ಅವ್ವ ಹುಡುಕಾಟದ ನಿತ್ಯ ಆಧ್ಯಾತ್ಮ: ನಮ್ಮಮ್ಮ ಕೊಲಂಬಸ್‌ಗಿಂತ ಕಮ್ಮಿಯೇನಲ್ಲ

By Kannadaprabha News  |  First Published Apr 18, 2021, 10:57 AM IST

ಕಾಲೇಜು ವಿದ್ಯಾರ್ಥಿಗಳಿಗೆ ಡಿಸ್ಕವರಿ ಮತ್ತು ಇನ್‌ವೆನ್‌ಷನ್‌ಗಳ ಅರ್ಥವನ್ನು ವಿವರವಾಗಿ ಹೇಳಿದಾಕೆ ನಾನು. ಅವುಗಳಲ್ಲಿಯ ವ್ಯತ್ಯಾಸವನ್ನು ಉದಾಹರಣೆಗಳ ಮೂಲಕ ತಿಳಿಸಿದ್ದೇನೆ. ಈ ಪದಗಳು ಮುಖಾಮುಖಿಯಾದಗೊಮ್ಮೆ ಅಮೆರಿಕ ಮತ್ತು ಕೊಲಂಬಸ್‌ ನೆನಪು ಆಗುತ್ತಿರುತ್ತೆ. ಕೊಲಂಬಸ್‌ ಅಮೆರಿಕಾವನ್ನು ಕಂಡು ಹಿಡಿಯಲು ಎಷ್ಟು ಕಷ್ಟಪಟ್ಟಿರಬೇಕೆಂದು ಅನ್ನಿಸುತ್ತಿರುತ್ತೆ. ನಮ್ಮಮ್ಮ ಕೂಡ ಕೊಲಂಬಸ್‌ಗಿಂತ ಕಮ್ಮಿಯೇನಲ್ಲ.


- ಮಾಲಾ. ಮ. ಅಕ್ಕಿಶೆಟ್ಟಿ. ಬೆಳಗಾವಿ.

ಯಾವುದಾದರೂ ವಸ್ತುಗಳನ್ನು ಎಲ್ಲೋ ಇಟ್ಟು ಹುಡುಕಾಡುವುದು ಅವ್ವನ ದೊಡ್ಡ ಕಾರ್ಯ. ವಯಸ್ಸಿಗನುಗುಣವಾಗಿ ಮರೆವು ಎನ್ನುವುದು ಅವಳಿಗೂ ಅನ್ವಯ. ಯಾವಾಗ ತಾನು ಹುಡುಕುವ ವಸ್ತು ಸಿಗುತ್ತಿರಲಿಲ್ಲವೋ, ಆಗ ನಮಗೆಲ್ಲಾ ಹೇಳಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರನ್ನಾಗಿಸುವಳು.

Tap to resize

Latest Videos

undefined

‘ಯಾವುದನ್ನ ಎಲ್ಲಿ ಇಟ್ಟಿರತಿ ಅನ್ನೊದನ್ನ ಸಮಾಧಾನದಿಂದ ನೆನಪಿಸಿಕೊ, ತಾನ ಸಿಗತೈತಿ. ಇಲ್ಲಾಂದ್ರ ಸುಮ್ಮನ ಇದ್ದು ಬಿಡುತ ಬಾ, ಆ ವಸ್ತು ಯಾವಾಗ ಸಿಗಬೇಕೊ ಆಗ ಸಿಗತೈತಿ. ಸುಮ್ಮನ ಎಲ್ಲಾರಿಗೂ ಟೆನ್ಶನ್‌ ಕೊಡತಿ. ಸಾಮಾನುಗಳನ್ನ ಇಡಾಕ ಒಂದೊಂದು ಸ್ಥಳ ನಿಗದಿ ಮಾಡಬೇಕ. ಕಷ್ಟಆದ್ರೂ, ಅವನ್ನ ಅಲ್ಲೇ ಹೋಗಿ ಇಡಬೇಕ. ನೀ ಅದನ್ನ ಮಾಡಲ್ಲ. ಹಿಂಗಾಗಿ ಎಲ್ಲೋ ಇಟ್ಟು ಇನ್ನೆಲ್ಲೋ ಹುಡುಕತಿ’ ಅಂದರ ಅವ್ವ ‘ನಿಂದು ಭಾರಿ ಆತ ಬಿಡವಾ, ನನ್ನಂಗ ವಯಸ್ಸಾಗಲಿ ನಿಂಗೂ ಅವಾಗ ಗೊತ್ತಾಗತೈತಿ. ವಸ್ತುವನ್ನ ಅದಾ ಜಾಗದಾಗ ಇಡಬೇಕಂತ ನನಗೂ ಗೊತ್ತದ. ಏನೋ ಗಡಿಬಿಡಿದಾಗ ಎಲ್ಲೋ ಇಟ್ಟಿರುತ್ತೇನಿ. ಹಿಂಗ ಆಗತದ. ಎಷ್ಟಮಾತಾಡತಿಯಲಾ ನೀ, ನಿನಗ ಇಷ್ಟ ಓದಿಸಿದ್ದ ತಪ್ಪಾಗೆದ. ಬಾಳ ಬಾಳ ಬುಕ್‌ ಓದಿ ಹಿಂಗ್‌ ಮಾತಾಡಕ ಕಲತಿ. ಇಲ್ಲಾಂದ್ರ ಹಿಂಗ ವಾದ ಮಾಡಾಕ್‌ ಬರ್ತಿರ್ಲಿಲ್ಲ ನಿನಗ. ಓದಿದಂಗ ಮನಷ್ಯಾ ಮಂಡ್‌ ಆಗತಾನ. ಅದ ನೀನೂ ಆಗಿ’ ಎಂದು ಒಂದೇ ಉಸಿರಿನಲ್ಲಿ ನನ್ನವ್ವ ನನಗೆ ತನ್ನ ಶಬ್ದಗಳ ಜೋಡಣೆಯಿಂದ ನನ್ನನ್ನು ಸಂಪೂರ್ಣವಾಗಿ ಅಲಂಕರಿಸಿಬಿಡುತ್ತಿದ್ದಳು.

ಚೊಕ್ಕಾಡಿ; ಬಂಟಮಲೆಯ ತಪ್ಪಲಲ್ಲಿ ಒಂಟಿ ಕವಿ

ಈ ಮಾತು ನನಗಷ್ಟಸಂಬಂಧಿಸಿದ್ದು; ತಮ್ಮ, ಅತ್ತಿಗೆಗೆ ಅನ್ವಯಿಸುತ್ತಿರಲಿಲ್ಲ. ಅವರು ಗಪ್‌ ಚುಪ್‌ ಕಳೆದದ್ದನ್ನು ಹುಡುಕಾಡಾಕ ಪ್ರಾರಂಭಿಸುತ್ತಿದ್ದರು. ನನ್ನವ್ವನ ಅನಿಸಿಕೆಯಲ್ಲಿ ನಾನು ಓದಿ ಮೊಂಡುತನ ಮಾಡಿ, ವಾದ ಮಾಡ್ತೇನೆ ಎನ್ನುವುದು ಸ್ಪಷ್ಟವಾಗಿತ್ತು. ಆದರೆ ನನಗೆ ನನ್ನ ಓದು ಹಾಗೂ ಅವ್ವನ ಹುಡುಕುವಿಕೆಗೆ ಎಲ್ಲಿಯ ಸಂಬಂಧ ಗೊತ್ತಿಲ್ಲ. ಆಕೆ ತಾನು ವಸ್ತುವನ್ನ ಎಲ್ಲೋ ಇಟ್ಟದ್ದು ತಪ್ಪು ಎಂದು ಎಂದೂ ಒಪ್ಪಿಕೊಳ್ಳುತ್ತಿರಲಿಲ್ಲ. ಈ ಹುಡುಕಾಟದ ಪರಿ ಯಾವ ಮಟ್ಟಿನ ವಿಸ್ತಾರವನ್ನು ಹೊಂದಿದೆಯೆಂದರೆ ಮನೆಯಲ್ಲಿರುವ ಎಂಟು, ಆರು ಮತ್ತು ಮೂರು ವರ್ಷದ ಮೊಮ್ಮಕ್ಕಳು ಸಕ್ರಿಯವಾಗಿ ಈ ಹುಡುಕಾಟದಲ್ಲಿ ಭಾಗವಹಿಸುತ್ತಾರೆ.

ಹೇಳುತ್ತಾ ಹೋದರೆ ಅವ್ವಳದು ದೊಡ್ಡ ಲಿಸ್ಟೇ ಆಗುತ್ತದೆ. ನನಗೆ ಓದಿಸಿದ್ದು ತಪ್ಪೆನ್ನುವ ಅವ್ವ ಏನು ಅನಕ್ಷರಸ್ಥೆ ಅಲ್ಲ. ಆಕೆ ನಿವೃತ್ತಿ ಹೊಂದಿದ ಹೈಸ್ಕೂಲ್‌ ಶಿಕ್ಷಕಿ. ಆಕಿಗಿಂತ ಜಾಸ್ತಿ ಕಲಿತಿದ್ದೇನೆ ಅನ್ನುವುದೇ ನನ್ನ ಹಠಮಾರಿತನಕ್ಕೆ ಕಾರಣ ಎನ್ನುವುದು ಆಕೆಯ ಸರ್ವಕಾಲದ ಅಭಿಪ್ರಾಯ. ಮನೆಯಲ್ಲಿ ಸದಾ ಕಾಲ ಚಪ್ಪಲಿಗಳನ್ನು ಹಾಕಿಕೊಳ್ಳಲು ನಾವೇ ಹೇಳಿದ್ದೇವೆ. ತಂಪು, ಬಿಸಿ,ಚಳಿ ಯಾವುದೇ ಹವಾಮಾನವಿದ್ದರೂ ಕಾಲಲ್ಲಿ ಚಪ್ಪಲಿ ಧರಿಸಲು ಹೇಳಿದ್ದು, ಆಕೆ ಅದನ್ನು ಮನಸ್ಸಿನಿಂದ ಪಾಲಿಸುತ್ತಿದ್ದಾಳೆ. ಆದರೆ ವಾಕಿಂಗ್‌ ಹೋಗಲು ಬೇರೆ ಶೂ ಅಥವಾ ಚಪ್ಪಲಿಗಳನ್ನು ಹಾಕಿಕೊಳ್ಳುವಾಗ ಮಾತ್ರ ಮನೆಯಲ್ಲಿ ಹಾಕುವ ಚಪ್ಪಲಿಗಳು ಎಲ್ಲಿಟ್ಟಿದ್ದಾಳೆಂದು ಆಕೆಗೆ ಗೊತ್ತಿರಲ್ಲ. ಹುಡುಕಾಟ ಚಪ್ಪಲಿ ಕೊಂಡವರ ಮೇಲಿನ ಬೈಗಳಾಗಿ ಪರಿವರ್ತನೆ ಆಗುವ ಹೊತ್ತಿಗೆ ಸರಿಯಾಗಿ ಮೂರು ವರ್ಷದ ತನು ‘ಅವ್ವ , ನಿನ್ನ ಚಪ್ಪಲಿ ಇಲ್ಲೇ ಅದಾವ’ ಎಂದು ತಂದು ಕೊಡುತ್ತಾಳೆ.

ನಾನು ಬರೆಯೋದಿಲ್ಲ, ಹೇಳ್ತೀನಿ; ಮತ್ತೆ ಮೌಖಿಕ ಪರಂಪರೆ ಜನಪ್ರಿಯವಾಗುತ್ತಿದೆ!

ಅವ್ವ ಗಂಭೀರ ಓದುಗಾರ್ತಿಯೆನಲ್ಲ. ಆದ್ರೆ ದಿನಾಲು ಪತ್ರಿಕೆಯನ್ನು ಓದುವ ಹವ್ಯಾಸವಿದೆ. ಆಗಾಗ ಬರುವ ಮ್ಯಾಗಜಿನ್ಸ್‌ ಮತ್ತು ಪುಸ್ತಕಗಳನ್ನು ಹಾಗೆಯೇ ಕಣ್ಣಾಡಿಸುತ್ತಾಳೆ.ಆಕೆ ಮರಾಠಿ ಮಾಧ್ಯಮದಲ್ಲಿ ಕಲಿತರೂ ಕನ್ನಡವನ್ನು ಓದುವುದು ನಮಗೆ ಹೆಮ್ಮೆ. ಓದುವಾಗ ನಿರ್ದಿಷ್ಟಸ್ಥಳದ ಆಯ್ಕೆ ಇಲ್ಲ. ತನ್ನ ಮೂಡಿಗೆ ತಕ್ಕಂತೆ ಹಾಲ್‌, ಬೆಡ್‌ ರೂಮ್‌ ಅಥವಾ ಮೊದಲ ರೂಮ್‌ನಲ್ಲಿ ಓದ್ತಾಳೆ. ಎಲ್ಲಿ ಓದಿರುತ್ತಾಳೆ ಅದೇ ಸ್ಥಳದಲ್ಲಿ, ಕಿಟಕಿಯಲ್ಲಿ, ಶೆಲ್‌್ಫ ನಲ್ಲಿ, ಟೇಬಲ್‌ ಮೇಲೆ, ಟಿವಿ ಮೇಲೆ ಹೀಗೆ ಎಲ್ಲೆಂದರಲ್ಲಿ ತನ್ನ ಕನ್ನಡಕವನ್ನು ಇಟ್ಟಿರುತ್ತಾಳೆ. ಅದು ನೆನಪಾದಾಗ ಅದರ ಹುಡುಕಾಟ ಪ್ರಾರಂಭ.

ದಿನವೂ ಲಿಂಗ ಪೂಜೆಯಾದ ನಂತರ ದೇವರ ನಾಮಸ್ಮರಣೆ ಅಥವಾ ಸ್ತೋತ್ರಗಳಿರುವ ಚಿಕ್ಕ ಚಿಕ್ಕ ಪುಸ್ತಕಗಳನ್ನು ಓದುವ ರೂಢಿಯೂ ಇದೆ ಆಕೆಗೆ. ಇದರ ಜೊತೆಗೆ ಜಪಮಾಲೆಯನ್ನು ಉಪಯೋಗಿಸುವ ಅವ್ವ, ಶಿವನ ನೂರಾ ಎಂಟು ನಾಮಾವಳಿಗಳನ್ನು ಅನ್ನೋವಾಗ ಅದು ಬೇಕೇ ಬೇಕು.ಹೀಗಾಗಿ ಚಿಕ್ಕ ಪುಸ್ತಕ ಮತ್ತು ಜಪಮಾಲೆ ಕೂಡೇ ಇರುತ್ತವೆ.ಅವುಗಳ ಇಜ್ಜೋಡು ಮತ್ತೆ ಸಾಂಪ್ರದಾಯಿಕ ಹುಡುಕಾಟಕ್ಕೆ ನಾಂದಿ ಹಾಡುತ್ತದೆ.

ದಿನನಿತ್ಯ ತೆಗೆದುಕೊಳ್ಳುವ ಗುಳಿಗೆಗೆ ಹುಡುಕಾಟದ ನಂಟಿದೆ. ಒಂದು ಗುಳಿಗೆಯನ್ನು ಅರ್ಧ ಮಾಡಿ, ಬರೀ ಅರ್ಧವನ್ನು ತೆಗೆದುಕೊಳ್ಳಬೇಕು. ಗುಳಿಗೆ ಅರ್ಧ ಮಾಡಿದ ನಂತರ ಇನ್ನರ್ಧ ಸೇವಿಸಿ ಉಳಿದನ್ನು ಗುಳಿಗೆ ಡಬ್ಬಿಯಲ್ಲಿ ಇಡುವಾಗ ಸಮಸ್ಯೆ. ಅರ್ಧ ಗುಳಿಗೆಯನ್ನು ಆ ಡಬ್ಬಿಯಲ್ಲಿ ಎಲ್ಲಿಟ್ಟರೂ ಸಿಗೋದೇ ಇಲ್ಲ. ಕೆಲವು ಸಲ ಕಣ್ತಪ್ಪಿ ಕೆಳಗೆ ಬಿದ್ದಿರುತ್ತದೆ. ಈಕೆ ಡಬ್ಬಿಯಲ್ಲಿ ಹುಡುಕುತ್ತಾಳೆ. ಇನ್ನೊಮ್ಮೆ ಹಾಸಿಗೆಯ ಮೇಲೆ, ಕಿಟಕಿಯ ಶೆಲ್‌್ಫ ನಲ್ಲಿಯೂ ಇದ್ದಿರುತ್ತದೆ. ಅವ್ವನ ನಿತ್ಯದ ಗೋಳು ಪ್ರಾರಂಭವಾದಾಗ ನಾವೆಲ್ಲರೂ ದೇಶ ಕಾಯುವ ಸೈನಿಕರಂತೆ, ಆಕೆಯ ಹಿಂದೆ ರೆಡಿ ಪೊಜಿಶನ್ನಲ್ಲಿ ಇರುತ್ತೇವೆ.

ಕಾಮಾಠೀಪುರ : ವೇಶ್ಯೆಯರು ಹೊರಟಿದ್ದಾರೆ ಬಟ್ಟೆ, ತರಕಾರಿ, ಚಹಾ ಮಾರಾಟದತ್ತ!

ಕೂದಲಿಗೆ ಹಾಕುವ ಪಿನ್ನು, ಸಾಡಿ ಪಿನ್ನು, ಬಳೆಗಳು, ಹಣೆಗೆ ಹಚ್ಚುವ ಬಿಂದಿ ಹೀಗೆ ಎಲ್ಲವೂ ಕೆಲವು ನಿಮಿಷ ಮಾಯವಾಗಿ ಮತ್ತೆ ಪ್ರತ್ಯಕ್ಷವಾಗುತ್ತವೆ. ಹುಡುಕಾಟದ ಪರಮಾವಧಿ ಎನ್ನುವಂತೆ ಒಂದು ದಿನ ಜಪಮಾಲೆ ಮಾಯ. ಮನೆಯ ಮೂಲೆ ಮೂಲೆಯನ್ನು ಸಂಶೋಧಿಸಲಾಗಿದ್ದು ಎಲ್ಲೂ ಸಿಗಲಿಲ್ಲ. ರಾತ್ರಿ ಹೊತ್ತು ಅಕಸ್ಮಾತ್‌ ನಿದ್ದೆ ಹತ್ತದಿದ್ದಾಗ ಜಪಮಾಲೆ ಮಂತ್ರದಂತೆ ವರ್ಕ್ ಮಾಡುತ್ತಿತ್ತು.ಎರಡು ದಿನ ಆದರೂ ಸಿಗದಿದ್ದಾಗ ಎಲ್ಲದಕ್ಕೂ ತೊಂದರೆಯಾಗ ತೊಡಗಿತು.ಎಲ್ಲರ ಸರ್ವ ಪ್ರಯತ್ನಗಳು ನೆಲಕಚ್ಚಿದವು.ಮಕ್ಕಳೂ ಹುಡುಕಾಡಿದರು. ಕೊನೆಗೆ ಮೂರನೇ ದಿನ ಬಟ್ಟೆಗಳನ್ನು ಮಡಚಿಡುವ ಶೆಲ್‌್ಫ ನಲ್ಲಿ ಜಪಮಾಲೆ ಅತ್ತಿಗೆಗೆ ಸಿಕ್ಕಿತು. ಈ ಮೊದಲು ಆ ಸೆಲ್ಪನ್ನ ಹುಡುಕಿದಾಗ ಸಿಗದ ಅದು, ಅತ್ತಿಗೆಗೆ ಕಾಣಿಸಿತ್ತು.

ಮಕ್ಕಳು ಎಷ್ಟುಸಕ್ರಿಯವಾಗಿ ಹುಡುಕಾಟದಲ್ಲಿ ಭಾಗಿಯಾಗುತ್ತಿದ್ದರೋ, ಅಷ್ಟೇ ಅವುಗಳ ಮಾಯವಾಗುವಿಕೆಗೆ ಕಾರಣರಾಗಿದ್ದರು. ಅವ್ವ ಹೆಚ್ಚಿನ ಸಮಯವನ್ನು ಮೊಮ್ಮಕ್ಕಳೊಂದಿಗೆ ಕಳೆಯುವುದರಿಂದ ಅವ್ವನ ಹಾಸಿಗೆ, ಬೆಡ್‌ ರೂಮ್‌ ಸಂಪೂರ್ಣವಾಗಿ ಮಕ್ಕಳ ಬಳಕೆಯಲ್ಲಿದ್ದವು. ಹಾಸಿಗೆಯ ಮೇಲೆ ಮಂಗಗಳಂತೆ ಕುಣಿದು, ಆಕೆಯ ಎಲ್ಲ ವಸ್ತುಗಳನ್ನು ತಡಕಾಡುತ್ತಿದ್ದರು. ಎಲ್ಲವನ್ನೂ ಪರೀಕ್ಷಿಸುವುದು ಅವರಿಗೆ ಹವ್ಯಾಸ. ಹೀಗಾಗಿ ಏನೇ ವಸ್ತು ಮಾಯವಾದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಅವ್ವನ ಮೇಲೆ ಹಾಕುವುದು ತಪ್ಪಾಗಿತ್ತು. ಈ ಚಿಕ್ಕ ಮಂಗಗಳ ಕೈವಾಡ ಬಹಳವೇ ಇತ್ತು ಎಂದು ಎಲ್ಲರಿಗೂ ಗೊತ್ತಿತ್ತು.

ದಿನವೂ ಈ ರೀತಿ ಹುಡುಕಾಟಕ್ಕೆ ನಾವೆಲ್ಲಾ ಮೀಸಲಿಡುವ ವೇಳೆಯನ್ನು ನೋಡಿದರೆ, ಒಮ್ಮೆ ಎಲ್ಲವನ್ನೂ ಒಟ್ಟುಗೂಡಿಸಿ ಅವ್ವನ ಜೊತೆ ಸೇರಿ, ಮನೆಯವರೆಲ್ಲ ನಿಜವಾಗಲೂ ಕೊಲಂಬಸ್‌ನ ಹಾಗೆ ಒಂದು ಹೊಸ ದೇಶ-ಖಂಡವನ್ನು ಕಂಡುಹಿಡಿಯಬಹುದು. ಅವ್ವ ಮೇಲಿಂದ ಮೇಲೆ ನಿಮಗೂ ವಯಸ್ಸಾಗಲಿ ತಿಳಿಯುತ್ತದೆ ಅನ್ನುವ ಗಂಭೀರ ಮಾತು, ಸಂಶಯವಲ್ಲ; ಖಾತ್ರಿ ಮಾಡಿಸುತ್ತದೆ. ನಾವೂ ಒಂದು ದಿನ ಹೀಗೆ ಮರೆವಿನ ಬಂಧನದಲ್ಲಿ ವಸ್ತುಗಳನ್ನು ಮರೆತು ಹುಡುಕಾಟದಲ್ಲಿ ತೊಡಗಿರುತ್ತೇವೆಂದು. ಈಗ ಅವ್ವ ವಸ್ತುಗಳನ್ನು ಮರೆತು ಹುಡುಕಾಡಿದರೆ, ಅದು ನಾವೇ ಎನ್ನುವಂತೆ ಹುಡುಕುತ್ತೇವೆ. ಒಟ್ಟಿನಲ್ಲಿ ಈಗಾಗಲೇ ಈ ಹುಡುಕಾಟದ ಬಂಧನದಲ್ಲಿ, ಬಂದಿಯಾಗಿದ್ದೇವೆ.

click me!