ಎಸ್.ಕೆ.ಪಾಟೀಲ್ 

ಸರ್ಕಾರಗಳು ಈ ದಿಸೆಯಲ್ಲಿ ಮಾಡಿದ ಪ್ರಯತ್ನ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಆದರೆ ಈಗ ಕರ್ನಾಟಕ ಹಾಲು ಮಹಾಮಂಡಳಿ ಮೊದಲ ಬಾರಿಗೆ ದೇಶಿ ಹಾಲಿಗೆ ಮಾರುಕಟ್ಟೆ ಒದಗಿಸುವ ಬಗ್ಗೆ ಯೋಜನೆ ರೂಪಿಸುತ್ತಿದೆ. ಬೆಂಗಳೂರು ನಗರ ಒಂದರಲ್ಲೇ ಪ್ರತಿದಿನ 6 ಸಾವಿರದಿಂದ 8 ಸಾವಿರ ಲೀಟರ್ ದೇಸಿ ಹಾಲು ಮಾರಾಟವಾಗುತ್ತಿದೆ. ಬೆಲೆ ಸದ್ಯ 80- 100 ರೂ. ಇದೆ. ಕೆಲವು ಕಡೆ 120 ರು. ರವರೆಗೆ ಮಾರಾಟವಾಗುತ್ತಿದೆ. ತುಪ್ಪದ ಬೆಲೆ ಕೆ.ಜಿಗೆ 1500-1800 ರೂ. ಇದೆ! ಹಾಲಿಗಿಂತ ದೇಶಿ ಹಸುಗಳ ತುಪ್ಪದಲ್ಲಿ ಹೆಚ್ಚಿನ ಔಷಧೀಯ ಅಂಶಗಳಿರುವುದರಿಂದ ಇಷ್ಟೊಂದು ಬೆಲೆ ಇರಲು ಕಾರಣ.

ಹಸುವಿನ ಹಾಲಿಗಿಂತ ಮೇಕೆ ಹಾಲೇ ಮೇಲು!

ಕೆಎಂಎಫ್ ನಲ್ಲೂ ಪ್ರತಿದಿನ 2000-2500 ಲೀಟರ್ ದೇಶಿ ಹಾಲು ಸಂಗ್ರಹವಾಗುತ್ತಿದೆ. ಆದರೆ ಇದನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಮಾರುವ ವ್ಯವಸ್ಥೆ ಇನ್ನೂ ಕೆಎಂಎಫ್ ನಲ್ಲಿ ಇಲ್ಲ. ಹೀಗಾಗಿ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಪಾಶ್ಚರೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಹಾಲಿನ ಪ್ಯಾಕೆಟ್ ಸಿದ್ಧವಾದ ಮೇಲೆ ಸಾರ್ವಜನಿಕರಿಗೆ ಬಿಡುಗಡೆ ಮಾಡಲಿದೆ.

ಕನಕಪುರ, ಮಾಗಡಿ ಮುಂತಾದೆಡೆ ಈಗಾಗಲೇ 110 ಕ್ಕೂ ಹೆಚ್ಚು ಹಳ್ಳಿಗಳನ್ನು ಗುರುತಿಸಲಾಗಿದ್ದು ಅಲ್ಲಿನ ರೈತರಿಂದ ದೇಶಿ ಹಸುಗಳ ಹಾಲು ಖರೀದಿಸಲು ಕೆಎಂಎಫ್ ಈಗಾಗಲೇ ಯೋಜನೆ ಸಿದ್ಧಪಡಿಸಿದೆ. ಸದ್ಯ ಪ್ರತಿ ಲೀಟರ್ ಹಾಲಿಗೆ 50 ರೂ. ನೀಡುವ ಉದ್ದೇಶ ಕೆಎಂಎಫ್ ಗೆ ಇದೆಯಂತೆ.

ಮುಂದಿನ ದಿನಗಳಲ್ಲಿ ಇದು ಹೆಚ್ಚಾಗಬಹುದು. ಏಕೆಂದರೆ ಮಾರುಕಟ್ಟೆಯಲ್ಲಿ ಇದರ ಡಬಲ್ ಬೆಲೆಗೆ ದೇಶಿ ಹಸುವಿನ ಹಾಲು ಮಾರಾಟವಾಗುತ್ತಿದೆ. ಆದರೂ ದೇಶಿ ಹಸು ಸಾಕಿ ಹಾಲು ಮಾರುವುದೆಲ್ಲಿ ಎಂದು ಯೋಚಿಸುತ್ತಿದ್ದವರಿಗೆ ಇದು ಆಶಾದಾಯಕವಾಗಲಿದೆ. ಈ ಯೋಜನೆಯನ್ನು ಕೆಎಂಎಫ್ ಕರ್ನಾಟಕದಾದ್ಯಂತ ಆದಷ್ಟು ಬೇಗ ವಿಸ್ತರಿಸಿ ದೇಶಿ ಹಸು ಸಾಕಣೆಗೆ ಪ್ರೋತ್ಸಾಹ ನೀಡಬೇಕು. ವಿದೇಶಿ ಮೂಲದ ಹಸುಗಳ ಹಾಲಿನಲ್ಲಿ 3.5 ರಷ್ಟು ಕೊಬ್ಬಿನ ಅಂಶ ಇದ್ದರೆ, ದೇಶಿ ಹಸುಗಳ ಹಾಲಿನಲ್ಲಿ 4.5 ನಷ್ಟು ಇರುತ್ತದೆ.

ಇದಕ್ಕಿಂತ ಹೆಚ್ಚಾಗಿ ದೇಶಿ ಹಸುವಿನ ಹಾಲು ಎ2 ಪ್ರೋಟಿನ್ ಹೊಂದಿದ್ದು ಸಾಕಷ್ಟು ಕಾಯಿಲೆಗಳಿಗೆ ಔಷಧಿಯಾಗಿ ಕೆಲಸ ಮಾಡಲಿದೆ. ಕೆಎಂಎಫ್ ತಾನೇ ಗಿರ್ ತಳಿಯ ಹಸುಗಳನ್ನು ಗುಜರಾತ್‌ನಿಂದ ತಂದು ರೈತರಿಗೆ ಕೊಡುವುದಲ್ಲದೇ, ಅದನ್ನು ಸಾಕುವ ಬಗ್ಗೆ ತರಬೇತಿ ನೀಡುವ ಯೋಜನೆ ಕೂಡ ಹೊಂದಿದೆ. ಸದ್ಯ ಅನೇಕ ಖಾಸಗಿ ಡೈರಿಗಳು ಕೇವಲ ದೇಶಿ ಹಸುಗಳನ್ನು ಸಾಕಿ ಹಾಲನ್ನು ನೇರವಾಗಿ ಗ್ರಾಹಕರ ಮನೆಗೆ ತಲುಪಿಸುವ ಕೆಲಸ ಮಾಡುತ್ತಿವೆ. ವಿಶಿಷ್ಟ ಪದ್ಧತಿಯಲ್ಲಿ ಅದರ ಹಾಲಿನಿಂದ ತುಪ್ಪವನ್ನೂ ಕೂಡ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಇಲ್ಲೆಲ್ಲ ಮುಂಗಡವಾಗಿ ಬುಕ್ಕಿಂಗ್ ಮಾಡಿ ಗ್ರಾಹಕರು ಖರೀದಿ ಮಾಡುತ್ತಾರೆ. ಇವರಂತೆಯೇ ದೇಶಿ ಹಸು ಸಾಕಲು ಸಾಕಷ್ಟು ರೈತರು ಆಸಕ್ತಿ ಹೊಂದಿದ್ದಾರೆ. ಅಂಥ ಎಲ್ಲ ರೈತರಿಗೆ ಕೆಎಂಎಫ್ ನ ಈ ನಡೆ ಸ್ವಲ್ಪಮಟ್ಟಿಗಾದರೂ ಅನುಕೂಲಕರವಾಗುತ್ತದೆ. ಅವರ ಯೋಜನೆ ಯಾವಾಗ ಜಾರಿಗೆ ಬರುತ್ತೆ ಎಂಬುದರಿಂದ ಹಿಡಿದು ಯೋಜನೆಯ ಸ್ಪಷ್ಟತೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.