ನಿಮ್ಮ ಜಾನುವಾರುಗಳು ಆರೋಗ್ಯಕರವಾಗಿರಲು ಕೆಲವು ಸಲಹೆಗಳು!

By Suvarna News  |  First Published Feb 11, 2020, 3:24 PM IST

ಪಶುಪಾಲನೆ ಮಾಡುವವರ ಸಂಪತ್ತಿನ ಮೂಲ ಆತನ ಹಸು, ಎಮ್ಮೆಗಳು. ಅವು ಆರೋಗ್ಯಕರವಾಗಿದ್ದರೆ ಮಾತ್ರ ಆತ ಲಾಭ ಗಳಿಸಬಲ್ಲ. ಕೆಲವೊಮ್ಮೆ ಜಾನುವಾರುಗಳ ಚಿಕಿತ್ಸಾ ಖರ್ಚು ಆದಾಯಕ್ಕಿಂತ ಹೆಚ್ಚಾಗಿಬಿಡುತ್ತದೆ. ಆದರೆ ತಪ್ಪು ನಮ್ಮದೇ ಇರುತ್ತದೆ. ಅವುಗಳನ್ನು ಆರೋಗ್ಯವಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ನಾವು ಮಾಡುವ ನಿರ್ಲಕ್ಷ್ಯಕ್ಕೆ ಅವು ಅನುಭವಿಸುವಂತಾಗಬಾರದು. ನಮ್ಮ ಲಾಭ ನಷ್ಟದ ಲೆಕ್ಕಾಚಾರ ನಾವು ಅವುಗಳನ್ನು ಹೇಗೆ ನೋಡಿಕೊಳ್ಳುತ್ತೇವೆ, ಎಷ್ಟರ ಮಟ್ಟಿಗೆ ಕಾಳಜಿ ತಗೆದುಕೊಳ್ಳುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ.


ಶುದ್ದ ಕುಡಿಯುವ ನೀರು

ದನಗಳಿಗೆ ಆಹಾರ ಎಷ್ಟುಮುಖ್ಯವೋ ಅಷ್ಟೇ ಕುಡಿಯುವ ನೀರು ಕೂಡ ಮುಖ್ಯ. ಹಾಗೆ ನೋಡಿದರೆ ಬಹುತೇಕ ಕಾಯಿಲೆಗಳು ಬರುವುದು ಕುಡಿಯುವ ನೀರಿನಿಂದಲೇ. ಆದ್ದರಿಂದ ಶುದ್ದ ಹಾಗೂ ತಾಜಾ ಕುಡಿಯುವ ನೀರು ಒದಗಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆರೋಗ್ಯಕರ ದೇಹ, ಅದರ ತಾಪಮಾನ ನಿರ್ವಹಣೆ, ಆಹಾರ ಜೀರ್ಣಕ್ರಿಯೆ ಹಾಗೂ ಹಾಲು ಉತ್ಪಾದನೆಗೆ ನೀರು ಬಹಳ ಮುಖ್ಯ. ಒಂದು ದೊಡ್ಡ ಜಾನುವಾರು ಒಂದು ದಿನಕ್ಕೆ 40 ರಿಂದ 70 ಲೀಟರ್‌ವರೆಗೆ ನೀರನ್ನು ಸೇವಿಸಬೇಕು. ಅಷ್ಟುಕುಡಿಯದಿದ್ದರೆ ಉಪ್ಪು, ಬೆಲ್ಲ, ಹಿಟ್ಟು ಹೀಗೆ ಏನಾದರು ಹಾಕಿ ಕುಡಿಯುವಂತೆ ನೋಡಿಕೊಳ್ಳಬೇಕು.

Tap to resize

Latest Videos

undefined

ದೇಶಿ ಹಸು ಸಾಕುವವರೇ ಗಮನಿಸಿ! ಹಾಲಿಗೆ ಕೆಎಂಎಫ್ ಕೊಡುತ್ತೆ ಅಧಿಕ ಬೆಲೆ!

ಆಹಾರ ಹೇಗಿರಬೇಕು?

ಜಾನುವಾರುಗಳಿಗೆ ತಕ್ಕಂತೆ ಪ್ರಮಾಣ ಬದಲಾಗುತ್ತದೆ. ಅವುಗಳ ದೇಹ ತೂಕಕ್ಕನುಗುಣವಾಗಿ ಆಹಾರ ಸೇವಿಸುತ್ತವೆ. ಕಡಿಮೆ ಮೇವನ್ನು ಒದಗಿಸಿದರೆ ಆ ಹಸು ಅಥವಾ ಎಮ್ಮೆ ಹಸಿವಿನಿಂದ ಬಳಲಿ ಕೃಶವಾಗುತ್ತದೆ. ಕ್ರಮೇಣ ಒಂದೊಂದೇ ಕಾಯಿಲೆ ಬರಬಹುದು. ಹಾಗೆಯೇ ನಾವು ಕೊಡುವ ಮೇವು ಪೌಷ್ಟಿಕವಾಗಿರಬೇಕು. ಅದರ ಹೊಟ್ಟೆತುಂಬುವ ಸಲುವಾಗಿ ಪೋಷಕಾಂಶ ಇರದ ಭತ್ತದ ಹುಲ್ಲು, ಗೋಧಿ ಹುಲ್ಲು ಇಂಥವುಗಳನ್ನೇ ಹೆಚ್ಚು ಹಾಕಬಾರದು. ಬೇಕಿದ್ದರೆ ಇಂಥ ಮೇವನ್ನು ಪೌಷ್ಟೀಕರಿಸಿ ಕೊಡಬಹುದು. ಪೌಷ್ಟಿಕಾಂಶದ ಕೊರತೆಯೇ ಹಲವು ರೋಗಗಳಿಗೆ ಆಹ್ವಾನವಾಗುತ್ತದೆ.ಪೌಷ್ಟಿಕಾಂಶಭರಿತ ಒಣ ಮೇವು ಹಾಗೂ ಹಸಿ ಮೇವು ಒದಗಿಸಲೇಬೇಕು. ಇವೆರಡೂ ಸಮ ಪ್ರಮಾಣದಲ್ಲಿದ್ದರೂ ಓಕೆ. ಎರಡನ್ನೂ ಚಿಕ್ಕದಾಗಿ ಕತ್ತರಿಸಿ ಮಿಕ್ಸ್‌ ಮಾಡಿ ತಿನಿಸಿದರೂ ಸರಿ. ಒಟ್ಟಿನಲ್ಲಿ ಎರಡೂ ಥರದ ಮೇವು ಜೊತೆಗೆ ಹಲವು ಮೇವಿನ ಮರಗಳ ಸೊಪ್ಪು, ತಿಂಡಿ ಮಿಶ್ರಣ, ಮಿನರಲ್‌ ಮಿಕ್ಸರ್‌ ಇವೆಲ್ಲವನ್ನೂ ತಪ್ಪದೇ ಜಾನುವಾರುಗಳಿಗೆ ಕೊಡುತ್ತಿರಬೇಕು.

ಒಂದು ಲೀಟರ್‌ ಹಾಲಿಗೆ ಅರ್ಧ ಕೆ.ಜಿ ಪ್ರಮಾಣದಲ್ಲಿ ಕೃತಕ ಆಹಾರ ನೀಡುವ ಕ್ರಮ ಅನುಸರಿಸಬೇಕು. ಹಸುವಿನ ದೇಹಕ್ಕೆ ಅಗತ್ಯ ಪೋಷಕಾಂಶ ಒದಗಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ಒಂದು ಕೆ.ಜಿ. ಕೃತಕ ಆಹಾರವನ್ನು ಕೊಡಬೇಕು. ಆಹಾರದ ಜತೆಗೆ ಮಿನರಲ್‌ ಮಿಕ್ಸರ್‌, ಒಂದು ಮುಷ್ಟಿಅಡುಗೆ ಉಪ್ಪು ಸೇರಿಸಬೇಕು. ಒಂದು ಹಸು ಅಥವಾ ಎಮ್ಮೆಗೆ ಒಂದು ದಿನಕ್ಕೆ ಕಮ್ಮಿಯೆಂದರೂ 30 ರಿಂದ 45 ಕೆ.ಜಿ ಮೇವು ಬೇಕು. ಇಷ್ಟುಲಭ್ಯತೆ ನಿಮ್ಮಲ್ಲಿ ಇರಲಿ.

ಹಸುವಿನ ಕೊಂಬಿಗೆ ಬೆನ್ನು ಕೊಟ್ಟು ತಮ್ಮನ ಕಾಪಾಡಿದ ಗಟ್ಟಿಗಿತ್ತಿ ಆರತಿ

ನೀರು, ಆಹಾರ ಸರಿಯಿದ್ದರೆ ಬಹುತೇಕ ರೋಗಗಳನ್ನು ದೂರ ಇಡಬಹುದು. ಉಳಿದಂತೆ ಯಾವುದೇ ಸಣ್ಣಪುಟ್ಟಕಾಯಿಲೆ ಬಂದರೂ ಸ್ವತಃ ಡಾಕ್ಟರ್‌ ಆಗಿ ಚಿಕಿತ್ಸೆ ಕೊಡದೇ ಹತ್ತಿರದ ಪಶು ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯಂತೆಯೇ ಮುನ್ನಡೆಯಿರಿ.

ನೆನಪಿರಲಿ : ಆರೋಗ್ಯಭರಿತ ಹಸು - ಎಮ್ಮೆಗಳು ಮಾತ್ರ ನಿಮಗೆ ಆದಾಯ ತಂದುಕೊಡಬಲ್ಲವು.

click me!