Daredevil Musthafa Review: ತೇಜಸ್ವೀತನ ಬಿಟ್ಟುಕೊಡದ ಡೇರ್‌ಡೆವಿಲ್‌ ಕಥನ

By Kannadaprabha NewsFirst Published May 20, 2023, 11:18 AM IST
Highlights

ಶಿಶಿರ ಬೈಕಾಡಿ, ಆದಿತ್ಯ ಆಶ್ರೀ, ಪ್ರೇರಣಾ ಗೌಡ, ಪೂರ್ಣಚಂದ್ರ ಮೈಸೂರು, ನಾಗಭೂಷಣ್, ಮಂಡ್ಯ ರಮೇಶ್ ನಟಿಸಿರುವ ಡೇರ್‌ಡೆವಿಲ್ ಮುಸ್ತಾಫಾ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ ಎಂದು ಜೋಗಿ ವಿಮರ್ಶೆ ಮಾಡಿದ್ದಾರೆ. 

ಜೋಗಿ

ಕೆಲವು ಕತೆಗಳನ್ನು ಹೊಸಬರೇ ಸಿನಿಮಾ ಮಾಡಬೇಕು. ಆಗಲೇ ಅದಕ್ಕೊಂದು ವಿಶಿಷ್ಟವಾದ ಸೊಬಗು. ತುಂಬ ಪರಿಚಿತವಲ್ಲದ ಮುಖಗಳು ತೆರೆಯ ಮೇಲೆ ಕಂಡಷ್ಟೂಒಳ್ಳೆಯದು. ಹಳೆಯ ಪಾತ್ರಗಳ ಯಾವ ಲೇಪವೂ ಇಲ್ಲದಿದ್ದಾಗಲೇ ನಟ ಪಾತ್ರವಾಗುವುದು. ನಮ್ಮ ಮನಸ್ಸಿನಲ್ಲಿರುವ ಪಾತ್ರವನ್ನು ಕಣ್ಣಾರೆ ಕಾಣುವಾಗ ಸಂತೋಷವಾಗಬೇಕೇ ಹೊರತು ಭ್ರಮನಿರಸನವಲ್ಲ.

ಇವೆಲ್ಲವೂ ಒಳಗೊಳ್ಳುವಂಥ ಸಿನಿಮಾವನ್ನು ಶಶಾಂಕ ಸೋಗಾಲ ನಿರ್ದೇಶಿಸಿದ್ದಾರೆ. ಕತೆಯ ಮೇಲಿನ ಪ್ರೀತಿ, ಸಿನಿಮಾ ಮೇಲಿನ ಭಕ್ತಿ ಎರಡೂ ಜತೆಯಾಗಿರುವುದು ಸಿನಿಮಾ ನೋಡುತ್ತಾ ನೋಡುತ್ತಾ ನಮಗೇ ಗೊತ್ತಾಗುತ್ತಾ ಹೋಗುತ್ತದೆ. ಅವರಿಗೆ ತಂತ್ರಜ್ಞರಾದ ರಾಹುಲ್‌ ರಾಯ್‌ ಜಾನ್‌, ನವನೀತ್‌ ಶ್ಯಾಮ್‌, ಹರೀಶ್‌, ಸ್ವಸ್ತಿಕ್‌, ಶರತ್‌ ತಮ್ಮ ಪ್ರತಿಭೆ ಮತ್ತು ಶ್ರಮವನ್ನು ಕೊಟ್ಟಿದ್ದಾರೆ.

Shivaji Surathkal 2 review: ಕಳೆದುಹೋಗಲು ಒಂದೊಳ್ಳೆ ಸಿನಿಮಾ

ಡೇರ್‌ಡೆವಿಲ್‌ ಮುಸ್ತಾಫಾ ಕತೆಯನ್ನು ತೆರೆಗೆ ತರುವುದು ಸುಲಭವಲ್ಲ. ಹನ್ನೆರಡು ಪುಟಗಳ ಸಣ್ಣಕತೆಯಲ್ಲಿ ತೇಜಸ್ವಿ ಇಡೀ ಅಬಚೂರಿನ ಆತ್ಮವನ್ನೇ ಆವಾಹನೆ ಮಾಡಿದ್ದಾರೆ. ಒಂದು ಶಾಲೆ ಮತ್ತು ಅಲ್ಲಿಯ ಮಕ್ಕಳ ಕತೆ ಹೇಳುತ್ತಾ ಅವರು ದೇಶದ ಕತೆ ಹೇಳುತ್ತಾರೆ. ಒಂದು ಸಾಲಲ್ಲಿ ಬಂದು ಹೋಗುವ ಕೋಮು ದ್ವೇಷದ ಉಲ್ಲೇಖ, ಜಾತಿವಾದವನ್ನು ಮೀರಿ ನಿಲ್ಲುವ ಅಹಂಕಾರ, ಸರಳವಾಗಿ ಮುಗಿಯಬಹುದಾದ ಸಂಗತಿಯನ್ನು ಯಾವ್ಯಾವುದಕ್ಕೋ ತಳಕುಹಾಕಿ ಗೊಂದಲಗೊಳಿಸುವುದು- ಇವೆಲ್ಲ ತೇಜಸ್ವಿ ಕತೆಯೊಳಗೆ ಕೆಲವೊಮ್ಮೆ ಗಂಭೀರವಾಗಿ, ಹೆಚ್ಚಿನ ಸಲ ತಮಾಷೆಯಾಗಿ ಬರುತ್ತವೆ. ತೇಜಸ್ವಿ ಕತೆಯ ಗಾಂಭೀರ್ಯವನ್ನು ತೆರೆಗೆ ತರಬಹುದು, ಅವರ ತಿಳಿಹಾಸ್ಯವನ್ನು ಅನುವಾದಿಸುವುದು ಕಷ್ಟ.

ಶಶಾಂಕ ಸೋಗಾಲ ಗೆದ್ದಿರುವುದೇ ಅಲ್ಲಿ. ಕತೆಯನ್ನು ವಿಸ್ತರಿಸಿದ ಅನಂತ ಶಾಂದ್ರೇಯ, ಸಂಭಾಷಣೆಯಲ್ಲಿ ಅವರಿಗೆ ಜತೆಯಾದ ರಾಘವೇಂದ್ರ ಮಾಯಕೊಂಡ ಇಬ್ಬರೂ ಪೂರ್ಣಚಂದ್ರ ತೇಜಸ್ವಿಯವರ ಆಶಯಕ್ಕಾಗಲೀ ಕತೆಯ ಸೊಗಸಿಗಾಗಲೀ ಕಿಂಚಿತ್ತೂ ಕುಂದು ಬರದಂತೆ ಕತೆಯನ್ನು ವಿಸ್ತರಿಸಿದ್ದಾರೆ. ಹೀಗಾಗಿ ಎರಡು ಗಂಟೆ ನಲವತ್ತು ನಿಮಿಷ ಮುಗಿದದ್ದೇ ಗೊತ್ತಾಗದಷ್ಟುವೇಗದಲ್ಲಿ ಸಿನಿಮಾ ಸಾಗುತ್ತದೆ.

Ramzan review: ಧರ್ಮ, ಬದುಕು ಮತ್ತು ಸರಕಾರ

ನಟರ ಆಯ್ಕೆಯನ್ನು ಅವರ ಅಭಿನಯವೇ ಸಮರ್ಥಿಸಿಕೊಂಡಿದೆ. ಶಿಶಿರ ಬೈಕಾಡಿ, ಆದಿತ್ಯ ಆಶ್ರೀ, ಪ್ರೇರಣಾ ಗೌಡ, ಪೂರ್ಣಚಂದ್ರ ಮೈಸೂರು, ವಿಜಯ ಶೋಭರಾಜ್‌ ಪಾವೂರು, ಕೃಷ್ಣೇಗೌಡ, ನಾಗಭೂಷಣ್‌, ಮಂಡ್ಯ ರಮೇಶ್‌, ಉಮೇಶ್‌, ಸುಂದರ್‌ವೀಣಾ, ಹರಿಣಿ - ಹೀಗೆ ಹಿರಿಯರು ಹೊಸಬರೆನ್ನದೇ ಪ್ರತಿಯೊಬ್ಬರೂ ತೇಜಸ್ವಿ ಕತೆಯ ಪಾತ್ರಗಳಾಗಿ ಅಬಚೂರಿನ ಸುತ್ತುಮುತ್ತ ಅಡ್ಡಾಡುತ್ತಾರೆ.

ತೇಜಸ್ವಿ ಯಾವತ್ತೂ ಕತೆಗಳನ್ನು ಬರ್ಬರವಾಗಿಸುವುದಿಲ್ಲ. ಸಹಜ ಉಲ್ಲಾಸದ ಜತೆಗೇ ನಾವು ಎಲ್ಲಾ ಕಷ್ಟಸುಖಗಳನ್ನು ಅನುಭವಿಸುತ್ತಿರುತ್ತೇವೆ ಎಂಬುದು ಅವರ ನಂಬಿಕೆ. ಹೀಗಾಗಿ ಅತೀ ಸಂಕಟದಲ್ಲೂ ಆ ಸಹಜ ಉಲ್ಲಾಸ ಕಣ್ಮರೆಯಾಗದಂತೆ ಅವರು ಕಾಪಾಡಿಕೊಳ್ಳುತ್ತಾರೆ. ಈ ಚಿತ್ರದಲ್ಲೂ ನಾವು ಅದನ್ನು ಕಾಣಬಹುದು.

ತೇಜಸ್ವಿ ಕತೆಗಳನ್ನು ಓದುತ್ತಾ ಕುಳಿತರೆ, ಕ್ರಿಕೆಟ್‌ ನೋಡುತ್ತಾ ಕುಳಿತರೆ ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ. ಡೇರ್‌ ಡೆವಿಲ್‌ ಮುಸ್ತಾಫಾದಲ್ಲಿ ಎರಡೂ ಇದೆ. ಅದಕ್ಕಿಂತ ಮುಖ್ಯವಾಗಿ ಇವತ್ತು ನಮ್ಮೆಲ್ಲರನ್ನೂ ಗಾಢವಾಗಿ ಕವಿದಿರುವ ಜಾತೀಯತೆ ಮತ್ತು ಧರ್ಮಾಂಧತೆಯನ್ನು ಎಷ್ಟುಸರಳವಾಗಿ ಬಗೆಹರಿಸಬಹುದು ಎನ್ನುವುದನ್ನೂ ತೇಜಸ್ವಿ ಹೇಳಿದ್ದಾರೆ.

ಶಶಾಂಕ ಮತ್ತು ತಂಡ ತೇಜಸ್ವಿ ಕತೆಯನ್ನು ಕೆಮರಾದಲ್ಲಿ ಬರೆದಿದೆ. ಐವತ್ತು ವರ್ಷಗಳ ಹಿಂದಿನ ಕತೆಯನ್ನು ವಿಸ್ಮಯಗೊಳಿಸುವಷ್ಟುಆಧುನಿಕವಾಗಿಸಿದೆ.

click me!