ಮಹಾರಾಜ ರಿವ್ಯೂ, ಆಧ್ಯಾತ್ಮಿಕ ಗುರು ಜೆಜೆಯದ್ದೇ ಆಳ್ವಿಕೆ: ನಂಬಿಕೆ ವಿರುದ್ಧ ಪತ್ರಕರ್ತನ ಹೋರಾಟ!

1862ರ ಮುಂಬೈನಲ್ಲಿ ವೈಷ್ಣವ ಪಂಥದ ಆಧ್ಯಾತ್ಮಿಕ ಗುರುವಿನ ಶೋಷಣೆ ಮತ್ತು ಅದರ ವಿರುದ್ಧ ಹೋರಾಡುವ ಯುವ ಪತ್ರಕರ್ತ ಆಮೀರ್ ಖಾನ್ ಮಗ ಜುನೈದ್ ಖಾನ್ ಅಭಿನಯನದ ಕಥೆ ಇದು. ಜೆಜೆ ಎಂಬ ಈ ಗುರುವಿನ ಮುಖವಾಡವನ್ನು ಕಳಚಲು ಕರ್ಸನ್ ದಾಸ್ ಹೇಗೆ ಹೋರಾಡುತ್ತಾನೆ ಎಂಬುದೇ ಚಿತ್ರದ ಕಥಾವಸ್ತು.


- ವೀಣಾ ರಾವ್, ಕನ್ನಡಪ್ರಭ

1862 ರಲ್ಲಿ ನಡೆದಿದೆ ಎಂಬ ನೈಜ ಘಟನೆಯನ್ನಾಧರಿಸಿ ನಿರ್ಮಿಸಿದ ಸಿನಿಮಾ ಮಹಾರಾಜ್. ಆಗ ಮಹಾರಾಷ್ಟ್ರ ಹಾಗೂ ಗುಜರಾತ್ ಅಖಂಡ ರಾಜ್ಯವಾಗಿತ್ತು. ಏಳು ದ್ವೀಪಗಳು ಸೇರಿ ಮುಂಬೈ ನಗರವಾಯಿತು ಎಂದು ಚಿತ್ರದಲ್ಲಿ ಹೇಳುತ್ತಾರೆ. ಗುಜರಾತಿನ ಒಬ್ಬ ಆಧ್ಯಾತ್ಮಿಕ ಗುರು, ಪೀಠದ ಮುಖ್ಯಸ್ಥ ಈ ಮಹಾರಾಜ. ವೈಷ್ಣವ ಪಂಥದ ಅನುಯಾಯಿಗಳು ಈತನ ಶಿಷ್ಯರು. ಈತನು ಹೇಳಿದ್ದನ್ನೆಲ್ಲ ಗಾಢವಾಗಿ ನಂಬುವ ಈ ಜನರಿಗೆ ತಮ್ಮ ಶೋಷಣೆಯಾಗುತ್ತಿದೆಯೆಂದು ಗೊತ್ತೇ ಆಗದಷ್ಟು ಭಕ್ತಿಪರವಶತೆ ಹಾಗೂ ಮಹಾರಾಜನ ಬಗ್ಗೆಗಿದ್ದ ಗೌರವಾದರ. ಈ ಮಹಾರಾಜನ ಮಠದಲ್ಲಿ ಶ್ರೀಕೃಷ್ಣನನ್ನು ಎಲ್ಲರೂ ಪೂಜಿಸುತ್ತಾರೆ. ಮಠದ ಒಳಗೆ ಹೋಗಿ ದೇವರ ದರ್ಶನ ಮಾಡಿ ಮಹಾರಾಜನ ಆಶಿರ್ವಾದ ಪಡೆಯದೇ, ಆ ದಿನದ ಭೋಜನವನ್ನೂ ಸ್ವೀಕರಿಸದ ಕರ್ಮಠ ಭಕ್ತರಿರುತ್ತಾರೆ. ಪರಂಪರಾಗತವಾದ ಮಠದಲ್ಲಿ ನಡೆಯುವ ಅನಾಚಾರದ ಬಗ್ಗೆ ಮಾತ್ರ ಯಾರೂ ಸೊಲ್ಲೆತ್ತುವುದಿಲ್ಲ. ಅಸಲಿಗೆ ಅದು ಅನಾಚಾರ ಎಂದೇ ಭಕ್ತರಿಗೆ ಅರಿವಾಗಿರುವುದಿಲ್ಲ. ಕರ್ಸನ್ ದಾಸ್ ಎಂಬ ಯುವ ಪತ್ರಕರ್ತ ಬಂದು ಎಚ್ಚರಿಸುವವರೆಗೂ ಜನರು ಮಹಾರಾಜನನ್ನು ಪ್ರತ್ಯಕ್ಷ ದೇವರು, ತಮ್ಮನ್ನು ಪಾಲಿಸುವ ರಕ್ಷಕ ಎಂದೇ ತಿಳಿದಿರುತ್ತಾರೆ. ಮಹಾರಾಜ ಹೇಳಿದ ಮಾತೇ ವೇದವಾಕ್ಯ. ಮಹಾರಾಜನ ನಿರ್ಧಾರದ ವಿರುದ್ಧ ಯಾರೂ ದೂಸರಾ ಮಾತಾಡುವುದಿಲ್ಲ. ಅವನೇ ಸುಪ್ರೀಂ ಕಮಾಂಡರ್.

ಸಿದ್ದಾರ್ಥ ಮಲ್ಹೋತ್ರ ನಿರ್ದೇಶನದ ಮಹಾರಾಜ್ ಚಿತ್ರ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಓಡುತ್ತಿದೆ. ಹಿಂದೂ ಸಂಪ್ರದಾಯವಾದಿಗಳು ಈ ಚಿತ್ರ ಬಿಡುಗಡೆಯಾಗಬಾರದೆಂದು ತಡೆಯಾಜ್ಞೆ ತಂದಿದ್ದರು. ನಂತರ ಈ ಪ್ರಕರಣ ಬಗೆ ಹರಿದು ಅಂತಿಮವಾಗಿ ಜೂನ್ 21, 2024 ರಂದು ಒಟಿಟಿಯಲ್ಲಿ ಬಿಡುಗಡೆಯಾಯಿತು.

Latest Videos

ಅಮೀರ್ ಖಾನ್ ಮಗ ಜುನೈದ್ ಖಾನ್‌ನ ಮೊದಲ ಚಿತ್ರ ಇದು ಎಂಬ ಹೆಗ್ಗಳಿಕೆಯ ಜೊತೆಗೆ ವೆಬ್ ಸೀರೀಸ್ ನಲ್ಲಿ ಅಭಿನಯಿಸಿರುವ ಪ್ರಸಿದ್ಧ ನಟ ಜಯದೀಪ್ ಅಹ್ಲಾವತ್ ನ ಅಮೋಘ ಅಭಿನಯ ಇದೆ. ಜುನೈದ್ ಖಾನ್ ಸಹ ತನ್ನ ಮೊದಲ ಚಿತ್ರದಲ್ಲಿ ತನ್ಮಯನಾಗಿ ಅಭಿನಯಿಸಿದ್ದಾನೆ. ತಾನು ನಟನ ಮಗನಷ್ಟೇ ಅಲ್ಲ ತಾನೂ ಒಬ್ಬ ಗಟ್ಟಿ ಪ್ರತಿಭೆಯ ನಟ ಎಂದು ಸಾಬೀತು ಮಾಡಿದ್ದಾನೆ.

ಶರ್ಮಾಜಿಕೀ ಬೇಟಿ: ಮಹಿಳಾ ಕೇಂದ್ರಿತ ಚಿತ್ರದ ಹೆಸರು ಮಾತ್ರ ಹೀಗೆ!

ಕರ್ಸನ್ (ಜುನೈದ್ ಖಾನ್) ಎಂಬ ಆಧುನಿಕ ಮನೋಭಾವದ ಯುವಕ ತನ್ನ ತಾಯಿ ತೀರಿಹೋದ ಮೇಲೆ ಮಾವ, ಅತ್ತೆಯೊಡನೆ ಮುಂಬಯಿಯಲ್ಲಿ ನೆಲೆಸಿರುತ್ತಾನೆ. ಇದು 1862ರಲ್ಲಿ ನಡೆದ ಕಥೆ. ಅವನಿಗೆ ಕಿಶೋರಿ ಎಂಬ ಸುಂದರವಾದ ಹುಡುಗಿಯೊಂದಿಗೆ ಮದುವೆಯೂ ನಿಷ್ಕರ್ಷೆಯಾಗಿರುತ್ತದೆ. ಕಿಶೋರಿ ಶಾಲೆಯ ಮೆಟ್ಟಿಲು ಹತ್ತದ ಮುಗ್ಧ ಸುಂದರಿ. ಕರ್ಸನ್ ಅವಳಿಗೆ ಓದಲು ಬರೆಯಲು ಕಲಿ ಎಂದಿದ್ದರಿಂದ ಅವಳು ಕಷ್ಟಪಟ್ಟು ಓದು ಬರಹ ಕಲಿಯುತ್ತಿರುತ್ತಾಳೆ. ಆ ಊರಿನಲ್ಲಿ ಇರುವವರೆಲ್ಲ ವೈಷ್ಣವ ಭಕ್ತರು. ಗೋವರ್ಧನ ಗಿರಿಧಾರಿಯಾದ ಶ್ರೀಕೃಷ್ಣ ಆರಾಧಕರು. ಆ ಬೃಹತ್ ದೇವಾಲಯದಲ್ಲಿ ಜೆಜೆ ಅಂದರೆ ಜದುನಾಥ ಬ್ರಿಜ್ ರತನ್ ಎಂಬ ಆಧ್ಯಾತ್ಮಿಕ ಗುರು ಆ ದೊಡ್ಡ ಹವೇಲಿಯಲ್ಲಿ ನೆಲೆಸಿರುತ್ತಾನೆ. ಅವನು ಹೇಳಿದ ಮಾತು ಜನರಿಗೆ ವೇದವಾಕ್ಯ. ಜನಜೀವನ ಪೂರ್ತಿ ಜೆಜೆಯ  ಹಿಡಿತದಲ್ಲಿ ಇರುತ್ತದೆ. ಚರಣಸೇವಾ ಎಂಬ ಸೇವಾ ಪದ್ಧತಿಯಂತೆ ಜೆಜೆ ಯಾವ ಕನ್ಯೆಯ ಅಥವಾ ಮದುವೆಯಾದ ಗೃಹಿಣಿ ಮೇಲೆ ಕಣ್ಣು ಹಾಕಿದರೂ ಅವಳು ಆ ಹವೇಲಿಗೆ ಹೋಗಿ ಜೆಜೆಯ ದೈಹಿಕ ತೃಷೆಯನ್ನು ತೀರಿಸಬೇಕು. ಇದೊಂದು ರಿವಾಜಿನಂತೆ ಸಂಪ್ರದಾಯದಂತೆ ನಡೆದು ಬರುತ್ತಿರುತ್ತದೆ. ಇದು ತಪ್ಪೆಂದು ಆ ಊರಿನವರಿಗೆ ಎಂದೂ  ಅನಿಸುವುದಿಲ್ಲ. ತಮ್ಮ ಮನೆಯ ಹೆಣ್ಣು ಮಕ್ಕಳು ಜೆಜೆಯ ದೃಷ್ಟಿಗೆ ಬಿದ್ದು ಅವರ ಚರಣ ಸೇವೆ ಮಾಡುವುದೇ ಮಹಾಭಾಗ್ಯ ಎಂಬಂತೆ ನಡೆದುಕೊಳ್ಳುತ್ತಿರುತ್ತಾರೆ. ಜೆಜೆ ಆಧ್ಯಾತ್ಮ ಗುರುವಿನಂತೆ ಮುಖವಾಡ ಹಾಕಿ ಈ ಸೇವೆ ತನ್ನ ಹಕ್ಕು ಎಂಬಂತೆ ಪಡೆದು ಕೊಂಡು ಎಂಜಾಯ್ ಮಾಡುತ್ತಿರುತ್ತಾನೆ.  ಇದಕ್ಕೆ ಕರ್ಸನ್ ದಾಸ್‌ನಿಂದ ಧಕ್ಕೆ ಬರುತ್ತದೆ. ಕರ್ಸನ್ ದಾಸನ ಭಾವಿ ಪತ್ನಿ ಕಿಶೋರಿ ಹೋಳಿ ಹಬ್ಬದ ದಿನ ಹವೇಲಿಯಲ್ಲಿ ಎಲ್ಲರೂ ಕೂಡಿ ಹಬ್ಬವನ್ನಾಚರಿಸಿ, ಕುಣಿದು, ಕುಪ್ಪಳಿಸುವಾಗ ಜೆಜೆಯ ಕಣ್ಣಿಗೆ ಬೀಳುತ್ತಾಳೆ. ಜೆಜೆ ಎಂದರೆ ನಡೆದಾಡುವ ದೇವರೆಂದೇ ನಂಬಿರುವ ಅವಳಿಗೆ ಜೆಜೆ ತನ್ನನ್ನು ಚರಣಸೇವೆಗೆ ಆರಿಸಿದ್ದಾರೆ ಎಂದು ತಿಳಿದಾಗ ಖುಷಿಯಾಗುತ್ತದೆ. ಯಾವುದೇ ಅಳುಕಿಲ್ಲದೇ ಅವಳು ಜೆಜೆಯ ಏಕಾಂತ ಗೃಹಕ್ಕೆ ಹೋಗುತ್ತಾಳೆ. ಅಲ್ಲಿ ಜೆಜೆಯೊಡನೆ ಅವನ ಸೇವೆಯಲ್ಲಿ ಭಾಗಿಯಾಗುತ್ತಾಳೆ. ಇದನ್ನು ಕರ್ಸನ್ ದಾಸ್ ನೋಡಿ ಬಿಡುತ್ತಾನೆ. ಅವನಿಗೂ  ಜೆಜೆಗೂ ಬಹಳ ವಾದ ವಿವಾದ ಆಗುತ್ತದೆ. ಜೆಜೆ ತಾನೇ ದೇವರು ತನ್ನ ಸೇವೆ ಮಾಡುವುದೇ ಪುಣ್ಯ ಎಂಬಂತೆ ಮಾತನಾಡುತ್ತಾನೆ. ಕಿಶೋರಿಯೂ ಜೆಜೆಯ ಸೇವೆ ಮಾಡುವುದೇ ಮಹಾಭಾಗ್ಯ ಅದಕ್ಕೆ ಅಡ್ಡಿ ಮಾಡಿ ಪಾಪಿಯಾಗಬೇಡ ಎಂದು ಕರ್ಸನ್‌ಗೆ ಹೇಳುತ್ತಾಳೆ.

ಕರ್ಸನ್ ಹತಾಶನಾಗುತ್ತಾನೆ. ಕಿಶೊರಿಯ ಮನಸ್ಸು ತಿದ್ದಲು ಆಗದೆ ಅವಳನ್ನು ಬೈದು ಅವಳ ಜೊತೆ ಆಗಿದ್ದ ನಿಶ್ಚಿತಾರ್ಥವನ್ನು ಮುರಿದು ಹಾಕುತ್ತಾನೆ. ಇದರಿಂದ ಕೃದ್ಧನಾದ ಅವನ ಸೋದರಮಾವ ಕರ್ಸನ್‌ನನ್ನು ಮನೆಯಿಂದ ಹೊರ ಹಾಕುತ್ತಾನೆ. ಅವರಿಗ್ಯಾರಿಗೂ ಜೆಜೆ ಮಾಡುವುದು ತಪ್ಪೆನಿಸುವುದಿಲ್ಲ. ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಜೆಜೆ ಚರಣಸೇವೆಗೆ ಕರೆಸಿಕೊಳ್ಳುವುದೇ ತಮ್ಮ ಭಾಗ್ಯ ಎಂಬಂತೆ ವರ್ತಿಸುತ್ತಾರೆ.

ವಿಚ್ಛೇದನ ಬಯಸಿದ್ದ ಜೋಡಿ ಮತ್ತೆ ಒಂದಾದಾಗ: ದೋ ಔರ್ ದೋ ಪ್ಯಾರ್ ರಿವ್ಯೂ

ಕಿಶೋರಿ ತನ್ನ ನಿಶ್ಚಿತಾರ್ಥ ಮುರಿಯಿತೆಂದು ಜೆಜೆಯ ಬಳಿ ಹೇಳಿಕೊಂಡು ಅಳುತ್ತಾಳೆ. ಜೆಜೆ ಅವಳನ್ನು ಸಮಾಧಾನ ಪಡಿಸಿ ತನ್ನ ಪ್ರಿಯತಮೆಯಾಗಿ ಇಟ್ಟು ಕೊಳ್ಳುತ್ತಾನೆ. ಹಾಗೆ ಸಂತೋಷದಿಂದಲೇ ಜೆಜೆ ಬಳಿ ಇರುವ ಕಿಶೋರಿಗೆ ಜೆಜೆ ತನ್ನ ತಂಗಿಯ ಮೇಲೂ ಕಣ್ಣು ಹಾಕಿದಾಗ ವಸ್ತುಸ್ಥಿತಿ ಅರಿವಾಗುತ್ತದೆ. ಅವಳ ಒಳಗಣ್ಣು ತೆರೆದು ಜೆಜೆಯ ಬಗ್ಗೆ ಇದ್ದ ಮೋಹ-ಭಕ್ತಿ ಕಳಚಿ ಬೀಳುತ್ತದೆ. ಭಕ್ತಿಯ ಹೆಸರಿನಲ್ಲಿ ಜೆಜೆ ತಮಗೆ ಮಾಡುತ್ತಿರುವ ಮೋಸದ ಅರಿವಾಗುತ್ತದೆ. ಜೆಜೆಯೊಂದಿಗೆ ಜಗಳವಾಡುತ್ತಾಳೆ. ಜೆಜೆ ಏನೂ ಬದಲಾಗುವುದಿಲ್ಲ. ಹತಾಶಳಾದ ಕಿಶೋರಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಈಗ ಕಿಶೋರಿಯ ತಂಗಿಗೂ ಜೆಜೆಯ ದುರುಳತನದ ಅರಿವಾಗುತ್ತದೆ. ಅವಳು ಕರ್ಸನ್ ನ ಬಳಿ ಹೋಗಿ ಜೆಜೆಯ ವಿರುದ್ಧ ಸೇಡು ತೀರಿಸಿ ಕೊಳ್ಳಲು ಹೇಳುತ್ತಾಳೆ. ಕಿಶೋರಿಯ ಸಾವಿಗೆ ಜೆಜೆಯೇ ಕಾರಣ ಎಂದು ತಿಳಿದಿದ್ದ ಕರ್ಸನ್ ಜೆಜೆ ಮುಖವಾಡವನ್ನು ಕಳಚಿ ಹಾಕಲು ನಿರ್ಧರಿಸುತ್ತಾನೆ.

ಪತ್ರಕರ್ತನಾದ ಅವನು ಜೆಜೆ ವಿರುದ್ಧ ಲೇಖನಗಳನ್ನು ಪ್ರಕಟಿಸಿ, ಜನರ ಕಣ್ಣು ತೆರೆಸುವ ಪ್ರಯತ್ನ ಮಾಡುತ್ತಾನೆ. ಬೇರೆಯವರು ಲೇಖನ ಪ್ರಕಟಿಸದಿದ್ದಾಗ ತನ್ನದೇ ಪ್ರೆಸ್ ಪ್ರಾರಂಭಿಸಿ ಜೆಜೆ ಬಣ್ಣ ಬಯಲು ಮಾಡುವ ಲೇಖನಗಳ ಸರಮಾಲೆಯನ್ನೇ ಪ್ರಕಟಿಸುತ್ತಾನೆ. ಇದರಿಂದ ಕೋಪಗೊಂಡ ಜೆಜೆ ಕರ್ಸನ್‌ ಮುದ್ರಣಾಲಯವನ್ನು ಸುಟ್ಟು ಹಾಕುತ್ತಾನೆ. ಮತ್ತು ಕರ್ಸನ್ ಮೇಲೆ ರೂ 50 ಸಾವಿರದ ಮಾನನಷ್ಟ ಮೊಕ್ಕದಮೆ ಹೂಡುತ್ತಾನೆ. ಕರ್ಸನ್ ಮಾವನನ್ನು ಕರೆಯಿಸಿ ಧಮಕಿ ಹಾಕುತ್ತಾನೆ, ಪ್ರಾಣ ಬೆದರಿಕೆ ಒಡ್ಡುತ್ತಾನೆ. ಇವುಗಳಿಂದ ಅಂಜದ ಕರ್ಸನ್ ಜೆಜೆ ವಿರುದ್ಧ ಕೋರ್ಟಿನ ಮೆಟ್ಟಿಲೇರುತ್ತಾನೆ. ಜೆಜೆ ಮುಖವಾಡ ಬಯಲು ಮಾಡುತ್ತಾನೆ. ಅನೇಕ ಹೆಣ್ಣುಗಳ ಸಂಗದಿಂದ ಜೆಜೆಗೆ ಮಾರಕ ರೋಗ ಬಂದಿದೆ ಎಂದು ಸಾಬೀತು ಮಾಡುತ್ತಾನೆ. ಕೊನೆಗೆ ಜೆಜೆಗೆ ಶಿಕ್ಷೆಯಾಗುತ್ತದೆ.

 

ಜೆಜೆಯಾಗಿ ನಟಿಸಿರುವ ಜಯದೀಪ್ ಅಭಿನಯದ ಬಗ್ಗೆ ಎಷ್ಟು ಬರೆದರೂ ಸಾಲದು. ಒಬ್ಬ ಆಧ್ಯಾತ್ಮ ಗುರುವಿನ ಆರ್ಭಟ, ಠೇಂಕಾರ ತಾನು ನಂಬಿರುವುದೇ ಸತ್ಯ ಎಂಬ ಅಹಂಕಾರ ಎಲ್ಲವನ್ನೂ ಸಶಕ್ತವಾಗಿ ಅಭಿನಯಿಸಿದ್ದಾನೆ.  ಕರ್ಸನ್ ಆಗಿ ಜುನೈದ್ ಖಾನ್ ಅಭಿನಯ ಚುರುಕಾಗಿದೆ. ಸಂಸ್ಕೃತ ಶ್ಲೋಕಗಳನ್ನು ನಿರರ್ಗಳವಾಗಿ ಹೇಳುವ ಜುನೈದ್ ಬೆರಗು ಹುಟ್ಟಿಸುತ್ತಾನೆ. ಜಯದೀಪ್ ಹಾಗೂ ಜುನೈದ್ ಮಧ್ಯೆ ನಡೆಯುವ ವಾದ ವಿವಾದ ಗಮನ ಸೆಳೆಯುತ್ತದೆ. 'ನಾನು ನಾಥ ಅಂದರೆ ಒಡೆಯ,  ನನ್ನ ಹೆಸರಲ್ಲೇ ನಾಥ ಇದೆ ನೀನು ದಾಸ,' ಎಂದು ಕರ್ಸನ್‌ನನ್ನು  ಸದಾ ಹಂಗಿಸುವ ಜೆಜೆಗೆ 'ನಾನು ಸತ್ಯಕ್ಕೆ ದಾಸ ಪ್ರಾಮಾಣಿಕತೆಗೆ ದಾಸಾನುದಾಸ,' ಎಂದು ಟಾಂಟ್ ಕೊಡುವ ಕರ್ಸನ್ ಹಾಗೂ ಜೆಜೆ ವಾಗ್ವಾದ ಸ್ವಾರಸ್ಯವಾಗಿದೆ.

8 AM Metro: ಒಂದು ಆತ್ಮಸಂಗಾತದ ಕಥೆಯ ಮೂವಿ ರಿವ್ಯೂ ಇದು

ಕೊಂಚ ಕಠಿಣ ಮುಖಭಾವದ ಜಯದೀಪ್ ಜೆಜೆ ಯಂಥ ಢೋಂಗಿ ಆಧ್ಯಾತ್ಮ ಗುರುವಿನ ಪಾತ್ರದಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಅವರ ಮುಖದಲ್ಲಿ ಮೂಡುವ ಕುಹಕ ನಗೆ ಪ್ರೇಕ್ಷಕನ ಮನದಲ್ಲಿ ಬಹುಕಾಲ ಉಳಿಯುತ್ತದೆ. ಮುಗ್ಧ ಕಿಶೋರಿ ಕಾಡುತ್ತಾಳೆ. ಆದಿತ್ಯ ಚೋಪ್ರಾ ವೈ.ಆರ್.ಎಫ್ ಬ್ಯಾನರಿನಡಿಯಲ್ಲಿ ನಿರ್ಮಿಸಿರುವ ಈ ಚಿತ್ರ ಅದ್ದೂರಿ ಸೆಟ್ಟಿಗ್ಸ್‌ನಿಂದ ಕಣ್ಮನ ಸೆಳೆಯುತ್ತದೆ. ಹಳೆಯ ಕಾಲದ ಮುಂಬೈ ಗಮನ ಸೆಳೆಯುತ್ತದೆ.
 

click me!