ರಾಮನೇ ಮಾಂಸ ತಿಂದ, ಬ್ರಾಹ್ಮಣ ಹುಡುಗಿ ಚಿಕನ್​ ತಿಂದರೆ ತಪ್ಪೇನು? ಹಿಂದುತ್ವವನ್ನೇ ಪಣಕ್ಕಿಟ್ಟ ಅನ್ನಪೂರ್ಣಿ!

By Suvarna NewsFirst Published Jan 8, 2024, 1:29 PM IST
Highlights

ಕರ್ಮಠತನ ಮತ್ತು ಮತೀಯವಾದಿಗಳಿಗೆ ಪಾಠ ಕಲಿಸುವ ಚಿತ್ರ ಎಂದೇ ಬಿಂಬಿತವಾಗಿರುವ ಇತ್ತೀಚಿಗೆ ಬಿಡುಗಡೆಯಾದ ತಮಿಳಿನ ‘ಅನ್ನಪೂರ್ಣಿ’ ಚಿತ್ರ ವಿವಾದಕ್ಕೆ ಸಿಲುಕಿದೆ.

ಸಂಪ್ರದಾಯವಾದಿ ಮನಸ್ಥಿತಿಗಳ, ಜಾತೀಯತೆ, ಕರ್ಮಠ ಮಡಿವಂತಿಕೆಯೇ ನಿರ್ದೇಶಕ ನಿಖಿಲ್ ಕೃಷ್ಣರ ಟಾರ್ಗೆಟ್ ಆದಂತಿದೆ. ಹೆಣ್ಣು ಮಕ್ಕಳು, ತಮ್ಮ ಆಸೆ, ಕನಸು ಈಡೇರಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದನ್ನು ತೋರಿಸುವುದೇ ನಿರ್ದೇಶಕನ ಮುಖ್ಯ ಉದ್ದೇಶ. ಅದೇ ಕಾರಣಕ್ಕೆ, ಆತ ಹಿಂದುತ್ವವನ್ನೇ ಪಣಕ್ಕಿಡುತ್ತಾನೆ. ಪ್ರತಿ ಹಂತದಲ್ಲೂ ಹಿಂದುತ್ವ, ಬ್ರಾಹ್ಮಣತ್ವವನ್ನು ಗೇಲಿ, ಲೇವಡಿ ಮಾಡುತ್ತಾನೆ. ಬ್ರಾಹ್ಮಣರು, ಇನ್ನೂ ಕರ್ಮಠತನದಲ್ಲೇ ಇದ್ದಾರೆ, ಹೆಣ್ಣುಮಕ್ಕಳಿಗೆ ಸ್ವಾತಂತ್ರ್ವವನ್ನೇ ನೀಡಿಲ್ಲ ಎಂಬುದನ್ನು ಪ್ರತಿ ಸೀನ್​ನಲ್ಲೂ ತೋರಿಸಿದ್ದಾನೆ ನಿರ್ದೇಶಕ. ಆದರೆ, ಇದನ್ನೆಲ್ಲ ಮುಸ್ಲಿಂ ಹೀರೋ ಮೂಲಕ ಹೇಳಿಸುವುದು ನಿರ್ದೇಶಕನ ಮುಸ್ಲಿಂ ಪ್ರೀತಿಗೆ ಕನ್ನಡಿ ಹಿಡಿದಿದೆ.

ತಮಿಳುನಾಡಿನ ಶ್ರೀರಂಗಂನ ಸಂಪ್ರದಾಯಸ್ಥ ಅಯ್ಯಂಗಾರಿ ಕುಟುಂಬದ ಮಗಳು ಅನ್ನಪೂರ್ಣಿ. ತಲತಲಾಂತರದಿಂದ ಶ್ರೀರಂಗಂ ದೇವಸ್ಥಾನದಲ್ಲಿ ದೇವರ ನೈವೇದ್ಯ, ಪ್ರಸಾದ ತಯಾರಿಸುವ ಕುಟುಂಬ. ಅರ್ಚಕ ರಂಗರಾಜನ್​ (ನಮ್ಮ ಕನ್ನಡದ ಅಚ್ಯುತ್ ಕುಮಾರ್​) ಮುದ್ದಿನ ಮಗಳು ಅನ್ನಪೂರ್ಣಿಗೆ ಅಡುಗೆ ಮಾಡುವುದೆಂದರೆ ಅಚ್ಚುಮೆಚ್ಚು. ಆಕೆ ಕೈರುಚಿಗೆ ಸೋಲದವರಿಲ್ಲ. ಚಿಕ್ಕ ಹುಡುಗಿಯಾಗಿನಿಂದಲೇ ಅಡುಗೆ ಮನೆಯಲ್ಲೇ ಪ್ರಯೋಗಕ್ಕಿಳಿದು ಸಕ್ಸಸ್ ಆದವಳು. ಟಿವಿಯಲ್ಲೂ ಅಡುಗೆ ಕಾರ್ಯಕ್ರಮಗಳನ್ನೇ ನೋಡುತ್ತಾ ಬೆಳೆದ ಅನ್ನಪೂರ್ಣಿಗೆ ಅಪ್ಪನೇ ಬೆಂಬಲ. ದೇಶದ ಅತ್ಯುತ್ತಮ ಶೆಫ್​ (ಬಾಣಸಿಗ) ಆಗಬೇಕೆಂಬ ಕನಸು. ಅದಕ್ಕಾಗಿ ಅಡುಗೆ ಕೋರ್ಸ್ ಸೇರುವ ಆಸೆ. ಅಲ್ಲಿಂದ ಶುರುವಾಗುತ್ತದೆ ಅಡ್ಡಿ. ಸಂಪ್ರದಾಯಸ್ಥ ಕುಟುಂಬ ಅನ್ನಪೂರ್ಣಿಯ ಆಸೆಗೆ ತಣ್ಣೀರೆರಚುತ್ತದೆ. ದೇವರಿಗೆ ಪ್ರಸಾದ ಮಾಡುವ ಕುಟುಂಬದ ಮಗಳು, ಕಾಲೇಜಿನಲ್ಲಿ ಮಾಂಸಾಹಾರ ಕಲಿಯುತ್ತಾಳೆಂದರೆ, ಯಾರು ಒಪ್ಪಿಯಾರು? ಮಾಂಸ ತಿನ್ನಬೇಕಾಗುತ್ತೆ, ರುಚಿ ನೋಡಬೇಕಾಗುತ್ತೆ ಎಂಬ ಅಪ್ಪನ ಮಾತು ಸಂದಿಗ್ಧತೆಗೆ ಸಿಲುಕಿಸುತ್ತದೆ.  ಕುಟುಂಬವನ್ನು ವಿರೋಧಿಸಲಾರದೆ ಒದ್ದಾಡುವ ಅನ್ನಪೂರ್ಣಿಗೆ ಬೆಂಬಲವಾಗಿ ನಿಲ್ಲುವವನು ಸ್ನೇಹಿತ ಫರ್ಹಾನ್. ಎಂಬಿಎ ಮಾಡ್ತೀನಿ ಅಂತ ಸುಳ್ಳು ಹೇಳುವ ಅನ್ನಪೂರ್ಣಿ, ಅಡುಗೆ ಕಲಿಯುವ ಕೋರ್ಸ್​ ಸೇರುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ನೋಡಿ, ಬ್ರಾಹ್ಮಣ ಹುಡುಗಿ ಬದಲಾಗುವ ಪರಿ. ಶೆಫ್​ ಆಗಬೇಕೆಂಬ ಕನಸು ಈಡೇರಿಸಿಕೊಳ್ಳಲು ಬ್ರಾಹ್ಮಣ ಹೀರೋಯಿನ್‍‌ನಿಂದ ನಿರ್ದೆಶಕ ಏನೇನೆಲ್ಲ ಮಾಡಿಸುತ್ತಾನೆ ಗೊತ್ತಾ ?

ಶ್ರೀರಾಮನ ಅವಹೇಳನ, ಲವ್​ ಜಿಹಾದ್​ಗೆ ಪ್ರೇರಣೆ: ಅನ್ನಪೂರ್ಣಿ, ನಯನತಾರಾ ವಿರುದ್ಧ ಎಫ್​ಐಆರ್ ದಾಖಲು

1. ಕಾಲೇಜಿನಲ್ಲಿ ಕೋಳಿ ಕತ್ತರಿಸುವ ದೃಶ್ಯ. ಕೋಳಿ ಕಟ್ ಮಾಡಲು ಹಿಂಜರಿಯುತ್ತಾಳೆ. ನಾನು ವೆಜಿಟೇರಿಯನ್​ ಎಂದ ಅನ್ನಪೂರ್ಣಿಗೆ, 'ನೀನು ಬಂದಿರೋದು ಅಡುಗೆ ಕಲಿಯೋಕೆ, ಕೋಳಿ ಕಟ್ ಮಾಡೋಕೆ ಆಗಲ್ಲ ಅಂದ್ರೆ ಬೇರೆ ಕೋರ್ಸ್ ಸೇರಿಕೋ,' ಎಂದು ಮುಲಾಜಿಲ್ಲದೇ ಹೇಳುತ್ತಾನೆ.  ಅಂದ್ರೆ, ಒಳ್ಳೆ ಶೆಫ್​ ಆಗಬೇಕಂದ್ರೆ ಮಾಂಸಾಹಾರಿ ಆಗಲೇ ಬೇಕು ಅನ್ನೋ ಠರಾವು ಹೊಡೆಸಿದ್ದಾರೆ.
2. ಶೆಫ್ ಆಗುವ ಆಸೆಯಿಂದ ನಾನ್​ವೆಜ್​ ಅಡುಗೆ ಮಾಡುವುದನ್ನೂ ಅನ್ನಪೂರ್ಣಿ ಕಲಿಯುತ್ತಾಳೆ. ಎಷ್ಟೇ ಪ್ರಯತ್ನ ಪಟ್ಟರೂ ಚಿಕನ್​ ಗ್ರೇವಿ ರುಚಿಯೇ ಇಲ್ಲ. ಆಗ ನಾಯಕ ಇರ್ಫಾನ್ ಹೇಳುವುದು, 'ಅಡುಗೆಯನ್ನು ಆಸ್ವಾದಿಸಿದರಷ್ಟೇ ರುಚಿಯಾಗುವುದು'.  ಈ ಮೂಲಕ ಹೀರೋಯಿನ್​ ನಾನ್​ವೆಜ್​ ತಿನ್ನಲೇ ಬೇಕಾದ ಅನಿವಾರ್ಯತೆ ಸೃಷ್ಟಿಸಿದ್ದಾನೆ ನಿರ್ದೇಶಕ.
3. ಹೀರೋ ಮಾತಿಗೆ ತಲೆಯಾಡಿಸುವ ನಾಯಕಿ, ಮಾಂಸಾಹಾರಿಯಾಗಿ ಬದಲಾಗಲು ನಿರ್ಧರಿಸುತ್ತಾಳೆ. ಹೀರೋ ಕೊಡಿಸಿದ ಆಮ್ಲೆಟ್​ ಅನ್ನು, ಶ್ರೀರಂಗಂ ದೇವಸ್ಥಾನದ ಅರ್ಚಕರ ಮಗಳು, ಸ್ವಲ್ಪವೂ ವಾಕರಿಸಿಕೊಳ್ಳದೇ ತಿಂದು ಚಪ್ಪರಿಸುತ್ತಾಳೆ. ಬ್ರಾಹ್ಮಣಳಾದರೂ, ತನ್ನ ಕನಸು ಈಡೇರಿಸಿಕೊಳ್ಳಲು ಮಾಂಸ ತಿನ್ನಲೇ ಬೇಕು ಎಂಬ ಹಠಕ್ಕೆ ಬಿದ್ದ ನಿರ್ದೇಶಕ, ವಾಕರಿಕೆ, ಹೀಕರಿಗೆಗೆ ಅವಕಾಶವನ್ನೇ ನೀಡಿಲ್ಲ.
4. ಎರಡನೇ ಸೀನ್​ನಲ್ಲಿ ಹೀರೋ ಮನೆಯಲ್ಲಿ ತಯಾರಿಸಿದ ಚಿಕನ್ ಬಿರಿಯಾನಿಯನ್ನು ಅನ್ನಪೂರ್ಣಿ ಹೊಟ್ಟೆ ತುಂಬಾ ತಿನ್ನುತ್ತಾಳೆ. ಊಟಕ್ಕೂ ಮುನ್ನ ಅನ್ನಪೂರ್ಣಿಯಿಂದ ನಮಾಜ್ ಮಾಡಿಸಿದ್ದು ಯಾಕೆ ಗೊತ್ತಾಗೋಲ್ಲ. 
5. ಮೂರನೇ ಸೀನ್​ನಲ್ಲಿ ತಾನೇ ರೆಡಿ ಮಾಡಿದ ಚಿಕನ್​ ಕಬಾಬ್​ ತಿಂದು ರುಚಿ ನೋಡಿ ಖುಷಿಪಡುತ್ತಾಳೆ. 
6. ಮಾಂಸಾಹಾರ ತಿನ್ನಲು ಹಿಂಜರಿಯುವ ಪೂರ್ಣಿಗೆ ಗೆಳೆಯ ಫರ್ಹಾನ್‌ ಮೂಲಕ ರಾಮನ ಉದಾಹರಣೆ ಕೊಡಿಸಿ ಆಕೆಯ ಹಿಂಜರಿಕೆಗಳನ್ನು ಹೊಡೆದು ಓಡಿಸಿಬಿಡುತ್ತದೆ.
'ವನವಾಸದಲ್ಲಿದ್ದ ರಾಮನೇ ಮಾಂಸಾಹಾರ ತಿನ್ನುತ್ತಿದ್ದ. ಹಸಿವಾದಾಗ ನಾಲ್ಕು ಪ್ರಾಣಿಗಳನ್ನು ಬೇಟೆಯಾಡಿ ರಾಮ, ಲಕ್ಷ್ಮಣರು ಸೀತೆಯೊಂದಿಗೆ ಊಟ ಮಾಡಿದ್ರು,' ಎನ್ನುವ ಫರ್ಹಾನ್​, ಇದಕ್ಕಾಗಿ ರಾಮಾಯಣದ ಶ್ಲೋಕ ಉಲ್ಲೇಖಿಸುತ್ತಾನೆ. 
ಪ್ರತಿ ಸೀನ್​ನಲ್ಲೂ ಹಿಂದುತ್ವವನ್ನು ಪ್ರಶ್ನಿಸುವ, ಪರೀಕ್ಷಿಸುವ  ನಿರ್ದೇಶಕ ನೀಲೇಶ್ ಕೃಷ್ಣ, ಒಂದೇ ಒಂದು ದೃಶ್ಯದಲ್ಲೂ ಹೀರೋ ಧರ್ಮವಾದ ಇಸ್ಲಾಂ ಬಗ್ಗೆ ಮಾತನಾಡುವ ಧೈರ್ಯ ಮಾತ್ರ ತೋರುವುದಿಲ್ಲ.
7 'ನಮಾಜ್ ಮಾಡಿದ್ದು, ಬಿರಿಯಾನಿ ಮಾಡಲು ಹೇಳಿಕೊಟ್ಟವರ ನಂಬಿಕೆ. ಬಿರಿಯಾನಿಯ ಟೇಸ್ಟ್‌, ನಮಾಜ್ ಮಾಡೋದ್ರಿಂದ ಬರುತ್ತೆ. ಬಿರಿಯಾನಿ ಅಂದ್ರೆ ಜಸ್ಟ್ ಎಮೋಷನ್​ ಅಷ್ಟೇ,' ಎಂದು ಅನ್ನಪೂರ್ಣಿ ಮೂಲಕ ಹೇಳಿಸುತ್ತಾನೆ. ಹೀರೋ ಫರ್ಹಾನ್​, ನಾಯಕಿ ಮಾತಿಗೆ ಹೆಮ್ಮೆಯಿಂದ ತಲೆದೂಗುತ್ತಾನೆ.
- ಬ್ರಾಹ್ಮಣ ಹುಡುಗಿಗೆ ಬಿರಿಯಾನಿ ಮಾಡಿಸಿದ್ದನ್ನು ಕಲಿಸಿದ ಸಾರ್ಥಕತೆ ತೋರಿಸುವ ನಿರ್ದೇಶಕ, ಬ್ರಾಹ್ಮಣರ ಆಹಾರ ಸಂಸ್ಕೃತಿಯೂ ಎಮೋಷನ್​ ಅನ್ನೋದನ್ನು ಮರೆತುಬಿಟ್ಟಿದ್ದಾನೆ. 
ಬಿರಿಯಾನಿ ಮಾಡೋದನ್ನು ಹೇಳಿಕೊಟ್ಟವರ ಭಾವನೆಗೆ ಅನ್ನಪೂರ್ಣಿ ತಲೆಬಾಗಿ ನಮಾಜ್ ಮಾಡುವಂತೆ ತೋರಿಸುತ್ತಾನೆ. ಆದರೆ, ಜೀವನವಿಡೀ ಸಾಕಿದ ಅಪ್ಪ-ಅಮ್ಮನ ಭಾವನೆಗೆ ಬೆಲೆಯೇ ಇಲ್ಲ. ನಾಯಕಿ ತನ್ನ ಪರಂಪರೆಯನ್ನು ತ್ಯಜಿಸುವಂತೆ ತೋರಿಸಿದ್ದು,  ಬ್ರಾಹ್ಮಣರ ಭಾವನೆಗೆ ಧಕ್ಕೆ ತಂದಂತಲ್ಲವೇ ? ಇಲ್ಲಿ ಸೌಹಾರ್ದತೆ ಎಲ್ಲಿದೆ ?
8. ಅನ್ನಪೂರ್ಣಿಯನ್ನು ಫರ್ಹಾನ್ ಪ್ರೀತಿಸುವುದನ್ನು ನೇರವಾಗಿ ತೋರಿಸುವ ನಿರ್ದೇಶಕ, ಲವ್​ ಜಿಹಾದ್​ ಅಪಾಯ ಅರಿತು, ಒಂದು ಹೆಜ್ಜೆ ಹಿಂದಿಟ್ಟಿದ್ದಾನೆ.  
'ಅಬ್ಬಾ, ನಾನೆಲ್ಲಿ ವೆಜಿಟೇರಿಯನ್ ಆಗಬೇಕೋ ಅನ್ನೋ ಭಯ ಇತ್ತು. ಸದ್ಯ ನೀನು ಬಿರಿಯಾನಿ ಕಲಿತೆ' ಎನ್ನುವ ನಾಯಕನಿಗೆ, 'ಬಿರಿಯಾನಿ ಮಾಡೋ ಹುಡುಗಿಯನ್ನೇ ಹುಡುಕುತ್ತೀನಿ,' ಎಂಬ ಅನ್ನಪೂರ್ಣಿ​, ಕೊನೆಗೆ 'ನಾನು ಫರ್ಹಾನ್​​​ ಮದುವೆಯಾಗಬೇಕೆಂದಿಲ್ಲ, ಆದರೆ ಫರ್ಹಾನ್​ನಂಥ ಹುಡುಗ ಬೇಕು,' ಎಂದು ಹೇಳಿಸಿ ನಿರ್ದೇಶಕ ಬಚಾವ್ ಆಗಿದ್ದಾನೆ. 

Nayanthara: ನಯನತಾರಾ ಮೆಚ್ಚಿಕೊಂಡ ಕನ್ನಡದ ನಟ ಯಾರು ಗೊತ್ತಾ?

9. ಹಿಂದೂ ಸಂಪ್ರದಾಯ, ಬ್ರಾಹ್ಮಣರ ಸಂಪ್ರದಾಯವನ್ನು ವಿರೋಧಿಸುವುದೇ ಕ್ರಾಂತಿಕಾರಿ ಅಂತ ತೋರಿಸುವುದೇ ನಿರ್ದೇಶಕನ ಮೊದಲ ಮತ್ತು ಕೊನೆಯ ಆದ್ಯತೆ. ಅದಕ್ಕಾಗಿ, ಬ್ರಾಹ್ಮಣರ ಕುಟುಂಬ ಮಡಿವಂತಿಕೆಯನ್ನು ಪ್ರತಿ ಸೀನ್​ನಲ್ಲೂ ತೋರಿಸಿ, ಗೇಲಿ ಮಾಡುತ್ತಾನೆ. ಕೊನೆಯದಾಗಿ, ಹೆಣ್ಣು ಮಕ್ಕಳು ತಮ್ಮ ಕನಸು ಸಾಕಾರಕ್ಕಾಗಿ, ಸಂಪ್ರದಾಯ, ಕರ್ಮಠತನ್ನೇ ಧಿಕ್ಕರಿಸಬೇಕು ಎಂಬ ಸಂದೇಶವನ್ನು ಮುಸ್ಲಿಂ ಪಾತ್ರದ ಮೂಲಕ ಹೇಳಿಸಿದ್ದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಂತಾಗಿದೆ. ಬ್ರಾಹ್ಮಣರ ಹುಡುಗಿ ಮಾಂಸಾಹಾರ ಅಡುಗೆ ಕಲಿತರೇ ತಪ್ಪೇನು? ತಿಂದರೆ ತಪ್ಪೇನು? ಅನ್ನೋ ವಿತಂಡವಾದ ನಿರ್ದೇಶಕನ ಕೋಮುವಾದವಲ್ಲದೇ ಮತ್ತೇನು?

click me!