ಖ್ಯಾತ ಕವಿ ಗುಲ್ಜಾರ್-ಮೇಘನಾ ಸಂವಾದಕ್ಕೆ ಭಾರಿ ಮೆಚ್ಚುಗೆ!
ಶಾಲು ಹೊದ್ದು ಕೂತ 84ರ ಅಪ್ಪ. ತಾನೂ ಶಾಲು ಹೊದ್ದ 45ರ ಮಗಳು. ಅಪ್ಪ ಮಾತಾಡುವಾಗೆಲ್ಲ ಅವರನ್ನೇ ನೋಡುತ್ತಿದ್ದ ಕಂದ, ಮಗಳು ಮಾತಾಡುವಾಗ ಅವಳನ್ನೇ ದಿಟ್ಟಿಸುವ ತಂದೆ, ಅಪ್ಪನೆದುರು ಬಾಲ್ಯಕ್ಕೆ ತುಡಿಯುವ ಮಗಳು, ಮಗಳೆದುರು ತನ್ನ ಯೌವನಕ್ಕೆ ಸರಿಯುವ ತಂದೆ- ನಿರ್ದೇಶಕ, ಗೀತರಚನಕಾರ ಗುಲ್ಜಾರ್ ಮತ್ತು ನಿರ್ದೇಶಕಿ ಮೇಘನಾ ಗುಲ್ಜಾರ್ ಜೈಪುರ ಸಾಹಿತ್ಯೋತ್ಸವದಲ್ಲಿ ಕಾತರದಿಂದ ಕಾಯುತ್ತಿದ್ದ ಸಾಹಿತ್ಯಾಸಕ್ತರಿಗೆ ಕಂಡದ್ದು ಹೀಗೆ.
ಜೋಗಿ
ಅಪ್ಪನಿಗೆ ಸುಸ್ತಾಗುತ್ತದೆಂದು ಮಗಳು ಕೊಂಚ ನಿಧಾನವಾಗಿಯೂ ಮಗಳಿಗೆ ತಡವಾಗುತ್ತದೆಂದು ಅಪ್ಪ ಕೊಂಚ ವೇಗವಾಗಿಯೂ ನಡೆದುಕೊಂಡು ಬಂದು ವೇದಿಕೆ ಹತ್ತಿದ್ದರೆ, ಮಿಕ್ಕೆಲ್ಲ ಗೋಷ್ಠಿಗಳನ್ನು ತೊರೆದು ಈ ತಂದೆಮಗಳನ್ನು ನೋಡಲೆಂದೇ ಸೇರಿದವರ ಚಪ್ಪಾಳೆ ಅವರನ್ನು ಸ್ವಾಗತಿಸಿತು.
ಮೇಘನಾ ಗುಲ್ಜಾರ್ ತನ್ನ ತಂದೆಯ ನೆನಪುಗಳನ್ನು ಹಂಚಿಕೊಂಡ ಬಿಕಾಸ್ ಹಿ ಈಸ್.. ಪುಸ್ತಕದ ಸುತ್ತವೇ ಸಾಗಿದ ಮಾತುಕತೆಯಲ್ಲಿ ಮೇಘನಾ ತನ್ನ ತಂದೆಯ ಒಡನಾಟದ ನೆನಪುಗಳನ್ನು ದಾಖಲಿಸಿದರು. ಈಗ ಎಲ್ಲರೂ ಗಂಡ ಹೆಂಡತಿ ಜೊತೆಯಾಗಿ ಮಕ್ಕಳನ್ನು ಬೆಳೆಸುವ ಕುರಿತು ಮಾತಾಡುತ್ತಾರೆ. ಆದರೆ ನಮ್ಮಪ್ಪ ನನ್ನ ಪಾಲಿಗೆ ಅಮ್ಮನೂ ಆಗಿದ್ದರು. ಹೀಗಾಗಿ ಅವರನ್ನು ನಾನು ಮಾತೃರೂಪಿ ತೀರ್ಥರೂಪ ಎಂದೇ ಕರೆಯುತ್ತೇನೆ. ಅವರು ನನ್ನ ಯೂನಿಫಾರ್ಮು ಇಸ್ತ್ರಿ ಮಾಡುವುದು, ಜಡೆ ಹಾಕುವುದು, ಟೈ ಕಟ್ಟುವುದು, ಶೂ ಪಾಲಿಶ್ ಮಾಡುವುದರಿಂದ ಹಿಡಿದು ಅಮ್ಮಂದಿರೇ ಮಾಡುವ ಎಲ್ಲವನ್ನೂ ಮಾಡುತ್ತಿದ್ದರು ಎಂದು ಮೇಘನಾ ನೆನಪಿಸಿಕೊಂಡರು.
ಅವಳು ನಾಲ್ಕು ವರ್ಷದ ಮಗಳಾಗಿದ್ದಾಗ ನಾನು ನಾಲ್ಕು ವರ್ಷದ ತಂದೆಯಾಗಿದ್ದೆ. ಅವಳು ಮಗಳಾಗಲು ಕಲಿಯುತ್ತಿದ್ದರೆ ನಾನು ತಂದೆಯಾಗಲು ಕಲಿಯುತ್ತಿದ್ದೆ. ಇಬ್ಬರಿಗೂ ತಾವು ಒಳ್ಳೆಯ ಮಗಳು ಮತ್ತು ತಂದೆ ಆಗಬೇಕು ಅನ್ನುವ ಆಸೆಯಂತೂ ಇತ್ತು. ಆದರೆ ನಾನು ತಾಯಿಯ ಪಾತ್ರವನ್ನೂ ಸೊಗಸಾಗಿ ನಿರ್ವಹಿಸಿದೆ ಎಂದು ಗುಲ್ಜಾರ್ ತನ್ನ ಮಗಳ ಅಕ್ಕರೆಯ ಸಂಬಂಧವನ್ನು ನೆನಪಿಸಿಕೊಂಡರು.
ಅಪ್ಪ ತನ್ನನ್ನು ಬೋಸ್ಕಿ ಎಂದು ಕರೆಯುತ್ತಿದ್ದರು ಎಂದು ಮಗಳೆಂದರೆ, ರೇಷ್ಮೆಯಂತೆ ಕೈಯಿಂದ ಜಾರುತ್ತಿದ್ದ ಅವಳನ್ನು ಮತ್ತೇನು ಕರೆಯಬಹುದಿತ್ತು. ಚೀನಾದ ರೇಷ್ಮೆ ಬಟ್ಟೆ ಮುಟ್ಟಿದಂತಿದ್ದ ಅವಳನ್ನು ಹಾಗಲ್ಲವೇ ಕರೆಯಬೇಕು ಎಂದು ಅಪ್ಪ ಪ್ರಶ್ನೆ ಹಾಕಿದರು. ಅವರಿಬ್ಬರ ನೆನಪುಗಳನ್ನು ಕೆರಳಿಸಲಿಕ್ಕೆ ನಿರೂಪಕ ಶಂತನು ರಾಯ್ ಚೌಧರಿಯೂ ವೇದಿಕೆಯಲ್ಲಿದ್ದರು.
ನಮ್ಮಪ್ಪ ದೊಡ್ಡ ಕವಿ ಅನ್ನೋದು ಗೊತ್ತಿರಲಿಲ್ಲ. ತಂದೆ ತಾಯಿಯ ವ್ಯಕ್ತಿತ್ವ ಮಕ್ಕಳಿಗೆ ತಡವಾಗಿ ಗೊತ್ತಾಗುತ್ತದೆ. ಅದರೆ ಅಪ್ಪನೇ ಅಮ್ಮನೂ ಆಗಿ ಸಲಹಿದ್ದು ಮಾತ್ರ ಮರೆಯಲಾರೆ. ನಮ್ಮಪ್ಪ ಮತ್ತು ನನ್ನ ಮಧ್ಯೆ ಇದ್ದ ಬಾಂಧವ್ಯ ಮತ್ತು ನಂಬಿಕೆ ನಮ್ಮನ್ನು ಮುನ್ನಡೆಸಿತು. ಮಗಳು ಸುಳ್ಳು ಹೇಳುವುದಿಲ್ಲ ಅಂತ ಅಪ್ಪ ನಂಬಿದ್ದರು. ಅಪ್ಪನ ಹತ್ತಿರ ಸುಳ್ಳು ಹೇಳಬಾರದು ಅಂತ ನಾನು ನಿರ್ಧರಿಸಿದ್ದೆ ಎಂದು ಮೇಘನಾ ತಂದೆಯ ಜೊತೆಗಿನ ಸಂಬಂಧವನ್ನು ವಿವರಿಸಿದರು. ಒಂದು ಸಲ ಅಪ್ಪನ ಬಳಿ ಹಣ ಕೇಳಿದಾಗ ಅಪ್ಪ ದುಡ್ಡು ಕೊಡದೇ ಹೊರಗೆ ಹೋಗಿದ್ದರು. ಅಪ್ಪ ಎಷ್ಟೇ ಪ್ರೀತಿಸಿದರೂ ಅವರಿಗೆ ಶಿಸ್ತು ಕಲಿಸುವುದು ಗೊತ್ತಿತ್ತು. ನನ್ನನ್ನು ಎಂದೂ ದನಿ ಎತ್ತರಿಸಿ ಬೈಯದೇ, ಹೊಡೆಯದೇ ಅವರು ನಾನೇನು ಮಾಡಬೇಕು ಎಂದು ಹೇಳುತ್ತಿದ್ದರು ಎಂದು ಮೇಘನಾ ವಿವರಿಸಿದರು.
ತಂದೆ ಮಗಳು ಹಂಚಿಕೊಂಡ ಅನೇಕ ಮಧುರಕ್ಷಣಗಳು ಪ್ರೇಕ್ಷಕರ ಚಪ್ಪಾಳೆಗೆ ಪಾತ್ರವಾದವು.
ಧೂಳಿಲ್ಲದ ಸಾಹಿತ್ಯ ಸಮ್ಮೇಳನ
ಜೈಪುರದ ಬೀದಿಗಳಲ್ಲಿ ಕೊಳೆಯಿರಬಹುದು, ಆದರೆ ಸಾಹಿತ್ಯ ಹಬ್ಬ ನಡೆಯುವ ಜಾಗದಲ್ಲಿ ಧೂಳಿಲ್ಲ. ಯಾವ ಸಾಹಿತಿಯ ಪಾದಧೂಳಿಯಿಂದಲೂ ಸಾಹಿತ್ಯ ಪವಿತ್ರವಾಗುತ್ತದೆಂದು ಹೇಳುವ ಹಾಗೂ ಇಲ್ಲ. ಸಮ್ಮೇಳನದ ಎಲ್ಲಾ ವೇದಿಕೆಗಳೂ ನೆಲೆಯಾಗಿರುವುದು ದಿಗ್ಗಿ ಪ್ಯಾಲೇಸ್ ಎಂಬ ಹೋಟೆಲಿನ ಒಳಗೆ. ಅಲ್ಲಿಯೇ ಐದಾರು ವೇದಿಕೆಗಳನ್ನು ಅಲ್ಲಲ್ಲಿ ಹಾಕುತ್ತಾರೆ. ಪ್ರಧಾನ ವೇದಿಕೆಯ ಮುಂದೆ ಒಂದೂವರೆ ಸಾವಿರ ಮಂದಿ ಕೂರುವಷ್ಟು ಜಾಗವಿದ್ದರೆ, ಐನೂರು ಮಂದಿ ನಿಂತುಕೊಂಡು ಕಾರ್ಯಕ್ರಮ ನೋಡಬಹುದು. ಆದರೆ ಜನ ಕಾಲಿಡುವೆಡೆಯಲ್ಲಿ ಕಾರ್ಪೆಟುಗಳಿರುವುದರಿಂದ ಶುಚಿರ್ಭೂತ ಸಾಹಿತ್ಯ ಲಭ್ಯ.
ಸಣ್ಣ ಸಣ್ಣ ವೇದಿಕೆಗಳ ಸುಖ
ಮುಖ್ಯ ವೇದಿಕೆಯಲ್ಲಿ ಸೆಲೆಬ್ರಿಟಿಗಳು ರಾರಾಜಿಸಿದರೆ, ಸತ್ವಪೂರ್ಣ ಲೇಖಕರಿಗೋಸ್ಕರ ಸಣ್ಣ ಸಣ್ಣ ವೇದಿಕೆಗಳಿರುತ್ತವೆ. ಇನ್ನೂರು ಮುನ್ನೂರು ಐನೂರು ಮಂದಿ ಕೂರಬಹುದಾದ ಪುಟ್ಟ ಪುಟ್ಟ ವೇದಿಕೆಗಳಲ್ಲಿ ಬೇರೆ ಬೇರೆ ವಿಚಾರಗಳ ಕುರಿತು ಮಾತುಕತೆ, ಪ್ರಶ್ನೆ, ಸಂವಾದ ನಡೆಯುತ್ತದೆ. ಯಾರು ಬೇಕಿದ್ದರೂ ಪ್ರಶ್ನೆ ಕೇಳಬಹುದು. ಕಾರ್ಯಕ್ರಮಗಳು ಕ್ಲುಪ್ತ ಸಮಯಕ್ಕೆ ಆರಂಭವಾಗಿ ನಿಗದಿತ ವೇಳೆಗೆ ಸರಿಯಾಗಿ ಮುಗಿಯುತ್ತವೆ. ಸಾಹಿತ್ಯ ಸಮ್ಮೇಳನದ ವೇದಿಕೆಯ ಮೇಲೆ ಸಮ್ಮೇಳನದ ಅಧ್ಯಕ್ಷರು, ಪರಿಷತ್ ಅಧ್ಯಕ್ಷರು, ಸ್ಥಳೀಯ ಗಣ್ಯರೆಲ್ಲ ಸದಾ ಕೂತಿರುವಂತೆ ಇಲ್ಲಿ ಯಾರೂ ಕೂತಿರುವುದಿಲ್ಲ. ಮಾತಾಡುವವರನ್ನು ಬಿಟ್ಟರೆ ಮತ್ಯಾರಿಗೂ ಪ್ರವೇಶವಿಲ್ಲ. ಸ್ವಾಗತ, ವಂದನಾರ್ಪಣೆ, ಉದ್ದುದ್ದದ ನಿರೂಪಣೆ ಇಲ್ಲ. ವಿಷಯಕ್ಕೆ ಪ್ರಾಧಾನ್ಯ. ಮಿಕ್ಕೆದ್ದೆಲ್ಲ ಗೌಣ.
ಹೆಣ್ಮಕ್ಕಳ ಸಾಮ್ರಾಜ್ಯ
ಸಮ್ಮೇಳನದ ಅಂಗಳದ ತುಂಬ ತರುಣಿಯರದ್ದೇ ಕಾರುಬಾರು. ಬರುವ ಪ್ರೇಕ್ಷಕರ ಪೈಕಿ ಶೇಕಡಾ 80ರಷ್ಟು ಮಹಿಳೆಯರು. ಪ್ರೇಕ್ಷಕರ ಸರಾಸರಿ ವಯಸ್ಸು 30. ಸುಮ್ಮನೆ ಬರುವವರು, ದುಡ್ಡು ಕೊಟ್ಟು ಬರುವವರು, ಕಾಲೇಜುಗಳಿಂದ ಬರುವವರು ಎಂದು ಮೂರು ವರ್ಗಗಳುಂಟು. ಶಬರಿಮಲೆ ಮುಂತಾದ ವಿಚಾರಗಳಿಗೆ ಹೆಣ್ಮಕ್ಕಳು ಕೆರಳಿ ಸಿಟ್ಟಾಗಿ ಪ್ರಶ್ನಿಸುವುದುಂಟು. ಗುಲ್ಜಾರ್ ಥರದ ಕವಿಗಳು ಬಂದಾಗ ಸಂತೋಷಪಡುವುದೂ ಉಂಟು. ಎಲ್ಲರೂ ಗಮನವಿಟ್ಟು ಮಾತು ಕೇಳುತ್ತಾರೆ ಅನ್ನುವುದು ನಿಜ.
ಸನಾತನ ಸಂಭ್ರಮದೊಂದಿಗೆ ಜೈಪುರ ಸಾಹಿತ್ಯ ಜಾತ್ರೆ ಶುರು