ತರುಣ ತರುಣಿಯರು ಏನು ಓದುತ್ತಾರೆ ಗೊತ್ತೇ!

By Kannadaprabha NewsFirst Published Jun 28, 2020, 5:18 PM IST
Highlights

ಪ್ರತಿ ಬಾರಿ ಕಥೆಗಳನ್ನ ಬರೆಯುವಾಗ ಯಾರಿಗಾಗಿ ಬರೆಯುತ್ತಿದ್ದೇವೆ ಎಂಬಾ ಮೂಲಭೂತ ಪ್ರಶ್ನೆ ಎದುರಾಗುತ್ತದೆ. ಕಥೆ ಬರೆದಾಗ ನಮ್ಮ ಸಾಹಿತ್ಯದ ಗುಂಪು ಬಿಟ್ಟು , ಮನೆಯವರು ಬಿಟ್ಟು  ಇನ್ನು ಯಾರು ಓದುತ್ತಾರೆ ? ಯಾವ ವಯಸ್ಸಿನವರು ಓದುತ್ತಾರೆ ಎಂಬ ಪ್ರಶ್ನೆ ಮನಸಿನಲ್ಲಿ ಮೂಡಿಯೇ ಇರುತ್ತದೆ.  ಅದಕ್ಕೆ ಉತ್ತರ ಹುಡುಕಬೇಕಾದರೆ ಈಗಿನ ಜೆನರೇಷನ್ ಅಥವಾ ಹಿಂದಿನ ಜೆನರೇಷನ್ ನ ಅರ್ಥ ಮಾಡಿಕೊಳ್ಳಲೇಬೇಕು. 

ಮೇಘನಾ ಸುಧೀಂದ್ರ 

ತರುಣರು ಎಂದು ಕ್ಲಾಸಿಫೈ ಮಾಡುವಾಗ  ಈ ಜೆನರೇಷನ್ ಕ್ಲಾಸಿಫಿಕೇಷನ್ ನ ನಾವು ಅರ್ಥ ಮಾಡಿಕೊಳ್ಳಬೇಕು. 1944 ರಿಂದ 1965 ವರೆಗೆ ಹುಟ್ಟಿದವರ ಬೇಬಿ ಬೂಮರ್ಸ್ ಜೆನರೇಷನ್ ಎಂದು ಕರೆಯುತ್ತಾರೆ. ಈ ಜಗತ್ತಿನ ಜನಸಂಖ್ಯಾ ಸ್ಪೋಟಕ್ಕೆ ಕಾರಣಕರ್ತರಾದರು ಇವರು. ಯುದ್ಧಗಳೆಲ್ಲಾ ಮುಗಿದು ಒಂದು ಮಟ್ಟದ ಜೀವನ ಶೈಲಿ ಬಂದಮೇಲೆ ಮಕ್ಕಳನ್ನ ಭೂಮಿಗೆ ಹೆಚ್ಚಿಗೆ ತಂದ ಪೀಳಿಗೆ. ಇವರಿಗೆ ಪುಸ್ತಕ  ಮತ್ತು ರೇಡಿಯೋ ಮನೋರಂಜನೆಯಾಗಿತ್ತು.  ಇನ್ನು 1966 ರಿಂದ 1979 ರ ವರೆಗೆ ಹುಟ್ಟಿದವರನ್ನ ಜೆನೆರೇಷನ್ ಎಕ್ಸ್ ಎನ್ನುತ್ತಾರೆ. ಈ ಜೇನ್ ಎಕ್ಸ್ ಈಗಿನ ಪೀಳಿಗೆಗೆ ಎಕ್ಸ್ ಇದ್ದ ಹಾಗೆ.  ಈ ಪೀಳಿಗೆಗೆ ಸ್ವಲ್ಪ ಓದು ಮತ್ತು ಜಾಸ್ತಿ ಟಿವಿ, ಸಿನಿಮಾ ಮನೋರಂಜನೆ ಮಾಧ್ಯಮವಾಗಿತ್ತು. ಇನ್ನು ಈಗಿನ ಕಾಲದವರು ಅಂದರೆ 1980ರಿಂದ 1994 ರ ವರೆಗೆ ಹುಟ್ಟಿದ ಮಿಲೇನಿಯಲ್ಸ್ ಮತ್ತು 1995ರಿಂದ 2015 ರ ವರೆಗೆ ಹುಟ್ಟಿರುವ ಜೆನರೇಷನ್ ಝೆಡ್ ಗೆ  ಓದು ಬಹಳ ನ್ಯಾಚುರ್ರಲ್ಲಾಗಿ ಬಂದಿದ್ದಲ್ಲ. ಅದನ್ನ ಹೇರಿಕೆಮಾಡಿ ಅಥವಾ ಅವರಿಗೆ ಆಸಕ್ತಿ ಇದ್ದಾಗ ಓದುವರು. 

ತರುಣ ಓದುಗರು ಅಥವಾ ಕಥೆಗಾರರು ಎಂದರೆ ಈ ಜೆನ್ ವೈ  ಮತ್ತು ಜೆನ್  ಝೆಡ್ ನವರು. ಈ ಪೀಳಿಗೆಯ ಜೀವನ ಶೈಲಿ ಬೂಮರ್ಸ್ ಮತ್ತು ಜೇನ್ ಎಕ್ಸ್ ಗಿಂತ ಸಿಕ್ಕಾಪಟ್ಟೆ ಭಿನ್ನ. ಅವರ ಜೀವನದಲ್ಲಿ  ಓದುವುದು ಎನ್ನುವುದು ನ್ಯಾಚುರಲ್ಲಾಗಿ ಬಂದಿರುವುದು ಶಾಲೆಯ ಪಠ್ಯಪುಸ್ತಕದಿಂದಲೇ ಮತ್ತು 70% , ಈ ಜೇನ್ ಯೈ ಅಂಡ್ ಜೇನ್ ಝೆಡ್ ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಪಡೆಯಲೂ ಇಲ್ಲ. ಹೀಗಿದ್ದಾಗ ಕನ್ನಡ ಓದು ಅಥವಾ ಕತೆಗಳು ಅವರುಗಳಿಗೆ ಎಷ್ಟು ಸಹ್ಯ ಎನ್ನುವುದು ವಿಚಾರಮಾಡುವ ಕಾಲ. 

ಈ ತರುಣರ ಪೀಳಿಗೆಗೆ ಹಳ್ಳಿ ಮತ್ತು ಸಿಟಿಯ ಬೇಧವಿಲ್ಲ. ಅಂದರೆ ಹಳ್ಳಿಗಳಲ್ಲಿ ಓದುವ ಸಿ ಬಿ ಎಸ್ ಸಿ ಸಿಲೆಬಸ್ಸಿನ ಮಕ್ಕಳಿಗೂ ಸಿಟಿಯ ಸ್ಟೇಟ್ ಸಿಲೆಬಸ್ಸಿನ ಮಕ್ಕಳ ನಡುವಳಿಕೆಗೆ ತುಂಬಾ ವ್ಯತ್ಯಾಸವಿಲ್ಲ. ಇಬ್ಬರು ಇಂಗ್ಲಿಷಿನಲ್ಲಿ ಚೇತನ್ ಭಗತನ್ನನ್ನ ಓದುತ್ತಾರೆ. ಅವರು ಬಳಸುವ ಸ್ಲ್ಯಾನ್ಗ್, ಭಾರವೆನಿಸಿದ ಭಾಷೆ ಎಲ್ಲವೂ ಲೈಟಾಗಿ ಅವರನ್ನ ತಟ್ಟುತ್ತದೆ. ಇನ್ನು ಅವರು ಭಾಗವಹಿಸುವ ಶಾಲೆಯ ಕ್ವಿಜ್ಹುಗಳಲ್ಲಿ ಹ್ಯಾರಿ ಪಾಟರ್ ಸುತ್ತು ಇರುತ್ತದೆ. ಇವೆಲ್ಲವೂ ಅವರ ಜೀವನದ  ಅಂಗ. ಅದನ್ನ ಬಿಟ್ಟರೆ ಓ ಟಿ ಟಿ ಪ್ಲಾಟಫಾರ್ಮ್ಸ್ನ ಸಿನೆಮಾಗಳು, ಸಿರೀಸ್ ಗಳು ಇವೆಲ್ಲದರಲ್ಲೂ ಕಥೆಗಳನ್ನ ನೋಡುತ್ತಾರೆ. ಒಟ್ಟಾರೆ ಇವರಿಗೆ ಯಾಕೆ ಕಥೆಗಳು ಬೇಕು ? ಯಾವ ಕಥೆಗಳನ್ನ ಓದುತ್ತಾರೆ ಎಂಬುದು ಯಕ್ಷ ಪ್ರಶ್ನೆ. 

ವಠಾರ ಶಾಲೆ ಎಂಬ ಹೊಸ ಪರಿಕಲ್ಪನೆ; ಏನೆಲ್ಲ ಚಟುವಟಿಕೆಗಳಿರಬಹುದು?

ಈ ಮಿಲೇನಿಯಲ್ಸಿಗೆ ಇರುವ ರಾಕ್ಷಸ ಹಸಿವಿನಷ್ಟು ಬುದ್ಧಿಗೆ ಬಹಳ ಗಾಢವಾದ ಕಥೆಗಳೇ ಬೇಕು. ಈಗಿನ ಮಿಲೇನಿಯಲ್ಸ್ ಊರಿನಲ್ಲಿ ಅಪ್ಪ ಅಮ್ಮನ್ನನ್ನ ಬಿಟ್ಟು ಇನ್ನೆಲ್ಲೋ ಇದ್ದು ಅವರ ಜೀವನ ಶೈಲಿ ಬಹಳ ಮೊನಾಟನಸ್ ಆಗಿದ್ದಾಗ ಅವರಿಗೆ ಸಿಗದ್ದಿದ್ದ ಪ್ರೀತಿ, ಅವಳ ನೆನಪು , ಯಾವುದೋ ಅನುಭವಿಸದಿದ್ದ ಭಾವನೆಗಳು ಬೇಕು ಅವುಗಳನ್ನ ಅನುಭವಿಸಿ ಓದುತ್ತಾರೆ. ಆ ಕಥೆಗಳು ಪ್ರಾಯದಲ್ಲಿ ಅಥವಾ ಮಧ್ಯವಯಸ್ಸಿನಲ್ಲಿ ಸ್ವಲ್ಪ ತಾಕಿದರೂ ಮತ್ತೆ ಈ ಪೀಳಿಗೆಯನ್ನ ಕಾಡುವುದು ಹುಡುಕಾಟ. ಯಾವುದನ್ನೋ ಏನ್ನನ್ನೋ ಹುಡುಕುವ ಪ್ರಯತ್ನ ಮಾಡುತ್ತಲೇ ಇರುವುದರಿಂದಲೇನೋ ಪೂರ್ಣಚಂದ್ರ ತೇಜಸ್ವಿಯವರ ಬರಹಗಳು ತುಂಬಾ ಸೆಳೆದಿದ್ದು ಈ ಪೀಳಿಗೆಗೆ. ಅವರ ಬರಹದಲ್ಲಿ ಹುಡುಕಾಟ ಇದೆ, ಸುತ್ತಾಟ, ಜೀವನವನ್ನು ಬಂದ ಹಾಗೆ ತೆಗೆದುಕೊಳ್ಳುವ ಮನಸ್ಥಿತಿ ಇದೆ.

ವಿಪರೀತ ಬೋಧನೆ ಮಾಡದೆ, ಈ ಪೀಳಿಗೆಯನ್ನ ಸ್ವಲ್ಪ ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಒಂದು ರೀತಿಯ ಮಜಾ ಕೊಟ್ಟ ಬರಹಗಳು ಅವು. ಇಂತಹ ಬರಹಗಳು ಚೊಕ್ಕವಾಗಿ ಯುವಜನರ ತಲೆಗೆ ಹೃದಯಕ್ಕೆ ಸರಿಯಾಗಿ ನಾಟುತ್ತದೆ. ಇಂತಹ ಲವಲವಿಕೆ, ಹೊಸತನ ಮತ್ತು  ವಿಷಯವನ್ನು ವಿವರವಾಗಿ ಬರೆಯುವ, ಸುಲಭದ ಭಾಷೆಯಲ್ಲಿ ಬರೆಯುವ ಕಥೆಗಳು ಅಥವಾ ಬರಹಗಳು ಈಗಿನ ಪೀಳಿಗೆಗೆ ಇಷ್ಟ. 

ಈಗಿನ ಕಾಲದ ಮಾಡುವೆ, ರಿಲೇಷನ್ಷಿಪ್ಪುಗಳ ವ್ಯಾಖ್ಯಾನ ಬದಲಾಗಿದೆ, ಈಗ ನೈತಿಕತೆಯ ಪ್ರಶ್ನೆಗಿಂತ "ಹೌ ಹ್ಯಾಪಿ ಯೂ  ಆರ್" ಎಂಬ ವಿಷಯದ ಸುತ್ತಲೇ ಎಷ್ಟೊಂದು ಸಂಗತಿಗಳು  ಗಿರಕಿ ಹೊಡೆಯುತ್ತದೆ. ಹಾಗೆಯೇ ಅವರ ಕಥಾ ಪ್ರಪಂಚವೂ ಹಾಗೆ ಇರುತ್ತದೆ. ಅವರಿಗೆ ತಮ್ಮ ಬಾಲ್ಯವನ್ನೋ , ಗೊತ್ತಿರುವ ಪರಿಸರವನ್ನೂ ವರ್ಣನೆ ಮಾಡಿದಾಗ ಬೇಗ ಆ ಕಥೆಗೆ ಕನೆಕ್ಟ್ ಆಗುತ್ತಾರೆ. ಗೊತ್ತಿಲದ್ದಕ್ಕೆ ತಲೆ ಹಾಕಿ ಮಲುಗುವವರಲ್ಲ. "ಘಟ್ಟದ ಮೇಲಿನವರದ್ದು ದಬ್ಬಾಳಿಕೆ ಜಾಸ್ತಿ" ಎಂದು ಒಂದು ದೊಡ್ಡ ಕಾದಂಬರಿಯ ಸಾಲು  ಅಕಸ್ಮಾತ್ ಸಿಟಿ ಬ್ರೆಡ್ ಮಿಲೇನಿಯಲ್ ಓದಿದರೆ ಅವರಿಗೆ ನೆನಪಾಗುವುದು ಚೌಕಾಭಾರಾದ ಘಟ್ಟವೇ ಹೊರತಾಗಿ ಇನ್ನೇನು ಅಲ್ಲ, ಇನ್ನೂ ಸ್ವಲ್ಪ ತಲೆ ಓಡಿಸಿ ಇದು ಸ್ಪೆಲ್ಲಿಂಗ್ ಮಿಸ್ಟೇಕ್ ಎಂದು ಅದನ್ನ ಅಟ್ಟ ಎಂದು ಬದಲಾಯಿಸಿ ಓದುವವರೇ ಜಾಸ್ತಿ. ಅಂದರೆ ಅವರಿಗೆ ಗೊತ್ತಿಲ್ಲದ ಪರಿಸರದ ಬಗ್ಗೆ ಬರೆಯುವ ಕಥೆಗಳನ್ನ ಓದಿದರೂ ಅದು ಊಟದ ಉಪ್ಪಿನಕಾಯಿ ಹೊರತು ಅದೇ ಊಟವಾಗುವುದಕ್ಕೆ ಸಾಧ್ಯವಿಲ್ಲ. 

ದೇವರು ಇದ್ದಾನೆಯೋ ಇಲ್ಲವೋ ಎಂದು ಪ್ರಶ್ನೆ ಮಾಡುವ ಈ ಪೀಳಿಗೆಗೆ ಆಧ್ಯಾತ್ಮವೂ ಬೇಕು. ಆಫಿಸ್ನಲ್ಲಿ ದಿನ ನಿತ್ಯ ನಡೆಯುವ ಕಿರಿಕಿರಿ , ಸಂಬಳ ಅದು ಇದು ತಕರಾರುಗಳಲ್ಲಿ ಬೇಯುವ ತರುಣರಿಗೆ ಸಾಂತ್ವನ ಮಾಡುವ ಕೈಗಳು ಬೇಕು. ಆ ಕೈಗಳು ಆಧ್ಯಾತ್ಮವಾದರಂತೂ ಅದರಷ್ಟು ಖುಷಿ ಮತ್ತೊಂದಿಲ್ಲ. ಅದು ಇನ್ ಡೈರೆಕ್ಟಾಗಿ ಬಂದರೂ ಚಿಂತೆಯಿಲ್ಲ, ಆದರೆ ಬೇಕು. ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ ಎಂದು ಹೇಳುವ ಕಥೆಗಳು ತರುಣರಿಗೆ ಸಿಹಿ ಜೇನು. 

ಫಿಕ್ಷನ್ನನ್ನ ಅಷ್ಟಾಗಿ ತಲೆಗೆ  ಹಾಕಿಕೊಳ್ಳದ ಈ ಪೀಳಿಗೆಗೆ ಹಿಸ್ಟಾರಿಕಲ್ ಫಿಕ್ಷನ್ ಬಹಳ ಇಷ್ಟ. ಇದು ಹಳೆಯ ಮದ್ಯವನ್ನ ಹೊಸ ಗಾಜಿನ ಬಾಟಲಿಗೆ ಹಾಕಿದ ಹಾಗೆ. ಕೃಷ್ಣದೇವರಾಯನ ಕಥೆಯನ್ನ ಬೋರಿಂಗಾಗಿ ಯುದ್ಧದಲ್ಲಿ  ಅಂತ್ಯ ಮಾಡುವ ಬದಲು ಅವನ ವಂಶ ಹಂಪಿಯ ಹಿಪ್ಪಿ ಹಿಲ್ಲಿನಲ್ಲಿ ಈಗಲೂ ಗಾಂಜಾ  ಮಾರುವ ದಂಧೆಯಲ್ಲಿ ತೊಡಗಿದೆ ಎನ್ನುವಾಗ ಸಿಗುವ ಕಿಕ್ ಗಾಗಿ ಕಾಯುತ್ತ ಕುಳಿತಿರುವ ಚಾತಕ ಪಕ್ಷಿಗಳು. ಅಂದರೆ ಅದು ಪೂರ್ತಿ ಕಾಲ್ಪನಿಕವೂ ಆಗಿರಬಾರದು ಆದರೆ ಪೂರ್ತಿ ರಿಯಲಿಸ್ಟಿಕ್ ಆಗಿಯೂ ಇರಬಾರದು ಎರಡರ ಮಧ್ಯದ ಸ್ಥಿತಿಯನ್ನು ಬಿಂಬಿಸುವ ಕಥೆಗಳು ಈಗಿನ ಪೀಳಿಗೆಗೆ ಹೆಚ್ಚು ಸಮರ್ಪಕವಾಗಿರುತ್ತದೆ. ಅದನ್ನೇ ಹುಡುಕುತ್ತಾರೆ ಕೂಡ. 

ಇನ್ನು ಕಥೆಗಳಲ್ಲಿ ಹೆಣ್ಣು ಈಗಲೂ ಅಬಲೆ, ಅವಳು ತಾಯಿಯಾಗಿ, ಹೆಂಡತಿಯಾಗಿ, ತ್ಯಾಗಮಯಿಯಾಗಿ , ಮಕ್ಕಳಿಲ್ಲದೆ ಕೊರಗುವ ಅಯ್ಯೋ ಪಾಪದ ಹೆಣ್ಣಾಗಿ ಇರುವ ಪಾತ್ರಗಳಲ್ಲಿ ಹುಡುಗಿಯರನ್ನ ನೋಡಲು ಇಷ್ಟಪಡುವುದಿಲ್ಲ. ಆಡ್ವೆಂಚರಸ್ ಆಗಿ ಗಂಡಿನ ಸಮಸಮವಾಗಿ ಇರುವ ಹೆಣ್ಣುಮಕ್ಕಳ ಕಥೆಗಳು ಅಥವಾ ಹೆಣ್ಣೇ ಕಥೆಯ ಮೂಲವಸ್ತು(ಬರಿ ಅವಳ ಸೌಂದರ್ಯದಿಂದಲ್ಲ) ಆಕೆಯ ಬುದ್ಧಿಮತ್ತೆಯಿಂದ ಮತ್ತು ಅವಳ ಗುಣದಿಂದ ಹಾಗೂ ಶಕ್ತಿಗಳನ್ನ ಪ್ರದರ್ಶನ ಮಾಡುವ ಕಥೆಗಳು ತರುಣ ಜಗತ್ತಿನ ಜೀವಾಳವಾಗಬೇಕು. ನಮ್ಮ ಸುತ್ತ ಮುತ್ತಲಿನ ಹೆಣ್ಣುಮಕ್ಕಳು ಈಗ ಹಾಗೆ ಇದ್ದಾರೆ, ಹಳೆ ಕಾಲದ ತ್ಯಾಗಮಯಿಗಳನ್ನ ಹೆಚ್ಚು ರೋಮ್ಯಾನ್ಟಿಸೈಸ್ ಮಾಡುವ ಅಗತ್ಯವಿಲ್ಲ. 

ಕನ್ನಡದ ಮೊದಲ ವಿಡಿಯೋ ಬುಕ್;‌ ಲೈಫ್‌ ಈಸ್‌ ಬ್ಯೂಟಿಫುಲ್‌

ಈಗಿನ ಮಿಲೇನಿಯಲ್ ಪೀಳಿಗೆ ಸೋಲುಗಳನ್ನ ಅಷ್ಟಾಗಿ ಕಂಡಿಲ್ಲ. ಒಂದು ಸಿದ್ಧ ಮಾರ್ಗದಲ್ಲಿ ಅಪ್ಪ ಅಮ್ಮ ಹೇಳಿದ ಹಾಗೂ ಅಥವಾ ಮನೆಯಲ್ಲಿ ಇನ್ನ್ಯಾರೋ ಹೇಳಿದ ಹಾಗೆ ಒಂದೇ ದಾರಿಯಲ್ಲಿ ಹೋಗುತ್ತಿರುತ್ತಾರೆ. ಹಠಾತ್ತನೆ ಸೋಲು ಬಂದಾಗ ವಿಪರೀತ ನಿರಾಶರಾಗಿ ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ. ಸೆಲ್ಫ್ ಹೆಲ್ಪ್ ಎನ್ನುವುದು ಈಗಿನ ಕಾಲದ ಅವಶ್ಯಕತೆ. ಹೆಚ್ಚಯಾಗಿ ಯಾರನ್ನು ಹಚ್ಚಿಕೊಳ್ಳದಿರುವವರಿಗೆ ಈ ಸೆಲ್ಫ್ ಹೆಲ್ಪ್ ಬೇಕೇ ಬೇಕು. ಅದು ಕಥೆಗಳ ರೂಪದಲ್ಲೂ ಬಂದಾಗ ಅವುಗಳನ್ನ ಸ್ವಲ್ಪವಾದರೂ ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಯೋಚನೆ ಮಾಡೇ ಮಾಡುತ್ತದೆ. 

ತರುಣರ ಕಥಾ ಲೋಕದಲ್ಲಿ ಪ್ರೀತಿ, ಪ್ರೇಮ, ಸೌಂದರ್ಯ, ಮಾಡುವೆ , ಸಂಸಾರದ ಜೊತೆಜೊತೆಯಲ್ಲಿ ಸಿಕ್ಕಾಪಟ್ಟೆ ಜೀವಂತಿಕೆ, ಲವಲವಿಕೆ, ಧೈರ್ಯ, ಹುಡುಕಾಟ, ಸೈನ್ಸ್  ಮತ್ತು ಒಂದಷ್ಟು ಅಧ್ಯಾತ್ಮ ಇದ್ದಾರೆ ಚೆಂದ. ಅದು ಯಾವ ಲೇಖಕನದ್ದಾದರೂ ಸರಿಯೇ ಅವರನ್ನ ಹುಡುಕಿ ಪೂರ್ತಿ ಓದುವ ಸಾಮರ್ಥ್ಯ ಈ ಪೀಳಿಗೆಗೆ ಇದೆ. 

ಅವೆಲ್ಲದರ ಅನುಭವ ಅಡಕವಾಗಿರುವ ಕಥೆಗಳು ಈಗಿನ ತರುಣರಿಗೆ ಬೇಕು, ಅಥವಾ ಅದನ್ನೇ ಬರೆಯಬೇಕು, ಬರೆದಾಗ ಜೀವನ ಮತ್ತು ಕಥಾ ಲೋಕ ಎರಡು ಸುಗಮ. ಬೆಂಗಳೂರಿನಿಂದ ಮಾಚು ಪಿಚು ಬೆಟ್ಟಕ್ಕೆ ಹೋಗುವಾಗ 4 ಟೈಮ್ ಜೋನು 5 ಭಾಷೆ ಮತ್ತು 6 ಬಗೆಯ ಊಟ ಮಾಡುವ ಅಷ್ಟೇ ವೇಗವಾಗಿ ಕಥಾಲೋಕ ಬದಲಾಗಿ ಅಷ್ಟೇ ವೆರೈಟಿ ತುಂಬಿರಬೇಕು. ಆಗಲೇ ಈ ಫಾಸ್ಟ್ ಜೆನರೇಷನ್ನಿನ ಆತ್ಮಕ್ಕೆ ತೃಪ್ತಿ.

click me!