾನೊಬ್ಬಳೇ ಇರುವುದು ಎಲ್ಲ ಹೇಳುತ್ತಾಳೆ. ರಾತ್ರಿ ಡಿನ್ನರ್ ಮುಗಿದ ನಂತರ, 'ಈಗ ಮಲಗು ಏನಾದರೂ ಬೇಕಾದರೆ ಕೇಳು, ಗುಡ್ ನೈಟ್,' ಎಂದಾಗ ಅರವಿಂದ ಅವಳೆಡೆಗೆ ನೋಡಿ ಶಾಕ್ ಆಗುತ್ತಾನೆ. ಅದುವರೆಗೂ ಕೃತಕ ಅಲಂಕಾರದಲ್ಲಿ ಅಪೂರ್ವವಾಗಿ ಶೋಭಿಸುತ್ತಿದ್ದ ಅಂಬಿಕಾ ಈಗ ತಲೆ ಕೂದಲು ಇಲ್ಲದೆ ಬೋಳು ಬೋಳಾಗಿ ವಯಸ್ಸಾದಂತೆ ಕಾಣುತ್ತಾಳೆ. ಅವನ ಆಶ್ಚರ್ಯಚಿಕಿತ ಮುಖ 'ನೋಡಿ ಏಕೆ ಆಶ್ಚಯವಾಗಿದೆಯೇ? ಕಿಮೋ ಥೆರಪಿಯಲ್ಲಿ ಇದ್ದೇನೆ. ಹೀಗೆಲ್ಲ ಆಗುವುದು ಸಹಜ,' ಎಂದು ಕೂಲ್ ಆಗಿಯೇ ಹೇಳುತ್ತಾಳೆ. ಅರವಿಂದನಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.
ಐಸಿ 814 ದಿ ಕಂದಹಾರ್ ಹೈಜಾಕ್ ಕಥೆ ಹೇಳೋ ಚಿತ್ರವಿದು!
ಮಾರನೇ ದಿನ ಬೆಳಗ್ಗೆ ಅರವಿಂದ ಆಸ್ಪತ್ರೆಗೆ ಹೋಗುತ್ತಾನೆ. ಡಾಕ್ಟರನ್ನು ಮಾತನಾಡುತ್ತಾನೆ. ಇದ್ದ ಹಣವೆಲ್ಲ ಖರ್ಚಾಗಿದೆ. ಮಗ ಕೊಡುವುದಿಲ್ಲ. ಇನ್ನು ಯಾವ ಮೂಲದಿಂದಲೂ ಹಣ ಹುಟ್ಟುವುದಿಲ್ಲ. ಅದು ಅರವಿಂದನಿಗೂ ತಿಳಿದಿದೆ. ಅವನ ಮುಖ ಪೇಲವವಾಗಿದೆ, ಡಾಕ್ಟರ್ ಮತ್ತೆ ಹೇಳುತ್ತಾರೆ, ಜೀವರಕ್ಷಗಳನ್ನು ತೆಗೆಯಲೇಬೇಕು. ಎಷ್ಟು ದಿನ ಹೀಗೆ ಇಡಲು ಸಾಧ್ಯ? ಯೋಚನೆ ಮಾಡಿ ನಿರ್ಧಾರ ತಿಳಿಸು ಎಂದು. ಸೋತ ಮುಖದಿಂದ ಅರವಿಂದ ಹೆಂಡತಿಯ ಹಣೆಯ ಮೇಲೆ ತಲೆಯುಟ್ಟು ಅಳುತ್ತಾನೆ. 'ನಿನಗೆ ಸಾಯಲು ನನ್ನ ಅನುಮತಿ ಬೇಕಾಗಿದೆಯಾ? ನಿನಗೆ ನಾನು ಅನುಮತಿ ಕೊಡದ ವಿನಾ ನೀನು ಸಾಯುವುದಿಲ್ಲ. ಆದರೆ ನಾನು ಅನುಮತಿ ಕೊಡಲಾರೆ. ನೀನಿಲ್ಲದೆ ನಂಗೆ ಜೀವನವೇ ಇಲ್ಲ, ನಿನ್ನನ್ನು ಸಾಯಲು ಬಿಡಲಾರೆ. ಆದರೆ ನಾನೇನು ಮಾಡಲಿ? ನನ್ನ ಧನ ಮೂಲಗಳೆಲ್ಲ ಬರಿದಾಗಿದೆ ನಾನು ಅಸಹಾಯಕನಾಗಿದ್ದೇನೆ,' ಅರವಿಂದನಾಗಿ ಆ ಪಾತ್ರದಲ್ಲಿ ಅನುಪಮ್ ಖೇರ್ ಪರಕಾಯ ಪ್ರವೇಶ ಮಾಡಿದ್ದಾರೆ. ಅವರ ನಟನೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಹೊಡೆಯುವಂತೆ ಮಾಡುತ್ತದೆ. ಅರವಿಂದನ ಜೊತೆ ಚಿತ್ರ ನೋಡುವ ನಾವೂ ಬಿಕ್ಕಳಿಸುತ್ತೇವೆ.
ವಾರ್ಡಿನಿಂದ ಹೊರಬಂದ ಅರವಿಂದ ಆಸ್ಪತ್ರೆಯ ಕ್ಯಾಂಟೀನಿನಲ್ಲಿ ಕೂಡುತ್ತಾನೆ. ಮುಖ ಪೇಲವವಾಗಿ ಹತಾಶನಾಗಿರುತ್ತಾನೆ. ಈ ಕಡೆ ಅಂಬಿಕಾ ಆಸ್ಪತ್ರೆಗೆ ಬಂದು ಮಧು ಹೆಸರಲ್ಲಿ ಹತ್ತು ಲಕ್ಷ ರೂ ಡೆಪಾಸಿಟ್ ಮಾಡುತ್ತಾಳೆ. ಅವಳು ಮಧುಳನ್ನು ನೋಡಲು ವಾರ್ಡಿಗೆ ಬಂದಾಗ ಅವಳಿಗೊಂದು ಆಶ್ಚರ್ಯ ಕಾದಿರುತ್ತದೆ. ಅರವಿಂದನ ಸ್ನೇಹಿತ ಅನ್ನು ಕಪೂರ್ ಸಹ ಅರವಿಂದನನ್ನು ಹುಡುಕಿಕೊಂಡು ಆಸ್ಪತ್ರೆಗೆ ಬರುತ್ತಾನೆ. ಮುಂದೇನಾಯಿತು? ಮಧುಗೆ ಜ್ಞಾನ ಬರುತ್ತದೆಯೇ? ಅಂಬಿಕಾ ಕಂಡ ಆಶ್ಚರ್ಯ ಏನು? ಅರವಿಂದ ಹೆಂಡತಿಯನ್ನು ಮರಳಿ ಪಡೆಯುತ್ತಾನೆಯೇ? ಇವೆಲ್ಲ ನೀವು ಸಿನಿಮಾ ನೋಡಿಯೇ ತಿಳಿಯಿರಿ. ಕೊನೆಯಲ್ಲಿ ಒಂದು ಶಾಕಿಂಗ್ ತಿರುವು ನೀಡಿ, ನಿರ್ದೇಶಕರು ನಮ್ಮನ್ನು ಭ್ರಾಂತರಾಗಿಸುತ್ತಾರೆ.
ಝೀ 5 ರಲ್ಲಿ ಓಡುತ್ತಿರುವ ಸಿಗ್ನೇಚರ್ ಗಜೇಂದ್ರ ಅಹಿರೆ ನಿರ್ದೇಶನದ ಚಿತ್ರ. ಅರವಿಂದನಾಗಿ ಅನುಪಮ್ ಖೇರ್ ಅಮೋಘ ಅಭಿನಯ ನೀಡಿದ್ದಾರೆ. ಮಧು ಆಗಿ ನೀನಾ ಕುಲಕರ್ಣಿ, ಅಂಬಿಕಾ ಆಗಿ ಮಹಿಮಾ ಚೌಧರಿ, ಗೆಳೆಯನಾಗಿ ಅನ್ನು ಕಪೂರ್ ಚೆಂದಾಗಿ ಅಭಿನಯಿಸಿದ್ದಾರೆ.