ನೆನಪುಗಳೇ ಹಾಗೆ..ಬಿಟ್ಟು ಹೋದ ಗೆಳತಿಯಂತೆ: ಬೇಡ ಎಂದರೂ ಪದೇಪದೇ ಕಾಡುತ್ತದೆ

By Kannadaprabha NewsFirst Published Jun 6, 2021, 12:40 PM IST
Highlights

ಜೂನ್ ತಿಂಗಳಲ್ಲಿ ಶಾಲೆ ಪುನರಾರಂಭ ಆದಾಗ ಪುಸ್ತಕಗಳಿಗೆ ನೀಟಾಗಿ ಬೈಂಡ್ ಹಾಕಿ ಸ್ಟಿಕ್ಕರ್ ಅಂಟಿಸಿ ಹೊಸ ಕೊಡೆ ಹೊಸ ಸಮವಸ್ತ್ರ ಧರಿಸಿ ನೀರಲ್ಲಿ ಆಡುತ್ತಾ ಶಾಲೆಯ ಕಡೆ ಹೆಜ್ಜೆ ಇಡುತ್ತಿದ್ದ ಆ ದಿನಗಳು ಮತ್ತೆಂದೂ ಮರಳಿ ಬಾರದ ಸತ್ಯವೇ ಬಿಡಿ

-ರೂಪೇಶ್ ಜೆ.ಕೆ, ಉಡುಪಿ.

ಅದು ಬಿರು ಬಿಸಿಲು,ಜಡಿ ಮಳೆಯನ್ನೂ ಲೆಕ್ಕಿಸದೆ ಮೈ ಜಡ ಬಿಟ್ಟು ಸ್ವತಂತ್ರ ಹಕ್ಕಿಗಳಂತೆ ಹಾರುವ ಮುಗ್ಧ ಮನಸ್ಸಿನ ತುಂಟಾಟದ ವಯಸ್ಸು.ಬೇಸಿಗೆ ಬಂತೆಂದರೆ ಸಾಕು.ಶಾಲೆಗಳಿಗೆ ವಾರ್ಷಿಕ ರಜೆ.ಬೆಳ್ಳಂಬೆಳಗ್ಗೆ ಅರ್ಧಂಬರ್ಧ ಹಲ್ಲುಜ್ಜಿ ಇಡ್ಲಿಯೋ,ದೋಸೆಯೋ ನಿನ್ನೆ ಮಾಡಿದ ಮೀನು ಸಾರಿನ ಜೊತೆ ತಿಂದು ಅಂಗಳಕ್ಕೆ ಜಿಗಿದರೆ ಸಾಕು..ಮತ್ತೆ ಮನೆ ಕಡೆ ವಾಪಾಸ್ಸಾಗೋದು ಮಧ್ಯಾಹ್ನ ದ ಉರಿ ಬಿಸಿಲಿಗೆ.

ಕ್ರಿಕೆಟ್ಟಿನ ಗೆಳೆಯರೆಲ್ಲಾ ಒಂದೆಡೆ ಸೇರಿ ಮರ ಗಿಡಗಳ 'ಎಲೆ'ಯಲ್ಲಿ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬೌಂಡರಿ ಗೆರೆ ಹಾಕಿ ನಂತರ ಅಲ್ಲಿ 4-5 ಓವರ್ ಗಳ ಕ್ರಿಕೆಟ್ ಆಟ ಶುರು.ನಾವೇ ಅಂಟಿಸಿದ MRF ಸ್ಟಿಕ್ಕರ್ ನ ಬ್ಯಾಟ್ಗಳು,ಕವರ್ ಹೋದ ಟೆನ್ನಿಸ್ ಬಾಲು, ಸ್ವಯಂ ಘೋಷಿತ ಸಚಿನ್,ದ್ರಾವಿಡ್ ಜೊತೆ ದಾಂಡು-ಚೆಂಡಿನ ಸಮರ.ನಿರ್ಣಾಯಕರು ಬ್ಯಾಟಿಂಗ್ ಟೀಮ್ ನ ಸದಸ್ಯನಾಗಿರುವುದರಿಂದ ಅಲ್ಲಿ ಚರ್ಚೆಗೆ ಆಸ್ಪದವಿದೆ.! ಟಾಸ್ ಗೆದ್ದ ತಂಡ ಇಲ್ಲಿ ಯಾವತ್ತೂ ಫಸ್ಟ್ ಬ್ಯಾಟಿಂಗ್. ಸ್ಕೋರ್ ಬೋರ್ಡ್ನಲ್ಲಿ  ಏರಿಳಿತ ಕಂಡರೂ ಪರವಾಗಿಲ್ಲ..ಬ್ಯಾಟಿಂಗ್ ಎಲ್ಲರಿಗೂ ಸಿಗಬೇಕು.ಇದು ಇಲ್ಲಿನ ರೂಲ್ಸ್ .

ಜೂನ್ ತಿಂಗಳಲ್ಲಿ ಶಾಲೆ ಪುನರಾರಂಭ ಆದಾಗ ಪುಸ್ತಕಗಳಿಗೆ ನೀಟಾಗಿ ಬೈಂಡ್ ಹಾಕಿ ಸ್ಟಿಕ್ಕರ್ ಅಂಟಿಸಿ ಹೊಸ ಕೊಡೆ ಹೊಸ ಸಮವಸ್ತ್ರ ಧರಿಸಿ ನೀರಲ್ಲಿ ಆಡುತ್ತಾ ಶಾಲೆಯ ಕಡೆ ಹೆಜ್ಜೆ ಇಡುತ್ತಿದ್ದ ಆ ದಿನಗಳು ಮತ್ತೆಂದೂ ಮರಳಿ ಬಾರದ ಸತ್ಯವೇ ಬಿಡಿ.!

ಸಖತ್ ಸಂಶೋಧನೆ; ಕೊರೋನಾ ಬಂದೋದವ ಮುಂದಿನ 10 ತಿಂಗಳು ಬಚಾವ್!

ಇನ್ನು ಮಳೆಗಾಲ ಬಂತೆಂದರೆ ಸಾಕು.ಕ್ರಿಕೆಟ್ಟಿ ಗೆ ವಿದಾಯ ಕೊಟ್ಟು ಮುಕ್ಕಾಲಂಶ ಗಾಳಿ ತುಂಬಿದ ಬಾಲಿನ ಜೊತೆ ಪುಟ್ಬಾಲ್ ಆಟ ಶುರು.ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಮಾತಿದೆಯಲ್ಲ,ಅದಕ್ಕನುಗುಣವಾಗಿ ಗೋಲ್ ಕೀಪರ್ ನ ಆಯ್ಕೆ! ಆಮೇಲೆ ಅಲ್ಲಿನ ವಾತಾವರಣಕ್ಕೆ ಸರಿಹೊಂದುವ ನಾವೇ ಮಾಡಿದ ರೂಲ್ಸ್ ಗಳು.ಮನೆ ಸೇರುವ ಮೊದಲು ಮಳೆನೀರಿಗೆ ಮೈಯೊಡ್ಡಿ ಅಂಗಿ-ಚಡ್ಡಿಗೆ ಮೆತ್ತಿಕೊಂಡ ಕೆಸರನ್ನು ತೊಳೆದು ಮಧ್ಯಾಹ್ನ ಹೊತ್ತಿಗೆ ಮನೆ ಮುಂದೆ ಊಟಕ್ಕೆ ಹಾಜರ್.ನಿಷ್ಕಲ್ಮಶ ಮನಸ್ಸಿನ ಪ್ರಾಯ ಅದು.

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ,ಮಹಾಭಾರತ ಧಾರಾವಾಹಿಗಳು ನಮ್ಮನ್ನು ಒಂದಷ್ಟು ಪೌರಾಣಿಕ ಕಥೆಗಳ ಕಡೆ ಒಲವು ಮೂಡಿಸಿದ್ದವು.ಶಕ್ತಿಮಾನ್ ಆಗ ನಮ್ಮ ಪಾಲಿನ ಸೂಪರ್ ಮ್ಯಾನ್!.ಕಳ್ಳ-ಪೊಲೀಸ್,ಕಣ್ಣಾ ಮುಚ್ಚಾಲೆ,ಮರ ಕೋತಿ ಆಟಗಳು ದಿನದಲ್ಲಿ ಒಮ್ಮೆಯಾದರೂ ಆಡದೆ ಇದ್ದರೆ ಹೊತ್ತು ಮುಳುಗುತ್ತಿರಲಿಲ್ಲ.ಚೆಸ್,ಕೇರಂ,ಲೂಡೋ ಆಟಗಳು ಒಟ್ಟಾದ ಗೆಳೆಯರ ಮೇಲೆ ನಿರ್ಧಾರಿತವಾಗಿತ್ತು.ಅಪರೂಪಕ್ಕೊಮ್ಮೆ ಹೋಟೆಲುಗಳಿಗೆ ಕಾಲಿಟ್ಟಾಗ ಮಸಾಲೆ ದೋಸೆ,ಗಡ್ ಬಡ್ ಐಸ್ ಕ್ರೀಂ ಮೆನು ನೋಡದೆ ಕಾಮನ್ ಆಗಿ ಆರ್ಡರ್ ಆಗುತ್ತಿತ್ತು.ಹಬ್ಬದ ದಿನದಂದು ಕೊಡಿಸುತ್ತಿದ್ದ ಬಾಬಾ ಸೂಟ್ ಡ್ರೆಸ್ಸುಗಳು ಕಪಾಟಿಂದ ಹೊರ ಬರಬೇಕಾದರೆ ಶಾಲಾ ವಾರ್ಷಿಕೋತ್ಸವೇ ಬರಬೇಕಿತ್ತು.!

ಸ್ಟ್ರಾಂಗ್ ಹೆಣ್ಣು ಮಗಳು ಎಂದಿಗೂ ಈ ತಪ್ಪುಗಳನ್ನು ಮಾಡೋದಿಲ್ಲ!.

ಗಾಳ ಹಾಕಿ ಮೀನು ಹಿಡಿದು ಹೊಳೆಯಲ್ಲಿ ಈಜಾಡಿದರೆ ಏನೋ ಖುಷಿ.ಇಲ್ಲಿ ಮಾವಿನ ಕಾಯಿ ಒಂದೇಟಿಗೆ ಬೀಳಿಸುವವ ದೊಡ್ಡ ಪ್ರತಿಭೆಯಾದರೆ,ಊರಿನ ಅಕ್ಕ-ಪಕ್ಕದಲ್ಲಿರುವ ಗೇರು ಮರದಿಂದ ಕಣ್ ತಪ್ಪಿಸಿ ಗೇರುಬೀಜ ಎಗರಿಸುವುದು ಕೂಡಾ ಒಂದು ಪ್ರತಿಭೆ.ಊರಲ್ಲಿ ಆಗಾಗ್ಗೆ ರಂಗೇರಿಸುತ್ತಿದ್ದ ಸೈಕಲ್ ಸರ್ಕಸ್,ಯಕ್ಷಗಾನ ಬಯಲಾಟಗಳು ಆಗಿನ ಟ್ರೆಂಡ್.ಒಂದೆಡೆ ಬ್ರೇಕ್ ಇಲ್ಲದ ಸೈಕಲ್ ಹತ್ತಿ ಕಾಲನ್ನು ಒಂದಿಂಚೂ ನೆಲಕ್ಕಿಡದೆ ಸೈಕಲ್ ಮೇಲೆ ತನ್ನ ಕಸರತ್ತು ಪ್ರದರ್ಶಿಸುತ್ತಿದ್ದರೆ, ಇನ್ನೊಂದೆಡೆ ಸ್ತ್ರೀ ವೇಷದಲ್ಲಿ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುವ ವೇಷಧಾರಿಗಳ ಜೊತೆ ಸಂಜೆಯ ಗಾಳಿಯ ತಂಪಿಗೆ ಸುಮಾರಾಗಿ ಎಣ್ಣೆ ಹೊಡೆದು ಬರುತ್ತಿದ್ದ ಗಂಡ್ ಹೈಕ್ಳ ನೃತ್ಯ ಇನ್ನೊಂದೆಡೆ!!.

ಇನ್ನು ಯಕ್ಷಗಾನದಲ್ಲಿ ಭಾಗವತಿಕೆಯೇ ಜೀವಾಳ.ಭಾಗವತರು ಹಾಡಿನಲ್ಲಿ ಕಥೆಯನ್ನು ಹೇಳಹೊರಟರೆ,ಪಾತ್ರಧಾರಿಯು ಹಾಡಿನ ಪದಗಳಿಗೆ ತಕ್ಕಂತೆ ನೃತ್ಯ,ಸಂಭಾಷಣೆಯ ಮೂಲಕ ಅದನ್ನು ವಿವರಿಸುತ್ತಾ ಯಾವುದೇ ಅಸಂಬದ್ಧ ಹಾಸ್ಯಕ್ಕೆ ಆಸ್ಪದಕೊಡದೆ ಪ್ರೇಕ್ಷಕ ಪ್ರಭುಗಳನ್ನು ರಂಚಿಸುತ್ತಾರೆ. ಸ್ತ್ರೀ ವೇಷಧಾರಿಗಳ ಅಲಂಕಾರವಂತೂ ದೇವಲೋಕದ ಅಪ್ಸರೆಯರೇ ಧರೆಗಿಳಿದು ಬಂದಂತೆ ಕಂಡರೆ,ರಾಜ(ನಾಯಕ)ರ ಕಿರೀಟಗಳು ಕಣ್ಣು ಮಿಟಿಕಿಸಿ ನೋಡುವಂತಿರುತ್ತದೆ.ತಾಳಕ್ಕೆ ತಕ್ಕಂತೆ ಚೆಂಡೆಯ ಸಡ್ಡು ರಂಗಸ್ಥಳದ ಮೆರಗನ್ನು ಹೆಚ್ಚಿಸಿದರೆ,ಸುಮಾರು 4 ರಿಂದ 5 ಗಂಟೆಗಳ ಕಾಲ ಹತ್ತಡಿ ಉದ್ದಗಲದಲ್ಲಿ ಸುಧೀರ್ಘವಾಗಿ ಆಡಿ ತೋರಿಸುವ ಈ ಕಲೆಗೆ ಬೆಲೆಕಟ್ಟಲು ಸಾಧ್ಯವಿಲ್ಲ.ಕೋಟಿ-ಕೋಟಿ ಖರ್ಚು ಮಾಡಿ ಒಂದು ಸಿನಿಮಾ ಮಾಡುವ ಈ ಕಾಲದಲ್ಲಿ,ನಮ್ಮ ಸಾಂಪ್ರದಾಯಿಕ ಯಕ್ಷಗಾನ ತನ್ನ ಹಳೇ ಛಾಪು ಬಿಡದೆ ಈಗಲೂ ದಿನಂಪ್ರತಿ ಪ್ರದರ್ಶನ ಕಾಣುತ್ತಿದೆ.(ಕೋವಿಡ್ ಕಾರಣದಿಂದಾಗಿ ಈಗ ಬ್ರೇಕ್ ಬಿದ್ದಿದೆ) ಇದಕ್ಕೆ ಕಾರಣ ಜನರು ಬಯಲಾಟದ ಮೇಲೆ ಇಟ್ಟಂತಹ ಭಕ್ತಿ.ಅಕ್ಕ ಪಕ್ಕದ ಊರಿನ ಹಿರಿಯರಿಗಂತೂ ಆ ರಾತ್ರಿ ಅಲ್ಲೇ ಟೆಂಟು!.ಅದೇನೆ ಇರಲಿ ಆದರೆ ಯಕ್ಷಗಾನ ಕಲಾವಿದರು ಆಗಿನ ಕಾಲಕ್ಕೆ ನಮಗೆ ಕಂಡಿದ್ದು ಬರೀ ಕಲಾವಿದರಾಗಿ ಅಲ್ಲ "ಕತ್ತಲೆಯ ಲೋಕದಲ್ಲಿ ಮಿನುಗುತಿದ್ದ ಬಣ್ಣದ ತಾರೆಗಳಾಗಿ."

ಗರ್ಲ್‌ಫ್ರೆಂಡ್‌ನ ನೋಡೋ ಆಸೆ ತಡೆಯೋಕಾಗಿಲ್ಲ, ವಧುವಾಗಿ ಬಂದ ಬಾಯ್‌ಫ್ರೆಂಡ್...

ಬೇಸಿಗೆಯ ರಜೆಯಲ್ಲಿ ಜಾತ್ರೆ,ಕೋಲ,ಕಂಬಳ,ಮದುವೆ ಹೀಗೆ ಸಾಲು-ಸಾಲು ಸಂಭ್ರಮ.ಊರಿನ ದೇವಸ್ಥಾನದ ಸುತ್ತಲೂ ಸುಣ್ಣ ಬಣ್ಣ ಬಳಿದು,ಹೂವಿನ ಅಲಂಕಾರ ಮಾಡಿ ಉತ್ಸವದಲ್ಲಿ ಭಾಗಿಯಾಗುವುದು ನಮ್ಮ ವರ್ಷಂಪ್ರತಿಯ ವಾಡಿಕೆ.ಮನೆಯಲ್ಲಿ ಮದುವೆ ಸಮಾರಂಭಗಳಿದ್ದರೆ ಹಿರಿಯರ ಮಾತಿಗಿಂತ ಕಿರಿಯರ ಕಿರಿಕಿರಿಯೇ ಜಾಸ್ತಿ.ಆಗಿನ ಮದುವೆ ಮೆಹಂದಿ ಕಾರ್ಯಕ್ರಮಗಳಲ್ಲಿ ಸಿಡಿ ಪ್ಲೇಯರ್ ಗಳ ಮೂಲಕ ಹಾಡುಗಳನ್ನು ಸಲೀಸಾಗಿ ಪ್ಲೇ ಮಾಡುತ್ತಿದ್ದ ಸ್ವಯಂ ಘೋಷಿತ "ಡಿಜೆ" ಗಳು ಊರಿನ ಹುಡಗಿಯರ ಹಾಟ್ ಫೇವರಿಟ್.! ಅದರಲ್ಲೂ ಆಗ ತಾನೇ ಆರಂಭವಾದ ಹಾಡು ಅಂತ್ಯವಾಗುದರೊಳಗೆ ಇನ್ನೊಂದು ಹಾಡು ಮಿಕ್ಸ್ ಮಾಡಿ ಪ್ಲೇ ಮಾಡಿದವ ನಮ್ಮ ಪಾಲಿನ ದೊಡ್ಡ ಡಿಜೆ.ಕಾಲೇಜಿನ ದಿನಗಳಲ್ಲಿ ಚಿಗುರು ಮೀಸೆ ಬಂದಾಗ ಅದಕ್ಕೆ ತಕ್ಕಂತೆ ಹೇರ್ ಸ್ಟೈಲ್.ವಾರದಲ್ಲೊಂದು ದಿನ ಉಡುವ ಬಣ್ಣದ ಬಟ್ಟೆ,ಬೆಲ್ ಬಾಟಂ ಪ್ಯಾಂಟು ಮತ್ತು ಕಾಲೇಜ್ ಕಾರಿಡಾರ್ ನ ಕಂಬಗಳಲ್ಲಿ ಮೂಡಿಬಂದ  ಪ್ರೇಮ ನಿವೇದನೆಗಳು ಇನ್ನೇನು ಭಾವನೆಗಳೆಲ್ಲ ಪದಗಳಾಗಿ ಬಂದು ಖಾಲಿ ಹಾಳೆಯ ಮೇಲೆ ಪಯಣ ಗೀತೆಗಳಾಗಬೇಕು ಅನ್ನುವಾಗ ಮುರಿದು ಬಿದ್ದ ಪ್ರೇಮಕಥೆಗಳು ಈಗಿನ ವಾಸ್ತವವಿಕ ಜೀವನದಲ್ಲಿ ಆಗೊಮ್ಮೆ ಈಗೊಮ್ಮೆ ಗೆಳೆಯರೆಲ್ಲಾ ಜೊತೆಯಾದಾಗ ತಮಾಷೆಯಾಗಿ ಬಂದು ಹೋದದ್ದಿವೆ.

ಬಾಲ್ಯದ ನೆನಪುಗಳೇ ಹಾಗೆ ಕೆದಕಿದಷ್ಟು ಹಿತ.ಥಟ್ಟನೆ ಕಣ್ಣೆದುರು ಏನೋ ಬಂದು ಮಾಯವಾದಂತೆ.ಇಲ್ಲಿ ಗಳಿಸಿದ್ದೇ ಹೆಚ್ಚು ಕಳಕೊಂಡದ್ದು ವಿರಳ. ನೆನಪುಗಳೇ ಹಾಗೆ..ಬಿಟ್ಟು ಹೋದ ಹಳೆಯ ಗೆಳತಿಯ ತರ,ಬೇಡವೆಂದರೂ ಪದೇಪದೇ ಕಾಡುತ್ತಲೇ ಇರುತ್ತದೆ.ಹಾಗಂತ ಅದು ನಮ್ಮ ಜೀವನದ ಮಧುರ ಕ್ಷಣಗಳೇ ಆಗಿರಬೇಕಂತಿಲ್ಲ ಕಹಿ ಘಟನೆಗಳೂ ಆಗಿರಬಹುದು.ಸದ್ಯ ಲಾಕ್ ಡೌನ್ ಕಾರಣದಿಂದ ಮನೆಯಲ್ಲೇ ಲಾಕ್ ಆಗಿರುವ ನಾವು..ಬಾಲ್ಯದ ಮುಸ್ಸಂಜೆಯ ತಿಳಿತಂಪಿನ ಆ ದಿನಗಳನ್ನು ನೆನೆದು ಚೂರು ರಿಲ್ಯಾಕ್ಸ್ ಆಗೋಣ.! ಏನಂತೀರ?.

click me!