JLF 2022: ಜೈಪುರ ಸಾಹಿತ್ಯೋತ್ಸವ ಮೂರನೇ ದಿನದ ಸ್ವಾರಸ್ಯಗಳು

By Suvarna News  |  First Published Mar 13, 2022, 1:31 PM IST

ಜೈಪುರ ಆನ್-ಗ್ರೌಂಡ್ ಸಾಹಿತ್ಯೋತ್ಸವದ ಮೂರನೇ ದಿನದ ಸ್ವಾರಸ್ಯಕರ ವಿಷಯಗಳ ಝಲಕ್ ಇಲ್ಲಿದೆ. 


ಜೋಗಿ

ಜೈಪುರ ಸಾಹಿತ್ಯೋತ್ಸವದ ಮೂರನೇ ದಿನ ಶಶಿ ತರೂರ್, ಕವಿಗಳಾದ ಅಖಿತ್ ಕತ್ಯಾಲ್, ಮೀನಾ ಕಂದಸ್ವಾಮಿ ಸೇರಿದಂತೆ ಬಹಳಷ್ಟು ಪ್ರಖ್ಯಾತನಾಮರ ಮಾತುಕತೆ, ಕವಿಗೋಷ್ಠಿಗಳಿಂದ ಕಳೆಗಟ್ಟಿತ್ತು. ಸಾಹಿತ್ಯ ಪ್ರೇಮಿಗಳ ಗಮನವನ್ನು ಪೂರ್ತಿ ಸೆರೆ ಹಿಡಿದುಕೊಳ್ಳುವಲ್ಲಿ ಬಹುತೇಕ ಗೋಷ್ಠಿಗಳು ಯಶಸ್ವಿಯಾದವು. ಈ ದಿನದ ಗೋಷ್ಠಿಗಳ ಝಲಕ್ ಇಲ್ಲಿವೆ. 

Tap to resize

Latest Videos

undefined

1. ಭಾರತೀಯ ನೌಕಾ ದಂಗೆ ಮತ್ತು ಸ್ವಾತಂತ್ರ್ಯ
ಸ್ವಾತಂತ್ರ್ಯದ ಕೊನೆಯ ಸಮರ—ಭಾರತೀಯ ನೌಕಾ ದಂಗೆಯ ಕುರಿತು ಮಾತಾಡಿದ ಪ್ರಮೋದ್ ಕಪೂರ್, ಸಿಪಾಯಿ ದಂಗೆಯ ನಂತರ ನಡೆದ ಪ್ರಮುಖ ಹೋರಾಟವೆಂದರೆ ರಾಯಲ್ ಇಂಡಿಯನ್ ನೇವಿ ಮ್ಯುಟಿನಿ. ಇದು ಬ್ರಿಟಿಷರನ್ನು ಕಂಗಾಲು ಮಾಡಿತು. ಭಾರತಕ್ಕೆ ಸ್ವಾತಂತ್ರ್ಯ ಅಷ್ಟು ಬೇಗ ದೊರೆಯಲಿಕ್ಕೆ ಕಾರಣವಾದದ್ದೇ ಈ ದಂಗೆ. ಆದರೆ ಇತಿಹಾಸಕಾರರು ಈ ದಂಗೆಯನ್ನು ಜಾಣತನದಿಂದ ಮುಚ್ಚಿಹಾಕಿದ್ದಾರೆ. ನಮ್ಮ ಚರಿತ್ರೆಯಲ್ಲಿ ಇಂಥ ಅಪದ್ಧಗಳು ಸಾಕಷ್ಟು ನಡೆದಿವೆ. ಸ್ವಾತಂತ್ರ್ಯ ದೊರೆಯಲು ಕಾರಣ ಗಾಂಧೀಜಿಯವರ ಅಹಿಂಸಾ ಚಳವಳಿ ಅಲ್ಲ, ಇಂಥ ಹೋರಾಟಗಳು ಎಂದು ಪ್ರತಿಪಾದಿಸಿದರು. ಭಾರತೀಯ ನೌಕಾ ದಂಗೆ ಫೆಬ್ರವರಿ 18 1946ರಂದು ಆರಂಭವಾಗಿ ಕರಾವಳಿಯುದ್ಧಕ್ಕೂ ಹಬ್ಬಿತು. ಇದನ್ನು ಅಡಗಿಸಲು ಕಾಂಗ್ರೆಸ್ ಯತ್ನಿಸಿದರೂ, ನೌಕಾಪಡೆಗಳು ದಿಟ್ಟತನದಿಂದ ಹೋರಾಡಿದವು. ಇದು ನಡೆಯದೇ ಹೋಗಿದ್ದರೆ ಸ್ವಾತಂತ್ರ್ಯ ಸಿಗುವುದು ಇನ್ನೂ ಒಂದೆರಡು ವರುಷ ತಡವಾಗುತ್ತಿತ್ತು ಎಂದು ಪ್ರಮೋದ್ ಕುಮಾರ್ ಹೇಳಿದರು. ಇದನ್ನು ಇತಿಹಾಸ ಮುಚ್ಚಿಟ್ಟಿದೆ ಎಂದು ವಿಷಾದಿಸಿದರು. ಅವರ ಹೊಸ ಪುಸ್ತಕ 1946 Royal Indian Navy Mutiny: Last War of Independenceದಲ್ಲಿ ಈ ಕುರಿತ ಸಂಪೂರ್ಣ ವಿವರಗಳಿವೆ.

2. ಎರಡು ಭಾಷೆಗಳಲ್ಲಿ ಬರೆಯುವ ಅಗತ್ಯ
ಈ ಕಾಲದ ಲೇಖಕರು ಎರಡು ಭಾಷೆಗಳಲ್ಲಿ ಬರೆಯುವುದು ಅಗತ್ಯ. ನಾವ್ಯಾರೂ ಒಂದೇ ಭಾಷೆಯಲ್ಲಿ ಆಲೋಚಿಸುವುದಿಲ್ಲ, ಬರೆಯುವುದೂ ಇಲ್ಲ. ಎರಡು ಭಾಷೆ, ಎರಡು ಜಗತ್ತು ನಮಗೆ ಅನಿವಾರ್ಯ ಎಂದು ಅಖಿಲ್ ಕತ್ಯಾಲ್, ಕುಣಾಲ್ ಬಸು ಮತ್ತು ಅನುಕೃತಿ ಉಪಾಧ್ಯಾಯ ಪ್ರತಿಪಾದಿಸಿದರು. ಅಖಿಲ್ ಕತ್ಯಾಲ್ ಹಿಂದಿ ಮತ್ತು ಇಂಗ್ಲಿಷಿನಲ್ಲಿ ಕವಿತೆ ಬರೆಯುತ್ತಾರೆ. ಕುಣಾಲ್ ಬಸು ಬಂಗಾಲಿಯ ಲೇಖಕರಾಗಿದ್ದರೂ ಇಂಗ್ಲಿಷಿನಲ್ಲಿ ಬರೆಯುತ್ತಾರೆ. ಹಿಂದಿ ಕವಿ ಅನುಕೃತಿ ಇಂಗ್ಲಿಷಿನಲ್ಲಿ ಕವಿತೆ ರಚಿಸುತ್ತಾರೆ.
ಯಾವ ಪದ್ಯ ಯಾವ ಭಾಷೆಯಲ್ಲಿ ಬರೆಯುತ್ತಾರೆ ಎಂದು ಕೇಳಿದಾಗ ಕವಿತೆಯೇ ಭಾಷೆಯನ್ನು ಆರಿಸಿಕೊಳ್ಳುತ್ತದೆ ಎಂದು ಕತ್ಯಾಲ್ ಹೇಳಿದರೆ, ಪ್ರಜ್ಞಾಪೂರ್ವಕವಾಗಿ ಭಾಷೆಯನ್ನು ಆರಿಸಿಕೊಳ್ಳುವುದಾಗಿ ಅನುಕೃತಿ ಹೇಳಿದರು. ಕುಣಾಲ್ ಬಸು ಕಾದಂಬರಿಗಳ ಘಟನೆಗಳು ನಡೆಯುವುದೇ ವಿದೇಶಗಳಲ್ಲಿ ಆದ್ದರಿಂದ ಸಹಜವಾಗಿಯೇ ಇಂಗ್ಲಿಷ್ ಹೊಂದಿಕೆಯಾಗುತ್ತದೆ ಎಂದು ಅವರು ಪ್ರತಿಪಾದಿಸಿದರು. ಪ್ರಾದೇಶಿಕ ಭಾಷೆಯ ಜತೆ ಇಂಗ್ಲಿಷಿನಲ್ಲಿ ಬರೆಯುವುದು ಕೂಡ ಈ ಕಾಲದ ಅಗತ್ಯ ಎಂಬುದು ಸರ್ವಾನುಮತದಿಂದ ಒಪ್ಪಿತವಾಯಿತು.

Jaipur Literature Festival 2022: ಅನುಭವಿ ಕಂಡಂತೆ ಸಾಹಿತ್ಯ ಜಾತ್ರೆ

3. ಕಾಂಗ್ರೆಸ್ ಬಗ್ಗೆ ತಮಾಷೆ
ಜೈಪುರ ಸಾಹಿತ್ಯ ಸಮ್ಮೇಳನದ ಬಹುತೇಕ ಗೋಷ್ಠಿಗಳಲ್ಲಿ ಕಾಂಗ್ರೆಸ್ ಪಕ್ಷ ಲೇವಡಿಗೆ ಒಳಗಾಯಿತು. ಜಾಹೀರಾತು ತಜ್ಞ ಪೀಯೂಷ್ ಪಾಂಡೆ ಬರೆದ ಓಪನ್ ಹೌಸ್ ಪುಸ್ತಕದ ಕುರಿತು ಮಾತುಕತೆ ನಡೆಯುತ್ತಿರುವಾಗ ಅವರು ಶಶಿ ತರೂರನನ್ನು ಉದ್ದೇಶಿಸಿ ಪಕ್ಷ ಅಂದರೆ ಸಾವಿರಾರು ಮಂದಿ ಇರಬೇಕು. ನೀವು ನಾಲ್ಕಾರು ಮಂದಿ ಸೇರಿಕೊಂಡು ಪಕ್ಷ ಅಂತ ಕರೆದುಕೊಳ್ತೀರಲ್ಲ ಅಂತ ಗೇಲಿ ಮಾಡಿದರು. 
ದಿ ಎಸ್ಸೆನ್ಷಿಯಲ್ ಶಶಿ ತರೂರ್ ಗೋಷ್ಠಿಯಲ್ಲಿ ಪತ್ರಕರ್ತ ವೀರ್ ಸಾಂಗ್ವಿ ಕೂಡ ಮತ್ತೆ ಮತ್ತೆ ಸೋಲುತ್ತಿರುವ ಪಕ್ಷದಲ್ಲೇ ನೀವು ಯಾಕಿದ್ದೀರಿ. ಬೇರೆ ಪಕ್ಷಕ್ಕೆ ಯಾಕೆ ಹೋಗುತ್ತಿಲ್ಲ ಅಂತ ಪ್ರಶ್ನಿಸಿದರು. ಕಾಂಗ್ರೆಸ್ ಕ್ರಮೇಣ ನಶಿಸುತ್ತಿರುವ ಪಕ್ಷ ಎಂಬ ಮಾತು ಹೀಗೆ ಹಲವು ಗೋಷ್ಠಿಗಳಲ್ಲಿ ಮೂಡಿ ಬಂದು ಪ್ರೇಕ್ಷಕರ ಚಪ್ಪಾಳೆ ಮತ್ತು ನಗುವಿಗೆ ಕಾರಣವಾಯಿತು.

4. ತುಂಬಿ ತುಳುಕಿದ ಶಶಿ ತರೂರ್ ಗೋಷ್ಠಿ
ಎಂದಿನಂತೆ ಶಶಿ ತರೂರ್ ಗೋಷ್ಠಿಗಳು ತುಂಬಿ ತುಳುಕಿದವು. ವೀರ್ ಸಾಂಘ್ವಿ ಈ ಕುರಿತು ಹೇಳುತ್ತಾ ತಾನು ಸಂದರ್ಶಿಸುತ್ತಿರುವುದು ಒಬ್ಬ ಲೇಖನನನ್ನೋ ರಾಜಕಾರಣಿಯನ್ನೋ ಅಲ್ಲ, ಅಮಿತಾಭ್ ಬಚ್ಚನ್, ಶಾರುಕ್ ಖಾನ್ ಥರದ ಸ್ಟಾರ್ ಸಂದರ್ಶನ ಇದು ಅನ್ನಿಸುತ್ತಿದೆ ಎಂದರು. ಇಂಥ ಬೆಚ್ಚಗಿನ ಮಾತುಗಳು ಲೇಖಕನಿಗೆ ಅತ್ಯಗತ್ಯ, ಇನ್ನೂ ಹೊಗಳಬಹುದು ಅಂತ ಶಶಿ ತರೂರ್ ಅದನ್ನು ಸ್ವಾಗತಿಸಿದರು.
ಶಶಿ ತರೂರ್ ತಮ್ಮ ಬರೆವಣಿಗೆಗೆ ಬಾಲ್ಯದ ದಿನಗಳ ಏಕಾಂತವೇ ಕಾರಣ ಎಂದು ವಿವರಿಸಿದರು. ಆಗ ಬೇರೆ ಯಾವ ಮನರಂಜನೆಯೂ ಇರಲಿಲ್ಲ. ತುಂಬ ಓದುತ್ತಿದ್ದೆವು, ಎಲ್ಲಾ ಪತ್ರಿಕೆಗಳನ್ನೂ ಓದುವ ಅಭ್ಯಾಸ ಇತ್ತು. ಹೀಗಾಗಿ ಸಹಜವಾಗಿಯೇ ಬರೆಯುವುದು ಅಭ್ಯಾಸವಾಯಿತು. ಹನ್ನೊಂದನೇ ವರುಷದಲ್ಲಿ ಬರೆದ ಒಂದು ಕತೆ ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು. ಹೀಗಾಗಿ ತಾನು ಲೇಖಕನಾದೆ ಎಂದು ತಮ್ಮ ಬರಹದ ಸ್ಫೂರ್ತಿಯ ಗಳಿಗೆಗಳನ್ನು ಹಂಚಿಕೊಂಡರು. ನಂತರ ಅವರ ಪುಸ್ತಕ ಸಹಿ ಮಾಡುವ ಕಾರ್ಯಕ್ರಮವಿತ್ತು. ಅದಕ್ಕೆ ಸುಮಾರು ಐನೂರು ಮಂದಿ ಸಾಲುಗಟ್ಟಿ ನಿಂತಿದ್ದರು.

ಖ್ಯಾತ ಕವಿ ಗುಲ್ಜಾರ್-ಮೇಘನಾ ಸಂವಾದಕ್ಕೆ ಭಾರಿ ಮೆಚ್ಚುಗೆ!

5. ಕವಿಗೋಷ್ಠಿಗೆ ಕಿಕ್ಕಿರಿದ ತರುಣ ತರುಣಿಯರು
ಅಖಿತ್ ಕತ್ಯಾಲ್, ಮೀನಾ ಕಂದಸ್ವಾಮಿ ಕವಿತೆಗಳನ್ನು ಓದುವ ಗೋಷ್ಠಿ ತುಂಬಿ ತುಳುಕಿತು. ಕವಿತೆಗಳನ್ನು ಓದುವ ಹೊತ್ತಿಗೆ ನಿಶ್ಯಬ್ದ, ಕವಿತೆ ಓದಿದ ನಂತರ ಚಪ್ಪಾಳೆ. ಕವಿಗಳಿಗೆ ಕವಿತೆಯ ಮೇಲಿನ ನಂಬಿಕೆ ಹೆಚ್ಚಿಸುವಂಥ ಸನ್ನಿವೇಶ. ಸುಮಾರು ಸಾವಿರ ಮಂದಿ ಸಿಕ್ಕಸಿಕ್ಕಲ್ಲಿ ಕೂತು ಕವಿತೆ ಕೇಳುತ್ತಿದ್ದರು. ಕವಿತೆ ಓದುವ ಮಧ್ಯೆ ಹುಡುಗನೊಬ್ಬ ಇದೇ ಪದ್ಯ ಓದಿ ಅಂತ ಗದ್ಗದಿತನಾಗಿ ಹೇಳಿ, ಕಣ್ಣೀರಾದ. ಅದೇ ಪದ್ಯವನ್ನು ಅಖಿತ್ ಕತ್ಯಾಲ್ ಓದಿ ಜತೆಗೆ ಕೆನ್ನೆ ಒದ್ದೆ ಮಾಡಿಕೊಂಡರು.
ಕವಿತೆ ಕೇಳಲು ಬಂದ ಅರ್ಧಕ್ಕರ್ಧ ಮಂದಿಯ ಕೈಯಲ್ಲಿ ಕವಿತಾ ಸಂಕಲನ ಕೂಡ ಇತ್ತು. ಗೋಷ್ಠಿಯ ನಂತರ ಕವಿಗಳ ಸಹಿ ತೆಗೆದುಕೊಳ್ಳಲು ಸುದೀರ್ಘ ಸರತಿಯ ಸಾಲು ಇತ್ತು.

click me!